ತೇಜಸ್ವಿ ಕಥನಗಳ ಜ್ಞಾನ ಮೀಮಾಂಸೆ: ಪ್ರತಿಭೆ, ಅನುಭವ ಹಾಗೂ ಅಳಿದುಳಿದ ಸತ್ಯ

Date:

ಆಧುನಿಕ ಜ್ಞಾನ ಪದ್ಧತಿ ಸರ್ವಶ್ರೇಷ್ಠ ಎಂಬ ಅಹಂಕಾರವನ್ನೂ ನಿರಾಕರಿಸುತ್ತ, ಸ್ಥಳೀಯ ಜ್ಞಾನ ಪ್ರಕ್ರಿಯೆ ಪರಿಶುದ್ಧ ಮತ್ತು ಸ್ವಯಂ ಸಂಪೂರ್ಣ ಎಂಬ ಭಾವುಕ ಹಂಬಲವನ್ನೂ ನಿರಾಕರಿಸುತ್ತ, ಈ ಎರಡರ ನಡುವಿನ ತಳಮಳದ ಸ್ಥಳದಲ್ಲಿ ಒಂದು ಹೊಸ ಜ್ಞಾನ ಮೀಮಾಂಸೆ ನಿರ್ಮಾಣವಾಗಬೇಕಿದೆ ಎಂಬ ಆಶಯ ಆ ಕಥನಗಳ ಒಳ ಉಸಿರು. 

ಜ್ಞಾನ ಮೀಮಾಂಸೆ ಎನ್ನುವ ಶಾಖೆ ಮೂಲತಃ ‘ಯಾವುದು ನಿಜವಾದ ಜ್ಞಾನ?’ ಎಂಬ ಪ್ರಶ್ನೆಯಿಂದ ಆರಂಭವಾಗುತ್ತದೆ. ಅದು ಕೇವಲ ತಾತ್ವಿಕ ಮನರಂಜನೆಯಲ್ಲ; ಜ್ಞಾನದ ಮೂಲ ಯಾವುದು, ಅದನ್ನು ಪರಿಶೀಲಿಸುವ ಮಾನದಂಡಗಳೇನು ಮತ್ತು ಯಾರ ಜ್ಞಾನಕ್ಕೆ ಮಾನ್ಯತೆ ಸಿಗುತ್ತದೆ ಎಂಬ ಅಧಿಕಾರ ಸಂಬಂಧಗಳನ್ನು ಒಳಗೊಂಡ ಒಂದು ರಾಜಕೀಯ ಪ್ರಶ್ನೆ. ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ಕಥನಗಳು ಇಂತಹ ಜ್ಞಾನ ಮೀಮಾಂಸೆಯ ಪ್ರಶ್ನೆಗಳನ್ನು ಸ್ಪಷ್ಟವಾದ ಶಾಸ್ತ್ರೀಯ ಭಾಷೆಯಲ್ಲಿ ಮಂಡಿಸದಿದ್ದರೂ, ಕಥನ ರೂಪದ ಮೂಲಕ ಆ ಪ್ರಶ್ನೆಗಳನ್ನು ಅನುಭವಗ್ರಾಹ್ಯವಾಗಿ ತೆರೆದಿಡುತ್ತವೆ.

- Advertisement -

ಮಲೆನಾಡಿನ ಕಾಡು, ಹಳ್ಳಿ, ಬೆಟ್ಟ, ತೊರೆ ಹಾಗೂ ಅಲ್ಲಿ ಬದುಕಿದ ಮನುಷ್ಯರು ಕೇವಲ ಭೌಗೋಳಿಕ ಹಿನ್ನೆಲೆ ಮಾತ್ರವಲ್ಲ; ಅವು ಒಂದು ಬೇರೆ ತರಹದ ಜ್ಞಾನ ಪದ್ಧತಿಯ ಕ್ಷೇತ್ರವಾಗಿ ಕಾರ್ಯನಿರ್ವಹಿಸುತ್ತವೆ. ಆ ಕ್ಷೇತ್ರ ಆಧುನಿಕ ಶೈಕ್ಷಣಿಕ ಜ್ಞಾನ ಪದ್ಧತಿಯ ಎದುರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತ ಹೋಗುವ ಕ್ರಿಯೆಯನ್ನು ತೇಜಸ್ವಿ ಸೂಕ್ಷ್ಮವಾಗಿ ದಾಖಲಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಪ್ರತಿಭೆ ಮತ್ತು ಜ್ಞಾನ ಎಂಬ ಎರಡು ಪರಿಕಲ್ಪನೆಗಳ ನಡುವಿನ ಭೇದವನ್ನು ತಾತ್ವಿಕವಾಗಿ ಅರ್ಥಮಾಡಿಕೊಳ್ಳದ ಹೊರತು ತೇಜಸ್ವಿ ಕಥನಗಳ ಒಳ ಚಲನೆ ಅರ್ಥವಾಗದು. ಪ್ರತಿಭೆ ಎನ್ನುವುದು ದೇಹ ಮತ್ತು ಪರಿಸರದ ನಡುವಿನ ದೀರ್ಘ ಸಂಭಾಷಣೆಯಿಂದ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಪಠ್ಯಪುಸ್ತಕದ ಅಗತ್ಯವಿಲ್ಲ. ತನ್ನ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಸಂದರ್ಭದೊಂದಿಗೆ ನಿರಂತರ ಒಡನಾಟದಿಂದ ದೇಹದಲ್ಲಿಯೇ ಬೆಳೆದ ಒಂದು ವಿದ್ಯೆ. ಇದನ್ನು ದೇಹಜ್ಞಾನ ಅಥವಾ ಮೌನಜ್ಞಾನ ಎಂದು ಗುರುತಿಸಬಹುದು.

