- ಕರಾವಳಿ ಭಾಗದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿದ ಸಚಿವರು
- ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಕುಟುಂಬಕ್ಕೆ ಪರಿಹಾರ ವಿತರಣೆ
ಮಳೆಯಿಂದ ರಾಜ್ಯದಲ್ಲಿ ಈವರೆಗೆ 21 ಜನ ಜೀವ ಕಳೆದುಕೊಂಡಿದ್ದು ಅವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ. ಅವಶ್ಯಕತೆ ಇರುವ ಕಡೆ ಕಾಳಜಿ ಕೇಂದ್ರ ತೆರೆಯಲಾಗುತ್ತಿದೆ. ಸರ್ಕಾರ ಸಂತ್ರಸ್ತರಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಕರಾವಳಿ ಭಾಗದ ನೆರೆಪೀಡಿತ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಕುಮಟಾ ತಾಲ್ಲೂಕಿನ ಪೋಸ್ಟ್ ಬೆಟ್ಟುಳಿಯಲ್ಲಿ ಎರಡು ದಿನಗಳ ಹಿಂದೆ ಗದ್ದೆಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಸತೀಶ ನಾಯ್ಕ ಮತ್ತು ಉಲ್ಲಾಸ ಗಾವಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ತಲಾ 5 ಲಕ್ಷ ಮೊತ್ತದ ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡಿದರು.
“ಕೇಂದ್ರದ ನಾಲ್ಕು ಎನ್.ಡಿ.ಆರ್.ಎಫ್, ರಾಜ್ಯದ ಐದು ಎಸ್.ಡಿ.ಆರ್.ಎಫ್. ತುಕಡಿ ಪ್ರಕೃತಿ ವಿಕೋಪ ಪರಿಹಾರ ಕಾರ್ಯಕ್ಕೆ ಸನ್ನದ್ಧವಾಗಿದೆ. ಸದ್ಯಕ್ಕೆ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಪಡೆಯನ್ನೂ ಸ್ಥಳದಲ್ಲಿ ನಿಯೋಜಿಸಲಾಗಿದೆ. ಎಂತಹದೇ ಪ್ರಾಕೃತಿಕ ವಿಕೋಪ ಉಂಟಾದರೂ ವಿಪತ್ತು ನಿರ್ವಹಣಾ ಪಡೆಯನ್ನು ಸಂಪರ್ಕಿಸಿ ಸಹಾಯ ಪಡೆಯಬೇಕು” ಎಂದು ಸಚಿವರು ಸೂಚಿಸಿದ್ದಾರೆ.

“ಕರಾವಳಿ ಕರ್ನಾಟಕ ಭಾಗದ ಮಳೆ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೆಟ್ಕುಳಿ ಗ್ರಾಮದಲ್ಲಿ ಮಳೆಯಿಂದಾಗಿ ಭಾರೀ ಅನಾಹುತವಾಗಿದ್ದು ಈ ಬಗ್ಗೆ ಅಧಿಕಾರಿಗಳು ಹಾಗೂ ಸಂತ್ರಸ್ತರಿಂದ ಸಚಿವ ಕೃಷ್ನಭೈರೇಗೌಡ ಅವರು ಮಾಹಿತಿ ಪಡೆದರು.
“ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ನೆರೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಶೀಘ್ರದಲ್ಲಿ 5 ಲಕ್ಷ ಪರಿಹಾರ ನೀಡಬೇಕು, ಜನರ ಸಮಸ್ಯೆಗಳಿಗೆ ತುರ್ತು ಸ್ಪಂದಿಸಬೇಕು ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಜರುಗಿಸಬೇಕು” ಎಂದು ಸೂಚನೆ ನೀಡಿದರು.
ಮೋಡ ಬಿತ್ತನೆ ಸದ್ಯಕ್ಕಿಲ್ಲ
ರಾಜ್ಯದಾದ್ಯಂತ ಪ್ರಸ್ತುತ ಉತ್ತಮ ಮಳೆಯಾಗುತ್ತಿದ್ದು, ಸದ್ಯಕ್ಕೆ ಮೋಡ ಬಿತ್ತನೆ ಮಾಡುವ ಆಲೋಚನೆ ಇಲ್ಲ. ಜುಲೈನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆಯೇ ವರದಿ ನೀಡಿತ್ತು. ಅದರಂತೆ ಸರಾಸರಿಗಿಂತಲೂ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಮೋಡ ಬಿತ್ತನೆಯ ಚಿಂತನೆ ಸದ್ಯಕ್ಕಿಲ್ಲ ಎಂದು ಮಾಹಿತಿ ನೀಡಿದರು.