ಉತ್ತರಪ್ರದೇಶದ ಮೀರತ್‌ನಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಪತ್ನಿ ಹತ್ಯೆಗೈದು ಬಳಿಕ ಡ್ರಮ್‌ನಲ್ಲಿರಿಸಿದ್ದ ಪ್ರಕರಣ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಲೆ ಮಾಡಿ, ಬಳಿಕ ಆಕೆಯ ದೇಹವನ್ನು ಸೂಟ್ಕೇಸ್ನಲ್ಲಿ ತುಂಬಿಟ್ಟಿದ್ದ ಭಯಾನಕ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮಹಾರಾಷ್ಟ್ರ ಮೂಲದ ರಾಕೇಶ್ ಎಂಬಾತ ತನ್ನ ಪತ್ನಿ ಗೌರಿ ಸಾಂಬೆಕರ್ (32) ಎಂಬವಳನ್ನು ಕೊಲೆಗೈದು, ಬಳಿಕ ಮೃತದೇಹವನ್ನು ಸೂಟ್ಕೇಸ್ನಲ್ಲಿ ತುಂಬಿಟ್ಟಿರುವ ಬಗ್ಗೆ ವರದಿಯಾಗಿದೆ.

ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಪತಿ ರಾಕೇಶ್‌ನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಪತ್ನಿಯನ್ನು ಕೊಂದ ಬಳಿಕ ‘ಗೌರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ’ ಎಂದು ಆಕೆಯ ಪೋಷಕರಿಗೆ ಕರೆ ಮಾಡಿ ತಿಳಿಸಿರುವುದಾಗಿ ತಿಳಿದು ಬಂದಿದೆ. ಇದರಿಂದ ಬೆಚ್ಚಿಬಿದ್ದ ಗೌರಿ ಪೋಷಕರು ಕೂಡಲೇ ಮಹಾರಾಷ್ಟ್ರದ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ರಾಕೇಶ್ ಕೃತ್ಯವನ್ನು ತಿಳಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನ ಹುಳಿಮಾವು ಪೊಲೀಸರಿಗೆ ದೂರು ರವಾನಿಸಿದ್ದಾರೆ. ನಂತರ ಬೆಂಗಳೂರು ಪೊಲೀಸರು ಮನೆಗೆ ಭೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಸ್ಥಳಕ್ಕೆ ಡಿಸಿಪಿ ಸಾರಾ ಫಾತಿಮಾ ಸಹ ಭೇಟಿ ಪರಿಶೀಲನೆ ನಡೆಸಿದ್ದಾರೆ.

”ಮಹಾರಾಷ್ಟ್ರ ಪೊಲೀಸರು ನಮ್ಮ ಕಂಟ್ರೋಲ್ ರೂಂಗೆ ನೀಡಿದ ಮಾಹಿತಿ ಮೇರೆಗೆ ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮನೆಯ ಬಾತ್ ರೂಮ್‌ನಲ್ಲಿ ಸೂಟ್ ಕೇಸ್‌ನಲ್ಲಿ ಮಹಿಳೆ ಗೌರಿಯ ಮೃತದೇಹ ಪತ್ತೆಯಾಗಿದೆ. ಪರಾರಿಯಾಗಿದ್ದ ಆರೋಪಿ ರಾಕೇಶ್‌ನನ್ನು ವಶಕ್ಕೆ ಪಡೆಯಲಾಗಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡದ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ” ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮಾಹಿತಿ ನೀಡಿದ್ದಾರೆ.
A 32-year-old woman was found murdered and her body stuffed in a suitcase at her rented house in Hulimavu, Bengaluru. The accused has been identified as Rakesh Rajendra Khedekar and the deceased as Gauri Anil Sambrekar. The couple are said to be originally from Maharashtra and… pic.twitter.com/Xb8tUXS7TY
— Mohammed Zubair (@zoo_bear) March 27, 2025
2 ವರ್ಷಗಳ ಹಿಂದೆ ಮದುವೆಯಾಗಿದ್ದ ರಾಕೇಶ್ ಹಾಗೂ ಗೌರಿ ಒಂದು ತಿಂಗಳ ಹಿಂದಷ್ಟೆ ದೊಡ್ಡಕಮ್ಮನಹಳ್ಳಿಯಲ್ಲಿ ಮನೆ ಪಡೆದು ವಾಸವಿದ್ದರು. ಇಬ್ಬರೂ ಸಹ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ವರ್ಕ್ ಫ್ರಂ ಹೋಮ್ ಇದ್ದ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
