ಕೃಪಾಂಕಕ್ಕಾಗಿ ಸಿಬಿಎಸ್ಸಿ ವಿದ್ಯಾರ್ಥಿ ತನ್ಮಯ್ ಕಶ್ಯಪ್ ಮಾಡಿದ ಒಂದು ಸಾಮಾನ್ಯ ಮನವಿಯು ಈಗ ಕೇವಲ ಅಂಕಗಳ ಬೇಡಿಕೆಯಾಗಿ ಉಳಿದಿಲ್ಲ. ಇದು ಸರ್ಕಾರದ ಸಂವೇದನಾರಹಿತ ನಿರ್ಲಕ್ಷ್ಯ, ಶಿಕ್ಷಣ ವ್ಯವಸ್ಥೆಯ ವೈಫಲ್ಯ ಹಾಗೂ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯ ವಿರುದ್ಧದ ಬೃಹತ್ ಜನಾಕ್ರೋಶವಾಗಿ ಮಾರ್ಪಟ್ಟಿದೆ. ಈ ಆಕ್ರೋಶದ ಕೂಗು ವ್ಯವಸ್ಥೆಯನ್ನು ಎಚ್ಚರಿಸುತ್ತದೆಯೇ ಅಥವಾ ಪ್ರಧಾನಿಯವರ ‘ಮನ್ ಕೀ ಬಾತ್’ನ ಮೌನದಲ್ಲಿ ಕರಗಿಹೋಗುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ
ಸಿಬಿಎಸ್ಇ 12ನೇ ತರಗತಿಯ ಪರೀಕ್ಷಾ ವೈಫಲ್ಯದ ಕುರಿತು 20 ಗ್ರೇಸ್ ಅಂಕ ನೀಡುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿದ್ಯಾರ್ಥಿ ತನ್ಮಯ್ ಕಶ್ಯಪ್ ಬರೆದಿದ್ದ ಬಹಿರಂಗ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶದ ಅಲೆಯನ್ನೇ ಸೃಷ್ಟಿಸಿದೆ. ಪ್ರಧಾನಿಯವರ ಇತ್ತೀಚಿನ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಈ ಗಂಭೀರ ಸಮಸ್ಯೆಯ ಬಗ್ಗೆ ಕನಿಷ್ಠ ಚಕಾರ ಎತ್ತದಿರುವುದು ಸಾರ್ವಜನಿಕರ ಆಕ್ರೋಶದ ಕಟ್ಟೆಯೊಡೆಯುವಂತೆ ಮಾಡಿದೆ. ವಿದ್ಯಾರ್ಥಿಯ ನೋವಿಗೆ ಕಿವುಡಾಗಿರುವ ಸರ್ಕಾರದ ನಡೆಯ ವಿರುದ್ಧ ಸಾವಿರಾರು ನೆಟ್ಟಿಗರು ಕಟುವಾದ ಟೀಕೆಗಳ ಮಳೆಗರೆದಿದ್ದಾರೆ.
‘ಪರೀಕ್ಷಾ ಪೇ ಚರ್ಚಾ’ದಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಹಿತೈಷಿಯಂತೆ ಬಿಂಬಿಸಿಕೊಳ್ಳುವ ಪ್ರಧಾನಿ, ಅಸಲಿ ಬಿಕ್ಕಟ್ಟು ಎದುರಾದಾಗ ಮೌನ ವಹಿಸಿದ್ದಾರೆ ಎಂದು ಜಾಲತಾಣಿಗರು ಕಿಡಿಕಾರಿದ್ದಾರೆ. “ಮನ್ ಕೀ ಬಾತ್ನಲ್ಲಿ ಕೇವಲ ಮಾವಿನಹಣ್ಣು, ಜಲ್ ಜೀರಾ ತಯಾರಿಸುವ ವಿಧಾನ ಹಾಗೂ ಬೇಸಿಗೆಯ ಬಿಸಿಲಿನ ತಾಪ ತಣಿಯಲು ತಂಪು ನೀರು ಕುಡಿಯಿರೆಂದು ಉಪದೇಶ ನೀಡುವ ಪ್ರಧಾನಿಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿಯಿಲ್ಲ” ಎಂದು ಬಳಕೆದಾರರೊಬ್ಬರು ಹರಿಹಾಯ್ದಿದ್ದಾರೆ. ಪ್ರಧಾನಿ ಹುದ್ದೆಯನ್ನು ಕೇವಲ ‘ಪಿಆರ್ ಏಜೆನ್ಸಿ’ಯಂತೆ ಬಳಸಲಾಗುತ್ತಿದೆ ಹಾಗೂ ಇದು ಕೇವಲ ಅವರ ‘ಅಹಂಕಾರದ ಪ್ರದರ್ಶನ’ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿವೆ.
