ರಾಷ್ಟ್ರಿಯ ಮಟ್ಟದ ವಿದ್ಯಾರ್ಥಿ ಸಂಘಟನೆಯಾಗಿ ಗುರುತಿಸಿಕೊಂಡಿರುವ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್‌ಐಓ) ಇದರ ಕರ್ನಾಟಕ ಘಟಕಕ್ಕೆ 2025-26ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಬೆಂಗಳೂರಿನ ಆದಿ ಅಲ್ ಹಸನ್ ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಹೂಡೆಯಲ್ಲಿರುವ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ‘ಎಂಎ ಇಂಟರ್ ನ್ಯಾಷನಲ್ ರಿಲೇಷನ್‌ಶಿಪ್’ನಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಆದಿ ಅಲ್ ಹಸನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ದೆಹಲಿಯ ಜಾಮಿಯಾ ಮಿಲ್ಲೀಯಾ ಇಸ್ಲಾಮಿಯಾ ವಿವಿಯಿಂದ ಎಂಎ ಪದವೀಧರರಾಗಿರುವ ಇವರು, ಬೆಂಗಳೂರಿನ ನಿವಾಸಿಯಾಗಿದ್ದಾರೆ. ಆದಿ ಅಲ್ ಹಸನ್ ಅವರು, ಎಸ್‌ಐಓ ರಾಷ್ಟ್ರೀಯ ಸಲಹಾ ಸಮಿತಿ ಹಾಗೂ ರಾಜ್ಯ ಸಲಹಾ ಸಮಿತಿಯ ಸದಸ್ಯರೂ ಕೂಡ ಆಗಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅಮೀನ್ ಅಲ್ ಹಸನ್ ಅವರ ಸುಪುತ್ರರಾಗಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಮುಹಮ್ಮದ್ ಸಾದ್ ಬೆಳಗಾಮಿ ಅವರು ಚುನಾವಣೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹಳಿಗೆ ಬಂದ ಸರ್ಕಾರ: ಆಡಳಿತ ಚುರುಕುಗೊಳ್ಳಲಿ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ
ಈ ಸಂದರ್ಭದಲ್ಲಿ ಎಸ್ ಐ ಓ ನೂತನ ರಾಷ್ಟ್ರೀಯ ಅಧ್ಯಕ್ಷರಾದ ತೆಲಂಗಾಣದ ಅಬ್ದುಲ್ ಹಫೀಝ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಅನೀಸ್ ರಹ್ಮಾನ್, ಎಸ್‌ಐಓ ಕರ್ನಾಟಕ ಘಟಕದ ನಿರ್ಗಮನ ರಾಜ್ಯಾಧ್ಯಕ್ಷರಾದ ಝೀಶಾನ್ ಅಖಿಲ್ ಸಿದ್ದೀಕಿ ಸೇರಿದಂತೆ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
