ತಂಬಾಕು ಆರೋಗ್ಯಕ್ಕೆ ಹಾನಿಕಾರಕ ಎಂಬುದರಲ್ಲಿ ಎರಡು ಮಾತಿಲ್ಲ. ತಂಬಾಕು ಸೇವನೆಯು ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ರೋಗಗಳಿಗೆ ಕಾರಣವಾಗುತ್ತದೆ. ಯುವಜನತೆಯ ಆರೋಗ್ಯ, ಸಮಾಜದ ಉತ್ಪಾದಕತೆ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ತಂಬಾಕು ಬಳಕೆ ಕಡಿಮೆಯಾಗಬೇಕು ಎಂಬುದು ಸಾರ್ವಜನಿಕ ಆರೋಗ್ಯದ ಅಗತ್ಯವೂ ಹೌದು. ಆದರೆ ತಂಬಾಕು ಸೇವನೆ ಮತ್ತು ತಂಬಾಕು ಕೃಷಿ ಎಂಬ ಎರಡು ವಿಷಯಗಳನ್ನು ಒಂದೇ ದೃಷ್ಟಿಕೋನದಿಂದ ನೋಡುವುದು ನ್ಯಾಯಸಮ್ಮತವಲ್ಲ. ತಂಬಾಕು ಸೇವನೆಯನ್ನು ವಿರೋಧಿಸುವಂತೆಯೇ, ಆ ಬೆಳೆ ಅವಲಂಬಿಸಿ ಬದುಕುತ್ತಿರುವ ಸಾವಿರಾರು ರೈತ ಕುಟುಂಬಗಳ ಜೀವನೋಪಾಯವನ್ನೂ ಪರಿಗಣಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಮೈಸೂರು ಭಾಗದಲ್ಲಿ ಮಾತ್ರವೇ ಸುಮಾರು 48 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳು ನೇರವಾಗಿ ತಂಬಾಕು ಕೃಷಿಯನ್ನು ಅವಲಂಬಿಸಿವೆ. ಇವರೊಂದಿಗೆ ಕೂಲಿ ಕಾರ್ಮಿಕರು, ಗ್ರೇಡಿಂಗ್ ಕಾರ್ಮಿಕರು, ಸಾಗಣೆ, ಪ್ಯಾಕಿಂಗ್, ಗೋದಾಮು, ಹರಾಜು ಕೇಂದ್ರಗಳು ಹಾಗೂ ಸಂಬಂಧಿತ ವ್ಯಾಪಾರ ವಲಯಗಳ ಸಾವಿರಾರು ಕುಟುಂಬಗಳ ಬದುಕು ಕೂಡ ಈ ಬೆಳೆಯೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ ತಂಬಾಕು ಕೃಷಿಯ ಪ್ರಶ್ನೆ ಕೇವಲ ಒಂದು ಬೆಳೆಯ ಪ್ರಶ್ನೆಯಲ್ಲ; ಅದು ಗ್ರಾಮೀಣ ಆರ್ಥಿಕತೆ ಮತ್ತು ಸಾವಿರಾರು ಕುಟುಂಬಗಳ ಅಸ್ತಿತ್ವದ ಪ್ರಶ್ನೆಯಾಗಿದೆ.
