ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ ವಲಸಿಗರೇ..?

Date:

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ ಶಕ್ತಿಗೆ ತಕ್ಕ ಅವಕಾಶಗಳನ್ನು ಸೃಷ್ಟಿಸುವುದು ಮಹತ್ವದ ಸವಾಲಾಗಿದೆ. ಬಡತನ, ನಿರುದ್ಯೋಗ, ಆದಾಯದ ಅಸಮಾನತೆ ಮತ್ತು ಜೀವನೋಪಾಯದ ಅನಿಶ್ಚಿತತೆ ಇಂದಿಗೂ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಾಗಿವೆ.

- Advertisement -

ಒಂದೆಡೆ, ಲಕ್ಷಾಂತರ ಯುವಜನರು ಉನ್ನತ ಶಿಕ್ಷಣ ಪಡೆದು ಉದ್ಯೋಗದ ಕನಸು ಕಾಣುತ್ತಿದ್ದರೆ, ಮತ್ತೊಂದೆಡೆ, ಕೃಷಿಯನ್ನೇ ನಂಬಿಕೊಂಡಿರುವ ಅನೇಕ ಕುಟುಂಬಗಳು ಮಳೆಯ ಕೊರತೆ, ಬೆಳೆ ನಷ್ಟ ಮತ್ತು ಸಾಲದ ಹೊರೆಗಳಿಂದ ಸಂಕಷ್ಟಕ್ಕೆ ಸಿಲುಕುತ್ತಿವೆ. ಕೆಲವರಿಗೆ ತಾವಿದ್ದ ಊರಿನಲ್ಲಿಯೇ ಕೆಲಸ ಸಿಗುವುದಿಲ್ಲ; ಇನ್ನು ಕೆಲವರಿಗೆ ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ದೊರೆಯುವುದಿಲ್ಲ. ಅದರ ಪರಿಣಾಮವಾಗಿ, ಬದುಕಿಗಾಗಿ ಜನರು ತಮ್ಮ ಮೂಲ ನೆಲೆಯನ್ನು ಬಿಟ್ಟು ಬೇರೆ ಊರುಗಳಿಗೆ, ನಗರಗಳಿಗೆ ಹಾಗೂ ವಿದೇಶಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ, ವಲಸೆ ಎಂದರೆ ಹಳ್ಳಿಯ ಬಡ ಕುಟುಂಬಗಳು ಊರು ಬಿಟ್ಟು ಹೋಗುವುದಷ್ಟೇನಾ? ಉದ್ಯೋಗಕ್ಕಾಗಿ ಮಹಾನಗರಗಳಿಗೆ ತೆರಳುವ ವಿದ್ಯಾವಂತ ಯುವಜನರೂ ವಲಸಿಗರಲ್ಲವೇ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಿಪಟೂರು | ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ;...

ತಿಪಟೂರು ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ ಜೋರಿದೆ. ಟೆಂಡರ್ ದರ ಒಂದಾದರೆ, ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ ನೇರ ಖರೀದಿ (URD) ಮತ್ತು ರವಾನೆ ಕೊಬ್ಬರಿ ಖರೀದಿಗೆ ಮತ್ತೊಂದು ಬೆಲೆ ನಿಗದಿಯಾಗಿದೆ. ಅಂಡರ್ ಬಿಲ್ಲಿಂಗ್...

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

ವಲಸೆ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಹಳ್ಳಿಯ ಬಡ ಕುಟುಂಬಗಳು, ಬರದಿಂದ ಬತ್ತಿಹೋದ ಹೊಲಗಳು, ಕೃಷಿ ಕೆಲಸವಿಲ್ಲದೆ ಖಾಲಿಯಾದ ಕೈಗಳು, ಮಕ್ಕಳನ್ನು ಕರೆದುಕೊಂಡು ಗಂಟುಮೂಟೆ ಕಟ್ಟಿಕೊಂಡು ಊರು ತೊರೆಯುವ ದಂಪತಿಗಳು ಹಾಗೂ ಬದುಕಿಗಾಗಿ ದೂರದ ಊರುಗಳಿಗೆ ತೆರಳುವ ಕಾರ್ಮಿಕರು. ಇಂತಹವರು ತಮ್ಮ ಊರು ಬಿಟ್ಟು ಬೇರೆಡೆಗೆ ದುಡಿಯಲು ಹೋದಾಗ ಅವರನ್ನು ‘ಗುಳೆ ಹೋದವರು’ ಎಂದು ಕರೆಯುತ್ತೇವೆ.

ಹಾಗಾದರೆ, ಬದುಕಿಗಾಗಿ ಊರು ಬಿಡುವುದು ಹಳ್ಳಿಯ ಬಡವರ ಹಣೆಬರಹ ಮಾತ್ರವೇ? ‘ಉದ್ಯೋಗಕ್ಕಾಗಿ ಬೆಂಗಳೂರು, ಪುಣೆ, ಹೈದರಾಬಾದ್, ಮುಂಬೈ, ದೆಹಲಿ ಮುಂತಾದ ಮಹಾನಗರಗಳಿಗೆ ತೆರಳುವ ವಿದ್ಯಾವಂತ ಯುವಜನರು ವಲಸಿಗರಲ್ಲವೇ’ ಎಂಬ ಪ್ರಶ್ನೆ ಮೂಡುವುದು. ಹಾಗೆಯೇ ವಿದೇಶಗಳಿಗೆ ಉದ್ಯೋಗ ಅರಸಿ ಹೋಗುವವರೂ ವಲಸೆಯ ಪ್ರಕ್ರಿಯೆಯ ಭಾಗವಲ್ಲವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಈ ಪ್ರಶ್ನೆಗಳನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ.

ವಲಸೆ ಎಂದರೆ ಹಳ್ಳಿಯಿಂದ ಊರು ಬಿಡುವುದಷ್ಟೇ ಅಲ್ಲ. ವಲಸೆ ಎಂಬುದು ಒಂದು ವಿಶಾಲವಾದ ಸಾಮಾಜಿಕ ಮತ್ತು ಆರ್ಥಿಕ ಪ್ರಕ್ರಿಯೆಯಾಗಿದೆ. ಶಿಕ್ಷಣ, ಉದ್ಯೋಗ, ವ್ಯಾಪಾರ, ಉತ್ತಮ ಜೀವನದ ನಿರೀಕ್ಷೆ, ಕೃಷಿಯಲ್ಲಿನ ನಷ್ಟ, ಬರಗಾಲ ಹಾಗೂ ಸ್ಥಳೀಯವಾಗಿ ಉದ್ಯೋಗಾವಕಾಶಗಳ ಕೊರತೆ ಹೀಗೆ ಹಲವು ಕಾರಣಗಳಿಂದ ಜನರು ತಮ್ಮ ನೆಲೆಯನ್ನು ಬಿಟ್ಟು ಬೇರೆಡೆಗೆ ತೆರಳುತ್ತಾರೆ.

ಒಂದು ಹಳ್ಳಿಯಲ್ಲಿ ಮಳೆಯಾಗದೆ ಕೃಷಿ ಮಾಡಲು ಸಾಧ್ಯವಾಗದ ರೈತ ಕುಟುಂಬ ಕೆಲಸ ಅರಸಿ ಮತ್ತೊಂದು ಜಿಲ್ಲೆಗೆ ಹೋಗುತ್ತದೆ. ಮತ್ತೊಂದೆಡೆ, ಪದವಿ ಪಡೆದ ಯುವಕನಿಗೆ ತನ್ನ ಜಿಲ್ಲೆಯಲ್ಲಿ ಉದ್ಯೋಗ ದೊರೆಯದೆ ಬೆಂಗಳೂರಿಗೆ ತೆರಳುತ್ತಾನೆ. ಓದು ಮುಗಿಸಿದ ಇನ್ನೊಬ್ಬ ಎಂಜಿನಿಯರ್ ಹೈದರಾಬಾದ್‌ನ ಕಂಪನಿಗೋ ಸೇರುತ್ತಾನೆ. ಮತ್ತೊಬ್ಬ ಯುವಕ ಸೌದಿ ಅರೇಬಿಯಾ ಅಥವಾ ದುಬೈಯಂತಹ ವಿದೇಶಗಳಿಗೆ ಉದ್ಯೋಗಕ್ಕಾಗಿ ತೆರಳುತ್ತಾನೆ.

