ಮೋದಿ ವಿರುದ್ಧ ಆಡಳಿತ ವಿರೋಧಿ ಅಲೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಯುವಜನರ ಜೊತೆ ಬಲವಾಗಿ ನಿಂತರೆ, ಎಸ್ಐಆರ್ನ ಹುನ್ನಾರವನ್ನು ಬಯಲುಗೊಳಿಸಿದರೆ, ಅದರ ವಿರುದ್ಧ ಜನರನ್ನು ಸಂಘಟಿಸಿದರೆ... ಕಾಂಗ್ರೆಸ್ ಪುಟಿದೇಳಬಹುದಾಗಿದೆ. ಪುಟಿದೇಳಲು ಇದು ಸಕಾಲ.
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಸರ್ಕಾರದೊಳಗೆ ಅಧಿಕಾರ ಹಸ್ತಾಂತರವು ಯಾವುದೇ ಎಡರು-ತೊಡರುಗಳಿಲ್ಲದೆ ಸುಮಗವಾಗಿ ನಡೆದಿದೆ. ನಿರಾಯಾಸವಾಗಿ ಮುಖ್ಯಮಂತ್ರಿ ಗಾದಿಗೇರಿದ ಡಿ.ಕೆ ಶಿವಕುಮಾರ್ ಅವರಿಗೆ ತಮ್ಮ ಸಚಿವ ಸಂಪುಟವನ್ನು ಭದ್ರಗೊಳಿಸಿಕೊಳ್ಳುವ ಮತ್ತು ಮುನ್ನಡೆಸುವ ಸವಾಲು ಎದುರಿಗಿದೆ. ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಮುನಿಯಪ್ಪ ಮುನಿಸಿಕೊಂಡಿದ್ದಾರೆ. ತಮ್ಮಿಷ್ಟದ ಅರ್ಥಾತ್ ಸಂಪದ್ಭರಿತ ಖಾತೆಗಳನ್ನು ಕೊಡದಿದ್ದರೆ, ತಮಗೆ ಮಂತ್ರಿಗಿರಿಯೇ ಬೇಡ ಎಂದಿದ್ದಾರೆ.
ಬಂಡಾಯ ಎದ್ದಿರುವ ಸಚಿವರ ಮನವೊಲಿಸುವ ಪ್ರಯತ್ನಗಳು ನಡೆದೇ ಇವೆ. ಆದಾಗ್ಯೂ, ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ನೀಡಿರುವ ಸಚಿವರ ಮನವೊಲಿಸಲು ಹೋಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆಗಾಗಿ ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ, ‘ಅತೃಪ್ತರನ್ನು ಮೊದಲು ಕರೆದು ಮಾತನಾಡಿಸಿ, ಮನವೊಲಿಕೆಗೆ ಬಗ್ಗದಿದ್ದರೆ, ತಕ್ಷಣವೇ ಅವರ ರಾಜೀನಾಮೆಯನ್ನು ಅಂಗೀಕರಿಸಿ’ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದ್ದಾರೆ.
