ಗ್ರಾಮೀಣ ಆರ್ಥಿಕತೆಯ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು: ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವುದೇ ಸರ್ಕಾರ?

Date:

Advertisements

ಗ್ರಾಮೀಣ ಜೀವನವನ್ನು ಹೊತ್ತೊಯ್ಯುವ ಪ್ರಮುಖ ಶಕ್ತಿಯೇ ಕೃಷಿ ಕೂಲಿ ಕಾರ್ಮಿಕರು. ರೈತನು ಬೆಳೆದ ಬೆಳೆ ಹೊಲದಿಂದ ಹೊಟ್ಟೆಗೆ ತಲುಪುವುದು ಅವರ ಬೆವರಿನಿಂದ. ಆದರೂ, ನಮ್ಮ ಸಮಾಜ ಹಾಗೂ ರಾಜಕೀಯದಲ್ಲಿ ಅವರ ಧ್ವನಿ ನಿರಂತರವಾಗಿ ಮೌನಗೊಳ್ಳುತ್ತಿದ್ದು, ಅವರ ಬೆವರಿಗೆ ಬೆಲೆ ಇಲ್ಲದಂತಾಗಿದೆ.

ರೈತರಿಗೆ ಹಲವು ಸಂಘಟನೆಗಳು, ಹೋರಾಟ ಸಮಿತಿಗಳು ಇರುವುದು ಕಂಡುಬರುತ್ತದೆ. ಆದರೆ ಕೃಷಿ ಕಾರ್ಮಿಕರಿಗೆ ಆ ರೀತಿಯ ಶಕ್ತಿಶಾಲಿ ಸಂಘಟನೆಗಳ ಕೊರತೆ ದೊಡ್ಡ ದುರ್ಬಲತೆ. ಇದರ ಪರಿಣಾಮವಾಗಿ ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ, ಮನೆ ಮನೆ ಹಕ್ಕು, ಆರೋಗ್ಯ ಶಿಕ್ಷಣದಂತಹ ಮೂಲಭೂತ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬಾರದಂತಾಗುತ್ತವೆ.

1951ರಲ್ಲಿ ಜಮೀನ್ದಾರಿ ಪದ್ಧತಿ ರದ್ದು ಮಾಡಿ, ರೈತರಿಗೆ ಭೂಸ್ವಾಮ್ಯ ಹಕ್ಕು ನೀಡಿದಾಗ, ಗ್ರಾಮೀಣ ಸಮಾಜದಲ್ಲಿ ದೊಡ್ಡ ಬದಲಾವಣೆಯಾಯಿತು. ಆದರೆ ಇಂದಿನ ದಿನಗಳಲ್ಲಿ ಭೂಹೀನ ಕೃಷಿ ಕೂಲಿ ಕಾರ್ಮಿಕರ ಬದುಕು ಅಸ್ಥಿರ ಉದ್ಯೋಗ, ಯಾಂತ್ರೀಕರಣದಿಂದ ಕೆಲಸದ ಕೊರತೆ, ಸಾಮಾಜಿಕ ಭದ್ರತೆಯ ಕೊರತೆ ಇದು ಅವರ ಬದುಕನ್ನು ಅಸ್ಥಿರಗೊಳಿಸಿವೆ.

Advertisements

ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಕಾರ್ಮಿಕರು ಅಸಂಘಟಿತ ವಲಯದಲ್ಲಿ ತೇಲಾಡುತ್ತಿದ್ದಾರೆ. ಒಂದು ದಿನ ಕೆಲಸ ಮತ್ತೊಂದು ದಿನ ನಿರುದ್ಯೋಗ ಎಂಬ ಅಸ್ಥಿರತೆಯ ಜೀವನ ನಡೆಸುತ್ತಿದ್ದಾರೆ. ಮನರೇಗಾ ಯೋಜನೆ ಕೆಲವೊಂದು ಭರವಸೆ ನೀಡಿದರೂ, ಅದನ್ನು ಸರಿಯಾಗಿ ಜಾರಿಗೊಳಿಸಲು ಸ್ಥಳೀಯ ಮಟ್ಟದ ಸಂಘಟನೆಗಳ ಒತ್ತಡ ಅಗತ್ಯ. ಮಹಿಳಾ ಕಾರ್ಮಿಕರ ಸಮಸ್ಯೆಗಳು ಇನ್ನಷ್ಟು ಗಂಭೀರ. ಅವರಿಗೆ ಕಡಿಮೆ ವೇತನ, ಆರೋಗ್ಯ ಸಮಸ್ಯೆಗಳು, ಮಕ್ಕಳ ಶಿಕ್ಷಣದ ಕೊರತೆಯಂತಹ ಸಮಸ್ಯೆಗಳ ಬಗ್ಗೆ ಮಾತನಾಡುವ ಧ್ವನಿಯೇ ಇಲ್ಲ.