ಇವರೆಲ್ಲರ ಪ್ರಯಾಣದ ಉದ್ದೇಶ ಮತ್ತು ಪರಿಸ್ಥಿತಿ ಒಂದೇ ಆಗಿರಬೇಕಿಲ್ಲ. ಆದರೂ, ತಮ್ಮ ಮೂಲ ನೆಲೆಯಿಂದ ಬೇರೆಡೆಗೆ ತೆರಳುವ ಪ್ರಕ್ರಿಯೆಯ ದೃಷ್ಟಿಯಿಂದ ಇವರೆಲ್ಲರೂ ವಲಸೆಯ ವ್ಯಾಪ್ತಿಗೆ ಬರುತ್ತಾರೆ ಎನ್ನುವುದನ್ನು ಅಲ್ಲಗಳೆಯಲಾಗದು.

ಅಂಕಿಅಂಶಗಳು ಹೇಳುವ ವಲಸೆಯ ವಾಸ್ತವ

ವಲಸೆ ಎನ್ನುವುದು ಕೇವಲ ಗ್ರಾಮೀಣ ಬಡವರ ಸಮಸ್ಯೆಯಲ್ಲ; ಅದು ದೇಶದ ಉದ್ಯೋಗ ವ್ಯವಸ್ಥೆ, ಆರ್ಥಿಕ ಅವಕಾಶಗಳು ಮತ್ತು ಸಾಮಾಜಿಕ ಬದಲಾವಣೆಗಳೊಂದಿಗೆ ಬೆಸೆದುಕೊಂಡಿರುವ ಪ್ರಕ್ರಿಯೆಯಾಗಿದೆ.

ಕೇಂದ್ರ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮೈಗ್ರೆಶನ್ ಇನ್ ಇಂಡಿಯಾ 2020–21 ವರದಿಯ ಪ್ರಕಾರ, ದೇಶದ ಒಟ್ಟು ವಲಸೆ ಪ್ರಮಾಣ ಶೇ. 28.9 ಎಂದು ಅಂದಾಜಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು ಶೇ. 26.5 ಮತ್ತು ನಗರ ಪ್ರದೇಶಗಳಲ್ಲಿ ಶೇ. 34.9ರಷ್ಟಿತ್ತು.

ಈ ವರದಿಯಲ್ಲಿ ವಲಸಿಗ ಪುರುಷರ ಪೈಕಿ ಶೇ. 22.8ರಷ್ಟು ಮಂದಿ ಉದ್ಯೋಗ ಅಥವಾ ಉತ್ತಮ ಉದ್ಯೋಗದ ಹುಡುಕಾಟವನ್ನು ವಲಸೆಯ ಕಾರಣವಾಗಿ ತಿಳಿಸಿದ್ದಾರೆ. ಹಾಗೆಯೇ, ಉದ್ಯೋಗ ಪಡೆಯಲು, ಉತ್ತಮ ಉದ್ಯೋಗಕ್ಕೆ ಬದಲಾಗಲು ಅಥವಾ ಕೆಲಸದ ಸ್ಥಳಕ್ಕೆ ಹತ್ತಿರವಾಗಲು ವಲಸೆ ಹೋದವರೂ ಇದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಅಂಕಿಅಂಶಗಳು 2020–21ರ ಸಮೀಕ್ಷೆಗೆ ಸಂಬಂಧಿಸಿವೆ. ಇವೆಲ್ಲವೂ ಅಂದಾಜು ಸಮೀಕ್ಷೆಯ ಆಧಾರಿತ ಮಾಹಿತಿಯಾಗಿದ್ದು, ನಿಖರವಾದ ಸಮಗ್ರ ಲೆಕ್ಕಾಚಾರ ಎಂದು ಹೇಳಲಾಗದು. ಆದರೂ, ಉದ್ಯೋಗದ ಹುಡುಕಾಟ ಮತ್ತು ವಲಸೆಯ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಇವು ನೆರವಾಗುತ್ತವೆ.

ಇನ್ನೊಂದೆಡೆ, ಕೇಂದ್ರ ಸರ್ಕಾರದ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) 2023–24ರ ಪ್ರಕಾರ, 15ರಿಂದ 29 ವರ್ಷ ವಯಸ್ಸಿನ ಯುವಜನರಲ್ಲಿ ಸಾಮಾನ್ಯ ಸ್ಥಿತಿಯ ಆಧಾರದ ಮೇಲಿನ ನಿರುದ್ಯೋಗದ ಅಂದಾಜು ಪ್ರಮಾಣ ಶೇ. 10.2ರಷ್ಟಿತ್ತು.

ಈ ಅಂಕಿಅಂಶವು ಎಲ್ಲ ಯುವಜನರೂ ನಿರುದ್ಯೋಗಿಗಳಾಗಿದ್ದಾರೆ ಅಥವಾ ಎಲ್ಲರೂ ಉದ್ಯೋಗಕ್ಕಾಗಿ ವಲಸೆ ಹೋಗಿದ್ದಾರೆ ಎಂಬುದನ್ನು ಸೂಚಿಸುವುದಿಲ್ಲ. ಆದರೆ, ಶಿಕ್ಷಣ ಪೂರ್ಣಗೊಳಿಸಿದ ಯುವಜನರಿಗೆ ಸೂಕ್ತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಎಷ್ಟು ಮಹತ್ವದ ವಿಷಯ ಎಂಬುದನ್ನು ಮನಗಾಣಿಸುತ್ತದೆ ಎನ್ನುವಲ್ಲಿ ಎರಡು ಮಾತಿಲ್ಲ.

ಕೇಂದ್ರ ಶಿಕ್ಷಣ ಸಚಿವಾಲಯದ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (AISHE) ಪ್ರಕಾರ, 2021–22ರಲ್ಲಿ ದೇಶಾದ್ಯಂತ ವಿವಿಧ ಉನ್ನತ ಶಿಕ್ಷಣ ಹಂತಗಳಲ್ಲಿ 1.07 ಕೋಟಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ಪಿಎಚ್‌ಡಿ ಹಾಗೂ ಇತರ ಕೋರ್ಸ್‌ಗಳನ್ನು ಪೂರ್ಣಗೊಳಿಸಿದವರು ಸೇರಿದ್ದಾರೆ.

ಈ ಲೇಖನ ಓದಿದ್ದೀರಾ?: SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ತಕ್ಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮಹತ್ವದ ಸವಾಲಾಗಿದೆ.

ಹಾಗಾದರೆ, ಶಿಕ್ಷಣ ಪಡೆದು ಹೊರಬರುವ ಯುವಜನರಿಗೆ ತಮ್ಮ ಊರು, ಜಿಲ್ಲೆ ಅಥವಾ ರಾಜ್ಯದಲ್ಲಿಯೇ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತಿವೆಯೇ? ಈ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಉದ್ಯೋಗದ ಭರವಸೆಗಳು ಮತ್ತು ಯುವಜನರ ನಿರೀಕ್ಷೆಗಳು

ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಒಂದೆಡೆಯಾದರೆ, ಮತ್ತೊಂದೆಡೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿಯೂ ಮಹತ್ವದ ಪ್ರಶ್ನೆಯಾಗಿದೆ. 2022ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂದಿನ ಒಂದೂವರೆ ವರ್ಷದಲ್ಲಿ ಕೇಂದ್ರ ಸರ್ಕಾರದ ಮೂಲಕ 10 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಇದರ ಭಾಗವಾಗಿ ಕೇಂದ್ರ ಸರ್ಕಾರವು ‘ರೋಜ್‌ಗಾರ್ ಮೇಳ’ದ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿತ್ತು.

ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಸರ್ಕಾರಗಳ ಪ್ರಮುಖ ಜವಾಬ್ದಾರಿಯಾಗಿದೆ.

ಆದರೆ, ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರಿಗೆ ನೇಮಕಾತಿ ಪ್ರಕ್ರಿಯೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡು, ಅರ್ಹತೆಗೆ ತಕ್ಕ ಕೆಲಸ ದೊರೆಯುವುದು ಅತ್ಯಂತ ಮುಖ್ಯವಾಗಿದೆ.

ಕರ್ನಾಟಕದಲ್ಲಿಯೂ ವಿವಿಧ ಸರ್ಕಾರಿ ಇಲಾಖೆಗಳಲ್ಲಿ 2 ಲಕ್ಷ 80 ಸಾವಿರಕ್ಕೂ ಹೆಚ್ಚು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ವಿಚಾರ ಯುವಜನರ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. ಸರ್ಕಾರಿ ಉದ್ಯೋಗಕ್ಕಾಗಿ ವರ್ಷಗಟ್ಟಲೆ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆ, ಪರೀಕ್ಷೆ, ಫಲಿತಾಂಶ ಮತ್ತು ನೇಮಕಾತಿ ಆದೇಶಗಳಿಗಾಗಿ ಕಾಯಬೇಕಾಗುತ್ತದೆ. ಈ ಪ್ರಕ್ರಿಯೆಗಳು ವಿಳಂಬವಾದಾಗ ಅವರ ವಯಸ್ಸು, ಆರ್ಥಿಕ ಸ್ಥಿತಿ ಮತ್ತು ಭವಿಷ್ಯದ ಯೋಜನೆಗಳ ಮೇಲೂ ಪರಿಣಾಮ ಉಂಟಾಗಬಹುದು.

ಇಲ್ಲಿ ಪ್ರಶ್ನೆ ಕೇವಲ ಸರ್ಕಾರಿ ಉದ್ಯೋಗಗಳ ಸಂಖ್ಯೆಯದ್ದಲ್ಲ. ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರಿಗೆ ಕಾಲಮಿತಿಯಲ್ಲಿ ಅವಕಾಶಗಳು ದೊರೆಯುತ್ತಿವೆಯೇ? ಅವರ ಅರ್ಹತೆಗೆ ತಕ್ಕ ಕೆಲಸಗಳು ಸೃಷ್ಟಿಯಾಗುತ್ತಿವೆಯೇ? ಎಂಬುದೂ ಮುಖ್ಯವಾಗಿದೆ.

ಉದ್ಯೋಗಾವಕಾಶಗಳ ಕೊರತೆ ಅಥವಾ ನೇಮಕಾತಿಯ ವಿಳಂಬದಿಂದ ಯುವಜನರು ಬೇರೆ ನಗರಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾದರೆ, ಅದನ್ನೂ ವಲಸೆಯ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳ ಭಾಗವಾಗಿ ಪರಿಗಣಿಸಬೇಕಾಗುತ್ತದೆ.

ಶಿಕ್ಷಣ, ಉದ್ಯೋಗ ಮತ್ತು ಯುವಜನರ ಕನಸುಗಳು

ಇಂದಿನ ಯುವಜನರು ಹಲವು ಕನಸುಗಳೊಂದಿಗೆ ಶಿಕ್ಷಣ ಪಡೆಯುತ್ತಿದ್ದಾರೆ. ಸಿವಿಲ್ ಎಂಜಿನಿಯರಿಂಗ್, ಸಾಫ್ಟ್‌ವೇರ್ ಎಂಜಿನಿಯರಿಂಗ್, ಹಾರ್ಡ್‌ವೇರ್, ಕೃತಕ ಬುದ್ಧಿಮತ್ತೆ (AI), ಎಂಬಿಎ, ಸಿಎ ಹಾಗೂ ಇತರ ವೃತ್ತಿಪರ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಿದ್ದಾರೆ.

ಪೋಷಕರು ತಮ್ಮ ಶಕ್ತಿಮೀರಿ ಮಕ್ಕಳ ಶಿಕ್ಷಣಕ್ಕಾಗಿ ಹಣ ಖರ್ಚು ಮಾಡುತ್ತಾರೆ. ಸಾಲ ಮಾಡಿ ಓದಿಸುತ್ತಾರೆ. ಮಕ್ಕಳು ಓದಿ ಉದ್ಯೋಗ ಪಡೆದು ಕುಟುಂಬಕ್ಕೆ ಆಸರೆಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿರುತ್ತಾರೆ.

ಆದರೆ, ಶಿಕ್ಷಣ ಮುಗಿದ ತಕ್ಷಣ ಎಲ್ಲರಿಗೂ ಉದ್ಯೋಗ ದೊರೆಯುತ್ತದೆಯೇ? ಇದು ಖಾತ್ರಿಯಿಲ್ಲ. ಎಲ್ಲರಿಗೂ ಅವರ ವಿದ್ಯಾರ್ಹತೆಗೆ ತಕ್ಕ ಸಂಬಳದೊಂದಿಗೆ ಖಾಯಂ ಕೆಲಸ ಸಿಗುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಅಷ್ಟು ಸರಳವಾಗಿಲ್ಲ.

ಈ ಲೇಖನ ಓದಿದ್ದೀರಾ?: OBC ಮೀಸಲಾತಿಗೆ ಮತಾಂತರದ ಬೇಲಿ: ಸುಪ್ರೀಂ ಹೊಸ ಆದೇಶದಲ್ಲಿ ಸಾಂವಿಧಾನಿಕ ವಿರೋಧಾಭಾಸ!

ಕೆಲವರಿಗೆ ಉದ್ಯೋಗ ದೊರೆಯಲು ವರ್ಷಗಳೇ ಕಳೆದುಹೋಗಬಹುದು. ಅದೆಷ್ಟೋ ವಿದ್ಯಾವಂತ ಯುವಕರು ಡಬಲ್ ಡಿಗ್ರಿಗಳನ್ನು ಪಡೆದರೂ ಸರ್ಕಾರಿ ಉದ್ಯೋಗವಿಲ್ಲದೆ, ಉದ್ಯೋಗದ ವಯಸ್ಸಿನ ಮಿತಿ ಮೀರಿ, ಕೊನೆಗೂ ಮದುವೆಯಾಗಿ ತಾವಿರುವ ಊರಿನಲ್ಲಿಯೇ ಕೂಲಿನಾಲಿ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ದಾಂಪತ್ಯ ಜೀವನ ಸಾಗಿಸುವುದನ್ನು ಇಂದಿಗೂ ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಾಣುತ್ತೇವೆ. ಕೆಲವರು ತಮ್ಮ ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗದೆ, ಸಿಕ್ಕ ಕೆಲಸಗಳನ್ನು ಅನಿವಾರ್ಯವಾಗಿ ಮಾಡುತ್ತಿದ್ದಾರೆ.

ಎಂಜಿನಿಯರಿಂಗ್ ಪದವಿ ಪಡೆದವರು ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿದ್ದೇವೆ. ಎಂಜಿನಿಯರಿಂಗ್ ಪದವಿ ಮುಗಿಸಿ ನರೇಗಾ ಕೆಲಸಕ್ಕೆ ಯಾಕೆ ಬಂದಿರಿ ಎಂದು ಕೇಳಿದರೆ, ಬದುಕು, ಹೊಟ್ಟೆಪಾಡು, ಕೆಲಸ ಎಂದು ಸಿದ್ಧ ಉತ್ತರ ನೀಡುವುದನ್ನು ಕಂಡಿದ್ದೇವೆ.