ತನ್ಮಯ್ ಕಶ್ಯಪ್ ಪತ್ರದಲ್ಲಿನ ಪ್ರತಿಯೊಂದು ಸಾಲುಗಳು ಅತ್ಯಂತ ಭಾವುಕವಾಗಿವೆ. ವರ್ಷಪೂರ್ತಿ ಸತತವಾಗಿ ಓದಿದರೂ ಎದುರಾದ ದಿಢೀರ್ ವೈಫಲ್ಯ, ಸಮಾಜ ಮತ್ತು ಪೋಷಕರ ನಿರೀಕ್ಷೆಗಳ ಭಾರ, ಹಾಗೂ ಉನ್ನತ ಶಿಕ್ಷಣದ ಕನಸುಗಳು ಭಗ್ನಗೊಂಡಾಗ ಉಂಟಾಗುವ ಮಾನಸಿಕ ಯಾತನೆಯನ್ನು ತನ್ಮಯ್ ಅಕ್ಷರಶಃ ಬಿಚ್ಚಿಟ್ಟಿದ್ದಾನೆ. “ನಮ್ಮ ನೋವು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲವೇ? ಭವಿಷ್ಯದ ದಾರಿಯೆಲ್ಲಿ?” ಎಂಬ ಆತನ ಪ್ರಶ್ನೆಗಳು ಕರುಳು ಹಿಂಡುವಂತಿವೆ.
ವಿದ್ಯಾರ್ಥಿ ತನ್ಮಯ್ಗೆ ಸಾಂತ್ವನ ಹೇಳಿರುವ ಬಹುಪಾಲು ಜನ, ರಾಜಕಾರಣಿಗಳ ಮುಂದೆ ಅಂಗಲಾಚದಂತೆ ದಿಟ್ಟ ಸಲಹೆ ನೀಡಿದ್ದಾರೆ. “ನೀನು ಭಿಕ್ಷೆ ಬೇಡುವ ಅಗತ್ಯವಿಲ್ಲ, ನಿನ್ನ ಹಕ್ಕುಗಳಿಗಾಗಿ ಆಗ್ರಹಿಸು ಮತ್ತು ವ್ಯವಸ್ಥೆಯನ್ನು ಪ್ರಶ್ನಿಸು” ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಅಧಿಕಾರದಲ್ಲಿರುವವರಿಂದ ನ್ಯಾಯ ನಿರೀಕ್ಷಿಸುವುದು ಮೂರ್ಖತನ, ಅವರು ಕೇವಲ ತಮ್ಮ ಲಾಭ ಹಾಗೂ ವೋಟ್ ಬ್ಯಾಂಕ್ಗಾಗಿ ಕೆಲಸ ಮಾಡುತ್ತಾರೆ ಹೊರತು ಜನಸಾಮಾನ್ಯರ ಗೋಳು ಅವರಿಗರ್ಥವಾಗುವುದಿಲ್ಲ ಎಂಬ ಅಸಮಾಧಾನ ವ್ಯಾಪಕವಾಗಿ ಹಂಚಿಕೆಯಾಗಿದೆ.
