ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಮುಗಿಸಿಕೊಂಡು ಸಹಪಾಠಿಗಳೊಂದಿಗೆ ಕೆರೆಯಲ್ಲಿ ಈಜಲು ಹೋಗಿದ್ದ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಮೈನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಂದ್ರಾಳ ಗ್ರಾಮದ ಫಕೀರಗೌಡ (15) ಸಾವಿಗೀಡಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ಫಕೀರಗೌಡ ಮೈನಹಳ್ಳಿಯ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಶಾಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು, ಬಳಿಕ ಸಂಜೆ ನಾಲ್ವರು ಗೆಳೆಯರೊಂದಿಗೆ ಗ್ರಾಮದ ಹೊರವಲಯದ ಕೆರೆಯಲ್ಲಿ ಈಜಾಡಲು ತೆರಳಿದ್ದನು. ಕೆರೆಯಲ್ಲಿ ಈಜಾಡುವ ವೇಳೆ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾಗದೆ ಸಾವನಪ್ಪಿದ್ದಾನೆ. ಕೂಡಲೇ ಜೊತೆಯಲ್ಲಿದ್ದ ಸ್ನೇಹಿತರು ಶಾಲೆಯ ಶಿಕ್ಷಕರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಡೆಂಘೀ ಜ್ವರ: ವಿದ್ಯಾರ್ಥಿನಿ ಸಾವು
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶಿಕ್ಷಕರು, ಗ್ರಾಮಸ್ಥರು ಕೆರೆಯಲ್ಲಿ ಮುಳುಗಿದ ವಿದ್ಯಾರ್ಥಿಯನ್ನು ಹುಡುಕಾಟ ನಡೆಸಿದ ವೇಳೆ ಕೆರೆಯ ಕೆಸರಿನಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.
ಕೊಪ್ಪಳ ಜಿಲ್ಲೆಯ ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
