ರಾಜ್ಯದಲ್ಲಿಂದು ಹೆಚ್ಚು ಚರ್ಚೆಗೆ ಕಾರಣವಾಗಿರುವ ಹುಲಿ ಉಗುರು ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿವೆ. ಈ ಸಂದರ್ಭದಲ್ಲಿ ಹುಲಿಗಳ ನೈಜ ಪರಿಸ್ಥಿತಿ ಮತ್ತು ಮನುಷ್ಯ ಸ್ವಾರ್ಥ ಸಾಧನೆ, ಮೂಢನಂಬಿಕೆಗಳಿಂದ ಮಾಡುವ ಅಮಾನುಷ ಕೃತ್ಯಗಳಿಂದಾಗಿ ಅಪರೂಪದ ವನ್ಯ ಪ್ರಾಣಿಗಳು ಹೇಗೆ ಅವನತಿಯ ಹಾದಿ ಹಿಡಿಯುತ್ತಿವೆ ಎನ್ನುವುದನ್ನು ತಿಳಿಯುವುದು ಮುಖ್ಯ.
ಹುಲಿಯ ವೈಜ್ಞಾನಿಕ ಹೆಸರು “ಪ್ಯಾಂಥೆರಾ ಟೈಗ್ರಿಸ್”. ಹುಲಿ ಬೆಕ್ಕಿನ ಜಾತಿಗೆ ಸೇರುವ ಪ್ರಾಣಿಯಾಗಿದೆ. ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಹುಲಿಯ ಉಗುರಿನ ಲಾಕೆಟ್ ಬಳಸಿದ ಚಿತ್ರನಟರು ಸೇರಿದಂತೆ ಅನೇಕ ಗಣ್ಯರ ಮೇಲೆ ದೂರು ದಾಖಲಾಗಿವೆ. ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಲಾಕೆಟ್ ಧರಿಸಿದ್ಧಾರೆಂಬ ಕಾರಣಕ್ಕೆ ಅವರ ಮೇಲೆ ದೂರು ದಾಖಲಿಸಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲಾಗಿದೆ. ಇದಾದ ನಂತರ ಅನೇಕ ಸಂಘಟನೆಗಳು ಚಿತ್ರನಟ ದರ್ಶನ್, ಜಗ್ಗೇಶ್ ಇವರ ಮೇಲೆಯೂ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿವೆ. ಅವರ ಮನೆಗಳಲ್ಲಿ ಶೋಧ ನಡೆಸಿರುವ ಪೊಲೀಸರು, ಅವರ ಬಳಿಯಿದ್ದ ಹುಲಿ ಉಗುರಿನ ಲಾಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ಹುಲಿ ಉಗುರು ಧರಿಸಿದ್ಧಾರೆಂಬ ಆರೋಪವೂ ಕೇಳಿ ಬಂದಿದೆ.
