ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗೆ ತಕ್ಕಂತೆ ಹೊಂದುಕೊಂಡು ಸುಧಾರಿತ ಬೇಸಾಯ ಕ್ರಮಗಳನ್ನು ಅವಳವಡಿಸಿಕೊಳ್ಳಬೇಕು ಎಂದು ಬೀದರ್ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ಅವರು ರೈತರಿಗೆ ಸಲಹೆ ನೀಡಿದ್ದಾರೆ.
ಬೀದರ್‌ನಲ್ಲಿರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ಕೃಷಿ ಸಂಶೋಧನಾ ಕೇಂದ್ರ ಹಾಗೂ ಭಾರತ ಹವಾಮಾನ ವಿಭಾಗ ಆಯೋಜಿಸಿದ್ದ ‘”ಕೃಷಿಯಲ್ಲಿ ಬದಲಾಗುತ್ತಿರುವ ಹವಾಮಾನದ ಪರಿಣಾಮಗಳು ಹಾಗೂ ವಿವಿಧ ಬೆಳೆ ಪದ್ಧತಿಗಳ ಮಹತ್ವ’ ಕುರಿತು ರೈತ ಜಾಗೃತಿ ಕಾರ್ಯಕ್ರಮ ನಡೆದಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಡಾ. ಸುನೀಲ ಕುಮಾರ ಎನ್.ಎಮ್., “ಹವಾಮಾನ ಸಂಬಂಧಿತ ಮಳೆಯ ಮುನ್ಸೂಚನೆಯ ಲಾಭ ಮಾಹಿತಿ ಪಡೆದುಕೊಂಡು ತಮ್ಮ ದೈನಂದಿನ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಹೆಚ್ಚಿನ ಇಳುವರಿ ಪಡೆಯಲು ಸಲಹೆ ನೀಡಿದರು. ಕೃಷಿಯಲ್ಲಿ ಆಗುವ ನಷ್ಟವನ್ನು ಅವುಗಳಿಂದ ಹೇಗೆ ಕಡಿಮೆಗೊಳಿಸಬೇಕು” ಎಂದು ರೈತರಿಗೆ ತಿಳಿಸಿಕೊಟ್ಟರು.
ಕೇಂದ್ರ ಉಗ್ರಾಣ ಸಂಸ್ಥೆಯ ವ್ಯವಸ್ಥಾಪಕರಾದ ರೀತಾ ಬನ್ನಸೂಧ್ ಮಾತನಾಡಿ, ಹವಾಮಾನ ಆಧಾರಿಸಿ ದವಸ ಧಾನ್ಯಗಳನ್ನು ಯಾವ ರೀತಿ ಉಗ್ರಾಣದಲ್ಲಿ ಶೇಖರಿಸಿ ಅವುಗಳ ಗುಣಮಟ್ಟವನ್ನು ದೀರ್ಘಕಾಲದವರೆಗೆ ಕಾಪಾಡುವುದು ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಉಗ್ರಾಣದ ವಿವಿಧ ಸವಲತ್ತುಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ಸುನೀಲ ಕುಲಕರ್ಣಿ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಮುಂಬರುವ ಹವಾಮಾನ ವೈಪರಿತ್ಯ ಮತ್ತು ಅವುಗಳಿಂದ ಹೇಗೆ ನಾವು ರಕ್ಷಿಸಿಕೊಳ್ಳಬೇಕು ಕುರಿತು ತಿಳಿಸಿದರು.
ಕಲಬುರಗಿ ಸಹ ಸಂಶೋಧನಾ ನಿರ್ದೇಶಕ ಡಾ.ಬಿ.ಎಂ.ದೊಡಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹವಾಮಾನ ಪರಿಸ್ಥಿತಿ ಅನುಗುಣವಾಗಿ ಹೊಸ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸುವುದರ ಮಾರ್ಗದರ್ಶನ ನೀಡಿದರು.ತೋಟಗಾರಿಕೆ ಮತ್ತು ಅರಣ್ಯ ಬೆಳೆಗಳ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ರೈತ ಜಾಗೃತಿ ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಡಾ.ಸುನೀಲ ಕುಲಕರ್ಣಿ, ಬಸವರಾಜ ಬಿರಾದಾರ, ಡಾ.ಆರ್.ಎಲ್.ಜಾಧವ್, ಮತ್ತು ಡಾ.ಜ್ಞಾನದೇವ ಬಿ. ಡಾ. ಮಲ್ಲಿಕಾರ್ಜುನ ಎನ್. ವಿವಿಧ ವಿಷಯದ ಕುರಿತು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬದುಕಿನಲ್ಲಿ ಜಿಗುಪ್ಸೆ; ನದಿಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ
ಬೇಸಾಯ ಶಾಸ್ತ್ರದ ಉಪನ್ಯಾಸಕ ಡಾ. ಆರ್.ಎಲ್. ಜಾಧವ, ಸ್ವಾಗತಿಸಿದರು, ರೋಹಿತ್ ಬಿರಾದಾರ ನಿರೂಪಿಸಿದರು, ವೈಜಿನಾಥ ಕೆ.ವಂದಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಸುಮಾರು 185 ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಾಭ ಪಡೆದುಕೊಂಡರು.