ಪಿ.ಸಿ ಮತ್ತು ಪಿಎನ್ ಡಿಟಿ ಕಾಯ್ದೆಯ ಪ್ರಕಾರ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಜಿಲ್ಲೆಯಲ್ಲಿರುವ ಯಾವುದೇ ಸ್ಕ್ಯಾನಿಂಗ್ ಕೇಂದ್ರದಲ್ಲಿ ಭ್ರೂಣಲಿಂಗ ಪತ್ತೆ ನಡೆಯದಂತೆ ಎಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪಿಸಿ ಮತ್ತು ಪಿಎನ್ ಡಿಟಿ ಜಿಲ್ಲಾ ಸಲಹಾ ಸಮಿತಿಯ ಸದಸ್ಯರಿಗೆ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಪಿಸಿ ಮತ್ತು ಪಿಎನ್ ಡಿಟಿ ಕಾಯಿದೆ 1994 ರ ಅಡಿಯಲ್ಲಿ ಜಿಲ್ಲಾ ತಪಾಸಣಾ ಮತ್ತು ಪರಿಶೀಲನಾ ಸಮಿತಿ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್ ಕೇಂದ್ರಗಳು ಕಂಡುಬಂದಲ್ಲಿ ಪಿಸಿ ಮತ್ತು ಪಿಎನ್ ಡಿಟಿ ಕಾಯ್ದೆಯ ಅಡಿಯಲ್ಲಿ ಅವುಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೆಲವು ದಿನಗಳ ಹಿಂದೆ ಈ ಕುರಿತು ರಾಜ್ಯದಲ್ಲಿ ಹಲವು ಕಡೆ ಇಂತಹ ಪ್ರಕರಣಗಳು ಕಂಡು ಬಂದಿದ್ದು, ಇಂತಹ ಯಾವುದೇ ಪ್ರಕರಣ ನಮ್ಮ ಜಿಲ್ಲೆಯಲ್ಲಿ ನಡೆಯಬಾರದು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
“ಸಮಿತಿ ಸದಸ್ಯರು ಜಿಲ್ಲೆಯಲ್ಲಿರುವ 96 ಸ್ಕಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಹಾಗೂ ಜಿಲ್ಲೆಯಲ್ಲಿ ಅನಧಿಕೃತವಾಗಿ ಸ್ಕ್ಯಾನಿಂಗ್ ಕೇಂದ್ರಗಳು ನಡೆಯುತ್ತಿರುವ ಬಗ್ಗೆಯೂ ಪತ್ತೆ ಹಚ್ಚಬೇಕು. ತಾಯಿ ಮರಣ ಪ್ರಕರಣ ನಡೆಯದಂತೆ ವೈದ್ಯರು ಮುಂಜಾಗ್ರತೆ ವಹಿಸಬೇಕು. ಅಂದಾಗ ಇಂತಹ ಪ್ರಕರಣಗಳು ನಡೆಯುವುದು ಕಡಿಮೆಯಾಗುತ್ತವೆ ಮತ್ತು ಇದರ ಯಾವುದೇ ಮಾಹಿತಿಯನ್ನು ಮುಂಚಿತವಾಗಿ ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ತಿಳಿಸಬೇಕು” ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕೋಲ್ಕತ್ತಾ ನಕಲಿ ವೈದ್ಯರನ್ನು ಕರೆಸಿ ಎಚ್ಚರಿಕೆ ನೀಡುವುದರ ಜೊತೆಗೆ 25 ಸಾವಿರ ರೂ. ದಂಡ ಹಾಕಿ ಇಂತಹ ಪ್ರಕರಣಗಳು ಮರುಕಳಿಸಿದರೆ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಹೇಳಿದರು.
“ಜಿಲ್ಲೆಯ ಸಾರ್ವಜನಿಕರು ನಕಲಿ ವೈದ್ಯರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾವುದೇ ಪ್ರಕರಣ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಅರ್ಹತೆ ಹೊಂದಿರುವ ವೈದರು ವೈದ್ಯಕೀಯ ವೃತ್ತಿ ಮಾಡಲು ಕೆಪಿಎಮ್ಎ ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿರಬೇಕು” ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನಿರಗುಡಿ. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಕ್ ಡೋಂಗ್ರೆ, ಸ್ತ್ರೀ ರೋಗ ತಜ್ಞೆ ಡಾ.ಆರತಿ, ರೇಡಿಯಾಲಾಜಿಸ್ಟ್ ಡಾ.ಅಮಿತ ಶಾಹ, ಬೀದರ ಐಎಮ್ಎ ಅಧ್ಯಕ್ಷ ಡಾ. ಸಂಜಯ ಚಂದಾ, ವಕೀಲರಾದ ಉಮೇಶ್ ಪಾಂಡ್ರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.