ದೇಶದ ಬಹುತೇಕ ರಾಜ್ಯಗಳು ತಿರಸ್ಕರಿಸಿದ ಈ ಅಸಾಂವಿಧಾನಿಕ, ಅಪ್ರಜಾಸತ್ತಾತ್ಮಕ ಹಾಗೂ ಜನ ವಿರೋಧಿ ನೀತಿಯನ್ನೇ ಆಧರಿಸಿ ಯುಜಿಸಿ ತನ್ನ ಕರಡು ನಿಯಮಗಳು (2025)ನ್ನು ರೂಪಿಸಿ ಚರ್ಚೆಗೆ ಬಿಟ್ಟಿದೆ. ಈಗಾಗಲೇ ದೇಶದ ಜನತೆ ತಿರಸ್ಕರಿಸಿದ ನೀತಿಯನ್ನು ಆಧರಿಸಿ ರೂಪಿಸಲಾಗಿರುವ ಈ ಕರಡು ನಿಯಮಗಳು, ರಾಜ್ಯ ಸರ್ಕಾರಗಳ ಮೇಲೆ ಮತ್ತೊಮ್ಮೆ ತಿರಸ್ಕೃತ ರಾಷ್ಟ್ರೀಯ ನೀತಿಯನ್ನು ಹಿಂಬಾಗಿಲಿನಿಂದ ಹೇರುವ ದೊಡ್ಡ ರಾಜಕೀಯ ಹುನ್ನಾರ. ಹಾಗಾಗಿ, ಕರಡು ನಿಯಮಗಳ ತಿದ್ದುಪಡಿಯನ್ನು ತಿರಸ್ಕರಿಸುವಂತೆ ಕರ್ನಾಟಕದ ಜಾಗೃತ ನಾಗರಿಕರ ವೇದಿಕೆ ತಿಳಿಸಿದೆ.
ಯುಜಿಸಿ ನಿಯಮಾವಳಿಗಳ ತಿದ್ದುಪಡಿ ಕುರಿತು ಚರ್ಚಿಸಲು ನಗರದ ಗಾಂಧಿ ಭವನದಲ್ಲಿ ವೇದಿಕೆಯು ಭಾನುವಾರ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ, ತಿದ್ದುಪಡಿಗಳ ಕುರಿತು ಆತಂಕ ವ್ಯಕ್ತವಾಯಿತು. ಈ ಬಗ್ಗೆ ನಿರ್ಣಯ ತೆಗೆದುಕೊಂಡಿರುವ ರಾಜ್ಯದ ಬಹುತೇಕ ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು, ವಾಮಮಾರ್ಗದ ಮೂಲಕ ಕೇಂದ್ರ ಸರ್ಕಾರವು ತನ್ನ ರಾಜಕೀಯ ಅಜೆಂಡಾವನ್ನು ಯುಜಿಸಿಯ ಮೂಲಕ ಜಾರಿಗೊಳಿಸಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
2020ರಲ್ಲಿ ಅಸಾಂವಿಧಾನಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿದಾಗ, ದೇಶದಾದ್ಯಂತ ದೊಡ್ಡ ಮಟ್ಟದ ಪ್ರತಿರೋಧ ಹಾಗೂ ಪ್ರತಿಭಟನೆಯ ಮೂಲಕ ಅದನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿತ್ತು. ಅಸಾಂವಿಧಾನಿಕ, ಅಪ್ರಜಾಸತ್ತಾತ್ಮಕ ಹಾಗೂ ಶಿಕ್ಷಣದ ಕೇಂದ್ರಿಕರಣ, ಖಾಸಗೀಕರಣ , ಕಾರ್ಪೊರೇಟರೀಕರಣ ಮತ್ತು ಕೋಮುವಾದೀಕರಣವನ್ನು ತನ್ನ ಮಡಿಲಿನಲ್ಲಿಟ್ಟುಕೊಳ್ಳುವ ಉದ್ದೇಶದಿಂದ ಜಾರಿಗೊಳಿಸಲು ಹೊರಡಲಾಗಿದೆ. ಇವು ಎನ್ಇಪಿ ತಿರಸ್ಕರಿಸಲು ಇದ್ದ ಬಲವಾದ ಮೂರು ಕಾರಣಗಳು. ಈ ಕಾರಣಗಳಿಂದ ದೇಶದ ಹಲವು ರಾಜ್ಯಗಳು ಎನ್ಇಪಿಯನ್ನು ನಮ್ಮ ಸಂವಿಧಾನದ ಮೂಲ ಆಶಯವಾದ ಒಕ್ಕೂಟ ಮತ್ತು