ದೇಶದ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂಬ ಆತಂಕವೂ ಈ ಚರ್ಚೆಯ ಮೂಲಕ ಹೊರಹೊಮ್ಮಿದೆ. ಕೇವಲ ಸಿಬಿಎಸ್ಇ ಮಾತ್ರವಲ್ಲದೆ, ಎನ್ಟಿಎ (NTA) ನಡೆಸುವ ಪರೀಕ್ಷೆಗಳಲ್ಲಿನ ಸತತ ಅವ್ಯವಸ್ಥೆಗಳನ್ನೂ ನೆಟ್ಟಿಗರು ಪ್ರಸ್ತಾಪಿಸಿದ್ದಾರೆ. ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ, ಇಲ್ಲಿ ಕೇವಲ ಹಣ ಮತ್ತು ಲಾಬಿ ಮಾತ್ರ ಕೆಲಸ ಮಾಡುತ್ತದೆ. ಇಂತಹ ಭ್ರಷ್ಟ ಆಡಳಿತ ಯಂತ್ರದ ಮುಂದೆ ಕಣ್ಣೀರು ಹಾಕುವುದು ವ್ಯರ್ಥ ಎಂಬ ವಾಸ್ತವದ ಕಟು ಸತ್ಯವನ್ನು ಫಾತಿಮಾ ಎಂಬ ಬಳಕೆದಾರರು ವಿದ್ಯಾರ್ಥಿಯ ಮುಂದಿಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಕಾಗದದ ನೋಟುಗಳಿಗೆ ಗುಡ್ ಬೈ? ಭಾರತಕ್ಕೆ ಬರಲಿದೆಯೇ ಪಾಲಿಮರ್ ಕರೆನ್ಸಿ
ಈ ದುಸ್ಥಿತಿಗೆ ಕೇವಲ ಸರ್ಕಾರವಷ್ಟೇ ಅಲ್ಲ, ದಶಕಗಳಿಂದ ಮತ ಹಾಕುತ್ತಿರುವ ಸಮಾಜದ ಮನಸ್ಥಿತಿಯೂ ಕಾರಣ ಎಂಬ ಆತ್ಮಾವಲೋಕನದ ಮಾತುಗಳು ಟ್ವಿಟರ್ನಲ್ಲಿ ಪ್ರತಿಧ್ವನಿಸಿವೆ. “ನಿಮ್ಮ ಪೋಷಕರು ಮತ್ತು ಸಮಾಜವು ಭವಿಷ್ಯದ ಶಿಕ್ಷಣವನ್ನು ಬದಿಗೊತ್ತಿ, ಕೇವಲ ಧರ್ಮ ಹಾಗೂ ಅಲ್ಪಸಂಖ್ಯಾತರ ಬಗೆಗಿನ ಭಯದ ಆಧಾರದ ಮೇಲೆ ಮತ ಹಾಕಿದ್ದರ ಪ್ರತಿಫಲವನ್ನೇ ಇಂದು ನೀವು ಅನುಭವಿಸುತ್ತಿದ್ದೀರಿ” ಎಂದು ಕೆಲವರು ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ವಿದ್ಯಾರ್ಥಿಗಳ ಈ ಬೃಹತ್ ಸಮಸ್ಯೆಯ ಬಗ್ಗೆ ದಿವ್ಯ ಮೌನ ವಹಿಸಿರುವ ಗೋದಿ-ಮೋದಿ ಮಾಧ್ಯಮಗಳ ವಿರುದ್ಧವೂ ನೆಟ್ಟಿಗರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಿಕ್ಷಣದ ಗಂಧಗಾಳಿ ತಿಳಿಯದ ರಾಜಕಾರಣಿಗಳಿಂದ ವಿದ್ಯಾರ್ಥಿಗಳ ಪರವಾದ ನಿರ್ಧಾರಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಇಷ್ಟೊಂದು ದೊಡ್ಡ ಮಟ್ಟದ ಚೆಲ್ಲಾಟ ನಡೆಯುತ್ತಿದ್ದರೂ, ಪ್ರಮುಖ ರಾಷ್ಟ್ರೀಯ ಮಾಧ್ಯಮಗಳು ಎನಿಸಿಕೊಂಡಿರುವ ‘ಗೋದಿ ಮೀಡಿಯಾ’ ಸರ್ಕಾರವನ್ನು ಪ್ರಶ್ನಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂಬ ಅಸಮಾಧಾನ ಎದ್ದು ಕಾಣುತ್ತಿದೆ.
