ಇಂದಿನ ಯುವ ಸಮುದಾಯದಲ್ಲಿ ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಅರಿವು ಅಗತ್ಯವಾಗಿದೆ ಎಂದು ಬ್ರಿಮ್ಸ್ ಮಹಾವಿದ್ಯಾಲಯದ ಮನೋರೋಗ ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾ ಕುಣಕೇರಿ ಹೇಳಿದರು.
ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಮಹಾವಿದ್ಯಾಲಯದಲ್ಲಿ ಆಯೋಜಿಸಿದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು ಎಂದು ವಿಶ್ವ ಆರೋಗ್ಯ ಸಂಸ್ಥೆ 2023ರ ಘೋಷ ವಾಕ್ಯವಾಗಿದೆ” ಎಂದರು.
ಡಾ. ಸುನೀಲ್ ತಾಪ್ಸೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಅರಿವು ಅಗತ್ಯವಿದ್ದು, ಈ ನಿಟ್ಟಿನಲ್ಲಿ ಬ್ರಿಮ್ಸ್ ಮಾನಸಿಕ ವಿಭಾಗದಿಂದ ಉತ್ತಮ ಕಾರ್ಯನಿರ್ವಹಿಸುತ್ತಿದೆ” ಎಂದರು.
ಡಾ. ಮಹೇಶ ಬಿರಾದರ್ ಮಾತನಾಡಿ, “ಮನುಷ್ಯನಿಗೆ ಮಾನಸಿಕ, ದೈಹಿಕ ಮತ್ತು ಸಾಮಾಜಿಕವಾಗಿ ಆರೋಗ್ಯವಂತರಿದ್ದಾಗ ಮಾತ್ರ ಸ್ವಸ್ಥ ಮತ್ತು ಆರೋಗ್ಯವಂತ ವ್ಯಕ್ತಿ ಎನ್ನಲು ಸಾಧ್ಯ. ಮಾನಸಿಕ ವಿಭಾಗದಿಂದ ಮಾನಸಿಕ ರೋಗಿಗಳನ್ನು ಗುರುತಿಸಿ ಉತ್ತಮ ಚಿಕಿತ್ಸೆ ಹಾಗೂ ಪುನರ್ವಸತಿ ಕಲ್ಪಿಸಿ ಮುಖ್ಯವಾಹಿನಿಗೆ ತರುವ ಕಾರ್ಯ ನಡೆದಿರುವುದು ಶ್ಲಾಘನೀಯ” ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ರಾಘವೇಂದ್ರ ವಾಘೋಲೆ ಮಾತನಾಡಿ, “ವಿಶ್ವದಲ್ಲಿ ಶೇ.20% ಜನರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ, ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಆರು ಜನರಲ್ಲಿ ಒಬ್ಬ ವ್ಯಕ್ತಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ” ಎಂದರು.
ಮನೋರೋಗ ವಿಭಾಗದ ಮುಖ್ಯಸ್ಥರಾದ ಡಾ. ಶ್ವೇತಾ ಪಾಟೀಲ್ ಮಾತನಾಡಿ, “ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕದ ಬೆಳವಣಿಗೆ. ಯುವಕರು ಆಧುನಿಕ ತಂತ್ರಜ್ಞಾನದ ಜೊತೆಗೆ ಮಾದಕ ಪದಾರ್ಥಗಳ ಸೇವನೆ ಮಾನಸಿಕ ಜೀವನದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತಿದೆ. ಮಾನಸಿಕ ಕಾಯಿಲೆಯಿಂದ ಬಳಲುವ ರೋಗಿಗಳು ಬ್ರಿಮ್ಸ್ ಮಾನಸಿಕ ವಿಭಾಗಕ್ಕೆ ಭೇಟಿ ನೀಡಿ ಆಪ್ತಸಮಾಲೋಚನೆ ಮತ್ತು ಸೂಕ್ತ ಚಿಕಿತ್ಸೆ ಪಡೆದುಕೊಂಡು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು” ಎಂದು ಕರೆ ನೀಡಿದರು.
ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ನಾಗರಾಜ ಮಠ ಮಾತನಾಡಿ, “ವಿಶೇಷವಾಗಿ ವಿಕಲಚೇತನರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದು ಕಳವಳಕಾರಿ, ಸೂಕ್ತ ಸಲಹೆ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆ ಪಡೆಯಲು” ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಹಚ್ಚುವ AI ಆಧಾರಿತ ತಪಾಸಣೆ ಶೀಘ್ರ ಆರಂಭ: ಆರೋಗ್ಯ ಸಚಿವ ಗುಂಡೂರಾವ್
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಪೂರ್ಣಿಮಾ ಡಾ. ಬಾಬುರಾವ, ಡಾ. ಪ್ರಿತಂ, ಡಾ. ಶಿವಕುಮಾರ ಸಂಗನ ಡಾ. ಮಲ್ಲಿಕಾರ್ಜುನ ಹಾಗೂ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ. ರಾಜೇಶ ಹಾಗೂ ಡಾ ಶಾಲನಿ ನಿರೂಪಿಸಿದರು.