ತಾತ್ವಿಕ ಪರಂಪರೆಯಲ್ಲಿ ಇದನ್ನು ಅನುಭವಜ್ಞಾನ ಎನ್ನಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಜ್ಞಾನ ಎನ್ನುವುದು ಭಾಷಾ ಮಾಧ್ಯಮದ ಮೂಲಕ ಸಾಧ್ಯವಾಗುವಂತಹದ್ದು. ಅಕ್ಷರ ಮತ್ತು ತರ್ಕ ಇದರ ಎರಡು ಕಿವಿಗಳು. ಒಬ್ಬ ಬೇಡನಿಗೆ ಕಾಡಿನ ಮರಗಳ ಜ್ಞಾನ ಇದ್ದಂತೆ, ಒಬ್ಬ ಸಸ್ಯಶಾಸ್ತ್ರಜ್ಞನಿಗೆ ಅದೇ ಮರಗಳ ಜ್ಞಾನ ಇರಬಹುದು. ಆದರೆ ಈ ಎರಡೂ ಒಂದೇ ಸ್ವರೂಪದ ಜ್ಞಾನವಲ್ಲ. ಬೇಡನ ಜ್ಞಾನ ಮರದ ಜೊತೆ ಒಂದಾದ ಅನುಭವದಿಂದ ಬಂದದ್ದು, ಸಸ್ಯಶಾಸ್ತ್ರಜ್ಞನ ಜ್ಞಾನ ಮರವನ್ನು ಒಂದು ‘ವಸ್ತು’ವಾಗಿ ಮಾಡಿ, ಅದರಿಂದ ದೂರ ನಿಂತು ನೋಡಿದಾಗ ಲಭಿಸಿದ್ದು. ಮಾಡರ್ನ್ ವಿಜ್ಞಾನ ಶಿಸ್ತಿಗೆ ಈ ‘ದೂರ’ ಅಗತ್ಯ. ತೇಜಸ್ವಿ ಕಥನಗಳ ಮೂಲ ಸಂಘರ್ಷ ಇಲ್ಲೇ ಇದೆ.

ತೇಜಸ್ವಿ ಸ್ವತಃ ಮಲೆನಾಡಿನ ಪರಿಸರದಲ್ಲಿ ಬದುಕಿದವರಾದ್ದರಿಂದ ಈ ಎರಡೂ ಬಗೆಯ ಜ್ಞಾನ ಪ್ರಕ್ರಿಯೆಗಳ ಪರಿಚಯ ಅವರಿಗಿತ್ತು. ಮಂದಣ್ಣನಂತಹ ಸ್ಥಳೀಯ ಪಾತ್ರಗಳು ಮತ್ತು ಕರ್ವಾಲೋನಂತಹ ವಿಜ್ಞಾನ ದೃಷ್ಟಿಕೋನದ ಪಾತ್ರಗಳ ನಡುವಿನ ಸಂಭಾಷಣೆ ಕೇವಲ ಎರಡು ಭಿನ್ನ ಮನುಷ್ಯರ ಮಾತುಕತೆಯಲ್ಲ. ಅದು ಎರಡು ಜ್ಞಾನ ಪದ್ಧತಿಗಳ ನಡುವಿನ ಸಂಧಿ. ಆದರೆ ಈ ಸಂಧಿ ಸಮಾನ ನೆಲೆಯಲ್ಲಿ ನಡೆಯುವುದಿಲ್ಲ. ಆಧುನಿಕ ಜ್ಞಾನ ಪದ್ಧತಿ
ತನ್ನ ಸಾಂಸ್ಥಿಕ ಶಕ್ತಿಯಿಂದ ಸ್ಥಳೀಯ ಜ್ಞಾನ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಸ್ಥಳೀಯ ಜ್ಞಾನ ಪ್ರಕ್ರಿಯೆ ಮಾನ್ಯತೆಯ ಅಭಾವದಲ್ಲಿ ತನ್ನ ವಾಹಕರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಇದು ಕೇವಲ ಆರ್ಥಿಕ ಅಥವಾ ಸಾಮಾಜಿಕ ಶ್ರೇಣೀಕರಣದ ಸಮಸ್ಯೆ ಮಾತ್ರವಲ್ಲ; ಇದು ಆಳದಲ್ಲಿ ಒಂದು ಜ್ಞಾನ ಮೀಮಾಂಸೆಯ ರಾಜಕೀಯ ಸಮಸ್ಯೆ.

ಭಾರತದ ಸಂದರ್ಭದಲ್ಲಿ ಈ ಸ್ಥಳೀಯ ಜ್ಞಾನ ಪ್ರಕ್ರಿಯೆಗೆ ಇನ್ನೊಂದು ಆಯಾಮ ಇದೆ. ಅದು ಜಾತಿ ವ್ಯವಸ್ಥೆ. ಜ್ಞಾನ ಮತ್ತು ಪ್ರತಿಭೆ ಯಾವ ಜಾತಿಯ ಒಡಲಿನಲ್ಲಿ ಇದೆ ಅಥವಾ ಯಾವ ಜಾತಿಯ ಹೆಸರಿನಲ್ಲಿ ಮಾನ್ಯತೆ ಪಡೆಯುತ್ತದೆ ಎಂಬುದು ಭಾರತೀಯ ಸಂದರ್ಭದಲ್ಲಿ ನಿರ್ಣಾಯಕ. ಸೂರಾಚಾರಿಯಂತಹ ಪಾತ್ರ ಕೇವಲ ಆರ್ಥಿಕ ಕಾರಣಗಳಿಗಾಗಿ ಮಾತ್ರ ಅವನತಿಯ ಕಡೆ ಸಾಗುವುದಿಲ್ಲ. ಅವನ ಜಾತಿ ಮತ್ತು ಅದಕ್ಕೆ ನಿಗದಿಯಾಗಿದ್ದ ವೃತ್ತಿ, ಅದರಿಂದ ಹೊರಬರಲು ಅವನಿಗೆ ಇದ್ದ ಸಾಮಾಜಿಕ ಅಡೆತಡೆಗಳು ಹಾಗೂ ಅವನ ಕೌಶಲ್ಯಕ್ಕೆ ಸಿಗಬೇಕಿದ್ದ ಮಾನ್ಯತೆ ತನ್ನ ಜಾತಿ ಅಸ್ಮಿತೆಯ ಕಾರಣ ಸಿಗದೇ ಹೋಗುವ ಸ್ಥಿತಿ ಇವೆಲ್ಲ ಸೇರಿ ಅವನ ಅವನತಿಯನ್ನು ನಿರ್ಮಿಸಿವೆ.

