- ಜೈಲಲ್ಲಿರಬೇಕಾದವ ಸರ್ಕಾರಿ ನೌಕರನಾದ ರೋಚಕ ಕಥೆ
- ದೌರ್ಜನ್ಯ ಪ್ರಕರಣವನ್ನು ಪ್ರವೀಣ್‌ಗೆ ಭಾರೀ ಪ್ರಶಂಸೆ
ಭೂಮಾಲೀಕ ಹಾಗೂ ಆರ್‌ಎಸ್‌ಎಸ್ ಮುಖಂಡ ನಾರಾಯಣ ಸೋಮಯಾಜಿ ಎಂಬಾತ 1995 ಅಕ್ಟೋಬರ್ 24 ರಂದು ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಿದ್ದನು. ಆ ಪ್ರಕರಣದಲ್ಲಿ ಭಾಗಿಯಾಗಿದ್ದು, ನಂತರ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಬೀಟ್ ಸಿಬ್ಬಂದಿ ಪ್ರವೀಣ್ ಮತ್ತು ಗಣೇಶ್ ಯಶಸ್ವಿಯಾಗಿದ್ದಾರೆ.
1995ರಲ್ಲಿ ನರಿಕೊಂಬು ಗ್ರಾಮದಲ್ಲಿ ನಡೆದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪದ್ಮನಾಭ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಠಾಣಾ ವ್ಯಾಪ್ತಿಯ ಪಾಣೆಮಂಗಳೂರಿನ ಸಮೀಪದ ನರಿಕೊಂಬು ಗ್ರಾಮದ ಆರ್‌ಎಸ್‌ಎಸ್ ಮುಖಂಡ ಹಾಗೂ ಭೂಮಾಲೀಕನಾಗಿದ್ದ ನಾರಾಯಣ ಸೋಮಯಾಜಿ ಎಂಬಾತ 1995 ಅಕ್ಟೋಬರ್ 24 ರಂದು ತನ್ನ ಜಮೀನಿನಲ್ಲಿ ಆರ್‌ಎಸ್‌ಎಸ್ ಬೈಠಕ್ ಆಯೋಜಿಸಿ ಗ್ರಾಮದ ದಿನಗೂಲಿ ಕಾರ್ಮಿಕರಾದ ಗುರುವಪ್ಪ ಹಾಗೂ ರಮೇಶ ಎಂಬುವವರಿಗೆ ಆ ಬೈಠಕ್‌ನಲ್ಲಿ ಪಾಲ್ಗೊಳ್ಳುವಂತೆ ಹಾಗೂ ಸುತ್ತಮುತ್ತಲಿನ ಹಿಂದೂ ಯುವಕರನ್ನು ಸೇರಿಸುವಂತೆ ಸೂಚಿಸಿದ್ದನು.
ಕಾರ್ಮಿಕರಾದ ಗುರುವಪ್ಪ ಹಾಗೂ ರಮೇಶ ಭೂಮಾಲೀಕನ ಆಜ್ಞೆಗೆ ಒಪ್ಪದೇ ಬೈಠಕ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ನಿರಾಕರಿಸಿದ್ದರು. ಇದನ್ನೇ ಕಾರಣವಾಗಿಟ್ಟುಕೊಂಡು ಕಾರ್ಮಿಕರ ಮೇಳೆ ಹಲ್ಲೆ, ದೌರ್ಜನ್ಯ ನಡೆಸಲಾಗಿತ್ತು. ನಂತರ ಅವರ ತಲೆ ಬೋಳಿಸಿ, ಬಣ್ಣ ಹಚ್ಚಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಮೆರವಣಿಗೆ ಮಾಡಿ ಕೊನೆಗೆ ಗ್ರಾಮಸ್ಥರಿಗೆ ಅನುಮಾನ ಬರಬಾರದೆಂದು ಅವರ ಮೇಲೆ ಅಡಿಕೆ ಕದ್ದಿರುವ ಆರೋಪ ಹಾಕಲಾಗಿತ್ತು.