ಕೇಂದ್ರ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲಿನ ನಿಯಂತ್ರಣವನ್ನು ಕ್ರಮೇಣ ಹೆಚ್ಚಿಸುತ್ತಿದೆ. ಜಿಎಸ್ಟಿ ದರವನ್ನು ಶೇ.18ರಿಂದ ಶೇ.40ಕ್ಕೆ ಏರಿಸಿರುವುದು, ಕೆಲವು ತಂಬಾಕು ಉತ್ಪನ್ನಗಳ ಮೇಲಿನ ನಿರ್ಬಂಧಗಳು ಹಾಗೂ ಕೆಲವು ಉತ್ಪನ್ನಗಳಲ್ಲಿ ತಂಬಾಕಿನ ಪ್ರಮಾಣ ಕಡಿಮೆ ಮಾಡುವಂತಹ ಕ್ರಮಗಳಿಂದ ಉದ್ಯಮದ ಬೇಡಿಕೆಯ ಮೇಲೆ ಪರಿಣಾಮ ಉಂಟಾಗಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಕ್ರಮಗಳನ್ನು ಸರ್ಕಾರ ಸಮರ್ಥಿಸಬಹುದು. ಆದರೆ ಇದೇ ಸಂದರ್ಭದಲ್ಲಿ ಈ ನೀತಿಗಳ ಪರಿಣಾಮ ರೈತರ ಮೇಲೆ ಹೇಗೆ ಬೀಳುತ್ತದೆ ಎಂಬುದರ ಕುರಿತು ಸ್ಪಷ್ಟ ಪುನರ್ವಸತಿ ಯೋಜನೆ ಅಥವಾ ಪರ್ಯಾಯ ಜೀವನೋಪಾಯದ ಮಾರ್ಗಸೂಚಿ ಪ್ರಕಟಿಸದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ತಂಬಾಕು ಉತ್ಪಾದನೆ ಮತ್ತು ಮಾರುಕಟ್ಟೆ ನಿಯಂತ್ರಣವು ಕೇಂದ್ರ ಸರ್ಕಾರದ ಅಧೀನದಲ್ಲಿರುವ ವ್ಯವಸ್ಥೆಯಾಗಿರುವುದರಿಂದ, ರೈತರು ತಮ್ಮ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಉತ್ಪಾದನೆಗೆ ಅನುಮತಿ, ಹರಾಜು ವ್ಯವಸ್ಥೆ, ಖರೀದಿ ಪ್ರಮಾಣ ಹಾಗೂ ಮಾರುಕಟ್ಟೆ ನಿಯಂತ್ರಣದ ಎಲ್ಲ ಪ್ರಮುಖ ನಿರ್ಧಾರಗಳು ಕೇಂದ್ರದ ನೀತಿಗಳನ್ನೇ ಅವಲಂಬಿಸಿವೆ. ಇದರ ಪರಿಣಾಮವಾಗಿ ರೈತರು ತಮ್ಮ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ದೊರೆಯುತ್ತದೆಯೇ ಎಂಬ ಅನಿಶ್ಚಿತತೆಯಲ್ಲೇ ಕೃಷಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ವರ್ಷ ಆಂಧ್ರ ಪ್ರದೇಶದಲ್ಲಿ ತಂಬಾಕು ಖರೀದಿ ಪ್ರಕ್ರಿಯೆ ಕರ್ನಾಟಕಕ್ಕಿಂತ ಮುಂಚಿತವಾಗಿ ಆರಂಭವಾಗುತ್ತದೆ. ಆರಂಭಿಕ ಹಂತದಲ್ಲೇ ಉತ್ತಮ ಗುಣಮಟ್ಟದ ತಂಬಾಕಿಗೆ ಪ್ರತಿ ಕೆಜಿಗೆ ಸುಮಾರು ₹470ರವರೆಗೆ ಬೆಲೆ ದೊರೆಯುವ ಸಂದರ್ಭಗಳಿವೆ. ಆದರೆ ನಂತರ ಆರಂಭವಾಗುವ ಕರ್ನಾಟಕದ ಹರಾಜು ಕೇಂದ್ರಗಳಲ್ಲಿ ಇದೇ ಗುಣಮಟ್ಟದ ತಂಬಾಕಿಗೆ ₹370 ತಲುಪುವುದೇ ಕಷ್ಟ ಎನ್ನುವುದು ರೈತರ ಆರೋಪವಾಗಿದೆ. ಇದರಿಂದ ರಾಜ್ಯದ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗದೆ ನಷ್ಟ ಅನುಭವಿಸುವ ಸ್ಥಿತಿ ಉಂಟಾಗುತ್ತಿದೆ.
