- ಸಿಂಧುತ್ವ ಪ್ರಮಾಣಪತ್ರ, ಅಭ್ಯಾಸ ಪ್ರಮಾಣ ಪತ್ರ ಪಡೆಯಲು ನಡೆಸಿದ ಪ್ರಯತ್ನ ವಿಫಲವಾಗುವ ಆತಂಕ
- 2022ರಲ್ಲಿ ಪದವಿ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಶಿಕ್ಷಕ ಹುದ್ದೆಗೆ ಆಯ್ಕೆಯಾದ ಯುವಕ ಸಾವು
ಸ್ಪರ್ಧಾತ್ಮಕ ಪರೀಕ್ಷೆ ಬರೆದು ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದ ಯುವಕನೋರ್ವ ಆಡಳಿತ ವ್ಯವಸ್ಥೆ ವಿರುದ್ದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಚಿಕ್ಕಬೂದುರು ಗ್ರಾಮದ ಸಿ.ಚನ್ನಬಸವ (30) ಮೃತ ಯುವಕ . ಪದವಿ ಶಿಕ್ಷಕರ ನೇಮಕಾತಿಯಲ್ಲಿ ಆಯ್ಕೆಯಾಗಿದ್ದನು. ಹುದ್ದೆಗೆ ಸಂಬಂಧಿಸಿದ ಸಿಂಧುತ್ವ ಪ್ರಮಾಣಪತ್ರ ಸೇರಿದಂತೆ ಅಭ್ಯಾಸ ಪ್ರಮಾಣ ಪತ್ರ ಪಡೆಯಲು ನಡೆಸಿದ ಪ್ರಯತ್ನ ವಿಫಲವಾಗಬಹುದೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ..
ಕಳೆದ ಒಂದು ವರ್ಷದಿಂದ ನೇಮಕ ಪ್ರಕ್ರಿಯೆ ಮುಂದೂಡುತ್ತಲೇ ಬಂದ ಸರ್ಕಾರದ ನಿರ್ಧಾರದಿಂದ ರೋಸಿ ಹೋಗಿದ್ದನು. ಬೆಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಶಾಲೆಗೆ ಹೋಗಿ ವ್ಯಾಸಂಗ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದು, ಸಕಾಲಕ್ಕೆ ಪ್ರಮಾಣ ಪತ್ರ ದೊರೆಯದೇ ಇರುವುದರಿಂದ ಮನನೊಂದು ಸ್ವಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.
“ನನ್ನ ಸಾವಿಗೆ ನಾನೇ ಕಾರಣ, ಸ್ವಇಚ್ಛೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತೊಂದರೆಗೆ ಒಳಗಾಗಬೇಡಿ ಎಂದು ಪೋಷಕರಿಗೆ ಡೆತ್ ನೋಟ್ ನಲ್ಲಿ ಬರೆದ ಯುವಕ ʼನನ್ನ ಪೋಷಕರು ದೂರು ಸಲ್ಲಿಸಲು ಠಾಣೆಗೆ ಬಂದರೆ ಪ್ರಕರಣ ತೆಗೆದುಕೊಳ್ಳಬೇಡಿʼ” ಎಂದು ಪೋಲೀಸ್ ರಿಗೂ ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾನೆ.
ಈ ಸುದ್ದಿ ಓದಿದ್ದೀರಾ ? ರಾಯಚೂರು | ಸರ್ಕಾರ ಭೂಮಿಯಲ್ಲಿ ಅಕ್ರಮ; ಭೂ ಮಂಜೂರಾತಿಗೆ ಆಗ್ರಹ
2022 ರಲ್ಲಿ ಪದವಿ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಶಿಕ್ಷಕ ಹುದ್ದೆಗೆ ಆಯ್ಕೆಯಾದ ಚನ್ನಬಸವ ಶಿಕ್ಷಕನಾಗುವ ಕನಸು ನನಸಾಗುವ ಹೊಸ್ತಿಲಿನಲ್ಲಿ ಸಾವಿಗೆ ಶರಣಾಗಿರುವುದು ದುರ್ದೈವದ ಸಂಗತಿ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.