ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಾರೇಬಾಗಿಲು ಸಮೀಪದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ವೊಂದು ಮುಳುಗಿದ ಘಟನೆ ಸಂಭವಿಸಿದ್ದು, ಬೋಟ್ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಅಂಕೋಲಾ ತಾಲೂಕಿನ ಬೆಳಂಬಾರ ಪ್ರದೇಶದ ಮಂಜುನಾಥ್ ಖಾರ್ವಿ ಅವರಿಗೆ ಸೇರಿದ ‘ಶ್ರೀ ನವರತ್ನ’ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್ನ ಹೊರಭಾಗಕ್ಕೆ ಹಾನಿಯಾಗಿದ್ದು, ಪರಿಣಾಮ ನೀರು ಒಳನುಗ್ಗಿ ಬೋಟ್ ಮುಳುಗಲು ಆರಂಭಿಸಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಭಟ್ಕಳ | ಮುಖ್ಯಮಂತ್ರಿ ಆಯ್ಕೆ: ಹೈಕಮಾಂಡ್ ತೀರ್ಮಾನಕ್ಕೆ ಎಲ್ಲಾ ಶಾಸಕರು ಬದ್ಧ – ಸಚಿವ ಮಂಕಾಳ ವೈದ್ಯ
ಘಟನೆಯ ಸಂದರ್ಭದಲ್ಲಿ ಬೋಟ್ನಲ್ಲಿದ್ದ ವೆಂಕಟೇಶ್ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾಣಾವಳಿಕರ್ ಹಾಗೂ ಲತೇಶ್ ಖಾರ್ವಿ ಅಪಾಯಕ್ಕೆ ಸಿಲುಕಿದ್ದರು. ಈ ವೇಳೆ ಸಮೀಪದಲ್ಲಿದ್ದ ಸ್ಥಳೀಯ ಮೀನುಗಾರರಾದ ಇಕ್ಬಾಲ್, ಅಬ್ದುಲ್ ಹಾಗೂ ಗಫೂರ್ ತಮ್ಮ ಬೋಟ್ ಮೂಲಕ ತಕ್ಷಣ ಸ್ಥಳಕ್ಕೆ ತೆರಳಿ ಎಲ್ಲ ಏಳು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಸ್ಥಳೀಯ ಮೀನುಗಾರರ ತ್ವರಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದ್ದು, ರಕ್ಷಿಸಲ್ಪಟ್ಟ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಹೊನ್ನಾವರ ಸಿ.ಎಸ್.ಪಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.