ತೇಜಸ್ವಿ ಇದನ್ನು ಮೇಲ್ ನೋಟಕ್ಕೆ ವ್ಯಕ್ತಿಯ ಮಾನಸಿಕ ದ್ವಂದ್ವವಾಗಿ ತೋರಿಸುತ್ತ, ಆಳದಲ್ಲಿ ಸಮಾಜ ರಚನೆಯ ಕ್ರೌರ್ಯವನ್ನು ಬಿತ್ತರಿಸುತ್ತಾರೆ. ಮೌಢ್ಯದ ಮೊರೆ ಹೋಗುವ ಸೂರಾಚಾರಿ ಪ್ರಭುತ್ವ ಮತ್ತು ಸಮಾಜ ಎರಡೂ ಅವನ ಪ್ರತಿಭೆಯನ್ನು ಅಲ್ಲಗೆಳೆದಾಗ ಮಾನ್ಯತೆಯನ್ನು ಬೇರೆಡೆ ಹುಡುಕುವ ಮನುಷ್ಯ ಮನೋವಿಜ್ಞಾನದ ಸ್ವಾಭಾವಿಕ ಬಲಿ.

ಜ್ಞಾನ ಮೀಮಾಂಸೆಯ ಚರ್ಚೆಯಲ್ಲಿ ಒಂದು ಮೂಲಭೂತ ಪ್ರಶ್ನೆ ಯಾವಾಗಲೂ ಇರುತ್ತದೆ: ಜ್ಞಾನ ಯಾರ ದೃಷ್ಟಿಕೋನದಿಂದ ನೋಡಲ್ಪಡುತ್ತದೆ? ತೇಜಸ್ವಿ ಕಥನಗಳ ನಿರೂಪಕ ಬಹಳ ಸಂದರ್ಭಗಳಲ್ಲಿ ಸ್ವತಃ ಒಂದು ಪಾತ್ರವಾಗಿ ಕಥನದೊಳಗೆ ಬರುತ್ತಾನೆ. ಇದು ಕೇವಲ ಸಾಹಿತ್ಯ ತಂತ್ರ ಮಾತ್ರವಲ್ಲ. ಇದು ಒಂದು ಜ್ಞಾನ ಮೀಮಾಂಸೆಯ ನಿಲುವು. ತಾನು ಸ್ವತಃ ಈ ಸ್ಥಳೀಯ ಜ್ಞಾನ ಪ್ರಕ್ರಿಯೆಯ ಹೊರಗಿರುವ ವ್ಯಕ್ತಿ ಎಂಬ ಆತ್ಮಾವಲೋಕನ
ತೇಜಸ್ವಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಅಕ್ಷರಸ್ಥ, ಆಧುನಿಕ ಜ್ಞಾನ ಶಿಸ್ತಿನ ನೆಲೆಯಲ್ಲಿ ಮಲೆನಾಡಿಗೆ ಬಂದ ತೇಜಸ್ವಿ ಅಲ್ಲಿನ ಪ್ರತಿಭೆಗಳನ್ನು ನೋಡಿ ಅಚ್ಚರಿಪಡುತ್ತಾರೆ, ಪ್ರಶ್ನಿಸುತ್ತಾರೆ, ದಾಖಲಿಸುತ್ತಾರೆ. ಆದರೆ ಆ ಪ್ರತಿಭೆಯನ್ನು ತಾನು ಸ್ವತಃ ಒಳಗಿನಿಂದ ಅನುಭವಿಸಲು ಸಾಧ್ಯವಿಲ್ಲ ಎಂಬ ಮಿತಿ ಅವರಿಗೆ ತಿಳಿದಿತ್ತು. ಇದು ತೇಜಸ್ವಿಯ ನಿರೂಪಣಾ ದೃಷ್ಟಿಕೋನದ ಪ್ರಾಮಾಣಿಕ ಸೌಂದರ್ಯ. ಅವರು ಸ್ಥಳೀಯ ಜ್ಞಾನ ಪ್ರಕ್ರಿಯೆಯ ಬ್ರ್ಯಾಂಡ್ ಅಂಬಾಸಿಡರ್ ಅಲ್ಲ, ಬದಲಾಗಿ ಅದರ
ಗಂಭೀರ ಸಾಕ್ಷಿ. ಈ ಸಾಕ್ಷಿ ಸ್ಥಾನದ ತಾತ್ವಿಕ ಸಮಸ್ಯೆಯೂ ಇದೆ. ಯಾರೋ ಒಬ್ಬ ಆಧುನಿಕ ಅಕ್ಷರಸ್ಥ ತನ್ನ ಭಾಷೆಯಲ್ಲಿ, ತನ್ನ ಸಾಹಿತ್ಯ ರೂಪದಲ್ಲಿ, ತನ್ನ ಓದುಗ ವರ್ಗಕ್ಕಾಗಿ ಸ್ಥಳೀಯ ಜ್ಞಾನ ಪ್ರಕ್ರಿಯೆಯನ್ನು ಮಂಡಿಸುವ ಕ್ರಿಯೆ ಸ್ವತಃ ಒಂದು ‘ಅನುವಾದ’. ಆ ಅನುವಾದದಲ್ಲಿ ಕೆಲವು ಆಯಾಮಗಳು ಕಳೆದುಹೋಗುತ್ತವೆ, ಕೆಲವು ಸೇರ್ಪಡೆಯಾಗುತ್ತವೆ.

ಮಂದಣ್ಣ, ಮಾರ, ಎಂಗ್ಟ ಮುಂತಾದ ಪಾತ್ರಗಳ ಜ್ಞಾನ ತೇಜಸ್ವಿಯ ಕಥನದ ಮೂಲಕ ನಮ್ಮನ್ನು ತಲುಪುವಾಗ ಅದು ಈಗಾಗಲೇ ಮಧ್ಯಸ್ಥಗಾರನ ಕಣ್ಣಿನ ಮೂಲಕ ಶೋಧಿಸಲ್ಪಟ್ಟ ಜ್ಞಾನ. ಈ ಮಧ್ಯಸ್ಥ ಸ್ಥಾನ ತೇಜಸ್ವಿಯ ಕಥನ ನೈತಿಕತೆಯ ಒಂದು ಒಳ ಸಂಘರ್ಷ. ಅವರ ನಿರೂಪಣೆ ಯಾರ ಪರ ನಿಂತಿದೆ ಎಂಬ ನೇರ ಉತ್ತರ ಕೊಡದೆ ಓದುಗರನ್ನೇ ನಿರ್ಧರಿಸಲು ಬಿಡುವ ತಂತ್ರ ಈ ಸಂಘರ್ಷದ ಪ್ರಾಮಾಣಿಕ ಸ್ವೀಕೃತಿ.