ಕೃಷಿ ಕಾರ್ಮಿಕರ ಧ್ವನಿ ಮೌನವಾಗಿರುವಷ್ಟು ಕಾಲ, ಗ್ರಾಮೀಣ ಅಭಿವೃದ್ಧಿ ಸಂಪೂರ್ಣವಾಗುವುದಿಲ್ಲ. ಅವರ ಬೆವರಿಲ್ಲದೆ ಹೊಲದಲ್ಲೇನೂ ಬೆಳೆಯುವದಿಲ್ಲ. ಅವರ ಕೂಲಿ ಕೆಲಸ ನಮ್ಮ ಸಮಾಜದ ಶ್ರಮದ ನಿಜವಾದ ಪ್ರತಿಧ್ವನಿ. ಆ ಧ್ವನಿ ಕೇಳಿಸಬೇಕು, ಅದಕ್ಕೆ ಸಂಘಟಿತ ಶಕ್ತಿ ಬೇಕಾಗಿದೆ.

ಬೆಳಗಾವಿ ಜಿಲ್ಲೆಯ ಕೃಷಿ ಕೂಲಿ ಕಾರ್ಮಿಕ ಮಹಿಳೆ ಕಸ್ತೂರಿ ಮಾತನಾಡಿ, “ನಾವು ರೈತರ ಜಮೀನುಗಳಿಗೆ ಕಳೆ ತೆಗೆಯಲು, ಹೆಸರು ಕಾಳು ಬಿಡಿಸಲು, ಗೋವಿನ ಜೋಳದ ತೆನೆ ಮುರಿಯಲು, ಹೀಗೆ ಬೇರೆ ಬೇರೆ ಕೃಷಿ ಕಾರ್ಯಗಳಿಗೆ ಹೋಗುತ್ತೇವೆ. ಆದರೆ ಕೆಲವು ಸಲ ಕೆಲಸವೇ ಇರುವದಿಲ್ಲ. ಅಂತಹ ಸಂದರ್ಭಗಳಲ್ಲಿ ಮನೆಯಲ್ಲೇ ಇರಬೇಕಾಗುತ್ತದೆ. ಇದರಿಂದ ಮನೆಯ ಅಗತ್ಯಗಳನ್ನು ಪೊರೈಸಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದರು.

ಅಲ್ಲವ್ವ ಮಾತನಾಡಿ, “ಕೃಷಿ ಚಟುವಟಿಕೆಗಳು ಇದ್ದಾಗ ಮಾತ್ರ ಕೆಲಸ ಇರುತ್ತದೆ. ಇಲ್ಲದಿದ್ದರೆ ಕೆಲಸವೇ ಇಲ್ಲ. ರೈತರು ಕೊಡುವ ಕೂಲಿ ಮನೆ ನಡೆಸಲು ಸಾಕಾಗುವುದಿಲ್ಲ. ಹೀಗಾಗಿ ನಾವು ಬೇರೆ ಊರುಗಳಿಗೆ ಕೆಲಸಕ್ಕೆ ಹೋಗಬೇಕಾಗುತ್ತದೆ. ಮನರೇಗಾ ಕೆಲಸವು ನಮಗೆ ಕೆಲವು ದಿನಗಳು ಮಾತ್ರ ಸಿಗತ್ತದೆ. ವರ್ಷದಲ್ಲಿ 100 ದಿನಗಳು ಕೆಲಸ ಎನ್ನುತ್ತಾರೆ, 100 ದಿನ ಕೆಲಸ ಸಿಗುವದಿಲ್ಲ. ಆದ್ದರಿಂದ ಸರ್ಕಾರವು ಮನರೇಗಾ ಕೆಲಸದ ಅವಧಿಯನ್ನು ಹೆಚ್ಚಿಸಬೇಕು” ಎಂದು ಮನವಿ ಮಾಡಿದರು.

