ಆಧುನಿಕತೆಯ ಭರಾಟೆಯಲ್ಲಿರುವ ಯುವ ಸಮೂಹ ಸಾಹಿತ್ಯದಲ್ಲಿ ನಿರಾಸಕ್ತರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಸಾಹಿತ್ಯವನ್ನು ನುಂಗುತ್ತಿವೆ. ಇದರಿಂದ ಕನ್ನಡ ಸಾಹಿತ್ಯ ನಲುಗುವಂತಾಗಿದೆ ಎಂದು ಸಾಹಿತಿ ಹಾಗೂ ಖ್ಯಾತ ವೈದ್ಯ ಡಾ.ಕೆ.ಚಂದ್ರಶೇಖರ್ ಬೇಸರಗೊಂಡರು.
ನಗರದ ಗಾಂಧಿಭವನದಲ್ಲಿ ಭಾನುವಾರ ಡಾ.ಜೀಶಂಪ ಸಾಹಿತ್ಯ ವೇದಿಕೆ ಆಯೋಜಿಸಿದ್ದ 7ನೇ ಕನ್ನಡ ಅಕ್ಷರ ಜಾತ್ರೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಯುವ ಜನರಿಗೆ ಫೇಸ್‌ಬುಕ್ ಹಾಗೂ ಪಾಸ್‌ಬುಕ್ ಹೊರತುಪಡಿಸಿದರೆ ಸಾಹಿತ್ಯದ ಬುಕ್ ಬಗ್ಗೆ ಆಸಕ್ತಿಯೇ ಇಲ್ಲವಾಗಿದೆ. ಯುವಜನರಲ್ಲಿ ಸಾಹಿತ್ಯದ ಬಗ್ಗೆ ಚಿಂತನೆ ಹೆಚ್ಚುವಂತೆ ಮಾಡಬೇಕಾಗಿರುವುದು ಶಾಲಾ, ಕಾಲೇಜುಗಳ ಜವಾಬ್ದಾರಿಯಾಗಬೇಕಿದೆ. ಶಿಕ್ಷಕರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಆಧುನಿಕತೆಯ ಜೊತೆಗೆ ಕನ್ನಡ ಸಾಹಿತ್ಯವನ್ನು ಓದುವಂತೆ ಪ್ರೇರೇಪಿಸಬೇಕೆಂದು ಕರೆ ನೀಡಿದರು.
ಪೋಷಕರು ಸಹ ಮಕ್ಕಳಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲೀಷ್ ವ್ಯಾಮೋಹವನ್ನು ಹೆಚ್ಚಿಸುತ್ತಿದ್ದಾರೆ. ಬೇರೆ ಭಾಷೆ ಕಲಿಯುವುದು ತಪ್ಪಲ್ಲ. ಆದರೆ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡದಿರುವುದು ದೊಡ್ಡ ತಪ್ಪು. ಮನೆಗಳಲ್ಲಿ ಧಾರವಾಹಿಗಳು, ರಿಯಾಲಿಟಿ ಷೋಗಳ ಮೇಲೆ ಜನರಿಗಿರುವ ಆಸಕ್ತಿ, ಸಾಹಿತ್ಯದ ಮೇಲೆ ಇಲ್ಲ. ಪ್ರತಿಯೊಬ್ಬ ಕನ್ನಡಿಗನೂ ಸಹ ಸಾಹಿತ್ಯ ಕನ್ನಡದ ಮೇಲೆ ಅಭಿಮಾನ ಹೆಚ್ಚಿಸಿಕೊಂಡಾಗ ಭಾಷೆ ಮತ್ತು ಸಾಹಿತ್ಯ ಬೆಳೆಯಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ದರು.
