ಭಾರತದಾದ್ಯಂತ ಮುಂಗಾರು ಮಾರುತಗಳು ಸಂಪೂರ್ಣವಾಗಿ ಸಕ್ರಿಯಗೊಂಡಿವೆ. ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ದಕ್ಷಿಣ ಭಾರತದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದರೆ, ಉತ್ತರ ಮತ್ತು ಪೂರ್ವ ಭಾರತದ ರಾಜ್ಯಗಳಲ್ಲಿ ಭಾರಿ ಬಿರುಗಾಳಿ ಬೀಸುತ್ತಿದೆ.
ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ರಾಜ್ಯಾದ್ಯಂತ ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ವಿವರಿಸಿದೆ.
ವಿಶೇಷವಾಗಿ, ಕಲಬುರಗಿ, ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಮಳೆ ಅಬ್ಬರ ಹೆಚ್ಚಿರಲಿದ್ದು, ಈ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಗಾಳಿಯು ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.
ಇನ್ನು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಜೋರು ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ತಿಳಿಸಿದೆ.
ಈಗಾಗಲೇ ಆರಂಭವಾಗಿರುವ ಮುಂಗಾರು ಮಳೆಯ ಹೊಡೆತಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಲು ಸಾಲು ಅನಾಹುತಗಳು ಸೃಷ್ಟಿಯಾಗಿವೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆ ಸಾರ್ವಜನಿಕರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ರಸ್ತೆಗಳೆಲ್ಲ ಕೆರೆಗಳಂತಾಗಿ ಮಾರ್ಪಟ್ಟಿದ್ದು, ದ್ವಿಚಕ್ರ ವಾಹನಗಳು ನೀರಿನಲ್ಲಿ ತೇಲಿ ಹೋಗಿವೆ. ಎಪಿಎಂಸಿ ರಸ್ತೆಯಲ್ಲಿರುವ ಫೋಟೋ ಸ್ಟುಡಿಯೋ, ರೇಡಿಯಂ ಸ್ಟಿಕರಿಂಗ್ ಶಾಪ್, ಜೆಸಿಬಿ ಸ್ಪೇರ್ ಪಾರ್ಟ್ಸ್ ಹಾಗೂ ಲೇತ್ ವರ್ಕ್ ಮಷೀನ್ ಸೇರಿದಂತೆ ಐದು ಪ್ರಮುಖ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ.
ಬಾಗಲಕೋಟೆ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ನಾವಲಗಿ ಗ್ರಾಮದ ಬಳಿ ಹಳ್ಳದ ನೀರು ಧುಮ್ಮಿಕ್ಕಿ ಹರಿಯುತ್ತಿರುವುದನ್ನು ಕಂಡು ಹರ್ಷಗೊಂಡ ರೈತರು, ಮುಂಗಾರು ಮಳೆಯನ್ನು ಬರಮಾಡಿಕೊಳ್ಳುತ್ತಾ ಸಾಂಪ್ರದಾಯಿಕ ‘ಹಂತಿ ಪದ’ ಹಾಡಿ ಸಂಭ್ರಮಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ನಿರಂತರ ಮಳೆಗೆ ಅಳವಂಡಿ ಗ್ರಾಮದ ಬಳಿ ಇರುವ ಹಿರೇಹಳ್ಳ ಚೆಕ್ ಡ್ಯಾಂ ಒಡೆದು ಹೋಗಿದೆ. ಪರಿಣಾಮವಾಗಿ, ನದಿಯ ನೀರು ಪಕ್ಕದ ಜಮೀನುಗಳಿಗೆ ನುಗ್ಗಿದ್ದು, ರೈತರು ಕಷ್ಟಪಟ್ಟು ಬೆಳೆದಿದ್ದ ಲಕ್ಷಾಂತರ ಮೌಲ್ಯದ ದಾಳಿಂಬೆ ಬೆಳೆ ಸಂಪೂರ್ಣ ನಾಶವಾಗಿದೆ.
ಈ ಲೇಖನ ಓದಿದ್ದೀರಾ?: ವಿಪಕ್ಷಗಳಲ್ಲಿ ಒಡಕು: ಸಂಸತ್ ಮಳೆಗಾಲದ ಅಧಿವೇಶನದಲ್ಲಿ ಮತ್ತೆ ಬರಲಿದೆಯೇ ‘ಡಿಲಿಮಿಟೇಷನ್’ ಮಸೂದೆ?
ಅಂತೆಯೇ, ಕೇರಳ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಮುಂಗಾರು ಮಳೆ ಆರ್ಭಟ ಹೆಚ್ಚಾಗಿದೆ. ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ಚಂಡಮಾರುತದ ತೀವ್ರತೆಯುಳ್ಳ ಬಿರುಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ದಕ್ಷಿಣದ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನ ಕರಾವಳಿ ತೀರ ಪ್ರದೇಶಗಳಿಗೆ ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಜೂನ್ 10 ಮತ್ತು 11 ರಂದು ಭಾರಿ ಮಳೆ ಹಾಗೂ ಧೂಳಿನ ಬಿರುಗಾಳಿ ಏಳುವ ಸಾಧ್ಯತೆಯಿದೆ. ಗಂಟೆಗೆ 60 ರಿಂದ 65 ಕಿಲೋಮೀಟರ್ ವೇಗದಲ್ಲಿ ಬೀಸಲಿರುವ ಈ ಗಾಳಿಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಮರಗಳು ಉರುಳಿ ಸಂಚಾರಕ್ಕೆ ಅಡ್ಡಿಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ಉತ್ತರ ಪ್ರದೇಶದ* ಮೀರತ್, ಗಾಜಿಯಾಬಾದ್, ಆಗ್ರಾ, ಕಾನ್ಪುರ, ವಾರಣಾಸಿ, ಗೋರಖ್‌ಪುರ ಮತ್ತು ಪ್ರಯಾಗ್‌ರಾಜ್ ಜಿಲ್ಲೆಗಳಲ್ಲಿ ಗಂಟೆಗೆ 70 ರಿಂದ 75 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗೋಧಿ ಹಾಗೂ ತರಕಾರಿ ಬೆಳೆಗಳಿಗೆ ಹಾನಿಯಾಗುವ ಭೀತಿಯಿದೆ.
ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ 70ರಿಂದ 80 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಈ ರಾಜ್ಯಗಳ ಹಲವು ಜಿಲ್ಲಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯುತೆ ಇದೆ.




