ಗ್ರಾಮ ಲೆಕ್ಕಾಧಿಕಾರಿಗಳ ನೇಮಕಕ್ಕೆ ಭಾನುವಾರ ಸ್ಪರ್ಧಾ ಪರೀಕ್ಷೆ ನಡೆದಿದೆ. 1,000 ಗ್ರಾಮ ಲೆಕ್ಕಾಧಿಕಾರಿ (ವಿಎ) ಹುದ್ದೆಗಳು ಮತ್ತು 98 ಜಿಟಿಟಿಸಿ ಹುದ್ದೆಗಳಿಗೆ 5.75 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೆ, ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಡವಟ್ಟು ಮಾಡಿದೆ. ನೆಟ್ಟಿಗರ ಆಕ್ರೋಶ ಮತ್ತು ಟ್ರೋಲ್‌ಗೆ ಕೆಇಎ ಗುರಿಯಾಗಿದೆ.
ಕಡ್ಡಾಯ ಕನ್ನಡ ಭಾಷಾ ಪ್ರಶ್ನೆಪತ್ರಿಕೆಯ ಮುಖಪುಟದಲ್ಲಿ ಹಲವು ದೋಷಗಳು ಕಂಡುಬಂದಿವೆ. ಪರೀಕ್ಷಾ ಸಮಯಕ್ಕೆ ಸಂಬಂಧಿಸಿತ ಸೂಚನೆಗಳಲ್ಲಿ ತಪ್ಪುಗಳಿದ್ದು, ಅಭ್ಯರ್ಥಿಗಳೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರೀಕ್ಷ ಸಮಯದ ಬಗ್ಗೆ ವಿವರಿಸಲಾಗಿರುವ ಮಾರ್ಗಸೂಚಿಗಳಲ್ಲಿ ಬೆಳಿಗ್ಗೆಯ ಬದಲಿಗೆ ಮಧ್ಯಾಹ್ನ, ಮಧ್ಯಾಹ್ನದ ಬದಲಿಗೆ ಸಂಜೆ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ.
ಪರೀಕ್ಷಾ ಸೂಚನೆಗಳಲ್ಲಿ ‘ಪ್ರಶ್ನೆ ಪತ್ರಿಕೆಯನ್ನು ನಿಮಗೆ ಬೆಳಿಗ್ಗೆ 10:25ರ ನಂತರ ಕೊಡಲಾಗುತ್ತದೆ’ ಎಂದು ಮುದ್ರಿಸುವ ಬದಲು ‘ಮಧ್ಯಾಹ್ನ 10:25ರ ನಂತರ ಕೊಡಲಾಗುತ್ತದೆ’ ಎಂದು ಮುದ್ರಿಸಲಾಗಿದೆ. ಅಲ್ಲದೆ, ‘ಪ್ರಶ್ನೆ ಪತ್ರಿಕೆ ಕೊಟ್ಟ ನಂತರ ಮೂರನೇ ಬೆಲ್ ಬೆಳಿಗ್ಗೆ 10:30ಕ್ಕೆ ಆಗುತ್ತದೆ’ ಎಂದು ಉಲ್ಲೇಖಿಸುವ ಬದಲು ‘ಮಧ್ಯಾಹ್ನ 10:30ಕ್ಕೆ ಆಗುತ್ತದೆ’ ಎಂದು ಬರೆಯಲಾಗಿದೆ.

ಇನ್ನು, ಪರೀಕ್ಷೆ ಬರೆಯುವುದನ್ನು ನಿಲ್ಲಿಸುವ ಸೂಚನೆಯಲ್ಲಿ, ‘ಕೊನೆಯ ಬೆಲ್ ಮಧ್ಯಾಹ್ನ 12:30ಕ್ಕೆ ಆದ ನಂತರ ಉತ್ತರಿಸುವುದನ್ನು ನಿಲ್ಲಿಸಿ’ ಎಂದು ಉಲ್ಲೇಖಿಸದೆ, ‘ಸಂಜೆ 12:30ಕ್ಕೆ’ ಎಂದು ಮುದ್ರಿಸಲಾಗಿದೆ.
ಇದೆಲ್ಲದೆ, ಓಎಂಆರ್ ಶೀಟ್‌ನ ಕನ್ನಡ ಅಕ್ಷರಗಳಲ್ಲೂ ದೋಷಗಳು ಕಂಡುಬಂದಿವೆ. ಮಾಡಬೇಕು ಎಂಬುದರ ಬದಲಿಗೆ, ‘ಮಾಡಬೇಡು’ ಎಂದು, ಕಪ್ಪು ಎಂಬುದನ್ನು ‘ಕಷ್ಟು’, ಎಂದೂ, ಮೊದಲು ಎನ್ನುವುದನ್ನು ‘ಮೊದಲಾ’ ಎಂದು ತಪ್ಪಾಗಿ ಬರೆಯಲಾಗಿದೆ.