ಬುಡಕಟ್ಟು ಪರಂಪರೆ ಮತ್ತು ನಾಗರಿಕ ಪರಂಪರೆ ಎಂಬ ಎರಡು ಸ್ತರಗಳ ವ್ಯತ್ಯಾಸವನ್ನು ಗಮನಿಸುವಾಗ, ಈ ಎರಡೂ ಸ್ತರಗಳ ನಡುವೆ ಕೇವಲ ವ್ಯತ್ಯಾಸ ಮಾತ್ರ ಇದೆಯೇ ಅಥವಾ ಒಂದು ರೀತಿಯ ಸ್ಥಿರ ಕ್ರಮಾನುಗತ(hierarchy)ವೂ ಇದೆಯೇ ಎಂಬ ಪ್ರಶ್ನೆ ಎದ್ದೇಳುತ್ತದೆ. ತೇಜಸ್ವಿ ಈ ಕ್ರಮಾನುಗತವನ್ನು ಒಪ್ಪುವ ಸ್ಥಿತಿಯಲ್ಲಿಲ್ಲ. ಆದರೆ ಅದನ್ನು ಸಂಪೂರ್ಣ ನಿರಾಕರಿಸುವ ಸ್ಥಿತಿಯಲ್ಲೂ ಇಲ್ಲ. ಅದರ ಬದಲಾಗಿ ಈ ಎರಡೂ ಸ್ತರಗಳ ಒಳಗಿನ ಸಂಕೀರ್ಣತೆಗಳನ್ನು ಅನಾವರಣಗೊಳಿಸುವ ಮೂಲಕ, ಸರಳ ಶ್ರೇಣೀಕರಣದ ವಿರುದ್ಧ ಪ್ರತಿರೋಧ ತೋರಿಸುತ್ತಾರೆ. ಕಾಡಿನಲ್ಲಿ ಬದುಕುವ ಮನುಷ್ಯ ಕೇವಲ ‘ಪ್ರಕೃತಿ ಜ್ಞಾನ’ದ ಖಜಾನೆ ಅಲ್ಲ; ಆ ಮನುಷ್ಯನ ಒಳಗೂ ಸಂಘರ್ಷ, ಸ್ವಾರ್ಥ, ಮೌಢ್ಯ ಇದೆ ಎಂಬುದನ್ನು ತೇಜಸ್ವಿ ಮರೆಸುವುದಿಲ್ಲ.

ಸ್ಥಳೀಯ ಪಾತ್ರಗಳನ್ನು ಸರಳ ‘ಒಳ್ಳೆಯ ಆದಿಮ ಮನುಷ್ಯ’ ಎಂಬ ಭಾವನಾತ್ಮಕ ಭ್ರಮೆಯಿಂದ ಅವರು ದೂರ ಇರುತ್ತಾರೆ. ಇದು ತೇಜಸ್ವಿ ಬರಹದ ತಾತ್ವಿಕ ಮಾಗ್ರತೆ. ಕರ್ವಾಲೋ ಕಾದಂಬರಿಯಲ್ಲಿ ಹಾರುವ ಓತಿಯ ಹುಡುಕಾಟ ಮೇಲ್ನೋಟಕ್ಕೆ ಜೀವ ವೈವಿಧ್ಯ ಸಂರಕ್ಷಣೆಯ ಕಥೆಯಂತೆ ಕಂಡುಬಂದರೂ, ಆಳದಲ್ಲಿ ಅದು ಜ್ಞಾನ ಮೀಮಾಂಸೆಯ ರೂಪಕ. ಹಾರುವ ಓತಿ ಏನನ್ನು ಪ್ರತಿನಿಧಿಸುತ್ತದೆ? ಅದು ಮಾನ್ಯತೆ ಪಡೆಯದ ಒಂದು ಸ್ಥಳೀಯ ಸತ್ಯ. ಅದನ್ನು ಕಾಡಿನ ಮನುಷ್ಯರು ಅನಾದಿ ಕಾಲದಿಂದ ಬಲ್ಲರು. ಆದರೆ ಅದರ ಅಸ್ತಿತ್ವ ‘ನಿಜ’ವೆಂದು ಸಾಧಿತವಾಗಬೇಕಾದರೆ ಕರ್ವಾಲೋನಂತಹ ವಿಜ್ಞಾನಿ ತನ್ನ ಜ್ಞಾನ ಶಿಸ್ತಿನ ಮಾನದಂಡಗಳಿಂದ ದೃಢಪಡಿಸಬೇಕು.

ಇಲ್ಲಿ ಅಂತರ್ಗತವಾಗಿರುವ ಪ್ರಶ್ನೆ ಹೀಗಿದೆ. ಸ್ಥಳೀಯ ಸಮಾಜ ಯುಗ ಯುಗಗಳಿಂದ ಅನುಭವಿಸಿ ಬಲ್ಲ ಸತ್ಯಕ್ಕೆ ಆಧುನಿಕ ವಿಜ್ಞಾನದ ಮೊಹರು ಬೇಕೆ? ಈ ಮೊಹರು ಇಲ್ಲದಿದ್ದರೆ ಅದು ಸತ್ಯವಲ್ಲವೇ? ಇದನ್ನು ತೇಜಸ್ವಿ ನೇರವಾಗಿ ಹೇಳದೆ, ಕಥನದ ನಾಟಕೀಯ ರಚನೆಯ ಮೂಲಕ ಓದುಗನ ಮನಸ್ಸಿನಲ್ಲಿ
ಮೂಡಿಸುತ್ತಾರೆ. ಈ ಪ್ರಶ್ನೆ ಕೇವಲ ಜೀವ ವೈವಿಧ್ಯದ ಸಂದರ್ಭಕ್ಕೆ ಸೀಮಿತವಲ್ಲ. ಮೂಲಿಕೆ ಬಳ್ಳಿಯ ಸುತ್ತ ಕಥೆಯಲ್ಲಿ ಸ್ಥಳೀಯ ವೈದ್ಯ ಪ್ರತಿಭೆ ಮತ್ತು ಆಧುನಿಕ ವೈದ್ಯ ಜ್ಞಾನ ಮುಖಾಮುಖಿಯಾಗುವಾಗ ಇದೇ ಪ್ರಶ್ನೆ ಮತ್ತೆ ಕೇಳಿಬರುತ್ತದೆ.

