ಬೆಂಗಳೂರು ಕೊಡವ ಸಮಾಜದ ವತಿಯಿಂದ ಕೊಡಗು ಜಿಲ್ಲೆ ಮಡಿಕೇರಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳದಲ್ಲಿ 65 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅವರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಎಸ್. ಸುರೇಶ್ ನಂಜಪ್ಪ , ಯುವ ಪೀಳಿಗೆ ಯಾವುದೇ ಉದ್ಯೋಗ ಪಡೆದರೂ ಹುಟ್ಟಿದ ಊರನ್ನು ಮರೆಯಬಾರದು ಎಂದು ಸಲಹೆ ನೀಡಿದರು. ಹುಟ್ಟಿದ ಊರು ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಬದುಕಿನ ಮೌಲ್ಯಗಳನ್ನು ರೂಪಿಸುತ್ತದೆ. ಆದ್ದರಿಂದ ಅವಕಾಶವಿದ್ದಾಗ ಕೊಡಗಿನ ಅಭಿವೃದ್ಧಿಗೆ ಕೈಜೋಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಬೆಂಗಳೂರು ಕೊಡವ ಸಮಾಜಕ್ಕೆ 114 ವರ್ಷಗಳ ಇತಿಹಾಸವಿದ್ದು, ಕೊಡಗಿನ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಹಿಳಾ ಕಾಲೇಜಿನಲ್ಲಿ ಮೊದಲ ಹೆಜ್ಜೆ ಇಡಲಾಗಿದೆ. ಸಮಾಜವು ಯಾವುದೇ ಜಾತಿ-ಧರ್ಮ ಭೇದವಿಲ್ಲದೆ ಅರ್ಹ ಅಭ್ಯರ್ಥಿಗಳಿಗೆ, ವಿಶೇಷವಾಗಿ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗಾವಕಾಶ ಒದಗಿಸಲು ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ಪಿಯುಸಿ ಮತ್ತು ಪದವಿ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳಲ್ಲಿ ಮುಂದಿನ ದಾರಿ ಕುರಿತು ಗೊಂದಲ ಉಂಟಾಗುತ್ತದೆ. ಇದನ್ನು ನಿವಾರಿಸಲು ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗಿದೆ. ಸಣ್ಣ ಉದ್ಯೋಗವೆಂದು ಹಿಂಜರಿಯದೆ ಸಿಕ್ಕ ಅವಕಾಶವನ್ನು ಬಳಸಿಕೊಂಡರೆ ಭವಿಷ್ಯದಲ್ಲಿ ದೊಡ್ಡ ಅವಕಾಶಗಳಿಗೆ ದಾರಿ ತೆರೆದುಕೊಳ್ಳುತ್ತದೆ ಎಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿಯೂ ಇಂತಹ ಮೇಳಗಳನ್ನು ಆಯೋಜಿಸುವುದಾಗಿ ಭರವಸೆ ನೀಡಿದರು.

ಅಡೆಕ್ಕೊ ಇಂಡಿಯಾ ಸಂಸ್ಥೆಯ ನಿರ್ದೇಶಕ ಕೊಂಗಂಡ ಜಿ. ಸಂಕೇತ್ ಚೆಂಗಪ್ಪ ಅವರು ಮಾತನಾಡಿ, “ಅಡೆಕ್ಕೊ” ಸಂಸ್ಥೆ ಸ್ವಿಜರ್ಲ್ಯಾಂಡ್ ಮೂಲದ ವಿಶ್ವದ ಅತಿದೊಡ್ಡ ಮಾನವ ಸಂಪನ್ಮೂಲ ಮತ್ತು ನೇಮಕಾತಿ ಸೇವಾ ಸಂಸ್ಥೆಯಾಗಿದ್ದು, ತಾತ್ಕಾಲಿಕ ಹಾಗೂ ಶಾಶ್ವತ ಉದ್ಯೋಗಾವಕಾಶಗಳ ಜೊತೆಗೆ ತರಬೇತಿ ಮತ್ತು ಸಂಬಳ ನಿರ್ವಹಣೆ ಸೇವೆಗಳನ್ನು ಒದಗಿಸುತ್ತದೆ. ಉದ್ಯೋಗ ಮೇಳಗಳ ಮೂಲಕ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿರುವುದಾಗಿ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲೆ ಎಚ್.ಪಿ. ನಿರ್ಮಲ ಅವರು ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳಿಗಾಗಿ ಕಠಿಣ ಸ್ಪರ್ಧೆ ಇರುವುದರಿಂದ ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಕೊಡಗಿನಲ್ಲಿ ಕೌಶಲ್ಯಾಧಾರಿತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಕಂಪನಿಗಳು ಹೆಚ್ಚಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಉದ್ಯೋಗ ಮೇಳದಲ್ಲಿ ಕೊಡಗಿನ ವಿವಿಧ ಭಾಗಗಳಿಂದ 75ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಅವರಲ್ಲಿ 65 ಮಂದಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜು ವತಿಯಿಂದ ಚಿರಿಯಪಂಡ ಎಸ್. ಸುರೇಶ್ ನಂಜಪ್ಪ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಹಬೀಬ್ ಅಹಮದ್, ರೇವತಿ ರಮೇಶ್, ರಿಯಾಜುದ್ದೀನ್, ಪ್ರೇಮ ನಿಂಗಪ್ಪ, ಪ್ರೇಮ ಕೃಷ್ಣಪ್ಪ, ಅಡೆಕ್ಕೊ ಇಂಡಿಯಾ ಸಂಸ್ಥೆಯ ನಿರ್ದೇಶಕರಾದ ದೀಪಕ್ ಗುಪ್ತ, ಬೆಂಗಳೂರು ಕೊಡವ ಸಮಾಜದ ಉಪಾಧ್ಯಕ್ಷ ಕಿಶನ್ ಕಾವೇರಿಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಜಾಗೃತ ಕರ್ನಾಟಕ ಸಂಘಟನೆಯಿಂದ ಯುವಜನರಿಗೆ ಏ.20ರಂದು ಭಾಷಣ–ಪ್ರಬಂಧ ಸ್ಪರ್ಧೆ
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಡಾ. ಎಚ್.ಎಸ್. ವೇಣುಗೋಪಾಲ್ ಸ್ವಾಗತಿಸಿದರು. ಉದಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಎಚ್.ಪಿ. ಸುದೇಶ್ ವಂದಿಸಿದರು.





