ಸಾರ್ವಜನಿಕರು, ಪರಿಸರವಾದಿಗಳು ಹಾಗೂ ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ, ವಿವಾದಿತ ‘ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ, 2026’ ಅನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2026ರ ಸೆಪ್ಟೆಂಬರ್ 3ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೂ ಈ ಬಗ್ಗೆ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಉದ್ಯಾನವನಗಳು ಮತ್ತು ತೋಟಗಳ ಒಟ್ಟು ವಿಸ್ತೀರ್ಣದ ಶೇ. 5ರಷ್ಟು ಭೂಮಿಯನ್ನು ಸಾರ್ವಜನಿಕ ಮೂಲಸೌಕರ್ಯ ಮತ್ತು ಉಪಯುಕ್ತತಾ ಯೋಜನೆಗಳಿಗೆ ಬಳಸಲು ಈ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಈ ನಿರ್ಧಾರದಿಂದ ಬೆಂಗಳೂರಿನ ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ನಂತಹ ಹಸಿರು ವಲಯಗಳ ಸ್ವರೂಪ ಬದಲಾಗಿ, ಪರಿಸರಕ್ಕೆ ತೀವ್ರ ಧಕ್ಕೆಯಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಸರ್ಕಾರ ಸುರಂಗ ರಸ್ತೆಯತ್ತ; ನಾಗರಿಕರ ಚಿತ್ತ ಪರಿಸರ ಸಂರಕ್ಷಣೆಯತ್ತ
ಲಾಲ್ಬಾಗ್ನಲ್ಲಿ ಪ್ರಸ್ತಾವಿತ ಸುರಂಗ ರಸ್ತೆ (ಟನಲ್ ರಸ್ತೆ) ಯೋಜನೆಗಾಗಿ ಈ ಜಾಗವನ್ನು ಬಳಸಿಕೊಳ್ಳಲಾಗುತ್ತದೆ ಎಂಬ ಚರ್ಚೆ ತೀವ್ರಗೊಂಡಿತ್ತು. ಉದ್ಯಾನವನಗಳು ನಗರದ ಶ್ವಾಸಕೋಶವಿದ್ದಂತೆ ಎಂದು ಹೇಳಿ ಪರಿಸರ ತಜ್ಞರು, ನಡಿಗೆದಾರರ ಸಂಘಗಳು ಮತ್ತು ನಾಗರಿಕರು ಲಾಲ್ಬಾಗ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.
ಇವೆಲ್ಲವುದರ ನಡುವೆ ಸದ್ಯಕ್ಕೆ ಈ ವಿಧೇಯಕವನ್ನು ಹಿಂಪಡೆದಿರುವ ಸರ್ಕಾರ, ಇದನ್ನು ಸಾರ್ವಜನಿಕ ವಲಯದಲ್ಲಿ ಮುಕ್ತ ಚರ್ಚೆಗೆ ಇಡಲಿದೆ. ನಾಗರಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಪಡೆದ ಬಳಿಕ, ಅಗತ್ಯ ಬದಲಾವಣೆಗಳೊಂದಿಗೆ ಮುಂದಿನ ಅಧಿವೇಶನದಲ್ಲಿ ಹೊಸ ಪರಿಷ್ಕೃತ ವಿಧೇಯಕವನ್ನು ಮಂಡಿಸುವುದಾಗಿ ಸರ್ಕಾರ ತಿಳಿಸಿದೆ.
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ, “ಕರ್ನಾಟಕದ ಜನತೆಯ ಭಾವನೆಗಳನ್ನು ನಮ್ಮ ಸರ್ಕಾರ ಸದಾ ಗೌರವಿಸುತ್ತದೆ. ಕರ್ನಾಟಕ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯುವ ಸಚಿವ ಸಂಪುಟದ ನಿರ್ಧಾರವೂ ಇದೇ ಜನಪರ ಬದ್ಧತೆಯ ಪ್ರತೀಕ” ಎಂದು ಹೇಳಿದ್ದಾರೆ.
“ಸಾರ್ವಜನಿಕರ ಅಭಿಪ್ರಾಯ, ಆತಂಕ ಮತ್ತು ಭಾವನೆಗಳಿಗೆ ಬೆಲೆ ನೀಡಿ, ನಮ್ಮ ಉದ್ದೇಶವನ್ನು ಮತ್ತಷ್ಟು ಸ್ಪಷ್ಟವಾಗಿ ಜನರ ಮುಂದಿಡಲು ಹಾಗೂ ಅಗತ್ಯ ತಿದ್ದುಪಡಿಗಳೊಂದಿಗೆ ವಿಧೇಯಕವನ್ನು ಮರು ಮಂಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ” ಎಂದು ತಿಳಿಸಿದ್ದಾರೆ.
“ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ನ್ಯಾಯಾಧೀಶರು. ಜನತಾ ನ್ಯಾಯಾಲಯದ ಮುಂದೆ ನಮ್ಮ ಉದ್ದೇಶವನ್ನು ಪ್ರಾಮಾಣಿಕವಾಗಿ ಮಂಡಿಸಿ, ಜನವಿಶ್ವಾಸದೊಂದಿಗೆ ಮುಂದುವರಿಯುವುದು ನಮ್ಮ ಸರ್ಕಾರದ ಧ್ಯೇಯ” ಎಂದಿದ್ದಾರೆ.






