ಕಬ್ಬಿಗೆ ನ್ಯಾಯಯುತ, ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಬೆಳಗಾವಿ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಬ್ಬು ಬೆಳೆಗಾರರ ಅಹವಾಲು ಆಲಿಸಿ, ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಡಿದ ಯತ್ನ ಭಾಗಶಃ ವಿಫಲವಾಗಿದೆ. ದಸರಾ ಹಬ್ಬದ ನಂತರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಪ್ರತಿನಿಧಿಗಳು ಹಾಗೂ ಕೇಂದ್ರ-ರಾಜ್ಯ ಸರ್ಕಾರದ ಅಧಿಕಾರಿಗಳನ್ನೊಳಗೊಂಡ ತ್ರಿಪಕ್ಷೀಯ ಉನ್ನತ ಮಟ್ಟದ ಸಭೆ ಕರೆದು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಆದರೆ, ಬರೀ ನಬರವಸೆಗಳಷ್ಟೇ ಸಾಲದು ಎಂದಿರುವ ರೈತರು, ಪ್ರತಿಭಟನೆ ಕೈಬಿಡಲು ನಿರಾಕರಿಸಿದ್ದು, ಧರಣಿ ಮುಂದುವರೆಸಿದ್ದಾರೆ.
ಶನಿವಾರ, ಬೆಳಗಾವಿ ಜಿಲ್ಲೆಯ ಕಿತ್ತೂರಿಗೆ ಭೇಟಿ ನೀಡಿದ್ದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಿದ್ದರು. ಕಬ್ಬಿನ ಉತ್ಪಾದನಾ ವೆಚ್ಚ ಏರಿಕೆಯಾಗುತ್ತಿದ್ದರೂ ರೈತರ ಆದಾಯ ಕುಸಿಯುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಒಪ್ಪಿಕೊಂಡ ಅವರು, “ಈ ಬಿಕ್ಕಟ್ಟು ಕೇವಲ ರಾಜ್ಯ ಸರ್ಕಾರವೊಂದರಿಂದಲೇ ಬಗೆಹರಿಯುವಂತಹುದಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಬ್ಯಾಂಕುಗಳು, ಸಕ್ಕರೆ ಕಾರ್ಖಾನೆಗಳು ಹಾಗೂ ರೈತರೆಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿದಾಗ ಮಾತ್ರ ಪರಿಹಾರ ಸಾಧ್ಯ” ಎಂದು ಪ್ರತಿಪಾದಿಸಿದ್ದರು. ಶೀಘ್ರವೇ ಸಭೆ ಕರೆಯುವುದಾಗಿ ಭರವಸೆ ನೀಡಿದ್ದರು.
ಆದಾಗ್ಯೂ, ಮುಖ್ಯಮಂತ್ರಿಯವರ ಮಾತುಗಳಿಗೆ ಕಬ್ಬು ಬೆಳೆಗಾರರು ತೃಪ್ತರಾಗಿಲ್ಲ. ಕಬ್ಬಿಗೆ ನೀಡಲಾಗುವ ಕನಿಷ್ಠ ಬೆಲೆಯ (MSP/FRP) ಕುರಿತು ಸರ್ಕಾರ ಯಾವುದೇ ಸ್ಪಷ್ಟ ಅಂಕಿಸಂಖ್ಯೆ ಅಥವಾ ಖಚಿತ ಭರವಸೆ ನೀಡದಿರುವುದು ಹಾಗೂ ಪ್ರಸ್ತಾವಿತ ಸಭೆಗೆ ಖಚಿತ ದಿನಾಂಕ ನಿಗದಿಪಡಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದರ ಜೊತೆಗೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇರ ಮಧ್ಯಸ್ಥಿಕೆಗೆ ಪಟ್ಟು ಹಿಡಿದಿರುವ ರೈತರು, ಅಕ್ಟೋಬರ್ 18ರಂದು ಜೋಶಿ ಅವರು ಕಿತ್ತೂರಿಗೆ ಭೇಟಿ ನೀಡಿ ರೈತರ ಸಮಸ್ಯೆಗೆ ಸ್ಪಷ್ಟ ಪರಿಹಾರದ ಭರವಸೆ ನೀಡಬೇಕು ಎಂದು ಆಹ್ವಾನ ನೀಡಿದ್ದಾರೆ. ಕೇಂದ್ರ ಸಚಿವರು ಸ್ವತಃ ಬಂದು ಭರವಸೆ ನೀಡಿದರೆ ಅವರಿಗೆ ಬೃಹತ್ ಹಾರ ಹಾಕಿ ಸ್ವಾಗತಿಸುವುದಾಗಿ ಘೋಷಿಸಿರುವ ಕಬ್ಬು ಬೆಳೆಗಾರರು, ಅಲ್ಲಿಯವರೆಗೆ ತಮ್ಮ ಹೋರಾಟ ಮತ್ತು ಪಾದಯಾತ್ರೆಯನ್ನು ಮುಂದುವರಿಸಲು ತೀರ್ಮಾನಿಸಿದ್ದಾರೆ.




