ಮುಂದೆ ಹೋಗುತ್ತಿದ್ದದ ಲಾರಿಗೆ ಹಿಂದಿನಿಂದ ಸರಕು ವಾಹನ ಢಿಕ್ಕಿ ಹೊಡೆದಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ, ಗುರುವಾರ ಬೆಳ್ಳಬೆಳಗ್ಗೆಯೇ ಘಟನೆ ನಡೆದಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ ಅಥಣಿಯ ಉಮೇಶ್ ನಾಗಪ್ಪ ಮತ್ತು ಸಂತೋಷ್ ಸುರೇಶ್ ಎಂದು ಗುರುತಿಸಲಾಗಿದೆ.
ಬೆಳಗಾವಿಯಿಂದ ದ್ರಾಕ್ಷಿ ತುಂಬಿಕೊಂಡು ಬೆಂಗಳೂರಿಗೆ ವಾಹನ ಬರುತ್ತಿತ್ತು. ಈ ವೇಳೆ, ಚಿಕ್ಕನಹಳ್ಳಿ ಬಳಿ ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ವಾಹನ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.