- ಜು.27ರಂದು ಸುಮಾರು 21 ಲಕ್ಷ ಮೌಲ್ಯದ ಟೊಮೆಟೋ ತುಂಬಿಕೊಂಡು ಜೈಪುರಕ್ಕೆ ಹೊರಟಿದ್ದ ಲಾರಿ
- ಲಾರಿ ಚಾಲರಿಬ್ಬರ ಮೇಲೆ ಕಳ್ಳತನದ ಅನುಮಾನ; ಮಂಡಿ ವ್ಯಾಪಾರಿಗಳಿಂದ ಕೋಲಾರ ನಗರ ಠಾಣೆಗೆ ದೂರು
ಟೊಮೆಟೋ ಬೆಲೆ ಗಗನಕ್ಕೇರುತ್ತಿರುವ ಮಧ್ಯೆಯೇ ಕಳ್ಳತನದ ವರದಿಗಳೂ ಕೂಡ ಹೆಚ್ಚಾಗುತ್ತಿದೆ. ಈ ನಡುವೆ ಕೋಲಾರದಿಂದ ರಾಜಸ್ಥಾನಕ್ಕೆ ಹೊರಟಿದ್ದ ಟೊಮೆಟೋ ಲಾರಿ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಸುಮಾರು 21 ಲಕ್ಷ ಮೌಲ್ಯದ ಟೊಮೆಟೋ ತುಂಬಿದ್ದ ಲಾರಿ ನಾಪತ್ತೆಯಾಗಿರುವುದಾಗಿ ಕೋಲಾರ ಎಪಿಎಂಸಿಯ ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದ 21 ಲಕ್ಷ ಮೌಲ್ಯದ ಟೊಮೆಟೋ ತುಂಬಿದ್ದ ಲಾರಿ ನಾಪತ್ತೆಯಾಗಿದೆ. ಕೋಲಾರದ ಮೆಹಕ್ ಟ್ರಾನ್ಸ್ಪೋರ್ಟ್ ಸಂಸ್ಥೆಗೆ ಸೇರಿದ ಲಾರಿ ಇದಾಗಿತ್ತು. ಇದರಲ್ಲಿ ಎ.ಜೆ.ಟ್ರೇಡರ್ಸ್ ಸಕ್ಲೇನ್ ಹಾಗೂ ಎಸ್.ವಿ.ಟಿ ಟ್ರೇಡರ್ಸ್ ಮುನಿರಡ್ಡಿ ಎಂಬುವವರಿಗೆ ಸೇರಿದ್ದ 21 ಲಕ್ಷ ಮೌಲ್ಯದ ಟೊಮೆಟೋಗಳಿದ್ದವು. ಲಾರಿ ಜು.30ರಂದು ಜೈಪುರಕ್ಕೆ ತಲುಪಬೇಕಿತ್ತು. ಚಾಲಕ ನಿನ್ನೆಯಿಂದ(ಜು.29) ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಳ್ಳತನವಾಗಿರುವ ಅನುಮಾನ ವ್ಯಕ್ತಪಡಿಸಿ ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜಸ್ಥಾನ ನೋಂದಾಯಿತ RJ 04 GC 3756 ನಂಬರಿನ ಲಾರಿಯಲ್ಲಿ ಇಬ್ಬರು ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಹೆಸರು ಹೇಳಲಿಚ್ಛಿಸದ ಟ್ರಾನ್ಸ್ಪೋರ್ಟ್ ಸಂಸ್ಥೆಯ ವ್ಯಕ್ತಿಯೋರ್ವರು, ‘ಲಾರಿಯಲ್ಲಿ ಇಬ್ಬರು ಚಾಲಕರು ತೆರಳಿದ್ದರು. ರಾಜಸ್ಥಾನದಿಂದ ಬಂದಿದ್ದ ಲಾರಿ ಕೋಲಾರದ ಎಪಿಎಂಸಿಯಿಂದ ಟೊಮೆಟೋ ತುಂಬಿಕೊಂಡು ಜು.27ರಂದು ಹೋಗಿತ್ತು. ನಿಗದಿತ ಸ್ಥಳಕ್ಕೆ 300 ಕಿ.ಮೀ ಇರುವಾಗ ನಮಗೆ ಕೊನೆಯ ಕರೆ ಬಂದಿತ್ತು. ಕೊನೆಯ ಟೋಲ್ ಪ್ಲಾಝಾದಿಂದ ಲಾರಿ ಪಾಸಾಗಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಸಂಸ್ಥೆಯ ಮಾಲೀಕರು ಕೋಲಾರದಿಂದ ಜೈಪುರಕ್ಕೆ ಮಾಹಿತಿ ಪಡೆಯಲು ತೆರಳಿದ್ದಾರೆ’ ಎಂದು ತಿಳಿಸಿದರು.