ಹಾಗಾದರೆ ಹುಲಿ ಉಗುರು ಧರಿಸುವ ಹಿಂದಿನ ಉದ್ಧೇಶ ಏನು ಎಂಬುದರ ಬೆನ್ನು ಹತ್ತಿ ಹೋದರೆ, ಆಶ್ಚರ್ಯವೆನಿಸುವ ಮಾಹಿತಿ ಸಿಗುತ್ತದೆ. ಹುಲಿ ಉಗುರು ಧರಿಸುವುದು ಪೌರುಷದ ಸಂಕೇತವೆಂದು ಭಾವಿಸಲಾಗಿದೆ. ಅವರ ಹಣದ ಅಹಂಕಾರವೂ ಅದರ ಹಿಂದಿದೆ. ಅದಕ್ಕಿಂತಲೂ ಹೆಚ್ಚಾಗಿ ಹುಲಿ ಉಗುರುಗಳು ದುಷ್ಟ ಶಕ್ತಿಗಳನ್ನು ತಡೆಯುತ್ತವೆ; ಮಾಟ ಮಂತ್ರದಿಂದ ರಕ್ಷಣೆ ಮಾಡುವ, ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಶಕ್ತಿಯನ್ನು ಒಳಗೊಂಡಿದೆ ಎಂಬ ಮೌಢ್ಯ ಜನರಲ್ಲಿ ತುಂಬಿದೆ. ಅದರಲ್ಲಿಯೂ ಬಲಾಢ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಹುಲಿ ಉಗುರಿನ ಲಾಕೆಟ್ ಧರಿಸುತ್ತಾರೆಂಬುದು ಅಂಥ ಜನರ ಮೂಢ ಪ್ರವೃತ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಅನೇಕ ಮೂಢನಂಬಿಕೆಗಳ ಕಾರಣದಿಂದಲೇ ದೇಶದಲ್ಲಿ ಹುಲಿಗಳನ್ನು ಬೇಟೆಯಾಡಲಾಗುತ್ತಿದೆ ಎಂಬುದು ವಿಪರ್ಯಾಸದ ಸಂಗತಿ.
ಭಾರತ ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ಹುಲಿ ಉಗುರುಗಳ ಮಾರಾಟ, ಖರೀದಿ ಮತ್ತು ಅಕ್ರಮ ಬಳಕೆ ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ ದಂಡ ಮತ್ತು ಸಜೆ ಎರಡೂ ಸಿಗಬಹುದು. ಕಾನೂನು ಪ್ರಕಾರ 3ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಒದಗಿಸಲಾಗುತ್ತದೆ. ಇಂತಹ ಕಠಿಣ ಕಾನೂನಿನ ಅರಿವಿದ್ದರೂ ಲಕ್ಷಾಂತರ ರೂಪಾಯಿ ನೀಡಿ ಹುಲಿ ಉಗುರು ಖರೀದಿಸುವುದು ಮತ್ತು ಅದನ್ನು ಧರಿಸುವುದು ನಿಜಕ್ಕೂ ಇವರ ಮೌಢ್ಯದ ಪರಮಾವಧಿ ಎನ್ನಬಹುದು. ಇಂತಹ ಮೌಢ್ಯವು ಕಾಡು ಪ್ರಾಣಿಗಳ ಅಕ್ರಮ ಬೇಟೆಗೆ ಕಾರಣವಾಗುತ್ತದೆ. ಇದಕ್ಕೊಂದು ನಿದರ್ಶನವೆಂದರೆ ಕುಖ್ಯಾತ ಹುಲಿ ಬೇಟೆಗಾರ, ಅತಿ ದೊಡ್ಡ ವನ್ಯಜೀವಿ ಅಪರಾಧಿ “ಉತ್ತರದ ವೀರಪ್ಪನ್” ಎಂದು ಕರೆಯಲ್ಪಡುತ್ತಿದ್ದ ನವದೆಹಲಿಯ ನಿವಾಸಿ ಸಂಸಾರಚಂದ್ ಅವರ ಗೋದಾಮಿನ ಮೇಲೆ ಪೊಲೀಸರು ದಾಳಿ ನಡೆಸಿದಾಗ 2 ಹುಲಿ ಚರ್ಮ, 14 ಹುಲಿ ಕೋರೆಹಲ್ಲು, ಮೂರು ಕೆಜಿ ಚಿರತೆ ಮತ್ತು ಹುಲಿ ಪಂಜುಗಳು ಪತ್ತೆಯಾಗಿದ್ದವು.

