- ಅರಣ್ಯ ಇಲಾಖೆ ಕಾರ್ಯಾಚರಣೆಯಿಂದ ಗ್ರಾಮಸ್ಥರಲ್ಲಿ ಆತಂಕ
- 40 ವರ್ಷಗಳಿಂದ 38 ಎಕರೆ ಒತ್ತುವರಿ ಮಾಡಿಕೊಂಡಿದ್ದ ಒಬ್ಬನೇ ವ್ಯಕ್ತಿ
ರಕ್ಷಿತ ಅರಣ್ಯವನ್ನು ಒತ್ತುವರಿ ಮಾಡಿ, ಬೆಳೆಸಲಾಗಿದ್ದ 28 ಎಕರೆ ಕಾಫಿ ತೋಟವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹಾನುಬಾಳು ಹೋಬಳಿಯ ಮರಗಡಿ, ಅಚ್ಚನಹಳ್ಳಿ ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.
ಗ್ರಾಮಗಳ ಸರ್ವೆ ನಂಬರ್ 54ರಲ್ಲಿ ಸುಮಾರು 72.2 ಎಕರೆ ಪ್ರದೇಶವನ್ನು ಅರಣ್ಯ ರಕ್ಷಣಾ ಕಾಯ್ದೆ ಸೆಕ್ಷನ್ 04 ಮತ್ತು 17 ಅಡಿ ಮೀಸಲು ಅರಣ್ಯವೆಂದು ಘೋಷಿಸಲಾಗಿತ್ತು. ಆದರೆ, 72.2 ಎಕರೆ ಮೀಸಲು ಅರಣ್ಯ ಪ್ರದೇಶದ ಪೈಕಿ, 38.20 ಎಕರೆಯನ್ನು ಸನತ್ ಬಿನ್ ರಘುಪತಿ ಎಂಬುವರು ಒತ್ತುವರಿ ಮಾಡಿಕೊಂಡು ಸುಮಾರು 40 ವರ್ಷಗಳಿಂದ ಕಾಫಿ ತೋಟ ನಿರ್ಮಿಸಿದ್ದರು.
ಗುರುವಾರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿಯಾಗಿದ್ದ ಅರಣ್ಯ ಪ್ರದೇಶವನ್ನು ತೆರವುಗೊಳಿಸಿದ್ದಾರೆ. ಕಾಫಿ ತೋಟ ತೆರವು ಕಾರ್ಯಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲೇಶಪುರ ಗ್ರಾಮಾಂತರ ಠಾಣಾ ಪೋಲೀಸರು ಬಿಗಿ ಬಂದೋಬಸ್ ಏರ್ಪಡಿಸಿದ್ದರು.
ಕಾರ್ಯಾಚರಣೆ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ವಲಯ ಅರಣ್ಯ ಅಧಿಕಾರಿ ಶಿಲ್ಪಾ, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಬಸವರಾಜ್ ಹಾಗೂ ಇತರರು ಇದ್ದರು.
ಚುನಾವಣೆ ನೀತಿ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಅಕ್ರಮ ಒತ್ತುವರಿದಾರರ ನಿದ್ದೆಗೆಡಿಸಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವು ದಶಕಗಳಿಂದ ಮನೆ ನಿರ್ಮಿಸಿಕೊಂಡು ಸಾಗುಳಿ ಮಾಡುತ್ತಿದ್ದವರಲ್ಲಿ ಆತಂಕ ಉಂಟು ಮಾಡಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು | ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ
ಕಾರ್ಯಾಚರಣೆ ಮುಂದುವರಿಯಲಿದೆ
ಈ ಕುರಿತು ಸಕಲೇಶಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿಲ್ಪಾ ಅವರು ಈದಿನ.ಕಾಮ್ ಜೊತೆಗೆ ಮಾತನಾಡಿ, “ಹಾನುಬಾಳು ಭಾಗದಲ್ಲಿ ಇನ್ನೂ ಕೆಲವರು ಮೀಸಲು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಎಲ್ಲವನ್ನೂ ಶೀಘ್ರವೇ ತೆರವು ಮಾಡಲಾಗುವುದು. ಇಂದು ಸನತ್ ಬಿನ್ ರಘುಪತಿ ಎಂಬುವರು ಒತ್ತುವರಿ ಮಾಡಿಕೊಂಡಿದ್ದ 38.20 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ತೆರವು ಮಾಡಲಾಗಿದೆ” ಎಂದು ತಿಳಿಸಿದರು.