ಇನ್ನು ಕೆಲವರು ಉದ್ಯೋಗದ ಹುಡುಕಾಟದಲ್ಲಿಯೇ ತಾವು ಪಡೆದ ಶಿಕ್ಷಣದ ಪ್ರಮಾಣಪತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ದೊಡ್ಡ ದೊಡ್ಡ ನಗರಗಳಿಗೆ ಅಲೆದಾಡುತ್ತಾರೆ. ಮತ್ತಷ್ಟು ಜನ ಉದ್ಯೋಗ ಅರಸಿ ಊರು, ಮನೆ, ತಂದೆ-ತಾಯಿ ಹಾಗೂ ಪರಿಚಿತ ಪರಿಸರವನ್ನು ಬಿಟ್ಟು ಬೆನ್ನಿಗೆ ಬ್ಯಾಗ್ ತಗಲಿಹಾಕಿಕೊಂಡು ದಿಕ್ಕು ಗುರಿಯಿಲ್ಲದೆ ಎಲ್ಲೆಲ್ಲಿಗೋ ಹೊರಟೇ ಬಿಡುತ್ತಾರೆ.

ಅವರ ಪಾಲಿಗೆ ಆ ಬ್ಯಾಗ್ ಕೇವಲ ಬಟ್ಟೆಬರೆಗಳನ್ನು ಹೊತ್ತೊಯ್ಯುವ ಚೀಲವಲ್ಲ; ಅದು ಅವರ ವಿದ್ಯಾಭ್ಯಾಸದ ಕನಸುಗಳು, ಪೋಷಕರ ನಿರೀಕ್ಷೆಗಳು, ಉದ್ಯೋಗದ ಅನಿಶ್ಚಿತತೆ ಮತ್ತು ಸ್ವಾವಲಂಬನೆಯ ಹೋರಾಟವನ್ನು ಹೊತ್ತುಕೊಂಡಿರುತ್ತದೆ ಎಂಬುದನ್ನು ಅರಿಯಬೇಕಾಗಿದೆ.

ಹಳ್ಳಿಗರ ವಲಸೆ ಮತ್ತು ನಗರಗಳತ್ತ ಯುವಜನರ ವಲಸೆ

ಹಳ್ಳಿಗಳಿಂದ ಕುಟುಂಬ ಸಮೇತ ವಲಸೆ ಹೋಗುವವರ ವಲಸೆ ಬಹಿರಂಗವಾಗಿ ಕಾಣಿಸುತ್ತದೆ. ಮನೆಗೆ ಬೀಗ ಹಾಕಿರುತ್ತದೆ. ಒಂದೊಂದು ಮನೆಯಲ್ಲಿ ಒಬ್ಬರೇ ಒಬ್ಬ ವಯಸ್ಸಾದ ವೃದ್ಧ ಅಥವಾ ವೃದ್ಧೆ ಮನೆಯನ್ನು ಕಾಯಲು ಉಳಿದಿರುತ್ತಾರೆ. ಕೆಲವರ ಹೊಲಗಳು ಬೀಡು ಬಿದ್ದಿರುತ್ತವೆ; ಇನ್ನೂ ಕೆಲವರು ತಮ್ಮ ಹೊಲಗಳನ್ನು ಗುತ್ತಿಗೆಗೆ ಕೊಟ್ಟು ಹೋಗುತ್ತಾರೆ. ಕೆಲವರ ಮಕ್ಕಳು ಶಾಲೆಯಿಂದ ದೂರವಾಗಬಹುದು. ಊರಿನ ಜನರಿಗೆ ಆ ಕುಟುಂಬ ಊರು ಬಿಟ್ಟಿರುವುದು ತಿಳಿಯುತ್ತದೆ.

ಆದರೆ, ಉದ್ಯೋಗಕ್ಕಾಗಿ ನಗರಗಳಿಗೆ ತೆರಳುವ ಯುವಕರ ವಲಸೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ವಿದ್ಯಾವಂತ ನಿರುದ್ಯೋಗಿಗಳು ಒಬ್ಬೊಬ್ಬರಾಗಿ ಹೋಗುತ್ತಾರೆ. ಅಲ್ಲಿ ಬಾಡಿಗೆ ಕೊಠಡಿಗಳಲ್ಲಿಯೋ ಅಥವಾ ಪಿಜಿ ಕೇಂದ್ರಗಳಲ್ಲಿಯೋ ವಾಸಿಸುತ್ತಾರೆ. ಕೆಲವರು ಕೆಲಸ ಸಿಗುವವರೆಗೂ ಪರಿಚಿತ ಸ್ನೇಹಿತರೊಂದಿಗೆ ಕೊಠಡಿ ಹಂಚಿಕೊಳ್ಳುತ್ತಾರೆ. ಊಟವನ್ನು ಹಂಚಿಕೊಳ್ಳುತ್ತಾರೆ. ಕಡಿಮೆ ಸಂಬಳದಲ್ಲಿ ಹೆಚ್ಚಿನ ಜೀವನ ವೆಚ್ಚವನ್ನು ನಿಭಾಯಿಸುತ್ತಾರೆ. ಅವರಿಗೆ ಸಿಗುವ ಸಂಬಳ ಜೀವನ ನಿರ್ವಹಣೆಗೆ ಸಾಲುವುದಿಲ್ಲ. ಆದರೂ ಕೆಲಸದ ಒತ್ತಡದ ನಡುವೆ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ.

ಅವರ ಬದುಕಿನ ಹೋರಾಟವು ಹಳ್ಳಿಯಿಂದ ಕುಟುಂಬ ಸಮೇತ ವಲಸೆ ಹೋಗುವವರ ಹೋರಾಟಕ್ಕಿಂತ ಬಹಳ ಭಿನ್ನವಾಗಿರುತ್ತದೆ. ಆದರೆ, ಎರಡೂ ಸಂದರ್ಭಗಳಲ್ಲಿ ಉದ್ಯೋಗ, ಆದಾಯ, ಭವಿಷ್ಯ ಮತ್ತು ಜೀವನದ ಭದ್ರತೆಯ ಪ್ರಶ್ನೆಗಳು ಪ್ರಮುಖವಾಗಿರುತ್ತವೆ.

ಇಲ್ಲಿ ಒಂದು ಸೂಕ್ಷ್ಮವಾದ ವ್ಯತ್ಯಾಸವನ್ನು ಗುರುತಿಸಬೇಕು. ಬಡ ಕುಟುಂಬಗಳು ಕೆಲವೊಮ್ಮೆ ತಕ್ಷಣದ ಆಹಾರ ಮತ್ತು ಜೀವನೋಪಾಯಕ್ಕಾಗಿ ಊರು ಬಿಡಬೇಕಾಗುತ್ತದೆ. ವಿದ್ಯಾವಂತ ಯುವಜನರು ಉದ್ಯೋಗಕ್ಕಾಗಿ ತೆರಳುವಾಗ ತಮ್ಮ ವಿದ್ಯಾರ್ಹತೆಗೆ ತಕ್ಕ ಕೆಲಸ, ಉತ್ತಮ ಸಂಬಳ ಅಥವಾ ವೃತ್ತಿ ಬೆಳವಣಿಗೆಯನ್ನು ನಿರೀಕ್ಷಿಸಬಹುದು. ಆದರೂ, ಸ್ಥಳೀಯವಾಗಿ ಅವಕಾಶಗಳಿಲ್ಲದಿರುವುದು ಇಬ್ಬರನ್ನೂ ತಮ್ಮ ಪರಿಚಿತ ಪರಿಸರದಿಂದ ದೂರ ಮಾಡಬಹುದು.

