ನಟ ದರ್ಶನ್ ಅಭಿಮಾನಿಗಳು ಹಾಗೂ ಆತನ ಸಹಚರರು ಜೈ ಡಿ ಬಾಸ್ ಎಂದು ಕೂಗುತ್ತಾ ತನಗೆ ಚಾಕು ಚುಚ್ಚಲು ಬಂದಿದ್ದರು ಎಂದು ಆರೋಪಿಸಿ ದೂರು ಕೊಟ್ಟ ಬಗ್ಗೆ ಹೇಳಿಕೆ ದಾಖಲಿಸಲು ಹೋಗಿದ್ದ ನಟ ಪ್ರಥಮ್ ಮುಖಕ್ಕೆ ದಲಿತ ಸಂಘಟನೆಯ ಹೋರಾಟಗಾರರು ಮಸಿ ಬಳಿದಿರುವ ಘಟನೆ ಗುರುವಾರ ಸಂಜೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಪೊಲೀಸ್ ಠಾಣೆ ಮುಂದೆಯೇ, ಹಲವು ಪೊಲೀಸರ ಎದುರಿನಲ್ಲಿಯೇ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದೆ.

ಪೊಲೀಸ್ ಠಾಣೆಯ ಮುಂದೆ ಬಂದಿದ್ದ ಪ್ರಥಮ್, ಒಂದು ನಿಮಿಷ ಮಾತನಾಡುತ್ತೇನೆ ಎನ್ನುತ್ತಿರುವಾಗಲೇ ಕರ್ನಾಟಕ ಭೀಮ್ ಸೇನೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಜು ರಾವಣ್, ಕೈಯಲ್ಲಿದ್ದ ಮಸಿಯನ್ನು ಮುಖಕ್ಕೆ ಬಳಿದಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಸ್ಥಳದಲ್ಲಿಯೇ ಇದ್ದ ಪೊಲೀಸರು, ಇನ್ನಷ್ಟು ದಾಳಿಯಾಗುವುದನ್ನು ತಡೆದಿದ್ದಾರೆ.
‘ಅಂಬೇಡ್ಕರ್ ಅವರನ್ನು ಅವಮಾನ ಮಾಡುವವರನ್ನು ಬಿಡುವುದಿಲ್ಲ. ಮಸಿ ಬಳಿದಿದ್ದಕ್ಕೆ ನಮ್ಮ ಮೇಲೆ ದೂರು ದಾಖಲಿಸಿದರೂ ಹೆದರುವುದಿಲ್ಲ. ನಟ ಪ್ರಥಮ್ ವಿರುದ್ಧ ಕೂಡ ಎಫ್‌ಐಆರ್ ದಾಖಲಿಸಿಬೇಕು’ ಎಂದು ಮಸಿ ಬಳಿದ ಮಂಜು ಪೊಲೀಸರೆದರು ತಿಳಿಸಿದ್ದಾರೆ.
“ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಸಣ್ಣ ಪುಟ್ಟ ತಪ್ಪುಗಳಿವೆ. ನಾನು ಸತ್ತು ಸ್ವರ್ಗ ಸೇರಿದ ಬಳಿಕ ಈ ಬಗ್ಗೆ ಬಾಬಾ ಸಾಹೇಬರ ಜೊತೆ ಚರ್ಚೆ ಮಾಡಬೇಕು” ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟ ಪ್ರಥಮ್ ಹೇಳಿಕೆ ನೀಡಿರುವುದಾಗಿ ದಲಿತ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ಈ ಹೇಳಿಕೆಯು ಸಂವಿಧಾನದ ಬಗ್ಗೆ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಮಾಡಿರುವ ಅವಮಾನ ಎಂದು ಆರೋಪಿಸಿದ ದಲಿತ ಸಂಘಟನೆಯ ಮುಖಂಡರು, ಪ್ರಥಮ್ ವಿರುದ್ಧ ದೂರು ದಾಖಲಿಸಿ, ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
