ಮುಖ್ಯ ರಸ್ತೆಯಿಂದ ತಿರುಗಿ ಸ್ವಲ್ಪ ದೂರ ಪ್ರಯಾಣಿಸುವಷ್ಟರಲ್ಲಿ ಬಿಸಿಲು ಏರಿದ್ದರೂ ದಟ್ಟ ಕಾಡಿನ ನಡುವಿನ ದಾರಿ ತಂಪಾಗಿತ್ತು. ಒಂದೆರಡು ಕಿಲೋಮೀಟರ್ ದಾರಿ ಸವೆಸಿದಾಗ ಕಂಡ ಗೇಟಿನ ಬದಿಯಲ್ಲಿ ಗಾಡಿ ನಿಲ್ಲಿಸಿ ಕೆಳಗಿಳಿದಾಗ ಗೇಟಿನ ಒಳಗೆ ಕಾಫಿ ತೋಟಕ್ಕೆ ಹಾಯಿಸುತ್ತಿದ್ದ ತುಂತುರು ನೀರಾವರಿಯಿಂದಾಗಿ ವಾತಾವರಣ ಮತ್ತಷ್ಟು ತಂಪೆನಿಸಿತು. ಗೇಟು ತೆರೆದು ತೋಟದ ಮದ್ಯದ ಇಳಿಜಾರಿನ ಹಾದಿಯಲ್ಲಿ ನಡೆಯುವಾಗ ಎರಡೂ ಬದಿಯಲ್ಲಿ ನಳನಳಿಸುತ್ತಿದ್ದ ಕಾಫಿ ಗಿಡಗಳು, ಮೆಣಸಿನ ಬಳ್ಳಿಗಳು ತೋಟದ ರೈತರು ಉತ್ತಮ ಕೃಷಿಕರೆಂಬುದನ್ನು ಹೇಳುತ್ತಿದ್ದವು.
ನೂರಿನ್ನೂರು ಮೀಟರುಗಳಷ್ಟು ನಡೆದು ಅಂಗಳ ತಲುಪಿದಾಗ ವಿಶಾಲವಾದ ಅಂಗಳ. ಒಂದು ಪಕ್ಕದ ಹೂವಿನ ಗಿಡಗಳು, ಮತ್ತೊಂದು ಪಕ್ಕದ ತರಕಾರಿ ಹಿತ್ತಲು ಮನಸೆಳೆಯುವಂತಿದ್ದವು. ಅಂಗಳದ ಪಕ್ಕದ ಇಳಿಜಾರಿನ ಹೊಂಡದಲ್ಲಿ ಕಾಣುತ್ತಿದ್ದ ಅಡಿಕೆ ಮರಗಳು ಮಾತ್ರ ಎಲೆಚುಕ್ಕಿ ರೋಗದಿಂದ ಸೋತುಹೋದಂತೆ ಹೆಡಲುಗಳನ್ನು ಕೆಳಗೆ ಇಳಿಬಿಟ್ಟು ನಿಂತಿದ್ದವು.
ಅಪ್ಪಟ ಮಲೆನಾಡಿನ ಶೈಲಿಯ ಹೆಂಚಿನ ಮನೆ ಹಸಿರಿನ ನಡುವೆ ಸುಂದರವಾಗಿ ಕಾಣುತ್ತಿತ್ತು. ಬನ್ನಿ ಬನ್ನಿ ಎಂಬ ಸ್ವಾಗತದೊಂದಿಗೆ ವಿಶಾಲ ಜಗುಲಿಯ ಕಟ್ಟೆಯ ಮೇಲೆ ಕುಳಿತೆವು.
ಬೆಂಗಳೂರಿನ ಮಾದ್ಯಮ ಮಿತ್ರರೊಬ್ಬರು ಮಲೆನಾಡಿನ ಸಮಸ್ಯೆಗಳ ಬಗ್ಗೆ ತಿಳಿಯಬೇಕೆಂದು ಒಂದೆರಡು ದಿನಗಳ ಪ್ರವಾಸಕ್ಕೆ ಬಂದಿದ್ದರು. ಮಲೆನಾಡಿನ ಸಮಸ್ಯೆಗಳ ಬಗೆಗೆ ಮಾತನಾಡಲು ಆ ರೈತರ ಮನೆಗೆ ಬಂದಿದ್ದೆವು.