ಸಚಿವರ ಖಾತೆ ಹಂಚಿಕೆಯನ್ನು ಹೈಕಮಾಂಡ್ ಎಲ್ಲ ಆಯಾಮಗಳಿಂದ ಯೋಚಿಸಿಯೇ ನಿರ್ಧಾರ ಮಾಡಿದೆ. ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಅಧಿಕಾರ ಹಸ್ತಾಂತರದ ಆರಂಭದಲ್ಲೇ ಗೊಂದಲ ಸೃಷ್ಟಿಸುವುದನ್ನು ಸಹಿಸುವುದಿಲ್ಲ. ಸಚಿವರ ಅಧಿಕ ಪ್ರಸಂಗಕ್ಕೆ ಮಣೆ ಹಾಕುವುದಿಲ್ಲ ಎಂಬ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರಿಂದ ಎಚ್ಚರಿಕೆ ಮತ್ತು ಸೂಚನೆ ಸಿಗುತ್ತಿದ್ದಂತೆಯೇ, ಮುನಿಯಪ್ಪರ ಮುನಿಸು ತಣಿದಿದೆ. ‘ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿ ಪಕ್ಷ ನೀಡುವ ಯಾವುದೇ ಖಾತೆಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಐ ಆ್ಯಮ್ ಹ್ಯಾಪಿ’ ಎಂದಿದ್ದಾರೆ. ಬಹುಶಃ, ರಾಮಲಿಂಗಾರೆಡ್ಡಿ ಅವರೂ ತಮ್ಮ ರಾಜೀನಾಮೆಯನ್ನು ಹಿಂಪಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಸಚಿವ ಸಂಪುಟದ ಈ ಪ್ರಸಂಗಗಳು ಮುನಿಸು, ಬಂಡಾಯ, ಅತೃಪ್ತಿಗೆ ಹೆಚ್ಚು ಅವಕಾಶವಿಲ್ಲ ಎಂಬ ಹೈಕಮಾಂಡ್ನ ಬಲವಾದ ನಿರ್ಧಾರವನ್ನು ಸ್ಪಷ್ಟವಾಗಿ ಸೂಚಿಸಿದೆ. ಜೊತೆಗೆ, ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ತಳೆಯುತ್ತಿರುವ ನಿಲುವುಗಳು ನಾಯಕತ್ವವು ಬಲಗೊಳ್ಳುತ್ತಿರುವುದರ ಸೂಚಕವೂ ಆಗಿದೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಚಾಣಾಕ್ಷ ನಿರ್ಧಾರಗಳು ದಕ್ಷಿಣ ಭಾರತದ ರಾಜಕಾರಣದಲ್ಲಿ ಹೊಸ ಅಲೆಯನ್ನು, ಭರವಸೆಯನ್ನು ಸೃಷ್ಟಿಸಿವೆ.
ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಬದಲಿಗೆ ಡಿ.ಕೆ. ಶಿವಕುಮಾರ್ ಅವರನ್ನು ನಿರಾಯಾಸವಾಗಿ ನೇಮಿಸಿತು. ಈ ಸುಗಮ ಅಧಿಕಾರ ಹಸ್ತಾಂತರವು ಕಳೆದ 12 ವರ್ಷಗಳ ಕಾಂಗ್ರೆಸ್ ಇತಿಹಾಸದಲ್ಲೇ ಅಪರೂಪದ ಘಟನೆ. ಮಾತ್ರವಲ್ಲ, 1970-80ರ ದಶಕದ ರಾಜಕಾರಣದ ಪುನರಾವರ್ತನೆಯೂ ಕೂಡ. ಆಗ ಕೇಂದ್ರದಲ್ಲಿ ಪ್ರಬಲವಾಗಿದ್ದ ಕಾಂಗ್ರೆಸ್ ಹೈಕಮಾಂಡ್ ನಿಯಮಿತವಾಗಿ ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಿತ್ತು. 90ರ ದಶಕದಲ್ಲಂತೂ ಕಾಂಗ್ರೆಸ್ ನಿರ್ಧಾರಗಳು ಸಾರ್ವಜನಿಕ ಚರ್ಚೆಗೊಳಗಾಗಿದ್ದವು.
2018ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢದಲ್ಲಿ ಚುನಾವಣೆ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ರಾಜಸ್ಥಾನ-ಮಧ್ಯಪ್ರದೇಶದಲ್ಲಿ ಸಚಿನ್ ಪೈಲಟ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರಂತಹ ಯುವ ನಾಯಕರನ್ನು ಬದಿಗಿಟ್ಟು ಹಿರಿಯರಾದ ಅಶೋಕ್ ಗೆಹ್ಲೋಟ್ ಮತ್ತು ಕಮಲ್ ನಾಥ್ ಅವರಿಗೆ ಮಣೆ ಹಾಕಿತ್ತು. ಛತ್ತೀಸ್ಗಢದಲ್ಲಿ ಟಿ.ಎಸ್. ಸಿಂಗ್ ದೇವ್ ಅವರನ್ನು ಬಿಟ್ಟು ಒಬಿಸಿ ಮುಖಂಡ ಭೂಪೇಶ್ ಬಘೇಲ್ ಅವರಿಗೆ ಆದ್ಯತೆ ನೀಡಲಾಗಿತ್ತು.