ಒಬ್ಬರ ವಲಸೆ ಹೊಟ್ಟೆಪಾಡಿನ ಅನಿವಾರ್ಯತೆಯಾಗಿರಬಹುದು; ಮತ್ತೊಬ್ಬರ ವಲಸೆ ವಿದ್ಯಾರ್ಹತೆಗೆ ತಕ್ಕ ಬದುಕಿನ ಹುಡುಕಾಟವಾಗಿರಬಹುದು. ಕಾರಣಗಳು ಬೇರೆಬೇರೆ ಇದ್ದರೂ, ಎರಡರ ಹಿಂದೆಯೂ ಅವಕಾಶಗಳ ಹಂಚಿಕೆ ಮತ್ತು ಜೀವನೋಪಾಯದ ಪ್ರಶ್ನೆಗಳು ಅಡಗಿವೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ.

ವೈದ್ಯರ ವಲಸೆಯೂ ಒಂದು ಸಾಮಾಜಿಕ ಪ್ರಶ್ನೆ

ಇದಕ್ಕೆ ವೈದ್ಯಕೀಯ ಶಿಕ್ಷಣ ಮುಗಿಸಿದ ವೈದ್ಯರ ಬದುಕೂ ಒಂದು ಉದಾಹರಣೆಯಾಗಿ ನೋಡಬಹುದು.

ವೈದ್ಯಕೀಯ ಪದವಿ ಪಡೆದ ಕೆಲವು ವೈದ್ಯರು ಸರ್ಕಾರಿ ಉದ್ಯೋಗದ ಅವಕಾಶಗಳಿದ್ದರೂ ಸ್ವತಂತ್ರ ವೈದ್ಯಕೀಯ ವೃತ್ತಿ ಅಥವಾ ಉತ್ತಮ ವೃತ್ತಿ ಅವಕಾಶಗಳಿಗಾಗಿ ಬೆಂಗಳೂರು, ಹೈದರಾಬಾದ್, ಮುಂಬೈ ಸೇರಿದಂತೆ ದೊಡ್ಡ ನಗರಗಳಿಗೆ ಹಾಗೂ ವಿದೇಶಗಳಿಗೆ ತೆರಳುತ್ತಾರೆ. ಅಲ್ಲಿ ವೈದ್ಯಕೀಯ ಅಭ್ಯಾಸ ಆರಂಭಿಸಿ, ಕ್ರಮೇಣ ತಂದೆ-ತಾಯಿಯರನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗಿ ಅಲ್ಲಿಯೇ ನೆಲೆಸುತ್ತಾರೆ. ಹೀಗೆ ತಮ್ಮ ಮೂಲ ಊರಿನಿಂದ ದೂರವಾಗಿ ಹೊಸ ನಗರದಲ್ಲಿ ಬದುಕು ಕಟ್ಟಿಕೊಳ್ಳುವ ಅವರ ಪ್ರಕ್ರಿಯೆಯೂ ವೃತ್ತಿ ಮತ್ತು ಕುಟುಂಬ ವಲಸೆಯ ಮತ್ತೊಂದು ರೂಪವಾಗಿದೆ ಎಂದೇ ಹೇಳಬಹುದು.

ಆದರೆ, ವೈದ್ಯರು ನಗರಗಳಿಗೆ ತೆರಳುವುದಕ್ಕೆ ಒಂದೇ ಕಾರಣವಿದೆ ಎಂದು ಹೇಳಲಾಗದು. ಉನ್ನತ ವೈದ್ಯಕೀಯ ಶಿಕ್ಷಣ, ತಜ್ಞತೆಯ ಅವಕಾಶಗಳು, ಉತ್ತಮ ಆಸ್ಪತ್ರೆಗಳು, ವೃತ್ತಿ ಸ್ವಾತಂತ್ರ್ಯ ಹಾಗೂ ಕುಟುಂಬದ ಅಗತ್ಯಗಳೂ ಅವರ ನಿರ್ಧಾರಕ್ಕೆ ಕಾರಣವಾಗಬಹುದು.

ಒಂದು ಜಿಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಯುವಕರು ಅಲ್ಲಿಯೇ ಉತ್ತಮ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು, ಸಂಶೋಧನೆ ನಡೆಸಲು ಅಥವಾ ಸ್ವಂತ ವೈದ್ಯಕೀಯ ವೃತ್ತಿ ಆರಂಭಿಸಲು ಅವಕಾಶಗಳಿಲ್ಲದಿದ್ದರೆ, ಅವರು ದೊಡ್ಡ ನಗರಗಳಿಗೆ ತೆರಳುವುದು ಸಹಜ. ಆದರೆ, ಅದೇ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯುವಂತೆ ಮಾಡುವುದು ಸರ್ಕಾರದ ಹೊಣೆಗಾರಿಕೆಯೂ ಆಗಿದೆ.

ಇದೇ ಪ್ರಶ್ನೆ ಎಂಜಿನಿಯರ್‌ಗಳು, ಶಿಕ್ಷಕರು, ವಿಜ್ಞಾನಿಗಳು, ತಂತ್ರಜ್ಞರು ಮತ್ತು ಇತರ ವೃತ್ತಿಪರರಿಗೂ ಅನ್ವಯಿಸುತ್ತದೆ.

ಒಂದು ಪ್ರದೇಶದ ಪ್ರತಿಭಾವಂತರು ಹೊರಹೋಗುವುದನ್ನು ಮಾತ್ರ ಸಮಸ್ಯೆ ಎಂದು ಕರೆಯಲಾಗದು. ಅವರು ತಮ್ಮ ಊರಿನಲ್ಲಿಯೇ ಉಳಿಯಲು ಬಯಸಿದರೆ, ತಮ್ಮ ಅರ್ಹತೆಗೆ ತಕ್ಕ ಅವಕಾಶಗಳು ದೊರೆಯುತ್ತಿವೆಯೇ ಎಂಬುದೇ ಮುಖ್ಯ ಪ್ರಶ್ನೆ.

ತಂದೆ-ತಾಯಿಯರು ಕೂಡ, ‘ನನ್ನ ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ’, ‘ಮಗಳು ಹೈದರಾಬಾದ್‌ನಲ್ಲಿ ಉದ್ಯೋಗದಲ್ಲಿದ್ದಾಳೆ’ ಎಂದೇ ಹೇಳುತ್ತಾರೆ. ಹಾಗೆ ಹೇಳುವುದರಲ್ಲಿ ತಪ್ಪೇನಿಲ್ಲ. ಅದು ಅವರ ಮಕ್ಕಳ ಸಾಧನೆಯೂ ಆಗಿರಬಹುದು.

ಆದರೆ, ತಮ್ಮ ಊರಿನಲ್ಲಿ ಉದ್ಯೋಗಾವಕಾಶಗಳಿಲ್ಲದ ಕಾರಣವೇ ಅವರು ದೂರದ ನಗರಗಳಿಗೆ ತೆರಳಬೇಕಾಯಿತು ಎಂಬ ಪ್ರಶ್ನೆಯನ್ನು ನಾವು ಮರೆಯಬಾರದು. ವಲಸೆಯ ಹೆಸರನ್ನು ಬದಲಾಯಿಸಿದ ಮಾತ್ರಕ್ಕೆ ಅದರ ಹಿಂದಿರುವ ಬದುಕಿನ ಅನಿವಾರ್ಯತೆ ಬದಲಾಗುವುದಿಲ್ಲ.

ಈ ಲೇಖನ ಓದಿದ್ದೀರಾ?: ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ ಗೀತೆಗಳಿವು!

ಆದರೆ, ಎಲ್ಲ ಉದ್ಯೋಗ ವಲಸೆಯೂ ಸಂಕಷ್ಟದಿಂದಲೇ ಉಂಟಾಗುತ್ತದೆ ಎಂದೂ ಹೇಳಲಾಗದು. ಉತ್ತಮ ಅವಕಾಶ, ಹೆಚ್ಚಿನ ಸಂಬಳ, ಉನ್ನತ ಶಿಕ್ಷಣ ಅಥವಾ ವೃತ್ತಿಜೀವನದ ಬೆಳವಣಿಗೆಗಾಗಿ ಸ್ವಯಂಪ್ರೇರಣೆಯಿಂದ ನಗರಗಳಿಗೆ ತೆರಳುವವರೂ ಇದ್ದಾರೆ. ಆದ್ದರಿಂದ, ವಲಸೆಯ ಎಲ್ಲ ರೂಪಗಳನ್ನು ಒಂದೇ ರೀತಿಯಲ್ಲಿ ಅರ್ಥೈಸುವುದಕ್ಕಿಂತ ಅವುಗಳ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳುವುದು ಮುಖ್ಯ.

ಸ್ಥಳೀಯ ಉದ್ಯೋಗಾವಕಾಶಗಳು ಏಕೆ ಮುಖ್ಯ?

ಒಂದು ಜಿಲ್ಲೆಯ ಯುವಕ ವೈದ್ಯಕೀಯ ಶಿಕ್ಷಣ ಪಡೆದು ವೈದ್ಯನಾಗುತ್ತಾನೆ. ಮತ್ತೊಬ್ಬ ಎಂಜಿನಿಯರಿಂಗ್ ಓದಿ ತಾಂತ್ರಿಕ ಪರಿಣತಿ ಗಳಿಸುತ್ತಾನೆ. ಇನ್ನೊಬ್ಬ ಸ್ನಾತಕೋತ್ತರ ಪದವಿ ಪಡೆದು ಉನ್ನತ ಹುದ್ದೆಯ ಕನಸು ಕಾಣುತ್ತಾನೆ.

ಆದರೆ, ಇಂತಹ ಅರ್ಹತೆಗಳನ್ನು ಹೊಂದಿದವರಿಗೆ ತಮ್ಮದೇ ಜಿಲ್ಲೆಯಲ್ಲಿ ಸಮರ್ಪಕ ಉದ್ಯೋಗ, ವೃತ್ತಿ ಬೆಳವಣಿಗೆ ಮತ್ತು ಉತ್ತಮ ಜೀವನಕ್ಕೆ ಅಗತ್ಯವಾದ ಅವಕಾಶಗಳು ದೊರೆಯದಿದ್ದರೆ, ಅವರು ಬೇರೆ ನಗರಗಳತ್ತ ಮುಖ ಮಾಡುವುದು ಸಹಜ.

ಇದನ್ನು ಅವರ ತಪ್ಪು ಎಂದು ಪರಿಗಣಿಸಲಾಗದು. ವ್ಯಕ್ತಿಗೆ ತನ್ನ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಆದರೆ, ಸ್ಥಳೀಯ ಅವಕಾಶಗಳ ಕೊರತೆಯಿಂದ ಪ್ರತಿಭೆ ಹೊರಹೋಗುವ ಪರಿಸ್ಥಿತಿ ಉಂಟಾಗುತ್ತಿದ್ದರೆ, ಅದನ್ನು ಸರಿಪಡಿಸುವ ಪ್ರಯತ್ನವೂ ಅಗತ್ಯ.

ಒಂದು ಜಿಲ್ಲೆಯ ಯುವಜನರು ಉದ್ಯೋಗಕ್ಕಾಗಿ ನಿರಂತರವಾಗಿ ಮಹಾನಗರಗಳಿಗೆ ತೆರಳುತ್ತಿದ್ದರೆ, ಆ ಜಿಲ್ಲೆಯಲ್ಲಿ ಕೈಗಾರಿಕೆಗಳ ಬೆಳವಣಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸ್ಥಿತಿ, ಕೌಶಲ್ಯ ತರಬೇತಿ, ಸ್ಥಳೀಯ ಉದ್ಯೋಗ ಸೃಷ್ಟಿ ಮತ್ತು ವೃತ್ತಿಪರ ಅವಕಾಶಗಳ ಕುರಿತು ಸರ್ಕಾರಗಳು ಗಂಭೀರವಾಗಿ ಚಿಂತಿಸಬೇಕು.

ಒಂದು ಊರಿನ ಅಭಿವೃದ್ಧಿಯನ್ನು ಅಳೆಯುವುದು ಅಲ್ಲಿ ಎಷ್ಟು ಜನರು ಹುಟ್ಟಿದ್ದಾರೆ ಎಂಬುದರಿಂದ ಮಾತ್ರವಲ್ಲ; ಅಲ್ಲಿನ ಯುವಜನರು ತಮ್ಮ ಪ್ರತಿಭೆಗೆ ತಕ್ಕ ಭವಿಷ್ಯವನ್ನು ರೂಪಿಸಿಕೊಳ್ಳಲು ಎಷ್ಟು ಅವಕಾಶಗಳಿವೆ ಎಂಬುದರಿಂದಲೂ ಆಗಬೇಕು.

ಅದೇ ರೀತಿ, ವಿದ್ಯಾವಂತ ಯುವಜನರು ತಮ್ಮ ಜಿಲ್ಲೆಗಳಲ್ಲಿ ಉದ್ಯೋಗ ಪಡೆಯಲಾಗದೆ ಮಹಾನಗರಗಳಿಗೆ ತೆರಳುತ್ತಿದ್ದರೆ, ಆ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ಬೆಳವಣಿಗೆ, ಕೌಶಲ್ಯ ತರಬೇತಿ ಮತ್ತು ಸ್ಥಳೀಯ ಉದ್ಯಮಗಳಿಗೆ ಬೆಂಬಲ ನೀಡುವ ಕುರಿತು ಚಿಂತಿಸಬೇಕು.

ಜನರು ತಮ್ಮ ಊರು ಬಿಟ್ಟು ಹೋಗುವುದನ್ನು ತಪ್ಪಿಸುವುದೇ ಎಲ್ಲ ಸಂದರ್ಭಗಳಲ್ಲಿಯೂ ಪರಿಹಾರವಲ್ಲ. ಅವರು ತಮ್ಮ ಇಚ್ಛೆಯಂತೆ ಬೇರೆಡೆಗೆ ಹೋಗುವ ಸ್ವಾತಂತ್ರ್ಯ ಹೊಂದಿರಬೇಕು. ಆದರೆ, ಬದುಕಲು ಬೇರೆ ದಾರಿಯೇ ಇಲ್ಲದ ಕಾರಣ ಊರು ಬಿಡಬೇಕಾದ ಅನಿವಾರ್ಯತೆಯನ್ನು ಕಡಿಮೆ ಮಾಡುವುದು ಸರ್ಕಾರದ ಹಾಗೂ ಸಮಾಜದ ಹೊಣೆಗಾರಿಕೆಯಾಗಿದೆ.

ಹಳ್ಳಿಗಳಲ್ಲಿ ಕೃಷಿ ಮಾತ್ರವಲ್ಲದೆ ಕೃಷಿ ಆಧಾರಿತ ಕೈಗಾರಿಕೆಗಳು, ಆಹಾರ ಸಂಸ್ಕರಣಾ ಘಟಕಗಳು, ಸಣ್ಣ ಉದ್ಯಮಗಳು ಮತ್ತು ಕೌಶಲ್ಯಾಧಾರಿತ ಉದ್ಯೋಗಗಳಿಗೆ ಅವಕಾಶ ಕಲ್ಪಿಸಬೇಕು. ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತು ಮೂಲಸೌಕರ್ಯಗಳನ್ನು ಬಲಪಡಿಸಬೇಕು.

ವಿದ್ಯಾವಂತ ಯುವಜನರಿಗಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಬೇಕು. ವೈದ್ಯರು ಸೇರಿದಂತೆ ವೃತ್ತಿಪರರು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಅನುಕೂಲವಾಗುವ ಮೂಲಸೌಕರ್ಯ ಮತ್ತು ವೃತ್ತಿ ಬೆಳವಣಿಗೆಯ ಅವಕಾಶಗಳನ್ನು ಕಲ್ಪಿಸಬೇಕು.