ಒಬ್ಬ ಆದಿವಾಸಿ ಮಹಿಳೆ ತನ್ನ ತಾಯಿಯಿಂದ ಕಲಿತ ಮೂಲಿಕೆ ಜ್ಞಾನ ಒಂದು ಲ್ಯಾಬೊರೇಟರಿಯ ಪ್ರಯೋಗಕ್ಕೆ ಒಳಗಾಗದ ಹೊರತು ‘ಔಷಧ’ ಎನಿಸಿಕೊಳ್ಳದ ಸ್ಥಿತಿ, ಆ ಮಹಿಳೆಗೆ ಬುದ್ಧಿಶಕ್ತಿ ಇದ್ದರೂ ಪೇಟೆಂಟ್ ಪಡೆಯಲು ಸಾಧ್ಯವಾಗದ ಸ್ಥಿತಿ, ಅವಳ ಜ್ಞಾನವನ್ನು ಬಳಸಿಕೊಂಡ ಔಷಧ ಕಂಪನಿ ಆ ಮೂಲ ಮಹಿಳೆಯ ಹೆಸರನ್ನು ಯಾವ ಪ್ರಾಶಸ್ತ್ಯ ಪತ್ರದಲ್ಲೂಉಲ್ಲೇಖಿಸದ ಸ್ಥಿತಿ, ಇವೆಲ್ಲ ಭಾರತ ಮಾತ್ರವಲ್ಲ ಜಗತ್ತಿನ ಎಲ್ಲ ಮೂಲೆಯಲ್ಲಿ ಸ್ಥಳೀಯ ಜ್ಞಾನ ಪರಂಪರೆ ಅನುಭವಿಸಿದ ದರೋಡೆ. ತೇಜಸ್ವಿ ಕಥನಗಳು ಈ ಐತಿಹಾಸಿಕ ದರೋಡೆಯ ಒಂದು ಸ್ಥಳೀಯ ಅಭಿವ್ಯಕ್ತಿಯ ದಾಖಲೆ.

ಅರಿಸ್ಟಾಟಲ್ ಮತ್ತು ಕರ್ವಾಲೋ ಮಲೆನಾಡಿನ ಕಥನಗಳಲ್ಲಿ ಯಾಕೆ ಬರಬೇಕು ಎಂಬ ಪ್ರಶ್ನೆ ಸ್ವಾರಸ್ಯಕರ ಆಲೋಚನೆಗಳನ್ನು ಹುಟ್ಟಿಸುತ್ತದೆ. ಭಾರತೀಯ ಬೌದ್ಧಿಕ ಪರಂಪರೆಯಲ್ಲಿ ವ್ಯಾಕರಣ, ತರ್ಕ, ಜ್ಯೋತಿಷ್ಯ, ವೈದ್ಯ ಮುಂತಾದ ಶಾಸ್ತ್ರಗಳ ತಿಳಿವಳಿಕೆ ಇದ್ದ ಬೌದ್ಧಿಕ ವರ್ಗ ಸ್ಥಳೀಯ ಜ್ಞಾನ ಪ್ರಕ್ರಿಯೆಗೆ ಸಾಂಸ್ಕೃತಿಕ ಮಾನ್ಯತೆ ಕೊಡುವ ಕೆಲಸ ಮಾಡಲಿಲ್ಲ. ಬದಲಾಗಿ ಆ ಸ್ಥಳೀಯ ಜ್ಞಾನವನ್ನು ತಮ್ಮ ಶಾಸ್ತ್ರದ ಅಡಿ ಸೇರಿಸಿಕೊಂಡು, ಮೂಲ ಮೂಲಗಳನ್ನು ಅಳಿಸಿ ಹಾಕಿ, ತಾವೇ ಶ್ರೇಯ ಪಡೆದ ಉದಾಹರಣೆಗಳು ಭಾರತದ ಜ್ಞಾನ ಇತಿಹಾಸದಲ್ಲಿ ಸಾಕಷ್ಟಿವೆ. ಹಾಗಾಗಿ ತೇಜಸ್ವಿ ಭಾರತೀಯ ಬೌದ್ಧಿಕ ಪರಂಪರೆಯ ಮೇಲೆ ಮೌನ ವಿಮರ್ಶೆ ನಡೆಸಲು ಅರಿಸ್ಟಾಟಲ್ ಮತ್ತು ಕರ್ವಾಲೋ ಎಂಬ ಹೊರಗಿನ ಪ್ರತಿಮೆಗಳನ್ನು ಆಯ್ಕೆ ಮಾಡಿಕೊಂಡಿರಬಹುದು.

ಭಾರತೀಯ ವಿದ್ವಾಂಸ ಸ್ಥಳೀಯ ಜ್ಞಾನ ಪ್ರಕ್ರಿಯೆಯ ಸಾಕ್ಷಿಯಾದಾಗ ಸ್ವ-ಹಿತಾಸಕ್ತಿ ಮತ್ತು ಪ್ರಭುತ್ವ ಪರ ಒಲವು ಅದನ್ನು ವಿಕೃತಗೊಳಿಸಿದ ಇತಿಹಾಸ ತಿಳಿದಿದ್ದ ತೇಜಸ್ವಿ, ಯಾವ ಸ್ವಾರ್ಥ ಸಂಬಂಧ ಇಲ್ಲದ ಹೊರಗಿನ ಕಣ್ಣಿನ ಮೂಲಕ ಸ್ಥಳೀಯ ಪ್ರತಿಭೆಯ ಮೌಲ್ಯ ಕಂಡಿತೇ ಎಂಬ
ಪ್ರಯೋಗ ನಡೆಸಿರಬಹುದು. ಹೊರಗಿನ ದೃಷ್ಟಿ ಸ್ಥಳೀಯ ಸತ್ಯವನ್ನು ಕಾಣಬಲ್ಲದೇ ಎಂಬ ಪ್ರಶ್ನೆ ಕೂಡ ಅದರ ಒಳಗಿದೆ.