ಪರಿಣಾಮವಾಗಿ, 2020ರ ಮಾರ್ಚ್ನಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಿ, ಸಿಂಧಿಯಾ ಪಕ್ಷ ತೊರೆದು ಬಿಜೆಪಿ ಸೇರಿದರು. ರಾಜಸ್ಥಾನದಲ್ಲಿ ಪೈಲಟ್ ಪಕ್ಷ ತೊರೆಯುವ ಕಸರತ್ತು ಮಾಡಿದರೂ, ಪಕ್ಷವು ಅವರನ್ನು ಉಳಿಸಿಕೊಂಡಿತು. ಅಂತೆಯೇ, ಛತ್ತೀಸ್ಗಢದಲ್ಲಿ ಸಿಂಗ್ ದೇವ್ ಅವರು ಪಕ್ಷ ತೊರೆಯುವ ಸಾಹಸ ಮಾಡದಿದ್ದರೂ, ಮುಖ್ಯಮಂತ್ರಿ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಫಲವಾಗಿ, ಈ ಮೂರು ರಾಜ್ಯಗಳಲ್ಲಿಯೂ 2023ರಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲಾಗಲಿಲ್ಲ.
ಆದರೆ, ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ವಿಷಯವನ್ನು ರಾಡಿ ಎಬ್ಬಿಸದೆ, ಸಿದ್ದರಾಮಯ್ಯ ಅವರ ಅಧಿಕಾರಾವಧಿಯ ಮೂರು ವರ್ಷಗಳು ಮುಗಿಯುತ್ತಿದ್ದಂತೆ ನಿರ್ಣಾಯಕ ನಿರ್ಧಾರ ತೆಗೆದುಕೊಂಡಿತು. ಆರಂಭದಲ್ಲಿ ಒಪ್ಪಿಕೊಂಡಿದ್ದ ಎರಡೂವರೆ ವರ್ಷಗಳ ಒಪ್ಪಂದಕ್ಕಿಂತ ಆರು ತಿಂಗಳು ಹೆಚ್ಚು ಕಾಲ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಹೈಕಮಾಂಡ್ ಅವಕಾಶ ನೀಡುವ ಮೂಲಕ ಗೌರವಿಸಿತು. ಇದು, ದೇವರಾಜ ಅರಸು ಅವರ ನಂತರ ಕರ್ನಾಟಕದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಲು ನೆರವಾಯಿತು.
ಗಮನಾರ್ಹವೆಂದರೆ, ಕರ್ನಾಟಕದ ಅಧಿಕಾರ ಹಸ್ತಾಂತರವು 2022ರ ಚುನಾವಣೆಗೆ ಕೇವಲ ಆರು ತಿಂಗಳ ಮುಂಚೆ ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಒರಟಾಗಿ ತೆಗೆದುಹಾಕಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ನೇಮಿಸಿದ ಕಾಂಗ್ರೆಸ್ನ ಹಳೆಯ ಎಡವಟ್ಟಿನ ಶೈಲಿಗೆ ತದ್ವಿರುದ್ಧವಾಗಿತ್ತು.
ಅಂತೆಯೇ, ಕೇರಳದಲ್ಲಿ ಕಾಂಗ್ರೆಸ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಅವರ ಆಕಾಂಕ್ಷೆಗಳನ್ನು ಬದಿಗಿಟ್ಟು, ಪಕ್ಷದ ಸಾಮಾನ್ಯ ಕಾರ್ಯಕರ್ತರ ಭಾವನೆಗಳಿಗೆ ಮತ್ತು ಜನಾದೇಶಕ್ಕೆ ಗೌರವ ನೀಡಿ, ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಆಯ್ಕೆ ಮಾಡಿದ್ದು ಚಾಣಾಕ್ಷ ನಡೆಯಾಗಿತ್ತು.