ಸರ್ಕಾರದ ವಿರುದ್ಧದ ಹತಾಶೆಯ ನಡುವೆಯೂ, ತನ್ಮಯ್ನ ಬೆಂಬಲಕ್ಕೆ ನಿಂತಿರುವ ಸಾವಿರಾರು ಜನರು ಆತನಿಗೆ ಭರವಸೆಯ ಮಾತುಗಳನ್ನಾಡಿದ್ದಾರೆ. “ನೀವು ಈ ದೇಶದ ಭವಿಷ್ಯ, ನಿಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಜೀವನವು ಸವಾಲುಗಳಿಂದ ಕೂಡಿದ್ದು, ನಿಮ್ಮ ಕಠಿಣ ಪರಿಶ್ರಮ ಖಂಡಿತಾ ವ್ಯರ್ಥವಾಗುವುದಿಲ್ಲ” ಎಂದು ಕೆಲವರು ಹಾರೈಸಿದ್ದಾರೆ. ಈ ದಿಟ್ಟ ಪತ್ರವು ಸಂಕಟದಲ್ಲಿರುವ ಇತರ ಸಾವಿರಾರು ವಿದ್ಯಾರ್ಥಿಗಳಿಗೂ ಧ್ವನಿ ಎತ್ತಲು ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಸಿಬಿಎಸ್ಇ ‘ಒಎಸ್ಎಂ’ ಅವ್ಯವಸ್ಥೆ ವಿರುದ್ಧದ ತನ್ಮಯ್ ಕಶ್ಯಪ್ ಹೋರಾಟಕ್ಕೆ ಹಿರಿಯ ಸಾಮಾಜಿಕ ಚಿಂತಕರಾದ ಯೋಗೇಂದ್ರ ಯಾದವ್ ರಿಟ್ವೀಟ್ ಮಾಡಿದ್ದರೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ದೃಢ ಬೆಂಬಲ ನೀಡಿದ್ದಾರೆ. ಇವರೊಂದಿಗೆ ‘ಕಾಂಪಿಟಿಷನ್’ ಸಂಸ್ಥಾಪಕ ಮೋಹಿತ್ ತ್ಯಾಗಿ ಹಾಗೂ ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆಗಳು ಮಂಡಳಿಯ ದ್ವಂದ್ವ ನೀತಿಯನ್ನು ಬಯಲಿಗೆಳೆದು ಸಾಥ್ ನೀಡಿವೆ. ‘ಕಾಕ್ರೋಚ್ ಜನತಾ ಪಾರ್ಟಿ’ ಸಂಸ್ಥಾಪಕ ಅಭಿಜೀತ್ ದಿಪ್ಕೆ ಕೂಡ ಕೈಜೋಡಿಸಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿ, ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸುವ ಮೂಲಕ ಯುವಜನತೆಯ ಈ ಹೋರಾಟಕ್ಕೆ ಮತ್ತಷ್ಟು ಕಾವು ನೀಡಿದ್ದಾರೆ.
ಕೃಪಾಂಕಕ್ಕಾಗಿ ಈ ವಿದ್ಯಾರ್ಥಿ ಮಾಡಿದ ಒಂದು ಸಾಮಾನ್ಯ ಮನವಿಯು ಈಗ ಕೇವಲ ಅಂಕಗಳ ಬೇಡಿಕೆಯಾಗಿ ಉಳಿದಿಲ್ಲ. ಇದು ಸರ್ಕಾರದ ಸಂವೇದನಾರಹಿತ ನಿರ್ಲಕ್ಷ್ಯ, ಶಿಕ್ಷಣ ವ್ಯವಸ್ಥೆಯ ವೈಫಲ್ಯ ಹಾಗೂ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯ ವಿರುದ್ಧದ ಬೃಹತ್ ಜನಾಕ್ರೋಶವಾಗಿ ಮಾರ್ಪಟ್ಟಿದೆ. ಈ ಆಕ್ರೋಶದ ಕೂಗು ವ್ಯವಸ್ಥೆಯನ್ನು ಎಚ್ಚರಿಸುತ್ತದೆಯೇ ಅಥವಾ ಪ್ರಧಾನಿಯವರ ‘ಮನ್ ಕೀ ಬಾತ್’ನ ಮೌನದಲ್ಲಿ ಕರಗಿಹೋಗುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.