ತೇಜಸ್ವಿ ಕಥನಗಳ ಸ್ತ್ರೀ ಪಾತ್ರಗಳ ಸ್ಥಾನ ಒಂದು ತೀವ್ರ ವಿಮರ್ಶಾ ಗ್ರಹಿಕೆಯನ್ನು ಬೇಡುತ್ತದೆ. ಸ್ಥಳೀಯ ಪ್ರತಿಭೆಯ ಬಗ್ಗೆ ಮಾತನಾಡುತ್ತ, ಆ ಸ್ಥಳೀಯ ಸಮಾಜದ ಒಳಗೆ ಮತ್ತೊಂದು ಅಧೀನ ಸ್ಥಾನದಲ್ಲಿ ಸ್ತ್ರೀ ಇರುವ ವಿಷಯ ಕಡೆಗಣನೆಗೊಳಗಾದರೆ ಜ್ಞಾನ ಮೀಮಾಂಸೆ ಅಪೂರ್ಣವಾಗುತ್ತದೆ. ಸ್ಥಳೀಯ ಮಹಿಳೆ ಕೃಷಿ, ಗಿಡ ಮೂಲಿಕೆ, ಮಕ್ಕಳ ಆರೈಕೆ, ಆಹಾರ ತಯಾರಿ ಮುಂತಾದ ಕ್ಷೇತ್ರಗಳಲ್ಲಿ ಅಗಾಧ ಪ್ರತಿಭೆ ಹೊಂದಿದ್ದರೂ, ಆ ಪ್ರತಿಭೆ ಲಿಂಗ ತಾರತಮ್ಯದ
ಕಾರಣ ಎರಡು ಬಗೆಯ ಅಲಕ್ಷ್ಯಕ್ಕೆ ಒಳಗಾಗಿದೆ. ಒಂದು, ಬೌದ್ಧಿಕ ಜ್ಞಾನ ಪದ್ಧತಿಯಿಂದ. ಎರಡು, ಸ್ಥಳೀಯ ಪುರುಷಸಮಾಜದಿಂದ. ತೇಜಸ್ವಿ ಕಥನಗಳು ಮೊದಲ ಬಗೆಯ ಅಲಕ್ಷ್ಯವನ್ನು ಸೂಚಿಸುತ್ತವೆ, ಆದರೆ ಎರಡನೆ ಬಗೆಯ ಅಲಕ್ಷ್ಯದ ಬಗ್ಗೆ ಸ್ಪಷ್ಟ ವಿಮರ್ಶೆ ಆ ಕಥನಗಳಲ್ಲಿ ಕಾಣಿಸದೆ ಹೋಗುವುದು ಒಂದು ಮಿತಿ.

ಸ್ಥಳೀಯ ಜ್ಞಾನ ಪ್ರಕ್ರಿಯೆಯ ರಕ್ಷಣೆ ಮಾಡಬೇಕಾದರೆ ಅದರ ಒಳಗಿನ ಲಿಂಗ ಅಸಮಾನತೆಯನ್ನೂ ಏಕಕಾಲಕ್ಕೆ ಪ್ರಶ್ನಿಸಬೇಕಾಗುತ್ತದೆ ಎಂಬ ಒಳನೋಟ
ತೇಜಸ್ವಿ ಕಥನಗಳಲ್ಲಿ ಕೊಂಚ ಹಿನ್ನೆಲೆಗೆ ಸರಿದಿದೆ. ಮಾನವೇತರ ಪಾತ್ರಗಳು ತೇಜಸ್ವಿ ಕಥನಗಳಲ್ಲಿ ಕೇವಲ ಪರಿಸರದ ಅಂಗಗಳಾಗಿ ಇಲ್ಲ. ಅವು ಒಂದು ವಿಶಿಷ್ಟ ಜ್ಞಾನ ಮೀಮಾಂಸೆಯ ನೆಲೆಯನ್ನು ಸೂಚಿಸುತ್ತವೆ. ಒಂದು ಮರ ತನ್ನ ಬೀಜವನ್ನು ಹರಡುವ ವಿಧಾನ, ಒಂದು ಪಕ್ಷಿ ತನ್ನ ಗೂಡನ್ನು ಕಟ್ಟುವ ಕ್ರಮ, ಒಂದು ನದಿ ಮಳೆಗಾಲದಲ್ಲಿ ಮಾರ್ಗ ಬದಲಿಸುವ ರೀತಿ, ಇವೆಲ್ಲ ಒಂದು ಪ್ರಕಾರದ ‘ಜ್ಞಾನ’ ಅಲ್ಲವೇ? ಇದನ್ನು ಆಧುನಿಕ ಜ್ಞಾನ ಶಿಸ್ತು ‘ಜ್ಞಾನ’ ಎಂದು ಕರೆಯದೆ ‘ಪ್ರವೃತ್ತಿ’ ಅಥವಾ ‘ನಡವಳಿಕೆ’ ಎಂದು ಕರೆಯುತ್ತದೆ. ಈ ನಾಮಕರಣದ ಹಿಂದೆ ಮನುಷ್ಯ ಕೇಂದ್ರಿತ ಜ್ಞಾನ ಮೀಮಾಂಸೆ ಇದೆ.