ಅಂತೆಯೇ, ತಮಿಳುನಾಡಿನಲ್ಲಿ ಚುನಾವಣೆಯ ನಂತರ ಕಾಂಗ್ರೆಸ್ ತನ್ನ ಆಪ್ತ ಮಿತ್ರ ಡಿಎಂಕೆಯನ್ನು ಕೈಬಿಟ್ಟು, ನಟ ವಿಜಯ್ ಅವರ ಟಿವಿಕೆ ಪಕ್ಷದೊಂದಿಗೆ ಕೈಜೋಡಿಸಿತು. ಹಳೆಯ ಮೈತ್ರಿಗಳಿಗಿಂತ ಪಕ್ಷದ ಸ್ವಂತ ಹಿತಾಸಕ್ತಿಗೆ ಕಾಂಗ್ರೆಸ್ ಆದ್ಯತೆ ನೀಡಿದ ಅಪರೂಪದ ಸಂದರ್ಭ ಇದಾಗಿತ್ತು.
ಈ ಹಿಂದೆ, 2004ರಲ್ಲಿ ಡಿಎಂಕೆ ಜೊತೆಗಿನ ಮೈತ್ರಿಯು ಸೋನಿಯಾ ಗಾಂಧಿ ಅವರ ಕಾಲದ ಒಂದು ರಾಜತಾಂತ್ರಿಕ ಮಾಸ್ಟರ್ಸ್ಟ್ರೋಕ್ ಆಗಿತ್ತು. ಆ ವರ್ಷದ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಡಿಎಂಕೆ ಜೊತೆ ಹೋಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ, ಎರಡು ದ್ರಾವಿಡ ಪಕ್ಷಗಳನ್ನು (DMK ಮತ್ತು AIADMK) ತನ್ನ ಕಡೆ ಇಟ್ಟುಕೊಳ್ಳಲು ಬಯಸಿತ್ತು. ಆದರೆ, ಸೋನಿಯಾ ಗಾಂಧಿ ಅವರು ಎಂ. ಕರುಣಾನಿಧಿ ಅವರೊಂದಿಗೆ ಮಾತುಕತೆ ನಡೆಸಲು ಡಾ. ಮನಮೋಹನ್ ಸಿಂಗ್ ಅವರನ್ನು ಕಳುಹಿಸಿದರು. ಡಿಎಂಕೆ ಜೊತೆ ಬಲವಾದ ಮೈತ್ರಿ ಕಟ್ಟಿದ್ದರು.
ಈಗ ಡಿಎಂಕೆಯಿಂದ ಟಿವಿಕೆಯತ್ತ ಕಾಂಗ್ರೆಸ್ ಹೊರಳಿರುವುದು, ಸೋನಿಯಾ ಗಾಂಧಿ ಅವರು 2004ರಲ್ಲಿ ಮಾಡಿದಂತೆ ತಮಿಳುನಾಡಿನಲ್ಲಿ ಕಾಂಗ್ರೆಸ್ ತನ್ನದೇ ಆದ ಪ್ರಭಾವ ಮತ್ತು ಹಿಡಿತವನ್ನು ಮರಳಿ ಪಡೆಯಲು ರಾಹುಲ್ ಗಾಂಧಿ ರೂಪಿಸಿದ ಹೊಸ ತಂತ್ರವಾಗಿದೆ. ಈ ತಂತ್ರವು ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸಮಾಜವಾದಿ ಪಕ್ಷದೊಂದಿಗೆ (SP) ಸೀಟು ಹಂಚಿಕೆಗಾಗಿ ಕಠಿಣ ಚೌಕಾಶಿ ನಡೆಸಲು ಅನುಕೂಲ ಮಾಡಿಕೊಡಲಿದೆ.
ಈ ಲೇಖನ ಓದಿದ್ದೀರಾ?: ಬಂಗಾರ ಸಾಮ್ರಾಜ್ಯ ಪತನ: ರಾಜೇಶ್ ಎಕ್ಸ್ಪೋರ್ಟ್ಸ್ನ 15.15 ಲಕ್ಷ ಕೋಟಿ ರೂ. ಮಹಾ ಹಗರಣ
ದಕ್ಷಿಣ ಭಾರತದಲ್ಲಿನ ಈ ಮೂರು ನಡೆಗಳ ಮೂಲಕ ಕಾಂಗ್ರೆಸ್ ಒಂದು ಸ್ಪಷ್ಟವಾದ ಮಾದರಿಯನ್ನು ಹಾಕಿಕೊಟ್ಟಿದೆ: ತಾಳ್ಮೆ ಮತ್ತು ಶಿಸ್ತಿಗೆ ಪುರಸ್ಕಾರ, ಕಾರ್ಯಕರ್ತರ ಭಾವನೆಗಳಿಗೆ ಗೌರವ ಹಾಗೂ ಮೈತ್ರಿಗಿಂತ ಪಕ್ಷವೇ ಮೊದಲು. ಇದೇ ಸೂತ್ರದಡಿ, ಪಂಜಾಬ್ ಕಾಂಗ್ರೆಸ್ನಲ್ಲಿನ ಆಂತರಿಕ ಭಿನ್ನಮತವನ್ನು ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್ ಪ್ರಯತ್ನಿಸುತ್ತಿದೆ.