1988ರಲ್ಲಿ ಈತನಿಂದ 25,800 ಹಾವಿನ ಚರ್ಮಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಖದೀಮ 2003ರಿಂದ 2004ರವರೆಗೆ ಕೇವಲ 11ತಿಂಗಳಲ್ಲಿ 40 ಹುಲಿ ಚರ್ಮ ಮತ್ತು 400 ಚಿರತೆ ಚರ್ಮ ವಹಿವಾಟು ಮಾಡಿದ್ದ. ನೇಪಾಳ ಮತ್ತು ಟಿಬೆಟ್‌ನ ಕೇವಲ 4 ಗ್ರಾಹಕರಿಗೆ 470 ಹುಲಿ ಚರ್ಮ ಮತ್ತು 2130 ಚಿರತೆ ಚರ್ಮಗಳನ್ನು ಮಾರಾಟ ಮಾಡಿದ್ದ ಎಂದು ಪೊಲೀಸರು ದೂರು ದಾಖಲಿಸಿದ್ದರು. ಸಂಸಾರಚಂದ್ ಅದೆಷ್ಟು ಕಾಡು ಪ್ರಾಣಿಗಳನ್ನು ಬೇಟೆಯಾಡಿರಬಹುದು ಎಂಬುದನ್ನು ಊಹಿಸಿಕೊಂಡರೆ ಆತಂಕ ಉಂಟಾಗುತ್ತದೆ.
ಹುಲಿ ಉಗುರು ಹುಲಿ ಚರ್ಮವನ್ನು ಖರೀದಿಸಿದವರೆಲ್ಲರೂ ಮೌಢ್ಯಕ್ಕೆ ಒಳಗಾದವರೇ ಎನ್ನಬಹುದು. ಕಾಡುಗಳ್ಳ ವೀರಪ್ಪನ್ ಕೂಡ ಇಂತಹ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇವೆಲ್ಲದಕ್ಕೂ ಕಾರಣ ಇವುಗಳನ್ನು ಖರೀದಿಸುವವರು. ಮೂಢನಂಬಿಕೆಯ ಕಾರಣದಿಂದ ಪ್ರಾಣಿಗಳನ್ನು ಎಲ್ಲಿಯವರೆಗೆ ಬಳಸಿಕೊಳ್ಳುವವರು ಇರುತ್ತಾರೋ ಅಲ್ಲಿಯವರೆಗೂ ಮಾರಾಟ ಮಾಡುವವರು, ಬೇಟೆಯಾಡುವವರು ಇದ್ದೇ ಇರುತ್ತಾರೆ.
ಭಾರತದ ಅನೇಕ ಭಾಗಗಳಲ್ಲಿ ಇಂದಿಗೂ ಸಹ ವಾಮಾಚಾರ, ವಶೀಕರಣ ನಡೆಸಲು ಪ್ರಾಣಿಗಳನ್ನು ಬಳಸಲಾಗುತ್ತಿದೆ. ಅದರಲ್ಲಿಯೂ ಇವರ ವಾಮಾಚಾರಕ್ಕೆ ಬಲಿಯಾಗುತ್ತಿರುವುದು ಅಪರೂಪದ ಪಕ್ಷಿಗಳು, ಪುನುಗು ಬೆಕ್ಕು, ಗೋಸುಂಬೆ, ಗೂಬೆ ಮುಂತಾದ ಅಳಿವಿನಂಚಿನಲ್ಲಿರುವ ಜೀವಿಗಳು. ಅವನ್ನು ವಾಮಾಚಾರಕ್ಕಾಗಿ ಹತ್ಯೆ ಮಾಡಲಾಗುತ್ತಿದೆ.
