ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ಬಿದ್ದು, ಐದನೇ ತರಗತಿ ಎಂಟು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದಲ್ಲಿ ನಡೆದಿದೆ.
ಘಟನೆಯಲ್ಲಿ ಮಹೇಶ, ರೂಪಿಣಿ, ರಾಕೇಶ, ಆಕಾಶ್ ಲಮಾಣಿ, ಅಶ್ವಿನಿ, ಅಕ್ಷಯ ಲಮಾಣಿ, ಸೃಷ್ಟಿ ಹಾಗೂ ಪ್ರೇಮ್ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
‘ಮಧ್ಯಾಹ್ನ ಐದನೇ ತರಗತಿಗೆ ಪಾಠ ಮಾಡುವ ವೇಳೆ ಕೊಠಡಿಯ ಚಾವಣಿಯ ಕಾಂಕ್ರೀಟ್ ವಿದ್ಯಾರ್ಥಿಗಳ ಮೇಲೆ ಬಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಗಾಯಗೊಂಡಿದ್ದು, ಎಲ್ಲರೂ ಆತಂಕದಿಂದ ಕೊಠಡಿಯಿಂದ ಹೊರಗಡೆ ಓಡಿ ಬಂದರು” ಎಂದು ಶಿಕ್ಷಕರು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೀತಾರಾಮು ಅವರು, ಈ ಕುರಿತು ಮಾತನಾಡಿದ್ದು, “ಶಾಲೆಗೆ ಭೇಟಿ ಕೊಟ್ಟು, ಮಾಹಿತಿ ಪಡೆಯುವೆ. ಮಕ್ಕಳ ಸುರಕ್ಷತಾ ಸ್ಥಳದಲ್ಲಿ ಕೂರಿಸಿ, ಪಾಠ ಮಾಡಬೇಕು ಎಂಬ ಸೂಚನೆ ಇದೆ. ಶಿಥಿಲಗೊಂಡ ಕೊಠಡಿಯಲ್ಲಿ ಯಾರೂ ಪಾಠ ತೆಗೆದುಕೊಂಡಿದ್ದಾರೋ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ತಿಳಿಸಿದ್ದಾರೆ.
‘ಶಾಲಾ ಕೊಠಡಿಯ ಚಾವಣಿಯನ್ನು ಕೂಡಲೇ ದುರಸ್ತಿ ಮಾಡಲು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ನಿರ್ದೇಶನ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ ಬಾಲೆ ತಿಳಿಸಿದ್ದಾರೆ.
ಶಾಲೆಯ ಶಿಥಿಲಾವಸ್ಥೆಯಿಂದ ಮೇಲ್ಚಾವಣಿ ಕುಸಿದು ವಿದ್ಯಾರ್ಥಿಗಳಿಗೆ ಗಾಯಗೊಂಡಿದ್ದನ್ನು ನೋಡಿದ ಪೋಷಕರು ಶೀಥಿಲಗೊಂಡಿದ್ದರೂ, ಸರಿಪಡಿಸಲಾಗದೆ, ಮುಂಜಾಗೃತ ತಗೆದುಕೊಳ್ಳದೆ ಇದ್ದುದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.