ಜೊತೆಗೆ, ಸಾಂಸ್ಥಿಕ ಪುನರ್ರಚನೆಗೂ ಕೈಹಾಕಿದೆ. ತಕ್ಷಣದ ನಿರ್ಧಾರವಾಗಿ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಅವರ ಬದಲಿಗೆ ಬಿ.ಕೆ ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಕಗ್ಗಂಟಾಗಿರುವ ರಾಜಸ್ಥಾನದಲ್ಲಿಯೂ ಗೋವಿಂದ್ ಸಿಂಗ್ ದೋತಾಸರಾ, ಮೇಘಾಲಯದ ವಿನ್ಸೆಂಟ್ ಪಾಲಾ ಹಾಗೂ ಪಂಜಾಬ್ನ ಅಮರಿಂದರ್ ಸಿಂಗ್ ವಾರಿಂಗ್ ಅವರನ್ನು ಬದಲಿಸಲು ಯೋಜಿಸಿದೆ.
ಪಕ್ಷವು ಹಿರಿಯರು ಮತ್ತು ಮುಂಚೂಣಿಯಲ್ಲಿರುವವರಿಗೆ ಎಲ್ಲವನ್ನೂ ಕೊಟ್ಟಿದೆ. ಇನ್ನೇನಿದ್ದರೂ ಪಕ್ಷದೊಂದಿಗೆ ಗಟ್ಟಿಯಾಗಿ ನಿಂತವರು ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಅವಕಾಶ. ಅಧಿಕಾರಕ್ಕಾಗಿ ಪಕ್ಷದ ವಿರುದ್ಧ ಬಂಡಾಯ ಏಳುವವರು ತಮ್ಮ ದಾರಿ ನೋಡಿಕೊಳ್ಳಬಹುದು ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿದೆ. ಅದನ್ನೇ ಎಲ್ಲೆಡೆ ರವಾನಿಸುತ್ತಿದೆ. ಪಕ್ಷದ ಹೈಕಮಾಂಡ್ ಇದೇ ರೀತಿ ದೇಶಾದ್ಯಂತ ಸ್ಪಷ್ಟತೆ ಮತ್ತು ದೃಢತೆಯೊಂದಿಗೆ ಪಕ್ಷದ ಸಂಘಟನಾ ಕಾರ್ಯಕ್ಕೆ ಮರುಜೀವ ತುಂಬಬಹುದು. ಇದಕ್ಕೆ ಪೂರಕವಾಗಿ, ಮೋದಿ ಅಲೆ ಮತ್ತು ಹವಾ ಕೂಡ ತಣ್ಣಗಾಗಿದೆ. ಮೋದಿ ವಿರುದ್ಧ ಆಡಳಿತ ವಿರೋಧಿ ಅಲೆ ಹೆಚ್ಚುತ್ತಿದೆ. ಈ ಸಮಯದಲ್ಲಿ ಯುವಜನರ ಜೊತೆ ಬಲವಾಗಿ ನಿಲ್ಲಬಹುದು. ಎಸ್ಐಆರ್ನ ಹುನ್ನಾರವನ್ನು ಬಯಲುಗೊಳಿಸಿ, ಅದರ ವಿರುದ್ಧ ಜನರನ್ನು ಸಂಘಟಿಸಬಹುದು. ಈ ಮೂರು ಸಾಧ್ಯವಾದರೆ, ಕಾಂಗ್ರೆಸ್ ಪುಟಿದೇಳಲು ಇದು ಅತ್ಯಂತ ಸಕಾಲ.