ಸುಮಾರು ಅರವತೈದು ವರ್ಷ ವಯಸ್ಸಿನ ಅವರು ಕೃಷಿ ಪ್ರಾರಂಭಿಸಿದ್ದು, ಎಂಬತ್ತರ ದಶಕದಲ್ಲಿ. ಅವರ ಪಾಲಿಗೆ ಬಂದಿದ್ದು ಅರ್ಧ ಎಕರೆಯಷ್ಟು ಅಡಿಕೆ ತೋಟ, ಸ್ವಲ್ಪ ಗದ್ದೆ, ಮತ್ತೆ ಹಳೆಯ ಮನೆ. ಆ ವೇಳೆಗಾಗಲೇ ಅವರ ಊರಿನ ಕೆಲವು ತೋಟಗಳಲ್ಲಿ ಅಡಿಕೆಗೆ ಹಳದಿ ಎಲೆ ರೋಗ ಕಾಣಿಸಿಕೊಂಡಿತ್ತು. ಕೆಲವು ತೋಟಗಳಲ್ಲಿ ಇಳುವರಿ ಸಂಪೂರ್ಣ ಕಡಿಮೆಯಾಗಿತ್ತು. ಅಡಿಕೆ ಬೆಳೆಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬ ಅರಿವು ಅವರಿಗಿತ್ತು. ಮನೆಯ ಪಕ್ಕದಲ್ಲಿಯೇ ಮೂರ್ನಾಲ್ಕು ಎಕರೆಯಷ್ಟು ಹಾಡ್ಯ ಅವರ ಹಿಡುವಳಿಯಲ್ಲಿಯೇ ಇತ್ತು. ಕೃಷಿಯಲ್ಲಿಯೇ ಬದುಕು ಕಟ್ಟಿಕೊಳ್ಳಬೇಕೆಂಬ ಗಟ್ಟಿ ನಿರ್ಧಾರಕ್ಕೆ ಬಂದಿದ್ದರು.
ಅವರ ಪ್ರದೇಶ ಸಾಂಪ್ರದಾಯಿಕ ಕಾಫಿ ಬೆಳೆ ಪ್ರದೇಶವಲ್ಲ. ಆದರೂ ನಾಲ್ಕು ಎಕರೆ ಹಾಡ್ಯವನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿದರು. ಕಾಡು ಮರಗಳಿಗೆ ಮೆಣಸು ಹಬ್ಬಿಸಿದರು ಕಠಿಣ ಪರಿಶ್ರಮಿಯಾಗಿದ್ದ ಅವರಿಗೆ ಬಾಳ ಸಂಗಾತಿಯೂ ಜೊತೆಗೂಡಿದ್ದರಿಂದ ಉತ್ತಮ ತೋಟ ಮಾಡಿ ಒಳ್ಳೆಯ ಬದುಕು ಕಟ್ಟಿಕೊಂಡರು. ಮೂರ್ನಾಲ್ಕು ಗಂಟೆಗಳ ಮಾತುಕತೆಯಲ್ಲಿ ಮಲೆನಾಡಿನ ಹಲವು ಸಮಸ್ಯೆಗಳ ವಿವಿಧ ಮಗ್ಗಲುಗಳು ತೆರೆದುಕೊಂಡವು. ವಿಷಾದದಿಂದ ನಿಟ್ಟುಸಿರಿಟ್ಟು ಅವರು ಹೇಳಿದ ಮಾತೊಂದು ಮುಖ್ಯ ಸಮಸ್ಯೆಯನ್ನು ತೆರೆದಿಟ್ಟಿತು. ʼಪ್ರಕೃತಿ ಯ ಜೊತೆಗೆ ಏಗಬಹುದು. ಆದರೆ, ಸರ್ಕಾರದ ಜೊತೆಗೆ ಏಗೋದು ಕಷ್ಟʼ.
ಅವರು ತೋಟ ಮಾಡಿರುವ ಹಾಡ್ಯದ ಜಾಗ ಸರ್ಕಾರಿ ದಾಖಲೆಗಳ ಪ್ರಕಾರ ಸೊಪ್ಪಿನ ಬೆಟ್ಟ ಎಂದಿತ್ತು. ಎಲ್ಲಾ ಬಗರ್ ಹುಕುಂ ಸಾಗುವಳಿದಾರರಂತೆ ಇವರೂ ಅರ್ಜಿ ನಮೂನೆ 53ರಲ್ಲಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದರು. ನಿಧಾನಗತಿಯ ಸರ್ಕಾರಿ ಯಂತ್ರದ ಚಲನೆಯಿಂದಾಗಿ ಇವರ ಅರ್ಜಿ ಅಕ್ರಮ ಸಕ್ರಮ ಸಮಿತಿಯ ಮುಂದೆ ಬರುವಷ್ಟರಲ್ಲಿ ಅವರ ಗ್ರಾಮದ ಹಲವಾರು ಸರ್ವೆ ನಂಬರ್ ಗಳ ಪ್ರದೇಶವನ್ನು ಅರಣ್ಯ ಇಲಾಖೆಗೆ ಸೇರ್ಪಡೆ ಮಾಡಲು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಕೆಲವರು ಲಂಚದ ಮೂಲಕ ಹಕ್ಕುಪತ್ರ ಪಡೆದುಕೊಂಡರು. ತಮ್ಮ ಅರ್ಜಿ ನ್ಯಾಯಯುತವಾಗಿದೆಯೆಂದೂ ಭೌತಿಕ ಪರಿಶೀಲನೆ ನಡೆಸಿದರೆ ಮಂಜೂರು ಮಾಡಲೇಬೇಕಾಗುತ್ತದೆಂದೂ ನಂಬಿದ್ದ ಇವರು ಲಂಚ ಕೊಟ್ಟು ಮಂಜೂರಾತಿ ಮಾಡಿಸಲು ಪ್ರಯತ್ನಿಸಲಿಲ್ಲ. ಸಾಗುವಳಿ ಮಾಡುತ್ತಾ ನಲವತ್ತು ವರ್ಷಗಳಾಗಿದ್ದರೂ ಇವರ ಜಮೀನಿಗೆ ಹಕ್ಕುಪತ್ರ ಸಿಕ್ಕಿಲ್ಲ. ಈಗ ಅದು ಮೀಸಲು ಅರಣ್ಯವಾಗಿ ಘೋಷಣೆಯಾಗುವ ಹಂತದಲ್ಲಿದೆ. ತಾವು ಜೀವಮಾನವಿಡೀ ಶ್ರಮಿಸಿ ಬೆಳೆಸಿದ ಜೀವನಕ್ಕೆ ಆಧಾರವಾದ ತೋಟ ಕೈತಪ್ಪಿ ಹೋಗುವ, ಅಷ್ಟೇ ಅಲ್ಲದೆ ತೋಟ ಮಾಡಿದ್ದಕ್ಕಾಗಿ ಭೂಕಬಳಿಕೆ ಮಾಡಿರುವರೆಂದು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿಂದಾಗಿಯೇ ಅವರು ವಿಷಾದದಿಂದ “ಪ್ರಕೃತಿಯ ಜೊತೆಗೆ ಏಗಬಹುದು ಆದರೆ ಸರ್ಕಾರದ ಜೊತೆಗೆ ಏಗುವುದು ಕಷ್ಟ” ಎಂದು ಹೇಳಿದ್ದು.
ಇದನ್ನೂ ಓದಿ: ಮಾಹಿತಿ ಹಕ್ಕು ಕಾಯಿದೆ ಆಶಯಕ್ಕೆ ಕೊಡಲಿ ಪೆಟ್ಟು: ಆಯೋಗದಲ್ಲಿಯೇ ದೂರುದಾರರಿಗೆ ಅವಮಾನ
ಇದು ಆ ರೈತರೊಬ್ಬರಿಗೇ ಬಂದಿರುವ ಸಮಸ್ಯೆ ಅಲ್ಲ. ಬಹುದೊಡ್ಡ ಸಂಖ್ಯೆಯ ಸಣ್ಣ ರೈತರಿಗೆ ಅವರು ಸಾಗುವಳಿ ಮಾಡಿರುವ ಜಾಗಕ್ಕೆ ಹಕ್ಕುಪತ್ರ ಸಿಕ್ಕಿಲ್ಲ. ಹಕ್ಕುಪತ್ರ ಸಿಕ್ಕಿದ್ದರೂ ಅರಣ್ಯ ಕಾನೂನುಗಳ ಪ್ರಕಾರ ರದ್ದಾಗುವ ಸಾಧ್ಯತೆ ಇದೆ. ಕೃಷಿ ಕಾರ್ಮಿಕರು ಕಟ್ಟಿಕೊಂಡಿರುವ ಮನೆಗಳಿಗೂ ದಾಖಲೆಗಳಿಲ್ಲ. ಸರ್ಕಾರಿ ದಾಖಲೆಗಳ ಪ್ರಕಾರ ಇವರೆಲ್ಲರೂ ಒತ್ತುವರಿದಾರರು. ಮಲೆನಾಡಿನ ಸಮಸ್ಯೆಗಳಲ್ಲಿ ಬಹುಮುಖ್ಯ ಸಮಸ್ಯೆ ಇದೇ ಆಗಿದೆ. ಈ ಸಮಸ್ಯೆಯ ಕಾರಣಗಳನ್ನು ಹುಡುಕುತ್ತಾ ಹೋದರೆ ಅರಣ್ಯ ಸಂರಕ್ಷಣಾ ನೀತಿಗಳು, ಅರಣ್ಯ ಕಾನೂನುಗಳು, ಬಡವರ ಬಗೆಗಿನ ಅಧಿಕಾರ ಶಾಹಿಗಳ ನಿರ್ಲಕ್ಷ್ಯ, ರಾಜಕೀಯ ನಾಯಕತ್ವದ ಇಚ್ಛಾಶಕ್ತಿಯ ಕೊರತೆ ಹೀಗೆ ಹಲವಾರು ಕಾರಣಗಳು ತೆರೆದುಕೊಳ್ಳುತ್ತವೆ.
ಮಲೆನಾಡಿನ ತಲ್ಲಣಗಳನ್ನು ಸರಿಯಾಗಿ ಗ್ರಹಿಸಲು ಇವುಗಳನ್ನೆಲ್ಲಾ ವಿವರವಾಗಿ ನೋಡಬೇಕಿದೆ. ಮುಂದೆ ವಿವರವಾಗಿ ನೋಡುತ್ತಾ ಹೋಗೋಣ.






