ಯಲ್ಲಾಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಸಾತೋಡಿ ಜಲಪಾತದ ಮಾರ್ಗದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದ ಮೇಲೆ ಹುಬ್ಬಳ್ಳಿಯಿಂದ ಬಂದಿದ್ದ ಏಳು ಯುವಕರ ವಿರುದ್ಧ ಯಲ್ಲಾಪುರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸೋಮವಾರ ಪ್ರವಾಸಕ್ಕೆ ಬಂದಿದ್ದ ಯುವಕರ ಗುಂಪೊಂದು ಬೈಕ್ಗಳಲ್ಲಿ ಸಂಚರಿಸುವ ವೇಳೆ ಅಜಾಗರೂಕವಾಗಿ ವಾಹನ ಚಲಾಯಿಸಿದ್ದು, ಜೋರಾಗಿ ಹಾಡುಗಳನ್ನು ಹಾಕಿಕೊಂಡು ರಸ್ತೆ ಮೇಲೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದರೆಂಬ ಆರೋಪ ಕೇಳಿಬಂದಿದೆ.
ಈ ದೃಶ್ಯಗಳನ್ನು ಗಮನಿಸಿದ ಸ್ಥಳೀಯರು ಪೊಲೀಸ್ ಇಲಾಖೆಯ ‘ಜನಸ್ನೇಹಿ’ ವಾಟ್ಸಪ್ ಗ್ರೂಪಿನಲ್ಲಿ ದೂರು ನೀಡಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಯಲ್ಲಾಪುರ ಪೊಲೀಸರು, ಪಿಎಸ್ಐ ರಾಜಶೇಖರ ವಂದಲಿ ಅವರ ನೇತೃತ್ವದಲ್ಲಿ ಜಲಪಾತದತ್ತ ಧಾವಿಸಿ, ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಹೊನ್ನಾವರ | ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗುಡೆ: 7 ಜನ ಮೀನುಗಾರರ ಜೀವ ರಕ್ಷಣೆ
ಪೊಲೀಸರ ಪರಿಶೀಲನೆ ವೇಳೆಯಲ್ಲಿ ಬೈಕ್ಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ, ಆದ್ದರಿಂದ ನಾಲ್ಕು ವಾಹನಗಳಿಗೆ ಒಟ್ಟು ₹8 ಸಾವಿರ ದಂಡ ವಿಧಿಸಿದ್ದಾರೆ. ಅತಿವೇಗದ ಚಾಲನೆ, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿರುವುದು ಹಾಗೂ ನಂಬರ್ ಪ್ಲೇಟ್ ಇಲ್ಲದ ವಾಹನ ಬಳಕೆ ಸೇರಿದಂತೆ ವಿವಿಧ ಉಲ್ಲಂಘನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದರ ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ಅಶಾಂತಿ ಹಾಗೂ ತೊಂದರೆ ಕೊಟ್ಟಿದ್ದರಿಂದ ಕರ್ನಾಟಕ ಪೊಲೀಸ್ ಕಾಯ್ದೆಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಏಳು ಯುವಕರ ವಿರುದ್ಧವೂ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರವಾಸಿಗರಿಗೆ ಸೂಚನೆ : ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರಿಗೆ ಅಥವಾ ಇತರ ವಾಹನ ಸವಾರರಿಗೆ ತೊಂದರೆ ಉಂಟುಮಾಡುವ ರೀತಿಯ ವರ್ತನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.