2026ರ ಹಂಗಾಮಿನಲ್ಲಿ ಜಿಎಸ್ಟಿ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ಕೆಲ ಕಂಪನಿಗಳು ತಾತ್ಕಾಲಿಕವಾಗಿ ಖರೀದಿಯನ್ನು ಸ್ಥಗಿತಗೊಳಿಸಿದ್ದರಿಂದ ಹರಾಜು ಪ್ರಕ್ರಿಯೆಗೂ ವ್ಯತ್ಯಯ ಉಂಟಾಯಿತು. ರೈತ ಸಂಘಟನೆಗಳ ಪ್ರತಿಭಟನೆ ಮತ್ತು ಒತ್ತಡದ ಬಳಿಕ ಖರೀದಿ ಮತ್ತೆ ಆರಂಭವಾದರೂ, ಸಾಮಾನ್ಯವಾಗಿ ಏಪ್ರಿಲ್ನಲ್ಲಿ ಮುಕ್ತಾಯಗೊಳ್ಳುವ ಹರಾಜು ಜೂನ್ವರೆಗೆ ಮುಂದುವರಿದಿತು. ಆದರೂ ಅನೇಕ ರೈತರು ತಮ್ಮ ಸಂಪೂರ್ಣ ತಂಬಾಕನ್ನು ಮಾರಾಟ ಮಾಡಲು ಸಾಧ್ಯವಾಗದೆ, ಇಂದಿಗೂ ಸಾಕಷ್ಟು ಪ್ರಮಾಣದ ತಂಬಾಕನ್ನು ಮನೆಗಳಲ್ಲೇ ಸಂಗ್ರಹಿಸಿಟ್ಟಿದ್ದಾರೆ.
ಮಾರಾಟವಾಗದ ತಂಬಾಕು ದೀರ್ಘಕಾಲ ಸಂಗ್ರಹಿಸಿದರೆ ಅದರ ಗುಣಮಟ್ಟ ಕುಸಿಯುತ್ತದೆ. ಕೊನೆಗೆ ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುವುದು ಅಥವಾ ಸಂಪೂರ್ಣವಾಗಿ ತ್ಯಜಿಸಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ರೈತರಿಗೆ ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟವಾಗಿದ್ದು, ಬೆಳೆ ವೆಚ್ಚ, ಸಾಲದ ಬಡ್ಡಿ ಹಾಗೂ ಕುಟುಂಬ ನಿರ್ವಹಣೆಯ ಹೊರೆ ಮತ್ತಷ್ಟು ಹೆಚ್ಚಾಗಿದೆ.
ತಂಬಾಕು ಕೃಷಿಯನ್ನು ಹಂತ ಹಂತವಾಗಿ ಕಡಿಮೆ ಮಾಡುವ ಉದ್ದೇಶ ಸರ್ಕಾರಕ್ಕಿದ್ದರೆ ಅದನ್ನು ಸ್ಪಷ್ಟವಾಗಿ ಘೋಷಿಸಬೇಕು. ಅದರ ಜೊತೆಗೆ ರೈತರಿಗೆ ಒನ್ ಟೈಮ್ ಸೆಟಲ್ಮೆಂಟ್, ಸಮರ್ಪಕ ಪರಿಹಾರ, ಸಾಲಮನ್ನಾ, ಪರ್ಯಾಯ ಬೆಳೆಗಳಿಗಾಗಿ ವಿಶೇಷ ಪ್ಯಾಕೇಜ್, ಮಾರುಕಟ್ಟೆ ಭರವಸೆ ಹಾಗೂ ತಾಂತ್ರಿಕ ನೆರವು ನೀಡಬೇಕು ಎಂಬ ಬೇಡಿಕೆ ರೈತರಿಂದ ಕೇಳಿಬರುತ್ತಿದೆ. ಕೆಲ ರೈತ ಸಂಘಟನೆಗಳು ಪ್ರತಿ ರೈತ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಿ ಪರ್ಯಾಯ ಕೃಷಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸುತ್ತಿವೆ.
