ಕೆಎಸ್‌ಆರ್‌ಟಿಸಿ ವಿದ್ಯುತ್‌ಚಾಲಿತ ಬಸ್ ಮತ್ತು ಸರಕು ಸಾಗಣೆ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಬಸ್ ನಿವಾರ್ಹಕ ಸಾವನ್ನಪ್ಪಿರುವ ಘಟನೆ ರಾಮನಗರ ಹೊರವಲಯದಲ್ಲಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನಡೆದಿದೆ.
ಗುರುವಾರ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್, ರಾಮಗನರದ ಜಯಪುರ ಬಳಿ ಎದುರುಗಡೆ ಹೋಗುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಸ್‌ನ ಮುಂದಿನ ಸೀಟ್‌ನಲ್ಲಿ ಕುಳಿತಿದ್ದ ನಿರ್ವಾಹಕ ಸಾವನ್ನಪ್ಪಿದ್ದಾರೆ.
ಸರಕು ಸಾಗಣೆ ವಾಹನದಲ್ಲಿದ್ದ ಶೀಟ್‌ಗಳು ಬಸ್ ಮುಂಭಾಗಕ್ಕೆ ನುಗ್ಗಿವೆ. ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್, ರಸ್ತೆದಾಟಿ, ಪಕ್ಕದ ಜಮೀನಿಗೆ ಇಳಿದಿದೆ.
ಬಸ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗಷ್ಟೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಸ್ತೆಯ ಪರಿಶೀಲನೆ ನಡೆಸಿದ್ದು, ರಸ್ತೆ ಸುರಕ್ಷತಾ ಆಡಿಟ್ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ಕೂಡ ರಸ್ತೆ ಪರಿಶೀಲನೆ ನಡೆಸಿದ್ದು, ಪೊಲೀಸರು ಹೆದ್ದಾರಿಗಳಲ್ಲಿ ಸಮವಸ್ತ್ರದೊಂದಿಗೆ ಕಾಣಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಳೆದ ಐದು ತಿಂಗಳಲ್ಲಿ 570ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ ಎಂದು ವರದಿಯಾಗಿದೆ.