”ನಮ್ಮದು ಎರಡು ಎಕರೆಯಷ್ಟು ಮಾತ್ರ ಜಮೀನು ಇದ್ದು, ಸರಿಯಾಗಿ ಮಳೆಯಾದರೆ ಹೊಟ್ಟೆಪಾಡಿಗೆ ಆಗುವಷ್ಟು ದವಸ ಧಾನ್ಯಗಳನ್ನು ಬೆಳೆಯುತ್ತೇವೆ. ಸರಿಯಾದ ಸಮಯಕ್ಕೆ ಮಳೆ ಬಾರದಿದ್ದರೆ ಏನೂ ಸಿಗುವದಿಲ್ಲ. ಈ ಕಾರಣದಿಂದ ಬೇರೆಯವರ ಜಮೀನುಗಳಿಗೆ ದುಡಿಯಲು ಹೋಗುತ್ತೇವೆ. ರೈತರು ಕಷ್ಟದಲ್ಲಿರುವ ಕಾರಣ ಅವರು ತಮ್ಮ ಕೈಲಾದಷ್ಟು ಕೂಲಿ ಕೊಡುತ್ತಾರೆ. ಕೃಷಿ ಕೆಲಸಗಳು ಮುಗಿದ ನಂತರ ನಾವು ಹೊರ ರಾಜ್ಯಗಳಿಗೆ ದುಡಿಯಲು ಹೊಗುತ್ತೇವೆ. ಬಿತ್ತನೆಯ ಸಮಯದಲ್ಲಿ ಮತ್ತೆ ಊರಿಗೆ ಬರುತ್ತೇವೆ. ನಮಗೆ ಬ್ಯಾಂಕ್‌ಗಳಲ್ಲಿ ಸಾಲವನ್ನು ನೀಡುವದಿಲ್ಲ” ಎಂದು ಕೃಷಿ ಕಾರ್ಮಿಕ ಅಡಿವೆಪ್ಪ ತಮ್ಮ ಕಷ್ಟವನ್ನು ಹೇಳಿಕೊಂಡರು.

ಕೃಷಿ ಕಾರ್ಮಿಕ ಸಂಘಟನೆಯ ಮುಖಂಡ ಎಲ್ ಎಸ್ ನಾಯ್ಕ ಈ ದಿನ.ಕಾಮ್ ಜೊತೆ ಮಾತನಾಡಿ, “ಕೃಷಿ ಕೂಲಿ ಕಾರ್ಮಿಕರು ಅಸಂಘಟಿತರಾಗಿರುವುದರಿಂದ ಸರ್ಕಾರದ ಅನೇಕ ಕಲ್ಯಾಣ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇಂದಿನ ದಿನಗಳಲ್ಲಿ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಕಾರ್ಮಿಕರಿಗೆ ಶಾಶ್ವತವಾಗಿ ಕೂಲಿ ಕೆಲಸ ಸಿಗುತ್ತಿಲ್ಲ. ಕೃಷಿ ಚಟುವಟಿಕೆಗಳ ಕಾಲದಲ್ಲಿ ಮಾತ್ರ ಕೆಲಸ ದೊರಯುತ್ತಿದ್ದು, ಉಳಿದ ಸಮಯದಲ್ಲಿ ನಿರುದ್ಯೋಗಿ ಸ್ಥಿತಿ ಎದುರಾಗುತ್ತಿದೆ. ಮನರೇಗಾ ಯೋಜನೆಯಲ್ಲಿಯೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಸಿಗುತ್ತಿಲ್ಲ” ಎಂದರು.