ರಾಜ್ಯದ ಜನಪ್ರತಿನಿಧಿಗಳು, ಸಂಸದರು ಹಾಗೂ ಕೇಂದ್ರ ಸಚಿವರು ಈ ವಿಷಯವನ್ನು ಸಂಸತ್ತಿನಲ್ಲಿ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ, ತಂಬಾಕು ಬೆಳೆಗಾರರ ಭವಿಷ್ಯ ಕುರಿತು ಸ್ಪಷ್ಟ ನೀತಿ ರೂಪಿಸಲು ಒತ್ತಾಯಿಸಬೇಕಾಗಿದೆ. ಕೇವಲ ಸಭೆಗಳು ಮತ್ತು ನಿಯೋಗಗಳು ಸಾಕಾಗುವುದಿಲ್ಲ; ರೈತರ ಬದುಕಿಗೆ ಭದ್ರತೆ ನೀಡುವ ಸ್ಪಷ್ಟ ನಿರ್ಧಾರಗಳೇ ಈಗ ಅಗತ್ಯವಾಗಿದೆ.
ತಂಬಾಕು ಸೇವನೆಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಆದರೆ ತಂಬಾಕು ಬೆಳೆಗಾರರನ್ನು ನಿರ್ಲಕ್ಷಿಸುವುದೂ ನ್ಯಾಯವಲ್ಲ. ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದರ ಜೊತೆಗೆ ರೈತರ ಜೀವನೋಪಾಯವನ್ನೂ ಕಾಪಾಡುವ ಸಮತೋಲನದ ನೀತಿ ರೂಪಿಸುವುದು ಸರ್ಕಾರದ ಹೊಣೆಗಾರಿಕೆ. ಇಲ್ಲವಾದರೆ ಸಾವಿರಾರು ರೈತ ಕುಟುಂಬಗಳು ಬೆಳೆ ಕಳೆದುಕೊಂಡಷ್ಟೇ ಅಲ್ಲ, ಬದುಕಿನ ಆಧಾರವನ್ನೇ ಕಳೆದುಕೊಳ್ಳುವ ಅಪಾಯ ಎದುರಿಸಬೇಕಾಗುತ್ತದೆ.
ಮೈಸೂರು ಜಿಲ್ಲೆಯಲ್ಲಿ ಸುಮಾರು 53 ಸಾವಿರಕ್ಕೂ ಹೆಚ್ಚು ಪರವಾನಗಿ ಹೊಂದಿರುವ ತಂಬಾಕು ಬೆಳೆಗಾರರ ಕುಟುಂಬಗಳು ಈ ಬೆಳೆಯನ್ನೇ ಅವಲಂಬಿಸಿವೆ. ಸಾವಿರಾರು ಕೃಷಿ ಕಾರ್ಮಿಕರು, ಸಾಗಣೆ, ಗ್ರೇಡಿಂಗ್, ಕ್ಯೂರಿಂಗ್, ಹರಾಜು ಮತ್ತು ವ್ಯಾಪಾರದಂತಹ ಅನೇಕ ಚಟುವಟಿಕೆಗಳಿಗೂ ಈ ಬೆಳೆ ಆಧಾರವಾಗಿದೆ. ಇಂತಹ ಸಂದರ್ಭದಲ್ಲಿ 2026-27ನೇ ಸಾಲಿನಲ್ಲಿ ಜಾರಿಗೊಂಡಿರುವ ಹೊಸ ನಿಯಮಗಳು ರೈತರಲ್ಲಿ ತೀವ್ರ ಗೊಂದಲ ಮತ್ತು ಆತಂಕವನ್ನು ಉಂಟುಮಾಡಿವೆ.