ಪ್ರಜಾಸಾತ್ತಾತ್ಮಕ ತತ್ವಕ್ಕೆ ಮಾರಕವಾಗಿದ್ದ ಕಾರಣ ಒಮ್ಮತದಿಂದ ತಿರಸ್ಕರಿಸಿದ್ದೆವು. ನಮ್ಮ ರಾಜ್ಯವೂ ಸಹ ಎನ್ಇಪಿಯನ್ನು ತಿರಸ್ಕರಿಸಿ, ರಾಜ್ಯದ ಶಿಕ್ಷಣ ನೀತಿ ರೂಪಿಸಲು ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಿತ್ತು ಎಂದು ಕರ್ನಾಟಕದ ಜಾಗೃತ ನಾಗರಿಕರ ವೇದಿಕೆ ತಿಳಿಸಿದೆ.

ದೇಶದ ಬಹುತೇಕ ರಾಜ್ಯಗಳು ತಿರಸ್ಕರಿಸಿದ ಈ ಅಸಾಂವಿಧಾನಿಕ, ಅಪ್ರಜಾಸಾತ್ತಾತ್ಮಕ ಹಾಗೂ ಜನ ವಿರೋಧಿ ನೀತಿಯನ್ನೇ ಆಧರಿಸಿ ಯುಜಿಸಿ ತನ್ನ ಕರಡು ನಿಯಮಗಳು (2025)ನ್ನು ರೂಪಿಸಿ ಚರ್ಚೆಗೆ ಬಿಟ್ಟಿದೆ . ಈಗಾಗಲೇ ದೇಶದ ಜನತೆ ತಿರಸ್ಕರಿಸಿದ ನೀತಿಯನ್ನು ಆಧರಿಸಿ ರೂಪಿಸಲಾಗಿರುವ ಈ ಕರಡು ನಿಯಮಗಳು, ರಾಜ್ಯ ಸರ್ಕಾರಗಳ ಮೇಲೆ ಮತ್ತೊಮ್ಮೆ ತಿರಸ್ಕೃತ ರಾಷ್ಟ್ರೀಯ ನೀತಿಯನ್ನು ಹಿಂಬಾಗಿಲಿನಿಂದ ಹೇರುವ ದೊಡ್ಡ ರಾಜಕೀಯ ಹುನ್ನಾರವಾಗಿದೆ” ಎಂದು ದೂರಿದೆ.
ಈ ನಿಯಮಗಳು ದೇಶದ ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಗುಣಮಟ್ಟ ಸುಧಾರಿಸುವ ಕುಂಟು ನೆಪದಲ್ಲಿ, ರಾಜ್ಯಗಳು ತಮ್ಮ ಸಂಪೂರ್ಣ ಧನ ಸಹಾಯದಿಂದ ನಡೆಸುತ್ತಿರುವ ಎಲ್ಲ ವಿಶ್ವ ವಿದ್ಯಾಲಯಗಳನ್ನು ಮತ್ತು ಸಂಯೋಜಿತ ಕಾಲೇಜುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಾಗಿದೆ. ಈ ವಾಮಮಾರ್ಗದ ಮೂಲಕ ಕೇಂದ್ರ ಸರ್ಕಾರ ತನ್ನ ರಾಜಕೀಯ ಅಜೆಂಡಾವಾದ ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಬ್ಬ ನಾಯಕ ಮತ್ತು ಒಂದೇ ಚುನಾವಣೆಯ ಮೂಲಕ , ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದ ಸಂವಿಧಾನದ ರಚನಾ ತಂಡ ರಚಿಸಿದ ಸಂವಿಧಾನ ಕೊಡಮಾಡಿರುವ ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆ ಹಾಗೂ ಸಾಮಾಜಿಕ ನ್ಯಾಯದ ತತ್ವವನ್ನು ಬುಡ ಮೇಲು ಮಾಡಿ, ಕೇಂದ್ರೀಕೃತ ಸರ್ವಾಧಿಕಾರವನ್ನು ಜಾರಿಗೊಳಿಸಲು ರೂಪಗೊಂಡ ರಾಜಕೀಯ ಯೋಜನೆಯಾಗಿದೆ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದಿದರೂ ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುವ, ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಮೊಟಕುಗೊಳಿಸುವ ಈ ತಿದ್ದುಪಡಿಯನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಕಾರಣಗಳಿಂದ ಸಂವಿಧಾನ, ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿರುವ ನಾವು, ಯು.ಜಿ.ಸಿ. ಯ ಈ ಸಂವಿಧಾನದ ಬಾಹಿರ ರಾಜಕೀಯ ಪ್ರೇರಿತ ಶಿಕ್ಷಣ ವಿರೋಧಿ ಕರಡು ನಿಯಮಗಳನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸುತ್ತೇವೆ. ಫೆ.5, 2025 ರಂದು ಬೆಂಗಳೂರಿನಲ್ಲಿ ನಡೆಯುವ ದಕ್ಷಿಣ ಭಾರತದ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಈ ಕರಡು ನಿಯಮಗಳನ್ನು ಒಮ್ಮತದಿಂದ ಸಾರಾಸಗಟಾಗಿ ತಿರಸ್ಕರಿಸುವ ಒಂದು ಅಂಶದ ನಿರ್ಣಯ ಅಂಗೀಕರಿಸಬೇಕೆಂದು ಆಗ್ರಹ ಪೂರ್ವಕವಾಗಿ ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಮಲ್ಪೆ ಬಂದರಿನಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಈ ನಿರ್ಣಯಕ್ಕೆ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್ ಜಿ ಸಿದ್ದರಾಮಯ್ಯ, ಡಾ. ಸಬೀಹಾ ಭೂಮಿಗೌಡ, ವಿಮಲಾ.ಕೆ.ಎಸ್., ಮಾವಳ್ಳಿ ಶಂಕರ್, ಶಿಕ್ಷಣ ತಜ್ಞರಾದ ಬಿ. ಶ್ರೀಪಾದ ಭಟ್, ಡಾ.ನಿರಂಜನಾರಾಧ್ಯ. ವಿ. ಪಿ., ಡಾ. ವಸುಂದರಾ ಭೂಪತಿ, ಡಾ. ಮೀನಾಕ್ಷಿ ಬಾಳಿ, ಡಾ. ಎಂ.ಎಸ್.ಆಶಾ ದೇವಿ, ಡಾ.ಆರ್ ಸುನಂದಮ್ಮ, ಲೇಖಾ, ಸತ್ಯಂ ಪಾಂಡೆ, ಪ್ರೊ. ಎಂ ನಾರಾಯಣ ಸ್ವಾಮಿ, ಟಿ ಸುರೇಂದ್ರ ರಾವ್, ಪವಿತ್ರ ಎಸ್, ವಿಜಯ್ ಕುಮಾರ್ ಟಿ ಎಸ್, ಡಾ. ಲಿಂಗರಾಜಯ್ಯ, ವಿಕ್ರಂ, ಪ್ರೊ. ರಾಮಲಿಂಗಪ್ಪ ಟಿ ಬೇಗೂರು, ಡಾ. ಉಮಾ ಶಂಕರ್, ವೆಂಕಟೇಶ್, ಗೋಪಾಲ ಕೃಷ್ಣ, ರವಿಕುಮಾರ್ ಬಾಗಿ, ಡಾ. ಎಚ್ ಜಿ ಜಯಲಕ್ಷ್ಮಿ, ಕುಮಾರ್ ಶೃಂಗೇರಿ, ಬಿ ಆರ್ ಗಣೇಶ್, ಎಸ್ ಬಾಲಕೃಷ್ಣ, ಡಾ. ಎಲ್ ಶಿವಣ್ಣ ಸೇರಿದಂತೆ ಮತ್ತಿತತರರು ಸಹಿ ಹಾಕಿದ್ದಾರೆ.
