ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಅನುಷ್ಠಾನ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ನಾಡು ನಮ್ಮ ಆಳ್ವಿಕೆ ಸಂಘಟನೆ ಪತ್ರವೊಂದನ್ನು ಬರೆದಿತ್ತು. ಆ ಪತ್ರವನ್ನು ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆಯವರು ತಮ್ಮ ಒಕ್ಕಣೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿದ್ದಾರೆ ಎಂದು ಸಂಘಟನೆಯ ಸಂಚಾಲಕ ರಮೇಶ್ ಬೆಲ್ಲಂಕೊಂಡ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವ್ಯವಸ್ಥಿತ ನೀತಿಯಾಗಿ ಹಿಂದಿ ಹೇರಿಕೆ ಮತ್ತು ಭಾಷಾ ಅನ್ಯಾಯದ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಕರ್ನಾಟಕದ ಶಿಕ್ಷಣ ಮತ್ತು ಆಡಳಿತದಲ್ಲಿ ದ್ವಿಭಾಷಾ ನೀತಿಯ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ. ಭಾರತಕ್ಕೆ ನ್ಯಾಯಯುತ ಮತ್ತು ಸಮಾನ ಭಾಷಾ ನೀತಿಯು ಆಯಾ ಪ್ರದೇಶಗಳ ಭಾಷೆಗಳನ್ನು ಇಂಗ್ಲಿಷ್ ಜೊತೆಗೆ ಶಿಕ್ಷಣ, ಆಡಳಿತದಲ್ಲಿ ಮತ್ತು ಸಾಮಾನ್ಯ ಸಂವಹನದಲ್ಲಿ ಕಡ್ಡಾಯಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಹಿಂದಿ ಹೇರಿಕೆಯು ಕನ್ನಡಿಗರ ಭಾಷಾ ಗುರುತು ಮತ್ತು ಹಕ್ಕುಗಳನ್ನು ದುರ್ಬಲಗೊಳಿಸುವುದರೊಂದಿಗೆ ಕನ್ನಡವನ್ನು ದ್ವತೀಯ ಸ್ಥಾನಕ್ಕೆ ತಳ್ಳಲಾಗುತ್ತಿದೆ. ಹಿಂದಿ ಹೇರಿಕೆಯ ಅಪಾಯಗಳ ಬಗ್ಗ ಎಜಾಗೃತಿ ಮೂಡಿಸಲು ಮತ್ತು ಕನ್ನಡ ಇಂಗ್ಲಿಷ್ ದ್ವಿಭಾಷಾ ನೀತಿಯ ಅಗತ್ಯವನ್ನು ಒತ್ತಿ ಹೇಳಲು ನಾವು ಮುಂಬರುವ ದಿನಗಳಲ್ಲಿ ಕರ್ನಾಟಕದಾದ್ಯಂತ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಿದ್ದೇವೆ ಎಂದು ರಮೇಶ್ ತಿಳಿಸಿದ್ದಾರೆ.