ಉದ್ಯೋಗ ಸೃಷ್ಟಿ ಎಂದರೆ ಕೇವಲ ಉದ್ಯೋಗಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲ; ಗೌರವಯುತ ಸಂಬಳ, ಉದ್ಯೋಗದ ಸ್ಥಿರತೆ ಮತ್ತು ಉತ್ತಮ ಕೆಲಸದ ವಾತಾವರಣವನ್ನೂ ಖಚಿತಪಡಿಸುವುದು ಅಗತ್ಯ.

‘Beyond Bengaluru’ ಮತ್ತು ವಲಸೆಯ ಪ್ರಶ್ನೆ

ಕರ್ನಾಟಕ ಸರ್ಕಾರದ ‘Beyond Bengaluru’ ಪರಿಕಲ್ಪನೆಯು ವಲಸೆಯ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಉದ್ಯೋಗ, ಕೈಗಾರಿಕೆ ಮತ್ತು ತಂತ್ರಜ್ಞಾನ ಕ್ಷೇತ್ರದ ಅವಕಾಶಗಳು ಬೆಂಗಳೂರಿನಲ್ಲೇ ಕೇಂದ್ರೀಕೃತವಾಗದೆ ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ ರಾಜ್ಯದ ಇತರ ನಗರಗಳಿಗೂ ವಿಸ್ತರಿಸಬೇಕು ಎಂಬುದು ಈ ಪರಿಕಲ್ಪನೆಯ ಆಶಯ.

ಇಂತಹ ಪ್ರಯತ್ನಗಳು ಪರಿಣಾಮಕಾರಿಯಾಗಿ ಜಾರಿಯಾದರೆ, ಉದ್ಯೋಗಕ್ಕಾಗಿ ತಮ್ಮ ಊರುಗಳನ್ನು ತೊರೆಯಬೇಕಾದ ಅನೇಕ ಯುವಜನರಿಗೆ ಸ್ಥಳೀಯವಾಗಿಯೇ ಅವಕಾಶಗಳು ದೊರೆಯಬಹುದು. ಆದರೆ, ಕೈಗಾರಿಕೆಗಳನ್ನು ಸ್ಥಾಪಿಸುವುದಷ್ಟೇ ಸಾಕಾಗುವುದಿಲ್ಲ; ಸ್ಥಳೀಯ ಯುವಜನರಿಗೆ ಸೂಕ್ತ ಕೌಶಲ್ಯ ತರಬೇತಿ, ಅರ್ಹತೆಗೆ ತಕ್ಕ ಉದ್ಯೋಗ, ನ್ಯಾಯಯುತ ವೇತನ ಮತ್ತು ದೀರ್ಘಕಾಲಿಕ ಉದ್ಯೋಗ ಭದ್ರತೆಯೂ ಅಗತ್ಯ.

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ಗ್ರಾಮೀಣ ಉದ್ಯೋಗವನ್ನು ಬಲಪಡಿಸುವುದರ ಜೊತೆಗೆ ನಗರಗಳಾಚೆಗೂ ಉದ್ಯೋಗಾವಕಾಶಗಳನ್ನು ವಿಸ್ತರಿಸಿದಾಗ ಮಾತ್ರ ವಲಸೆಯ ಅನಿವಾರ್ಯತೆಯನ್ನು ತಗ್ಗಿಸಲು ಸಾಧ್ಯ.

ಹೀಗಾಗಿ ಪ್ರಶ್ನೆ ಕೇವಲ ಜನರು ಏಕೆ ವಲಸೆ ಹೋಗುತ್ತಾರೆ ಎಂಬುದಷ್ಟೇ ಅಲ್ಲ; ಅವರು ತಮ್ಮ ನೆಲದಲ್ಲಿಯೇ ಗೌರವಯುತವಾಗಿ ಬದುಕಲು ಅಗತ್ಯವಾದ ಅವಕಾಶಗಳನ್ನು ನಾವು ಸೃಷ್ಟಿಸಿದ್ದೇವೆಯೇ ಎಂಬುದೂ ಆಗಿದೆ.

ವಲಸೆಯನ್ನು ವರ್ಗದ ಆಧಾರದಲ್ಲಿ ನೋಡಬಾರದು

ಹಳ್ಳಿಯ ಕಾರ್ಮಿಕನೂ ದುಡಿದು ಬದುಕುವ ಕನಸು ಹೊಂದಿರುತ್ತಾನೆ. ನಗರದ ಉದ್ಯೋಗಿಯೂ ತನ್ನ ಪರಿಶ್ರಮದಿಂದ ಬದುಕು ಕಟ್ಟಿಕೊಳ್ಳಲು ಬಯಸುತ್ತಾನೆ. ಒಬ್ಬನು ದೈಹಿಕ ಶ್ರಮದ ಮೂಲಕ ಜೀವನ ಸಾಗಿಸಿದರೆ, ಮತ್ತೊಬ್ಬನು ತನ್ನ ತಾಂತ್ರಿಕ ಜ್ಞಾನ, ಪದವಿ ಅಥವಾ ವೃತ್ತಿಪರ ಕೌಶಲ್ಯದ ಮೂಲಕ ಬದುಕು ಕಟ್ಟಿಕೊಳ್ಳುತ್ತಾನೆ.

ಇಬ್ಬರ ಕೆಲಸದ ಸ್ವರೂಪ ಬೇರೆ ಇರಬಹುದು. ಅವರ ಆದಾಯ, ಸೌಲಭ್ಯ ಮತ್ತು ಸಾಮಾಜಿಕ ಸ್ಥಾನಮಾನಗಳೂ ಬೇರೆ ಇರಬಹುದು. ಆದರೆ, ಇಬ್ಬರ ಬದುಕಿನಲ್ಲಿಯೂ ಉದ್ಯೋಗ ಮತ್ತು ಜೀವನೋಪಾಯಕ್ಕೆ ಮಹತ್ವವಿದೆ.

ಹೀಗಾಗಿ, ಬಡ ಕುಟುಂಬಗಳು ಊರು ಬಿಟ್ಟರೆ ಅದನ್ನು ಕೇವಲ ವಲಸೆ ಎಂದು ಕರೆದು, ವಿದ್ಯಾವಂತರು ನಗರಗಳಿಗೆ ಹೋದರೆ ಅದನ್ನು ಕೇವಲ ಉದ್ಯೋಗ ಎಂದು ಗುರುತಿಸುವುದರಲ್ಲಿರುವ ಸಾಮಾಜಿಕ ದೃಷ್ಟಿಕೋನವನ್ನು ಪ್ರಶ್ನಿಸಬೇಕಾಗಿದೆ.

ವಲಸೆಯನ್ನು ಅರ್ಥಮಾಡಿಕೊಳ್ಳಲು ವ್ಯಕ್ತಿಯ ಪದವಿ, ಉಡುಗೆ, ಕೈಯಲ್ಲಿರುವ ಬ್ಯಾಗ್ ಅಥವಾ ಆತ ತೆರಳುವ ನಗರದ ಹೆಸರಿಗಿಂತ, ಆತ ಏಕೆ ತನ್ನ ನೆಲೆಯಿಂದ ಹೊರಡುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ವಲಸೆ ಎನ್ನುವುದು ಕೇವಲ ಊರು ಬಿಡುವ ಘಟನೆಯಲ್ಲ; ಅದು ಬದುಕಿನ ಅವಕಾಶಗಳು ಎಲ್ಲಿವೆ, ಅವು ಯಾರಿಗೆ ದೊರೆಯುತ್ತವೆ ಮತ್ತು ಯಾರಿಗೆ ದೊರೆಯುವುದಿಲ್ಲ ಎಂಬುದನ್ನು ತಿಳಿಸುವ ಸಾಮಾಜಿಕ ಕನ್ನಡಿ.

ಹಳ್ಳಿಯ ಕಾರ್ಮಿಕನ ವಲಸೆಯ ಹಿಂದಿರುವ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳುವಂತೆಯೇ, ಉದ್ಯೋಗಕ್ಕಾಗಿ ಮಹಾನಗರಗಳಿಗೆ ತೆರಳುವ ವಿದ್ಯಾವಂತ ಯುವಜನರ ಪರಿಸ್ಥಿತಿಯನ್ನೂ ಅರ್ಥಮಾಡಿಕೊಳ್ಳಬೇಕು.