ತೇಜಸ್ವಿ ಈ ಕೇಂದ್ರೀಕರಣವನ್ನು ತಮ್ಮ ಕಥನಗಳಲ್ಲಿ ಅಸ್ಥಿರಗೊಳಿಸಲು ಯತ್ನಿಸುತ್ತಾರೆ. ಮಾನವ ಮತ್ತು ಮಾನವೇತರ ಪ್ರಪಂಚ ಒಂದೇ ಜ್ಞಾನ ಕ್ಷೇತ್ರದ ಭಾಗ ಎಂಬ ದೃಷ್ಟಿಕೋನ ಇಲ್ಲಿ ಅಂತರ್ಗತವಾಗಿದೆ. ಹಾರುವ ಓತಿ ಕೇವಲ ಒಂದು ಪ್ರಾಣಿ ಅಲ್ಲ; ಅದು ಮನುಷ್ಯ ಕಣ್ಣಿಗೆ ಕಾಣದ ಸ್ಥಳೀಯ ಸತ್ಯದ ರೂಪಕ. ಮೇದರಹಳ್ಳಿ ಅವಸಾನ ಕಥೆ ಆಧುನಿಕತೆ ಮತ್ತು ಸ್ಥಳೀಯ ಪ್ರತಿಭೆಯ ಸಂಘರ್ಷದ ಅತ್ಯಂತ ನೇರ ಅಭಿವ್ಯಕ್ತಿ. ಪ್ಲ್ಯಾಸ್ಟಿಕ್ ಎಂಬ ಆಧುನಿಕ ಉತ್ಪನ್ನ ಬಿದಿರು ಕಲೆಯನ್ನು ಮಾಯ ಮಾಡಿದ ವಿಷಯ ಕೇವಲ ಆರ್ಥಿಕ ಸ್ಪರ್ಧೆಯ ವಿಷಯ ಮಾತ್ರ ಅಲ್ಲ. ಬಿದಿರು ಕಲೆ ಒಂದು ಪರಿಸರ ಜ್ಞಾನ. ಯಾವ ಸಮಯಕ್ಕೆ ಯಾವ ಬಿದಿರು ಕಡಿಯಬೇಕು, ಅದನ್ನು ಹೇಗೆ ಸಿದ್ಧಪಡಿಸಬೇಕು, ಅದರ ಒಳ ಗುಣಗಳು ಹೇಗಿರುತ್ತವೆ, ಒಂದು ಬುಟ್ಟಿಯ ಆಕಾರ ಅದರ ಬಳಕೆಯ ಅನುಭವದಿಂದ ಹೇಗೆ ನಿರ್ಮಾಣವಾಯಿತು ಎಂಬ ಪ್ರಶ್ನೆಗಳಿಗೆ ಉತ್ತರ ಆ ಕಲೆಯ ಒಳಗಿದೆ. ಪ್ಲ್ಯಾಸ್ಟಿಕ್ ಈ ಜ್ಞಾನ ಪ್ರಕ್ರಿಯೆಯಅವಸಾನಕ್ಕೆ ಕಾರಣವಾಗಿ ಮಾತ್ರ ಕಾಣಿಸದೆ, ಆ ಹಳ್ಳಿಯ ಸಾಮಾಜಿಕ ಬದ್ಧತೆ, ಸಾಮುದಾಯಿಕ ಗುರುತು ಹಾಗೂ ಪರಿಸರ ಸಂಬಂಧ ಎಲ್ಲವನ್ನೂ ಒಟ್ಟಿಗೆ ಅಳಿಸಿ ಹಾಕಿದ ಒಂದು ಸಾಧನವಾಗಿ ಕಾಣಿಸುತ್ತದೆ.

ತುಕ್ಕೋಜಿಯಂತಹ ಸ್ಥಳೀಯ ಜ್ಞಾನ ಪ್ರಕ್ರಿಯೆ ಅಪ್ಡೇಟ್ ಆಗದಿರಲು ಕೇವಲ ಸ್ಥಳೀಯ ಜನರ ಜಡತ್ವ ಕಾರಣ ಅಲ್ಲ. ಅದನ್ನು ಅಪ್ಡೇಟ್‌ ಮಾಡಿಕೊಳ್ಳಲು ಬೇಕಾದ ಸ್ಥಳ, ಸಮಯ, ಆರ್ಥಿಕ ಭದ್ರತೆಯ ಜತೆಗೆ ಸಾಂಸ್ಥಿಕ ಬೆಂಬಲ ಇಲ್ಲದ ಕಾರಣ. ಆಧುನಿಕ ಜ್ಞಾನ ಶಿಸ್ತು ವಿಶ್ವ ವಿದ್ಯಾಲಯ, ಪ್ರಯೋಗ ಶಾಲೆ, ಗ್ರಂಥಾಲಯ ಹಾಗೂ ಪ್ರಕಾಶನ ವ್ಯವಸ್ಥೆಯ ಮೂಲಕ ತನ್ನನ್ನು ತಾನು ನಿರಂತರ ನವೀಕರಿಸಿಕೊಳ್ಳುತ್ತದೆ. ಸ್ಥಳೀಯ ಜ್ಞಾನ ಪ್ರಕ್ರಿಯೆಗೆ ಇಂತಹ ಸಂಸ್ಥೆಗಳ ಬೆಂಬಲ ಇಲ್ಲ, ಬದಲಾಗಿ ಆ ಸ್ಥಳೀಯ ಸಮಾಜ ಸ್ವತಃ ಒಂದು ‘ಸಂಸ್ಥೆ’ಯಾಗಿ ಕಾರ್ಯ ನಿರ್ವಹಿಸಬೇಕು. ಆ ಸಮಾಜ ಚದುರಿ
ಹೋದಾಗ, ಅಥವಾ ಒಳಗಿನ ಅಸಮಾನತೆ ತೀವ್ರಗೊಂಡಾಗ, ಅಥವಾ ಆರ್ಥಿಕ ಒತ್ತಡಕ್ಕೆ ಸಿಕ್ಕಿ ಜನ ವಲಸೆ ಹೋದಾಗ ಆ ಜ್ಞಾನ ಪ್ರಕ್ರಿಯೆ ಮೊಟ್ಟೆಯ ಚಿಪ್ಪಿನೊಂದಿಗೆ ಒಡೆದು ಹೋಗುತ್ತದೆ.

ಜ್ಞಾನಕ್ಕೆ ಸೌಲಭ್ಯಗಳಿವೆ, ಪ್ರತಿಭೆಗೆ ಇಲ್ಲ ಎಂಬ ತೇಜಸ್ವಿ ಕಥನಗಳ ಒಟ್ಟಾರೆ ನಿಲುವು ಒಂದು ಮಹತ್ವದ ಜ್ಞಾನ ಮೀಮಾಂಸೆಯ ಪ್ರಶ್ನೆಯನ್ನು ಎತ್ತುತ್ತದೆ. ಸ್ಥಳೀಯ ಪ್ರತಿಭೆ ಮತ್ತು ಆಧುನಿಕ ಜ್ಞಾನ ಸಹಬಾಳ್ವೆ ಸಾಧ್ಯವೇ? ಸಾಧ್ಯ ಎಂದಾದರೆ ಅದಕ್ಕೆ ಯಾವ ರಾಜಕೀಯ ಮತ್ತು ಸಾಂಸ್ಥಿಕ ಬದಲಾವಣೆ ಅಗತ್ಯ? ಸ್ಥಳೀಯ ಪ್ರತಿಭೆ ಕೇವಲ ಸಂರಕ್ಷಣೆಯ ವಸ್ತು ಆಗಬೇಕೆ? ಅಥವಾ ಅದು ಇಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜೀವಂತ ಸಾಧನ ಆಗಬೇಕೆ ಎನ್ನುವ ಪ್ರಶ್ನೆಗಳು ತೇಜಸ್ವಿ ಕಾಲದಲ್ಲಿ ಮಾತ್ರ ಪ್ರಸ್ತುತವಾಗಿರಲಿಲ್ಲ.