ರೈತರು ಈಗಾಗಲೇ ಸಮರ್ಪಕ ಬೆಲೆ ಸಿಗದಿರುವುದು, ಖರೀದಿಯ ಭರವಸೆ ಕೊರತೆ, ಬ್ಯಾಂಕ್ ಸಾಲದ ಸಮಸ್ಯೆ, ಉತ್ಪಾದನಾ ವೆಚ್ಚದ ಏರಿಕೆ ಹಾಗೂ ಮಾರಾಟದ ಮೇಲಿನ ನಿರ್ಬಂಧಗಳಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಉತ್ಪಾದನಾ ಮಿತಿಯನ್ನು 9.9 ಕೋಟಿ ಕೆಜಿಯಿಂದ 5.6 ಕೋಟಿ ಕೆಜಿಗೆ ಇಳಿಸಿರುವುದು ರೈತರ ಭವಿಷ್ಯದ ಬಗ್ಗೆ ಇನ್ನಷ್ಟು ಆತಂಕ ಮೂಡಿಸಿದೆ.
ಹಿಂದೆ ಒಂದು ಬ್ಯಾರನ್ಗೆ 2.5 ಹೆಕ್ಟೇರ್ ಪ್ರದೇಶದಲ್ಲಿ ಗರಿಷ್ಠ 1,780 ಕೆಜಿ ತಂಬಾಕು ಬೆಳೆಯಲು ಅವಕಾಶವಿದ್ದರೆ, ಈಗ ಅದನ್ನು ಕೇವಲ 1,017 ಕೆಜಿಗೆ ಇಳಿಸಲಾಗಿದೆ. ಅಂದರೆ ರೈತರು ಅದೇ ಭೂಮಿ, ಅದೇ ಶ್ರಮ, ಅದೇ ಹೂಡಿಕೆಯಲ್ಲಿ ಕಡಿಮೆ ಉತ್ಪಾದನೆಗೆ ಸೀಮಿತರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಉತ್ಪಾದನೆಯ ಮೇಲಿನ ಮಿತಿಯಲ್ಲ; ರೈತರ ಆದಾಯದ ಮೇಲಿನ ಕಡಿವಾಣವೂ ಹೌದು.
ಇದರ ಜೊತೆಗೆ ಹಿಂದೆ ನಿಗದಿತ ಮಿತಿಗಿಂತ ಹೆಚ್ಚು ಉತ್ಪಾದನೆಯಾದ ತಂಬಾಕಿನಲ್ಲಿ ಹೆಚ್ಚುವರಿ ಪ್ರಮಾಣವನ್ನು ಸುಮಾರು 750 ಕೆಜಿವರೆಗೆ ಮಾರಾಟ ಮಾಡಲು ಅವಕಾಶವಿತ್ತು. ಕೆಲವು ಸಂದರ್ಭಗಳಲ್ಲಿ ಪರವಾನಗಿ ಇಲ್ಲದ ಕಾರ್ಡ್ದಾರರ ಮೂಲಕವೂ ಮಾರಾಟದ ಅವಕಾಶವಿತ್ತು. ಆದರೆ ಹೊಸ ನಿಯಮಗಳ ಪ್ರಕಾರ ಪರವಾನಗಿ ಪಡೆದ ರೈತರು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ತಂಬಾಕು ಮಾರಾಟ ಮಾಡಲು ಅವಕಾಶವಿಲ್ಲ. ಅನಧಿಕೃತ ಮಾರಾಟಕ್ಕೂ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಇದರಿಂದ ಹೆಚ್ಚಿನ ಶ್ರಮವಹಿಸಿ ಬೆಳೆದ ಬೆಳೆ ಕೈಯಲ್ಲೇ ಉಳಿಯುವ ಅಪಾಯ ಎದುರಾಗಿದೆ.
