ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಹೆಸರುವಾಸಿಯಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ ಇದೀಗ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಸುಮಾರು 2.1 ಕೆಜಿ ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತಗೆಯುವಲ್ಲಿ ಯಶಸ್ವಿಯಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ತಮ್ಮಲ್ಲಿರುವ ಅಲ್ಪ ಸೌಲಭ್ಯದಲ್ಲಿಯೇ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಗೆ ಮರುಜೀವ ನೀಡಿದ್ದಾರೆ.
ಇಲ್ಲಿ ವಿಶೇಷವಾಗಿ ಮಹಿಳೆಯರಿಗೆ ಸುರಕ್ಷಿತ ಹೆರಿಗೆ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಸೇರಿ ವಿವಿಧ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಫೈಬ್ರಾಯ್ಡ್ ಚಿಕಿತ್ಸೆಗೆ ದಾಖಲಾದ ಮಹಿಳೆಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡೆಪ್ಪನವರ ನೇತೃತ್ವದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಸಲಾಗಿದೆ.
ಮಹಿಳೆಯೊಬ್ಬರು ರಕ್ತಹೀನತೆಯಿಂದ ಬಳಲುತ್ತಿದ್ದರು. ಇದರಿಂದ ಮಹಿಳೆ ಅತಿಯಾದ ಸುಸ್ತು, ನಡೆದಾಡಲು ಆಗದ ಪರಿಸ್ಥಿತಿಯಲ್ಲಿದ್ದರು. ಸಾಕಷ್ಟು ಖಾಸಗಿ ಆಸ್ಪತ್ರೆಗೆ ಅಲೆದಾಡಿ ಈ ಮಹಿಳೆ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಸರಿಸುಮಾರು 2.1 ಕೆಜಿಯಷ್ಟು ಫೈಬ್ರಾಯ್ಡ್ ಗಡ್ಡೆ ಇರುವುದು ಪತ್ತೆಯಾಗಿದ್ದು, ಬಳಿಕ ಡಾ. ಶ್ರೀಧರ ದಂಡೆಪ್ಪನವರ ಅವರು ಮಹಿಳೆಗೆ ಸರಿಸುಮಾರು ಒಂದೂವರೆ ತಾಸು ಶಸ್ತ್ರಚಿಕಿತ್ಸೆ ಮಾಡಿ ಗಡ್ಡೆಯನ್ನು ಹೊರತಗೆದಿದ್ದಾರೆ.
ಈಗ ಮಹಿಳೆ ಸುರಕ್ಷಿತವಾಗಿದ್ದಾರೆ. ಈ ಚಿಕಿತ್ಸೆಯನ್ನು ಲ್ಯಾಪರೋಸ್ಕೋಪಿಕ್ ಅಂದರೆ ಉದರ ದರ್ಶಕದಿಂದ ಯಶಸ್ವಿಯಾಗಿ ನಡೆಸಿದ್ದಾರೆ. ಇವರಿಗೆ ಆಸ್ಪತ್ರೆ ಸಿಬ್ಬಂದಿ ಸಾಥ್ ಕೊಟ್ಟಿದ್ದು, ಮಹಿಳೆಯೊಬ್ಬರ ಜೀವ ಉಳಿಸಿದ್ದಾರೆ.
ಇದನ್ನೂ ಓದಿದ್ದೀರಾ? ರಾಯಚೂರು | ಡ್ರಗ್ಸ್ ಸೇವನೆ ಆರೋಗ್ಯಕ್ಕೆ ಮಾರಕ;ಎಸ್ ಪಿ ಎಂ.ಪುಟ್ಟಮಾದಯ್ಯ
“ಈಗಾಗಲೇ ಸಾಕಷ್ಟು ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು. 2.1 ಕೆಜಿ ಗಡ್ಡೆಯನ್ನು ಒಂದೂವರೆ ಗಂಟೆ ನಿರಂತರ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದು, ರೋಗಿ ಗುಣಮುಖರಾಗಿ ಹೋಗಿದ್ದಾರೆ” ಎಂದು ಡಾ. ಶ್ರೀಧರ ದಂಡೆಪ್ಪನವರ್ ತಿಳಿಸಿದ್ದಾರೆ.
“ನಮಗೂ ಇಂಥ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿದ್ದಕ್ಕೆ ಖುಷಿ ಇದೆ. ಸಣ್ಣ ಆಸ್ಪತ್ರೆಯಾದರೂ ಕೂಡ ಈ ಆಸ್ಪತ್ರೆಗೆ ಸಾಕಷ್ಟು ದಾನಿಗಳು ಬೇಕಾದ ವೈದ್ಯಕೀಯ ಉಪಕರಣಗಳನ್ನು ಕೊಡುತ್ತಿದ್ದಾರೆ. ಇವೆಲ್ಲವನ್ನೂ ಬಳಸಿಕೊಂಡು ರೋಗಿಗಳಿಗೆ ಉತ್ತಮ ಸೇವೆ ನೀಡುವ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.