1995ರಲ್ಲಿ ನಡೆದ ಆ ಘಟನೆಯ ಪ್ರಮುಖ ಆರೋಪಿಗಳಾದ ಭೂಮಾಲೀಕ ನಾರಾಯಣ ಸೋಮಯಾಜಿ ಮತ್ತವನ ಸಹಚರರಾದ ಪದ್ಮನಾಭ, ವಿಠಲ, ಸುರೇಶ ಸಪಲ್ಯ ಎಂಬವರ ಮೇಲೆ ಅಂದು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಈ ಪ್ರಕರಣದ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿತ್ತು. ಆದರೆ ಪ್ರಕರಣದ ಮೂರನೇ ಆರೋಪಿ ಪದ್ಮನಾಭ ಪೋಲಿಸರಿಗೆ ಸಿಗದೆ ತಲೆಮರೆಸಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದ. ಮಾತ್ರವಲ್ಲ ಸರ್ಕಾರವನ್ನು ವಂಚಿಸಿ ಸರ್ಕಾರಿ ಉದ್ಯೋಗವನ್ನೂ ಪಡೆದಿದ್ದ.
“ಸುಮಾರು 28 ವರ್ಷಗಳಿಂದ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪದ್ಮನಾಭನಿಗೆ ನ್ಯಾಯಾಲಯ ಬಂಧನದ ವಾರೆಂಟ್ ಜಾರಿ ಮಾಡುತ್ತಿದ್ದರೂ ಈವರೆಗೆ ಯಾವುದೇ ಪೊಲೀಸ್ ಅಧಿಕಾರಿಯೂ ಈತನನ್ನು ಬಂಧಿಸಲು ಶ್ರಮ ವಹಿಸಿರಲಿಲ್ಲ. ಇದಕ್ಕೆ ನಾರಾಯಣ ಸೋಮಯಾಜಿ ಮತ್ತು ಆತನ ಪರಮಾಪ್ತ ಕಲ್ಲಡ್ಕ ಪ್ರಭಾಕರ ಭಟ್ ಅವರ ಪ್ರಭಾವವೇ ಕಾರಣ” ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಾವಡಿ ಹಾಲಿನ ಡೇರಿ ಚುನಾವಣೆಯಲ್ಲಿ ಅಕ್ರಮ; 11 ಮಂದಿ ಅಭ್ಯರ್ಥಿಗಳಿಂದ ಮತದಾನ ಬಹಿಷ್ಕಾರ
“28 ವರ್ಷ ಕಳೆದ ನಂತರ ಆ ಗ್ರಾಮದ ಬೀಟ್ ಸಿಬ್ಬಂದಿ ಪ್ರವೀಣ್ ಎನ್ನುವವರು ಈ ಪ್ರಕರಣದ ಹಿಂದೆ ಬಿದ್ದರು. ಸಿನಿಮೀಯ ಶೈಲಿಯಲ್ಲಿ ಕಳೆದ ಒಂದು ವರ್ಷದಿಂದ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ ಆ ವಾರೆಂಟ್ ಅಸಾಮಿಯನ್ನು ಬೆಂಗಳೂರಿನಿಂದ ಬಂಧಿಸಿ ಠಾಣೆಗೆ ಒಪ್ಪಿಸಿರುವ ರೋಚಕ ಬೆಳವಣಿಗೆ ನಡೆದಿದೆ. ಬೀಟ್ ಸಿಬ್ಬಂದಿ ಪ್ರವೀಣ್ ಮತ್ತು ಅವರ ಜೊತೆಯಿದ್ದ ಗಣೇಶ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
“ಸರ್ಕಾರವನ್ನು ವಂಚಿಸಿ ಸರ್ಕಾರಿ ಉದ್ಯೋಗ ಪಡೆದಿರುವ ಈ ಆರೋಪಿಗೆ ಬೆನ್ನೆಲುಬಾಗಿರುವ ಎಲ್ಲ ಮುಖಂಡರ ವಿರುದ್ಧ ತನಿಖೆಯಾಗಬೇಕು. ಆತನನ್ನು ಕೆಲಸದಿಂದ ವಜಾ ಮಾಡಬೇಕು. ಅಲ್ಲದೇ 28 ವರ್ಷಗಳಿಂದ ಬಂಟ್ವಾಳ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಸುಮಾರು ಇಪ್ಪತ್ತಕೂ ಹೆಚ್ಚು ಆಧಿಕಾರಿಗಳು ಈ ಪ್ರಕರಣ ಯಾಕೆ ಭೇದಿಸಲು ಶ್ರಮ ವಹಿಸಿರಲಿಲ್ಲ ಎಂಬುದರ ಬಗ್ಗೆ ಸರ್ಕಾರ ತನಿಖೆ ಮಾಡಬೇಕು” ಎಂದು ಆಗ್ರಹಿಸಿದರು.