ಈ ಬದಲಾವಣೆಗಳು ಜಾರಿಯಾಗುತ್ತಿರುವ ಸಂದರ್ಭವೂ ರೈತರಿಗೆ ಅನುಕೂಲಕರವಾಗಿಲ್ಲ. ಮಳೆ ಕೊರತೆ, ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚದ ಏರಿಕೆ ಮತ್ತು ಮಾರುಕಟ್ಟೆಯ ಅನಿಶ್ಚಿತತೆಯ ನಡುವೆ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಿರುವುದು ರೈತರ ಮೇಲೆ ಹೆಚ್ಚುವರಿ ಹೊರೆ ಹಾಕಿದಂತಾಗಿದೆ ಎಂಬುದು ಅವರ ವಾದ.
ಈ ಹೊಸ ನಿಯಮಗಳ ಮತ್ತೊಂದು ಪರಿಣಾಮ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಗೋಚರಿಸುತ್ತಿದೆ. ಹಿಂದೆ ತಂಬಾಕು ಬೆಳೆಗಾರರಿಗೆ ಬ್ಯಾಂಕುಗಳು ಸುಲಭವಾಗಿ ಬೆಳೆಸಾಲ ನೀಡುತ್ತಿದ್ದು, ಅಗತ್ಯವಿದ್ದರೆ ಹೆಚ್ಚುವರಿ ಸಾಲವನ್ನೂ ಮಂಜೂರು ಮಾಡುತ್ತಿದ್ದರು. ಆದರೆ ಈಗ ಉತ್ಪಾದನಾ ಮಿತಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಾಲ ಮಂಜೂರಾತಿಯಲ್ಲೂ ಹಿಂಜರಿಕೆ ಕಂಡುಬರುತ್ತಿದೆ. ಇದರಿಂದ ಕೃಷಿಗೆ ಅಗತ್ಯವಾದ ಬಂಡವಾಳವನ್ನು ಹೊಂದಿಸುವುದೇ ರೈತರಿಗೆ ದೊಡ್ಡ ಸವಾಲಾಗಿದೆ.
ತಂಬಾಕು ಕೃಷಿ ಅತ್ಯಂತ ವೆಚ್ಚದಾಯಕ ಬೆಳೆ. ನರ್ಸರಿಯಿಂದ ಹಿಡಿದು ನಾಟಿ, ಗೊಬ್ಬರ, ಔಷಧಿ, ನೀರಾವರಿ, ಕ್ಯೂರಿಂಗ್, ಗ್ರೇಡಿಂಗ್ ಹಾಗೂ ಹರಾಜಿನವರೆಗೆ ಪ್ರತಿಯೊಂದು ಹಂತದಲ್ಲೂ ದೊಡ್ಡ ಪ್ರಮಾಣದ ಹೂಡಿಕೆ ಅಗತ್ಯವಿರುತ್ತದೆ. ಹೀಗಾಗಿ ಬಹುತೇಕ ರೈತರು ಸಾಲವನ್ನೇ ಅವಲಂಬಿಸಿ ಕೃಷಿ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಉತ್ಪಾದನೆಗೂ, ಮಾರಾಟಕ್ಕೂ ನಿರ್ಬಂಧ ಹೇರಿದರೆ ರೈತರ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.
ತಂಬಾಕಿಗೆ ಪರ್ಯಾಯ ಬೆಳೆ ಬೆಳೆಯಿರಿ ಎನ್ನುವುದು ಹೇಳಲು ಸುಲಭ. ಆದರೆ ದಶಕಗಳಿಂದ ಈ ಬೆಳೆಯನ್ನು ಅವಲಂಬಿಸಿರುವ ರೈತರಿಗೆ ಒಂದೇ ದಿನದಲ್ಲಿ ಪರ್ಯಾಯ ಕೃಷಿಗೆ ಬದಲಾಗುವುದು ಸಾಧ್ಯವಿಲ್ಲ. ಅದಕ್ಕೆ ಸೂಕ್ತ ಮಾರುಕಟ್ಟೆ, ಬೆಲೆ ಭರವಸೆ, ತರಬೇತಿ, ಮೂಲಸೌಕರ್ಯ ಮತ್ತು ಆರ್ಥಿಕ ನೆರವು ಅಗತ್ಯ. ಇವುಗಳಿಲ್ಲದೆ ಕೇವಲ ಮಿತಿ ಹೇರಿಕೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ.
