ಪಾರದರ್ಶಕತೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಯ ಉದ್ದೇಶದಿಂದ ಒಕ್ಕೂಟ ಆಡಳಿತ ಜಾರಿಗೆ ತಂದಿರುವ ಅತ್ಯಂತ ಪ್ರಬಲ ಅಸ್ತ್ರ ‘ಮಾಹಿತಿ ಹಕ್ಕು ಕಾಯಿದೆ’. ಆದರೆ, ನಾಗರಿಕರಿಗೆ ನ್ಯಾಯ ಒದಗಿಸಬೇಕಾದ ‘ಕರ್ನಾಟಕ ಮಾಹಿತಿ ಆಯೋಗ’ವೇ ದೂರುದಾರರ ಪಾಲಿಗೆ ಬೆದರಿಕೆಯ ತಾಣವಾಗಿ ಬದಲಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಈಗ ಎದುರಾಗಿದೆ.
ಇತ್ತೀಚಿನ ದಿನಗಳಲ್ಲಿ ಮಾಹಿತಿ ಆಯೋಗದಲ್ಲಿ ವಿಚಾರಣೆಗೆ ಹಾಜರಾಗುವ ಅರ್ಜಿದಾರರನ್ನು ಅತ್ಯಂತ ಕೀಳುಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತಿದೆ. ʼನಿಮಗೆ ಮಾಹಿತಿ ಯಾಕೆ ಬೇಕು?ʼ, ʼಮಾಹಿತಿ ತೆಗೆದುಕೊಂಡು ಏನು ಮಾಡುತ್ತೀಯಾ?ʼ ಎಂದು ದಬಾಯಿಸುವ ಮೂಲಕ ಕಾಯಿದೆಯ ಮೂಲ ಉದ್ದೇಶವನ್ನೇ ಹತ್ತಿಕ್ಕುವ ವ್ಯವಸ್ಥಿತ ಸಂಚು ಆಯೋಗದ ಒಳಗೇ ನಡೆಯುತ್ತಿರುವಂತಿದೆ. ಇದು ಅತ್ಯಂತ ಖಂಡನಾರ್ಹ.
ಮಹಿಳಾ ಆಯೋಗದ ಪತ್ರ ಬಿಚ್ಚಿಟ್ಟ ಸತ್ಯ
ಇದಕ್ಕೆ ತಾಜಾ ಮಾದರಿ ಎನ್ನುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗವು 2026ರ ಫೆಬ್ರವರಿ 27ರಂದು ಬೆಂಗಳೂರಿನ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯ ಉಪ ಪೊಲೀಸ್ ಆಯುಕ್ತರಿಗೆ ಬರೆದಿರುವ ಈ ಅಧಿಕೃತ ಪತ್ರ. ಶಾರದ ಎಂ ಹೆಚ್ ಎಂಬುವವರು ಮಾಹಿತಿ ಆಯೋಗದಲ್ಲಿ ಮೇಲ್ಮನವಿ ವಿಚಾರಣೆಗೆ ಹಾಜರಾಗಿದ್ದ ಹೊತ್ತಿನಲ್ಲಿ, ಖುದ್ದು ರಾಜ್ಯ ಮುಖ್ಯ ಮಾಹಿತಿ ಆಯುಕ್ತರು (ಪ್ರಭಾರ) ಕೆ. ರಾಮನ್ರಾವ್ ಅವರೇ ಅರ್ಜಿದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳಾ ಘನತೆ ಮತ್ತು ಗೌರವಕ್ಕೆ ಧಕ್ಕೆ ಉಂಟುಮಾಡಿದ್ದಾರೆ ಎಂದು ದೂರಲಾಗಿದೆ.
ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಮುಖ್ಯ ಮಾಹಿತಿ ಆಯುಕ್ತರ ಎದುರಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಮಹಿಳಾ ಆಯೋಗವು ಪೊಲೀಸ್ ಇಲಾಖೆಗೆ ಪತ್ರ ಬರೆದಿದೆ. ಮಾಹಿತಿ ಕೇಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಅರ್ಜಿದಾರರು ಕೇಳಿದ ಮಾಹಿತಿ ನೀಡುವುದನ್ನು ಬಿಟ್ಟು, ಅವರನ್ನೇ ಕಟಕಟೆಯಲ್ಲಿ ನಿಲ್ಲಿಸಿ ಅವಮಾನಿಸುವುದು, ಅದರಲ್ಲಿಯೂ ಮಹಿಳೆಯರ ಘನತೆಗೆ ಕುಂದು ತರುವಂತೆ ನಡೆದುಕೊಳ್ಳುವುದು ಆಯೋಗದ ಘನತೆಗೆ ಶೋಭೆ ತರುವಂತಹುದ್ದಲ್ಲ.
ಇದನ್ನೂ ಓದಿದ್ದೀರಾ? ಯಾದಗಿರಿ ಜಿ.ಪಂ. ಅಧಿಕಾರಿಗಳ ‘ಟೈಮ್ ಟ್ರಾವೆಲ್’ ಯಡವಟ್ಟು: ಭವಿಷ್ಯದ ದಿನಾಂಕ ನಮೂದಿಸಿ ದೂರುದಾರರಿಗೆ ದಂಡ
ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಲು ಈ ರೀತಿಯ ವಾತಾವರಣ ಸೃಷ್ಟಿಸಲಾಗುತ್ತಿದೆಯೇ? ಸಾಮಾನ್ಯ ಜನರು ಮಾಹಿತಿ ಕೇಳಲು ಹೆದರುವಂತಹ ಸ್ಥಿತಿ ನಿರ್ಮಾಣ ಮಾಡುವುದು ಯಾರ ಹಿತಾಸಕ್ತಿಗಾಗಿ? ಎಂಬುದು ತಿಳಿಯದಾಗಿದೆ.
ಸರ್ಕಾರ ಮತ್ತು ಸಂಬಂಧಪಟ್ಟ ಮೇಲಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಬೇಕು. ಮಾಹಿತಿ ಆಯೋಗದಲ್ಲಿ ನಡೆಯುತ್ತಿರುವ ಇಂತಹ ದಬ್ಬಾಳಿಕೆಗಳಿಗೆ ಕಡಿವಾಣ ಹಾಕಬೇಕು. ಅರ್ಜಿದಾರರು ನಿರ್ಭೀತಿಯಿಂದ ಮಾಹಿತಿ ಪಡೆಯುವ ಪೂರಕ ವಾತಾವರಣವನ್ನು ಮರು ಸ್ಥಾಪಿಸಬೇಕು. ಕಾಯಿದೆಯನ್ನು ದುರ್ಬಲಗೊಳಿಸುವ ಯಾವುದೇ ಹುನ್ನಾರವನ್ನು ತಡೆಗಟ್ಟುವುದು ಅನಿವಾರ್ಯವಾಗಿದೆ.




