ಕಲ್ಯಾಣ ಕರ್ನಾಟಕ ಅಭಿವೃದ್ದಿ ನಿಗಮದ ವತಿಯಿಂದ ಅರಣ್ಯ ಇಲಾಖೆಗೆ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಅದನ್ನು ಬಳಸಿಕೊಂಡು ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಅರಣ್ಯ ಇಲಾಖೆಯ ವತಿಯಿಂದ ಕಲಬುರಗಿಯ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕೆಕೆಆರ್‌ಡಿಬಿಯಿಂದ ₹30 ಕೋಟಿ ಅಲ್ಲದೇ ಇನ್ನೂ ಬೇಕಾಗುವ ಅನುದಾನ ಬಿಡುಗಡೆ ಮಾಡಲು ಮಾನ್ಯ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿ. ಪ್ರಕೃತಿಯ ಆಸ್ತಿಯನ್ನು ಕಾಪಾಡುವ ಅರಣ್ಯ ಸಿಬ್ಬಂದಿಗಳ ಕಾರ್ಯಕ್ಷಮತೆ ದೇಶದ ಗಡಿ ಕಾಯುವ ಸೈನಿಕರ ಸೇವೆಗೆ ಸಮಾನವಾದುದು ಎಂದು ಶ್ಲಾಘಿಸಿದರು.
“ನೈಸರ್ಗಿಕ ವಿಕೋಪ, ವನ್ಯ ಜೀವಿಗಳ ನಡುವಿನ ಸಂಘರ್ಷ, ಅರಣ್ಯ ಚೋರರ ವಿರುದ್ದದ ಕಾರ್ಯಾಚರಣೆ ಸೇರಿದಂತೆ ಹಲವಾರು ಅಡೆತಡೆಗಳ ನಡುವೆ ಕೆಲಸ ಮಾಡುವ ನಿಮ್ಮ ಸೇವೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ನಾವು ವನ್ಯಜೀವಿಗಳ ಬಗ್ಗೆ ತೋರಿಸುವ ಕಾಳಜಿ ಅರಣ್ಯ ಸಿಬ್ಬಂದಿಗಳಿಗೂ ತೋರಿಸಬೇಕಿದೆ” ಎಂದು ಸಚಿವರು ತಿಳಿಸಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಬೆಳ್ಳಂಬೆಳಗ್ಗೆ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಸರಣಿ ಅಪಘಾತ; ನಾಲ್ವರು ಸ್ಥಳದಲ್ಲೇ ಮೃತ್ಯು
“ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ನಿಲ್ಲಬೇಕು ಎನ್ನುವುದು ಎಲ್ಲರ ಕೂಗು. ಆದರೆ, ನಿಮಗೆ ಸರಿಯಾದ ಸೌಕರ್ಯ ಕೊಟ್ಟಾಗ ಮಾತ್ರ ಸಂಘರ್ಷ ತಡೆಯಲು ಅನುಕೂಲವಾಗುತ್ತದೆ. ಹಾಗಾಗಿ, ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಅಗತ್ಯ ಅನುದಾನ ಬಿಡುಗಡೆ ಮಾಡಲು ಬದ್ಧ” ಎಂದರು.
“ಸುಮಾರು 2 ದಶಕಗಳ ನಂತರ ಕಲಬುರಗಿಯಲ್ಲಿ ಕ್ರೀಡಾ ಕೂಟ ನಡೆಯುತ್ತಿದೆ. ರಾಜ್ಯದ 13 ವೃತ್ತಗಳಿಂದ 1,200 ಕ್ಕೂ ಸ್ಪರ್ಧಾಳುಗಳು ಭಾಗಿಯಾಗಿ, ಒಟ್ಟು 271 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವರಿಗೆ ನನ್ನ ಶುಭಾಶಯಗಳು” ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಪೊಲೀಸ್ ಕಮೀಷನರ್ ಆರ್ ಚೇತನ್, ಎಸ್ ಪಿ ಅಡ್ಡೂರು ಶ್ರೀನಿವಾಸಲು, ಸುದರ್ಶನ್, ಬ್ರಿಜೇಶ್ ಕುಮಾರ, ಬಿಶ್ವಜಿತ್ ಮಿಶ್ರಾ, ಶಾಶ್ವತಿ ಮಿಶ್ರ ಸೇರಿದಂತೆ ಹಲವರಿದ್ದರು.