ಸಾರ್ವಜನಿಕ ಆರೋಗ್ಯ ನೀತಿಗಳು ಮತ್ತು ರೈತರ ಜೀವನೋಪಾಯದ ನಡುವೆ ಸಮತೋಲನ ಸಾಧಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ತಂಬಾಕು ಸೇವನೆಯನ್ನು ನಿಯಂತ್ರಿಸುವ ಕ್ರಮಗಳು ಮುಂದುವರಿಯಬಹುದು. ಆದರೆ ಅದರ ಸಂಪೂರ್ಣ ಹೊರೆ ತಂಬಾಕು ಬೆಳೆಗಾರರ ಮೇಲಷ್ಟೇ ಬೀಳಬಾರದು. ಅವರು ಸರ್ಕಾರದ ನೀತಿಗಳ ಬಲಿಪಶುಗಳಾಗಬಾರದು.
ಈ ವಿಶೇಷ ಸುದ್ದಿ ಓದಿದ್ದೀರಾ?ತಂಬಾಕು: ಒಂದೊಂದು ಎಲೆಯ ಹಿಂದೆ ರೈತನ ಶ್ರಮ, ವಿಜ್ಞಾನ ಮತ್ತು ಅನಿಶ್ಚಿತತೆಯ ಬದುಕು ಇದೆ
ಆದ್ದರಿಂದ ಕೇಂದ್ರ ಸರ್ಕಾರ ಹಾಗೂ ಜನಪ್ರತಿನಿಧಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ತಂಬಾಕು ಬೆಳೆಗಾರರ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಒನ್ ಟೈಮ್ ಸೆಟಲ್ಮೆಂಟ್ ಮಾದರಿಯ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವುದು ಅಥವಾ ಉತ್ಪಾದನಾ ಮಿತಿಯನ್ನು ಮರುಪರಿಶೀಲಿಸಿ ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿ ಸಡಿಲಿಕೆ ನೀಡುವುದು ಅಗತ್ಯವಾಗಿದೆ. ಜೊತೆಗೆ ರೈತರಿಗೆ ಉತ್ತಮ ಬೆಲೆ, ಖರೀದಿಯ ಭರವಸೆ ಹಾಗೂ ಸುಲಭ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ?ಮಳೆ ಕೈಕೊಟ್ಟರೂ ತಂಬಾಕು ಕೈಬಿಡಲಿಲ್ಲ: ಮೈಸೂರು ಜಿಲ್ಲೆಯಲ್ಲಿ ಬರದ ನಡುವೆಯೂ ಮುಂದುವರಿದ ತಂಬಾಕು ಕೃಷಿ
ತಂಬಾಕಿನ ವಿರುದ್ಧದ ನೀತಿ ಸಮಾಜದ ಆರೋಗ್ಯಕ್ಕಾಗಿ ಇರಬಹುದು. ಆದರೆ ಆ ನೀತಿಯ ಪರಿಣಾಮವಾಗಿ ಸಾವಿರಾರು ರೈತ ಕುಟುಂಬಗಳ ಬದುಕು ಅತಂತ್ರವಾಗಬಾರದು. ‘ತಂಬಾಕು ಮುಖ್ಯವಲ್ಲ; ತಂಬಾಕು ಬೆಳೆಗಾರರ ಬದುಕು ಮುಖ್ಯ’. ರೈತರ ಶ್ರಮ, ಅವರ ಕುಟುಂಬಗಳ ಅಸ್ತಿತ್ವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಕಾಪಾಡುವಂತಹ ಮಾನವೀಯ ಹಾಗೂ ದೂರದೃಷ್ಟಿಯ ನಿರ್ಧಾರಗಳೇ ಇಂದು ಅತ್ಯಗತ್ಯ.





