ಸೋಮವಾರ (ಜೂ.16) ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹವಾಮಾನ ಇಲಾಖೆಯ ಸೂಚನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಸೋಮವಾರ ಮಿಂಚು ಮತ್ತು 40-50 ಕಿ.ಮೀ ವೇಗದಲ್ಲಿ ತಲುಪುವ ಬೀರುಗಾಳಿ ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಉಂಟಾಗಬಹುದು. ಸಣ್ಣಪುಟ್ಟ ಸಂಚಾರ ದಟ್ಟಣೆ ಸಹಜವಾಗಿರುತ್ತದೆ. ದುರ್ಬಲ ಮರದ ಕೊಂಬೆಗಳು ಗಾಳಿಗೆ ಬೀಳಬಹುದು.
ಮನೆಯೊಳಗೆ ಇರಿ, ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಮತ್ತು ಸಾಧ್ಯವಾದರೆ ಪ್ರಯಾಣವನ್ನು ತಪ್ಪಿಸಿ. ಸುರಕ್ಷಿತ ಆಶ್ರಯವನ್ನು ತೆಗೆದುಕೊಳ್ಳಿ. ಮರಗಳ ಕೆಳಗೆ ಆಶ್ರಯ ಪಡೆಯಬೇಡಿ. ಎಲೆಕ್ಟ್ರಿಕ್ ಉಪಕರಣಗಳನ್ನು ತಕ್ಷಣವೇ ಅನ್‌ಪ್ಲಗ್ ಮಾಡಿ. ತಕ್ಷಣ ಜಲಮೂಲಗಳಿಂದ ಹೊರಬನ್ನಿ. ವಿದ್ಯುಚ್ಛಕ್ತಿ ಹಿರಿಯುವ ಎಲ್ಲ ವಸ್ತುಗಳಿಂದ ದೂರವಿರಿ.
ನೀವು ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ಚಾಲನೆ ಮಾಡಿ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಾಲ್ಕು ಜಿಲ್ಲೆಗಳಿಗೆ ರಜೆ ಘೋಷಣೆ
ಭಾರಿ ಮಳೆಯ ಕಾರಣ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ 6 ತಾಲೂಕಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು,ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್ಆರ್ ಪುರ ತಾಲೂಕಿನಲ್ಲಿ ರಜೆ ಘೋಷಣೆ ಮಾಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸುತ್ತೋಲೆ ಹೊರಡಿಸಿದ್ದಾರೆ.