ದೇಶದಲ್ಲಿ ಹುಲಿಗಳ ಸಂಖ್ಯೆ ಕ್ಷೀಣಿಸಲೂ ಸಹ ಇಂತಹದ್ದೆ ವಿಷಯಗಳು ಕಾರಣವಾಗಿವೆ. ಏಪ್ರಿಲ್ 23ರಂದು ಮೈಸೂರಿನಲ್ಲಿ ನಡೆದ ಹುಲಿ ಯೋಜನೆಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ 2022 ಹುಲಿ ಗಣತಿಯ ವರದಿಯನ್ನು ಪ್ರಧಾನಿ ಮೋದಿಯವಯರು ಬಿಡುಗಡೆ ಮಾಡಿದ್ದರು. ಹುಲಿ ಗಣತಿಯ ವರದಿಯ ಪ್ರಕಾರ ಭಾರತದಲ್ಲಿ 3167 ಹುಲಿಗಳಿವೆ ಎನ್ನಲಾಗಿತ್ತು. ವೈಲ್ಡ್ ಲೈಫ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಎಂಬ ಸಂಸ್ಥೆಯ ವರದಿಯ ಪ್ರಕಾರ ಭಾರತದಲ್ಲಿ 2006ರಲ್ಲಿ1,411 ಹುಲಿಗಳು, 2010ರಲ್ಲಿ 1,706, 2014ರಲ್ಲಿ 2,226, 2018ರಲ್ಲಿ 2,967, 2022ರಲ್ಲಿ 3,682ರಷ್ಟು ಹುಲಿಗಳಿವೆ. ಈ ವರದಿಯು ಸ್ವಲ್ಪ ಮಟ್ಟಿಗೆ ಹುಲಿಗಳ ಸಂಖ್ಯೆಯ ಕುರಿತು ಆಶಾದಾಯಕ ಭಾವನೆಯನ್ನು ಮೂಡಿಸಿದೆ. ಆದರೂ ಸಹ ಸರ್ಕಾರವು ಇನ್ನಷ್ಟು ಕಠಿಣ ಕಾನೂನು ನಿಯಮಗಳನ್ನು ರೂಪಿಸಬೇಕಿದೆ. ಆಗ ಮಾತ್ರ ಕಾಡು ಪ್ರಾಣಿಗಳ ಬೇಟೆ ನಿಲ್ಲಬಹುದು.
ಇದನ್ನೂ ಓದಿದ್ದೀರಾ? ಬೆಳಗಾವಿ | ಕಂಬಳಿ ನೇಕಾರರ ಅತಂತ್ರ ಬದುಕಿಗೆ ಬೇಕು ಸರ್ಕಾರದ ಆಸರೆ
21ನೇಯ ಶತಮಾನದಲ್ಲಿಯೂ ಜನ ಮೂಢನಂಬಿಕೆಗಳಿಂದ ಹೊರಬರದಿರುವುದು ಶೋಚನೀಯ ಸಂಗತಿಯಾಗಿದೆ. ವಶೀಕರಣದ ಕಾರಣಕ್ಕೆ, ನಿಧಿ ಮುಂತಾದ ಮೂಢನಂಬಿಕೆಗಳ ಕಾರಣಕ್ಕೆ ಪ್ರಾಣಿಗಳನ್ನಷ್ಟೇ ಅಲ್ಲದೆ ಮಕ್ಕಳು ಮತ್ತು ಮಹಿಳೆಯರ ಜೀವಗಳನ್ನೂ ಸಾಕಷ್ಟು ಸಂದರ್ಭಗಳಲ್ಲಿ ಬಲಿ ಕೊಟ್ಟ ಪ್ರಕರಣಗಳನ್ನು ನಾವು ಕಾಣುತ್ತೇವೆ. ಆದರೆ, ಮೌಢ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಾದವರು, ಕಾನೂನು ಗೌರವಿಸಬೇಕಾದ ಹಾಗೂ ಸಾಂವಿಧಾನಿಕ ಹುದ್ದೆಯಲ್ಲಿ ಇರುವ ಗಣ್ಯರ ಹೆಸರು ಹುಲಿ ಉಗುರು ಪ್ರಕರಣದಲ್ಲಿ ಕೇಳಿ ಬರುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಅರಣ್ಯಾಧಿಕಾರಿಗಳೂ ಸಹ ಯಾವುದೇ ತಾರತಮ್ಯ ಮಾಡದೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಸರ್ಕಾರವೂ ಕೂಡ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು