ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರನ್ನು ಇನ್ನು ಯಾರಿಂದಲೂ ಕಾಪಾಡಲು ಸಾಧ್ಯವಿಲ್ಲ. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಕ್ಷಣವೇ ಅಮಾನತಿನಲ್ಲಿಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇನ್ನಿಬ್ಬರು ಚುನಾವಣಾ ಆಯುಕ್ತರ ನಿರ್ಧಾರವನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಂಡ ಸಿಇಸಿ ಗ್ಯಾನೇಶ್ ಕುಮಾರ್ ಅವರ ಅಕ್ರಮಗಳ ಬಗ್ಗೆ ತನಿಖಾ ವರದಿ ಬಹಿರಂಗಗೊಂಡ ಬಳಿಕ ಸಿಇಸಿ ರಾಜೀನಾಮೆಗೆ ಆಗ್ರಹ ಹೆಚ್ಚಾಗಿದೆ. ದೇಶಾದ್ಯಂತ ಯುವಜನರು ಬೀದಿಗಿಳಿಯುತ್ತಿದ್ದಾರೆ. ಆದರೆ ಪ್ರತಿಭಟನೆಗೆ ಅವಕಾಶವೇ ನೀಡದೆ ಬಂಧನ ಮಾಡಲಾಗುತ್ತಿದೆ. ಇವೆಲ್ಲವುದರ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್ಗೆ ಯಾಕೆ? ಕೊಡಿಸಿದವರು ಯಾರು?
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸೂಚನೆಗಳ ಮೇರೆಗೆ ಮುಖ್ಯ ಚುನಾವಣಾ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣಾ ಆಯೋಗದ ಮೇಲಿದ್ದ ಸಾರ್ವಜನಿಕರ ವಿಶ್ವಾಸವನ್ನು ಹಾಳುಗೆಡವಿದ್ದಾರೆ ಎಂದು ಜೈರಾಮ್ ರಮೇಶ್ ಕಿಡಿಕಾರಿದ್ದಾರೆ.
ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಗ್ಯಾನೇಶ್ ಕುಮಾರ್ ಅವರು ತಕ್ಷಣ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕು ಮತ್ತು ಚಾಲ್ತಿಯಲ್ಲಿರುವ ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದೆ.
ಕಳೆದ ಕೆಲವು ದಿನಗಳಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಾಚರಣೆ ಸಮಿತಿ (CWC) ಸಭೆಗಳಲ್ಲಿ ಸುದೀರ್ಘ ಚರ್ಚೆ ನಡೆದಿದ್ದು, ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತೆಯನ್ನು ರಕ್ಷಿಸಲು ಸಿಇಸಿ ನಿರ್ಗಮನವೇ ಏಕೈಕ ದಾರಿ ಎಂದು ಕಾಂಗ್ರೆಸ್ ಪುನರುಚ್ಚರಿಸಿದೆ.