ಇದನ್ನೂ ಓದಿದ್ದೀರಾ? ಕೊಪ್ಪಳ | ಜಮೀನನಲ್ಲಿ ಕಟ್ಟಿದ್ದ ಜಾನುವಾರುಗಳ ಕಳ್ಳತನ: ಕಂಗಾಲಾದ ರೈತ

“ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ಸಿಗುವಂತೆ ಹಾಗೂ ಕೃಷಿ ಕೂಲಿ ಕಾರ್ಮಿಕರ ಪರವಾಗಿ ಸರ್ಕಾರವು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಹಲವು ಹೋರಾಟಗಳನ್ನು ನಡೆಸಿದ್ದರೂ ಕೂಡ ಇದುವರೆಗೆ ಯಾವುದೇ ಯೋಜನೆ ಜಾರಿಗೆ ಬಂದಿಲ್ಲ. ಇದರ ಪರಿಣಾಮವಾಗಿ ಕೃಷಿ ಕೂಲಿ ಕಾರ್ಮಿಕರು ಗಂಭೀರ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರವು ಕೃಷಿ ಕೂಲಿ ಕಾರ್ಮಿಕರ ಪರವಾಗಿ ಯೋಜನೆ ಜಾರಿಗೆ ತರಬೇಕು” ಎಂದು ಹೇಳಿದರು.

ಗ್ರಾಮೀಣ ಆರ್ಥಿಕತೆಯ ಹೃದಯವೇ ಕೃಷಿ ಕೂಲಿ ಕಾರ್ಮಿಕರು. ರೈತರ ಹೊಲದಲ್ಲಿ ಕಳೆ ತೆಗೆಯುವುದರಿಂದ ಹಿಡಿದು ಬೆಳೆ ಕಟಾವು ಮಾಡುವವರೆಗೂ ಅವರ ಶ್ರಮವಿಲ್ಲದೆ ಕೃಷಿ ಸಾಗುವುದೇ ಅಸಾಧ್ಯ. ಆದರೂ ಅವರ ಬದುಕು ಕೂಲಿ ಕೆಲಸದ ಮೇಲೆ ಅವಲಂಬಿತವಾಗಿದೆ. ಬೆಳಗಾವಿ ಜಿಲ್ಲೆಯ ಕಸ್ತೂರಿ, ಅಲ್ಲವ್ವ, ಅಡಿವೆಪ್ಪ ಹೇಳಿರುವುದು ಈ ಹತಾಶೆಯ ನಿಜ ಜೀವನಕ್ಕೆ ಸಾಕ್ಷಿಯಾಗಿದೆ.

ಸುನಿಲ್
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಫ್ಲ್ಯಾಟ್ ನಲ್ಲಿ ಪ್ರಜ್ಞೆ ಇಲ್ಲದ ಒಂಟಿ ಮಹಿಳೆಯ ರಕ್ಷಣೆ; ಸೂಚನೆ

ಉಡುಪಿ ನಗರದ ತೆಂಕುಪೇಟೆಯ ವಸತಿ ನಿಲಯದ ಫ್ಲಾಟ್ ಒಂದರಲ್ಲಿ ಪ್ರಜ್ಞೆ ಇಲ್ಲದೆ...

ವಿಜಯನಗರ | ಬೀದಿ ನಾಯಿ ದಾಳಿ; 2 ವರ್ಷದ ಮಗು ಗಂಭೀರ

ವಿಜಯನಗರದ ಕೂಡ್ಲಿಗಿ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ನಗರದಲ್ಲಿ 2 ವರ್ಷದ...

ಮೈಸೂರು | ‘ಹಾರ್ಟಿ ಪಂಕ್ಚರ್’ ಹೊಸ ತಂತ್ರಜ್ಞಾನ ಗಿಡ ಮರಗಳ ಕೊರತೆ ನೀಗಿಸುತ್ತದೆ : ಸುರೇಶ್ ದೇಸಾಯಿ

ಮೈಸೂರಿನ ಭೋಗಾದಿ ಮುಖ್ಯ ರಸ್ತೆ ಬಳಿಯಿರುವ ಬನವಾಸಿ ತೋಟದಲ್ಲಿ ಭಾನುವಾರ ನಡೆದ...

ಡಿ ಕೆ ಶಿವಕುಮಾರ್‌ ಆರ್​ಎಸ್​ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಬೇಕು: ಬಿ ಕೆ ಹರಿಪ್ರಸಾದ್ ಆಗ್ರಹ

ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್‌ ಆರ್​ಎಸ್​ಎಸ್ ಗೀತೆ ಹಾಡಿದ್ದರೆ ಕ್ಷಮೆ...

Download Eedina App Android / iOS

X