ಇದನ್ನೂ ಓದಿದ್ದೀರಾ? ಭೂಹೀನರ ಬೆನ್ನೆಲುಬು ಪಶುಪಾಲನೆ: ಈ ಆರ್ಥಿಕತೆಯತ್ತ ಗಮನ ಹರಿಸುವರೆ ಸಚಿವರು?

ಭೂ ಬಳಕೆ, ಬಿತ್ತನೆ ಬೀಜ, ಜಲ ವ್ಯವಸ್ಥಾಪನೆ, ಕಾಡು ರಕ್ಷಣೆ ಮುಂತಾದ ಸಮಕಾಲೀನ ಪ್ರಶ್ನೆಗಳಲ್ಲಿ ಸ್ಥಳೀಯ ಜ್ಞಾನ ಪ್ರಕ್ರಿಯೆಯ ಮಹತ್ವ ಇಂದಿಗೂ ಅಗಾಧ. ತೇಜಸ್ವಿ ಕಥನಗಳ ಶ್ರೇಷ್ಠತೆ ಯಾವುದೇ ಒಂದು ಬದಿಗೆ ಸ್ಪಷ್ಟ ನಿಲುವು ತಾಳದ ಪ್ರಾಮಾಣಿಕ ಜ್ಞಾನ ಶೋಧದಲ್ಲಿ ಇದೆ. ಆಧುನಿಕ ಜ್ಞಾನ ಪದ್ಧತಿ ಸರ್ವಶ್ರೇಷ್ಠ ಎಂಬ ಅಹಂಕಾರವನ್ನೂ ನಿರಾಕರಿಸುತ್ತ, ಸ್ಥಳೀಯ ಜ್ಞಾನ ಪ್ರಕ್ರಿಯೆ ಪರಿಶುದ್ಧ ಮತ್ತು ಸ್ವಯಂ ಸಂಪೂರ್ಣ ಎಂಬ ಭಾವುಕ ಹಂಬಲವನ್ನೂ ನಿರಾಕರಿಸುತ್ತ, ಈ ಎರಡರ ನಡುವಿನ ತಳಮಳದ ಸ್ಥಳದಲ್ಲಿ ಒಂದು ಹೊಸ ಜ್ಞಾನ ಮೀಮಾಂಸೆ ನಿರ್ಮಾಣವಾಗಬೇಕಿದೆ ಎಂಬ ಆಶಯ ಆ ಕಥನಗಳ ಒಳ ಉಸಿರು. ಈ ಜ್ಞಾನ ಮೀಮಾಂಸೆ ಪೂರ್ಣಗೊಳ್ಳಲು ಇನ್ನಷ್ಟು ತಲೆಮಾರಿನ ಚಿಂತನೆ, ಸ್ಥಳೀಯ ಸಂವೇದನೆ ಹಾಗೂ ಸಾಂಸ್ಥಿಕ ಇಚ್ಛಾ ಶಕ್ತಿ ಬೇಕು. ತೇಜಸ್ವಿ ಅವರ ಕಥನಗಳು ಆ ನಿಟ್ಟಿನಲ್ಲಿ ನಡೆದ ಮಹತ್ವದ ಮೊದಲ ಹೆಜ್ಜೆಗಳು.

Ravi sidlipura
ಡಾ. ರವಿ ಎಂ. ಸಿದ್ಲಿಪುರ
+ posts

ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿ, 'ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರ್ಯಾಯ' ಎಂಬ ವಿಮರ್ಶಾ ಲೇಖನಗಳ ಸಂಕಲನ, 'ಶಾಸನ ಓದು', 'ವಿಮರ್ಶೆ ಓದು' ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ 'ಸಮರ ವ್ಯಾಪಾರ' ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ರವಿ ಎಂ. ಸಿದ್ಲಿಪುರ
ಡಾ. ರವಿ ಎಂ. ಸಿದ್ಲಿಪುರ
ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿ, 'ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರ್ಯಾಯ' ಎಂಬ ವಿಮರ್ಶಾ ಲೇಖನಗಳ ಸಂಕಲನ, 'ಶಾಸನ ಓದು', 'ವಿಮರ್ಶೆ ಓದು' ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ 'ಸಮರ ವ್ಯಾಪಾರ' ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : ಶೇ. 86.47ರಷ್ಟು ಮತ ಚಲಾವಣೆ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ಬೀದರ್ ಜಿಲ್ಲೆಯಾದ್ಯಂತ...

ಬಸವಕಲ್ಯಾಣ | SIR ರದ್ದಾಗಲಿ, ಜ್ಞಾನೇಶಕುಮಾರ್‌ ರಾಜೀನಾಮೆ ನೀಡಲಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ‘ಪೀಪಲ್...

SIR | ರಾಜ್ಯದಲ್ಲಿ 43.82 ಲಕ್ಷ ನೋಟಿಸ್ ವಿಚಾರಣೆ ಪೂರ್ಣ; ಅಕ್ಟೋಬರ್ 27ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ: ಸಿಇಒ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಅಂತಿಮ...

ಬೆಂಗಳೂರು | SIR ವಿರುದ್ಧ ಮೊಳಗಿದ ಘೋಷ; ಪ್ರಜಾತಂತ್ರದ ಉಳಿವಿಗಾಗಿ ‘ಜನತಾ ಮೆರವಣಿಗೆ’

ದೇಶದ ಮತದಾರರ ಮೇಲೆ ಗ್ಯಾನೇಶ್ ಕುಮಾರ್ (ಚುನಾವಣಾ ಆಯೋಗ) ಹೇರಿರುವ ಎಸ್‌ಐಆರ್...