ಇತ್ತೀಚಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಾಹನ ಮಾಲೀಕರ ಮೇಲೆ ಇಲ್ಲಸಲ್ಲದ ನಿಯಮಗಳನ್ನು ಹೇರಿ ಸಂಕಷ್ಟಕ್ಕೆ ಈಡುಮಾಡಿದ್ದು, ಇದೀಗ ಕ್ಯೂಆರ್ ಕೋಡ್ ಹಾಕುವಂತೆ ತಿಳಿಸಿದ್ದು, ಇದಕ್ಕೆ ದಾವಣಗೆರೆ ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸ್ ಫೋರ್ಟ್ ಏಜೆಂಟರ ಸಂಘ ವಿರೋಧ ವ್ಯಕ್ತ ಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ, ಹೈ ಸೆಕ್ಯೂರಿಟಿ ರಿಜಿಸ್ಪೆಷನ್ ಪ್ಲೇಟ್ ಹಾಕಬೇಕೆಂದು ಸೂಚಿಸಿದ್ದು, ವಾಹನ ಮಾಲೀಕರಿಗೆ ಹೆಚ್ಚುವರಿ ಖರ್ಚು, ಹೊರೆ ಆಗಲಿದೆ. ರೆಫೆಕ್ಟಿವ್ ಟೇಪ್ ಮಾರುಕಟ್ಟೆಯಲ್ಲಿ 53ರೂ. ಗೆ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕಂಪನಿಗಳಿಂದ ಲಭ್ಯವಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಮೋಟಾರ್ ವಾಹನ ಕಾಯ್ದೆಯಲ್ಲಿ ಯಾವುದೇ ಕಾಯಿದೆ ಇರದಿದ್ದರೂ ಆದೇಶ ಹೊರಡಿಸಿದೆ ಎಂದು ಹೇಳಿದರು.
ತಮಗೆ ಬೇಕಾದ ಮಾರಾಟಗಾರರಿಗೆ ಸರ್ಕಾರದಿಂದ ಅಧಿಕೃತ ಮಾರಾಟಗಾರರು ಎಂದು ನೇಮಿಸಿ ಜನರ ಬಳಿ ಸುಲಿಗೆ ಮಾಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಮೋಟಾರ್ ವಾಹನ ಕಾಯ್ದೆಯಲ್ಲಿ ಎಆರ್ಎಐ ಮಾನ್ಯತೆ ಪಡೆದ ರಿಪ್ಲೆಕ್ಟಿವ್ ಟೇಪ್ ಅನ್ನು ವಾಹನಗಳಿಗೆ ಅಳವಡಿಸಬೇಕೆಂದಿದೆ. ಸುರಕ್ಷತಾ ದೃಷ್ಟಿಯಿಂದ ಇದಕ್ಕೆ ನಮ್ಮ ವಿರೋಧವಿಲ್ಲ.
2018ರ ನಂತರ ವಾಹನಗಳಿಗೆ ನಿಮ್ಮ ಆದೇಶದ ಪ್ರಕಾರ ಹೊಸದಾಗಿ ಉತ್ಪಾದನೆಯಾಗುವ ವಾಹನಗಳಿಗೆ ಅಳವಡಿಸಿ ಹಳೆಯ ವಾಹನಗಳಿಗೆ ವಿನಾಯಿತಿ ನೀಡಬೇಕು. ಲಾರಿ ಮಾಲೀಕರು, ಚಾಲಕರು ಯಾವುದೇ ನೈಸರ್ಗಿಕ ವಿಕೋಪಗಳಿಗೆ ಹೆದರದೇ ಕೊರೊನಾ ಸಂದರ್ಭದಲ್ಲಿ ನಮ್ಮ ಜೀವದ ಹಂಗನ್ನೂ ತೊರೆದು ಅಗತ್ಯ ವಸ್ತು ಸಾಗಣಿಕೆಯಲ್ಲಿ ವ್ಯತ್ಯಾಸವಾಗದಂತೆ ಕೆಲಸಮಾಡಿದ್ದಾರೆ. ಈ ನಿಟ್ಟಿನಲ್ಲಿ ಲಾರಿ ಚಾಲಕರಿಗೆ ಪ್ರತಿ 100 ಕಿ.ಮಿಗೆ ಒಂದರಂತೆ ತಂಗುದಾಣ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಈ ಕುರಿತು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅವರ ಮುಂದಿನ ಕ್ರಮ ನೋಡಿ ಕೊಂಡು ನಮ್ಮ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭೀಮಣ್ಣ, ಎಸ್.ಕೆ. ಮಲ್ಲಿಕಾರ್ಜುನ, ಮಹಾಂತೇಶ್ ಒಣರೊಟ್ಟಿ, ವಿಜಯಕುಮಾರ್ ಇತರರು ಇದ್ದರು.