ಒಬ್ಬನು ಕುಟುಂಬ ಸಮೇತ ಊರು ಬಿಡುತ್ತಾನೆ; ಮತ್ತೊಬ್ಬನು ಒಬ್ಬನೇ ಬ್ಯಾಗ್ ಹೊತ್ತು ಹೊರಡುತ್ತಾನೆ. ಒಬ್ಬನಿಗೆ ಗುಳೆ ಎಂಬ ಹೆಸರು ಸಿಗುತ್ತದೆ; ಮತ್ತೊಬ್ಬನಿಗೆ ಉದ್ಯೋಗ ಎಂಬ ಗುರುತು ಸಿಗುತ್ತದೆ. ಆದರೆ, ಇಬ್ಬರ ಬದುಕಿನ ಹಿಂದೆಯೂ ದುಡಿಮೆ, ನಿರೀಕ್ಷೆ ಮತ್ತು ಉತ್ತಮ ಭವಿಷ್ಯದ ಹುಡುಕಾಟ ಇರಬಹುದು.

ವಲಸೆಯನ್ನು ಬಡತನದ ಗುರುತಾಗಿ ಅಥವಾ ಯಶಸ್ಸಿನ ಸಂಕೇತವಾಗಿ ಮಾತ್ರ ನೋಡಬಾರದು. ಅದರ ಹಿಂದಿರುವ ಕಾರಣಗಳನ್ನು ಅರ್ಥಮಾಡಿಕೊಳ್ಳಬೇಕು. ಕೆಲವರಿಗೆ ವಲಸೆ ಸ್ವಯಂಪ್ರೇರಿತ ಆಯ್ಕೆಯಾಗಿರಬಹುದು; ಇನ್ನು ಕೆಲವರಿಗೆ ಅದು ಬದುಕಿನ ಅನಿವಾರ್ಯತೆಯಾಗಿರಬಹುದು.

ಸರ್ಕಾರಗಳು ಉದ್ಯೋಗ ಸೃಷ್ಟಿ, ಕೈಗಾರಿಕೆಗಳ ವಿಕೇಂದ್ರೀಕರಣ, ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಮತ್ತು ಸ್ಥಳೀಯ ಉದ್ಯಮಗಳ ಬೆಳವಣಿಗೆಗೆ ಆದ್ಯತೆ ನೀಡಬೇಕು. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿಯೇ ಅರ್ಹತೆಗೆ ತಕ್ಕ ಉದ್ಯೋಗಾವಕಾಶಗಳನ್ನು ವಿಸ್ತರಿಸಬೇಕು.

ಜನರು ತಮ್ಮ ಊರು ಬಿಟ್ಟು ಹೋಗುವುದೇ ಸಮಸ್ಯೆಯಲ್ಲ; ಬದುಕಲು ಬೇಕಾದ ಅವಕಾಶಗಳು ತಮ್ಮ ಊರಿನಲ್ಲಿ ಸಿಗದ ಕಾರಣ ಅವರು ಅನಿವಾರ್ಯವಾಗಿ ಹೊರಡಬೇಕಾಗುವ ಪರಿಸ್ಥಿತಿಯೇ ಚಿಂತಿಸಬೇಕಾದ ಸಂಗತಿ.

ಹಳ್ಳಿಯ ಕಾರ್ಮಿಕನಾಗಿರಲಿ, ನಗರಕ್ಕೆ ತೆರಳುವ ಎಂಜಿನಿಯರ್ ಆಗಿರಲಿ ಅಥವಾ ಉತ್ತಮ ವೃತ್ತಿ ಅವಕಾಶಕ್ಕಾಗಿ ಬೇರೆ ನಗರಕ್ಕೆ ಹೋಗುವ ವೈದ್ಯನಾಗಿರಲಿ—ಪ್ರತಿಯೊಬ್ಬರಿಗೂ ತಮ್ಮ ಪರಿಶ್ರಮಕ್ಕೆ ತಕ್ಕ ಬದುಕು ಕಟ್ಟಿಕೊಳ್ಳುವ ಅವಕಾಶ ಇರಬೇಕು.

ಹಾಗಾದರೆ, ಮತ್ತೆ ಅದೇ ಪ್ರಶ್ನೆ: ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ ವಲಸಿಗರೇ?

ಹೌದು. ವಲಸೆಯ ರೂಪ ಬೇರೆ ಇರಬಹುದು; ಅದರ ಕಾರಣಗಳು ಬೇರೆ ಇರಬಹುದು. ಆದರೆ, ಪ್ರತಿಯೊಬ್ಬರ ಬದುಕಿನ ಹಿಂದಿರುವ ವಾಸ್ತವವನ್ನು ಅರ್ಥಮಾಡಿಕೊಳ್ಳುವ ಸಾಮಾಜಿಕ ದೃಷ್ಟಿಕೋನ ನಮಗೆ ಅಗತ್ಯ.

ಜನರು ತಮ್ಮ ಊರಿನಲ್ಲಿಯೇ ಗೌರವದಿಂದ ಬದುಕಲು ಅವಕಾಶ ಕಲ್ಪಿಸುವುದರ ಜೊತೆಗೆ, ಬೇರೆಡೆಗೆ ತೆರಳುವವರಿಗೂ ಗೌರವಯುತ ಬದುಕು ದೊರೆಯುವಂತೆ ಮಾಡುವುದು ನಿಜವಾದ ಅಭಿವೃದ್ಧಿಯ ಮಾನದಂಡವಾಗಬೇಕು.

ಜನರು ತಮ್ಮ ಊರನ್ನು ಪ್ರೀತಿಯಿಂದ ಆಯ್ಕೆ ಮಾಡಿಕೊಂಡು ಅಲ್ಲಿಯೇ ಬದುಕುವಂತೆಯೂ, ಬೇರೆ ಊರಿಗೆ ಹೋಗಲು ಬಯಸಿದರೆ ಗೌರವಯುತವಾಗಿ ಬದುಕುವಂತೆಯೂ ಅವಕಾಶಗಳನ್ನು ನಿರ್ಮಿಸುವ ಸಮಾಜವೇ ನಿಜವಾದ ಪ್ರಗತಿಪರ ಸಮಾಜ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಪಾವಳಿ ವ್ಯಾಪಾರಕ್ಕೆ ₹10,000 ಕೋಟಿ ನಷ್ಟದ ಆತಂಕ; ರಾಹುಲ್‌ ಗಾಂಧಿಗೆ ರ್ಯಾಲಿ ಮುಂದೂಡಲು CTI ಮನವಿ

ದೀಪಾವಳಿ ಹಬ್ಬದ ಖರೀದಿ ಭರಾಟೆಯ ನಡುವೆಯೇ ನವೆಂಬರ್‌ 1ರಂದು ದೆಹಲಿಯ ರಾಮಲೀಲಾ...

ಜಾಮಿಯಾ ಮಿಲಿಯಾ ವಿವಿಯಲ್ಲಿ ‘ವಿದ್ಯಾರ್ಥಿ ಸಂಘ’ದ ಚುನಾವಣೆಗಾಗಿ ಪ್ರತಿಭಟನೆ: ಬೆಂಬಲ ನೀಡಿದ್ದ ಕಾಂಗ್ರೆಸ್‌, ಎಸ್‌ಪಿ ಸಂಸದರ ಬಂಧನ

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ (JMISU) ಚುನಾವಣೆಯನ್ನು...

ತಿಪಟೂರು | ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ; ತೆರಿಗೆ ಸೋರಿಕೆ ಆರೋಪ!

ತಿಪಟೂರು ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ ಜೋರಿದೆ. ಟೆಂಡರ್ ದರ...