ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಎಂದು ನೀಡುತ್ತಿದೆ. ಅ ಪಂಚ ಗ್ಯಾರಂಟಿ ಕೊಡುವುದಕ್ಕೆ ಜನರ ಮೇಲೆ ಅಪಾರ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತಿದೆ. ಜನರನ್ನೇ ಸುಲಿದು ಪಂಚ ಗ್ಯಾರಂಟಿ ಕೊಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಹೆಬ್ಬಗೋಡಿಯಲ್ಲಿ ಕೆ.ಹೆಚ್. ಶಿಕ್ಷಣ ಟ್ರಸ್ಟ್‌ನ ವಿನಾಯಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, “ಈ ರೀತಿ ತೆರಿಗೆ ಹಾಕುವುದೇ ಆಗಿದ್ದರೆ ನಾನೇ ಅಧಿಕಾರದಲ್ಲಿ ಇದ್ದಿದ್ದರೆ ತಿಂಗಳಿಗೆ ಐದು ಸಾವಿರ ರೂಪಾಯಿ ಕೊಡುತ್ತಿದ್ದೆ. ನಿಮ್ಮ ಹಣ ನಿಮಗೆ ಕೊಡುವುದಕ್ಕೆ ಸರ್ಕಾರ ಸುಲಿಗೆ ಮಾಡುತ್ತಿದೆ. ನಾನು ಇಂತ ಅಗ್ಗದ ಕಾರ್ಯಕ್ರಮ ಬಿಟ್ಟು ಶಾಶ್ವತ ಪರಿಹಾರ ಕೊಡುವ ಯೋಜನೆಗಳನ್ನು ಹಾಕಿಕೊಂಡಿದ್ದೆ. ಅದನ್ನು ಕಳೆದ ಚುನಾವಣೆಯಲ್ಲಿ ಜನರು ಗಂಭೀರವಾಗಿ ಪರಿಗಣನೆ ಮಾಡಲಿಲ್ಲ” ಎಂದರು.
“ಉಚಿತ ಶಿಕ್ಷಣ, ಉಚಿತ ಆರೋಗ್ಯ, ಉಚಿತ ಮನೆ ಸೇರಿದಂತೆ ನಾನು ಪಂಚರತ್ನ ಎಂಬ ಐದು ಶಾಶ್ವತ ಕಾರ್ಯಕ್ರಮಗಳನ್ನು ಕೊಡಲು ನಿರ್ಧರಿಸಿದ್ದೆ. ಆದರೆ, ಜನರು ಪಂಚ ಗ್ಯಾರಂಟಿ ಎಂಬ ಅಗ್ಗದ ಕಾರ್ಯಕ್ರಮಗಳಿಗೆ ಮಾರು ಹೋದರು. ಇವತ್ತು ಮಕ್ಕಳ ಶಿಕ್ಷಣ ಕಷ್ಟವಾಗಿದೆ. ಬಡವರು, ಮಧ್ಯಮ ವರ್ಗದ ಮಕ್ಕಳಿಗೆ ಕೈಗೆಟುಕುವ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಸರ್ಕಾರಿ ಶಾಲೆಗಳು ಬಹಳ ದುಸ್ಥಿತಿಯಲ್ಲಿ ಇವೆ” ಎಂದು ಕಳವಳ ವ್ಯಕ್ತಪಡಿಸಿದರು.
“ಎಲ್ ಕೆಜಿ ಯಿಂದ ಪಿಯುಸಿವರೆಗೆ ಒಂದೇ ಸಮುಚ್ಚಯದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಶಿಕ್ಷಣ ಕೊಡಬೇಕು ಎನ್ನುವುದು ನನ್ನ ಕನಸಾಗಿತ್ತು. ಅದಕ್ಕಾಗಿ ಪಂಚರತ್ನ ಯೋಜನೆಯನ್ನು ರೂಪಿಸಿ ಅದರಲ್ಲಿ ಶಿಕ್ಷಣವನ್ನು ಸೇರಿಸಿದ್ದೆ. ಬಡವರು, ಮಧ್ಯಮ ವರ್ಗದ ಮಕ್ಕಳಿಗೆ ಉಚಿತವಾಗಿ ಹೈಟೆಕ್ ಶಿಕ್ಷಣ ಕೊಡುವುದು ನನ್ನ ಉದ್ದೇಶವಾಗಿತ್ತು” ಎಂದು ಸಚಿವರು ಹೇಳಿದರು.
“ತಂದೆ ತಾಯಿಗೆ ನೋವು ಕೊಡಬೇಡಿ. ಕಡಿಮೆ ಅಂಕ ಬಂತು ಎಂದು ತಪ್ಪು ನಿರ್ಧರ ಮಾಡಬೇಡಿ. ನಾನು ಕೂಡ ಕೊನೆ ಬೆಂಚಿನ ವಿದ್ಯಾರ್ಥಿ. ಹೆಚ್ಚು ಅಂಕ ಪಡೆಯುತ್ತಿದ್ದ ವಿದ್ಯಾರ್ಥಿ ಆಗಿರಲಿಲ್ಲ. ಆದರೂ ಜೀವನದಲ್ಲಿ ಏನೋ ಒಂದನ್ನು ಸಾಧನೆ ಮಾಡಿದ ಸಂತೋಷ ಇದೆ. ನಾನೆ ಇದ್ದೇನೆ ಅಲ್ಲವೇ? ಕಡಿಮೆ ಅಂಕ ಬಂತು ಧೃತಿಗೆಡಬೇಡಿ” ಎಂದು ಸಚಿವರು ಮಕ್ಕಳಿಗೆ ಕಿವಿಮಾತು ಹೇಳಿದರು.

Looters wont give to public