ಕೆಲವೊಂದು ಪ್ರಶಸ್ತಿಗಳು ಯಾರಿಗೆ ಸಿಗುತ್ತದೆ ಎಂಬ ಮೇಲೆ ಪ್ರಶಸ್ತಿಗಳ ಗೌರವ ಹೆಚ್ವಾಗುತ್ತದೆ. ಅದರಂತೆ ಮಹನೀಯರಿಂದ ಪ್ರಶಸ್ತಿ ಪಡೆದಾಗ ಪ್ರಶಸ್ತಿ ಪಡೆದವರ ಮೌಲ್ಯವು ಸಹ ಹೆಚ್ಚಾಗುತ್ತದೆ. ಸಾಂಸ್ಕೃತಿಕ ಹಾಗೂ ಸಾಹಿತ್ಯಾತ್ಮಕ ಜಿಲ್ಲೆಯಾದ ಮಂಡ್ಯದಲ್ಲಿ ಸ್ಥಳೀಯ ಸಾಹಿತಿಗಳನ್ನು ಗುರುತಿಸಿ ಜೀಶಂಪ ಸಾಹಿತ್ಯ ವೇದಿಕೆಯಂತಹ ಸಂಘಟನೆಗಳು ಅವರಿಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುತ್ತಿರುವುದು ಹಾಗೂ ಸಾಹಿತಿಗಳನ್ನು ಗುರುತಿಸಿ ಪ್ರಶಸ್ತಿ ಕೊಡುತ್ತಿರುವುದು ನಿಜಕ್ಕೂ ಹೆಮ್ಮೆಯ ಕಾರ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಂಡ್ಯ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಸ್.ಈ.ಗಂಗಾಧರಸ್ವಾಮಿ ಮಾತನಾಡಿ, ಕನ್ನಡಿಗರು ಮೊದಲು ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಪರರಾಜ್ಯದವನೊಬ್ಬ ಕನ್ನಡಿಗನನ್ನು ಆತನ ತವರು ಭಾಷೆಯಲ್ಲಿ ಮಾತನಾಡಿಸಿದಾಗ, ನಮ್ಮವರು ಸಹ ಆತನ ಭಾಷೆಯಲ್ಲೇ ಮಾತನಾಡಲು ಯತ್ನಿಸುತ್ತಾರೆಯೇ ಹೊರತು ನಮ್ಮ ಭಾಷೆಯಲ್ಲಿ ಮಾತನಾಡುವ ಮೂಲಕ ಆತನಿಗೆ ಕನ್ನಡವನ್ನು ಅರ್ಥೈಸಿಕೊಳ್ಳುವಂತೆ ಯತ್ನಿಸುವುದಿಲ್ಲ. ಇದು ನಮ್ಮ ದುರ್ದೈವ. ಆ ಕಾರಣಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಪರಭಾಷಿಕರ ಹಾವಳಿ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ಅವಶ್ಯಕತೆ ಇದೆ. ಆದರೆ ಆಂಗ್ಲ ಭಾಷೆಯೇ ನಮ್ಮ ಪ್ರಪಂಚವಾಗಬಾರದು. ಶಿಕ್ಷಕರು ಮತ್ತು ಪೋಷಕರು ಸಹ ಮಕ್ಕಳಿಗೆ ಇಂಗ್ಲೀಷ್‌ನ್ನು ಒಂದು ಭಾಷೆಯನ್ನಾಗಿ ಕಲಿಯಲು ಅನುವು ಮಾಡಿಕೊಡಬೇಕೇ ಹೊರತು, ಸಂಪೂರ್ಣ ಇಂಗ್ಲೀಷ್‌ನಲ್ಲೇ ಮಾತನಾಡಬೇಕೆಂದು ಒತ್ತಡ ಏರಬಾರದು. ಹಾಗೆ ಮಾಡಿದರೆ ಮುಂದಿನ ಪೀಳಿಗೆಯವರು ಕನ್ನಡವನ್ನು ಹೇಗೆ ಉಳಿಸಿ, ಬೆಳೆಸುತ್ತಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ನೂರಕ್ಕೆ ಶೇ.90ರಷ್ಟು ಕನ್ನಡ ಮಾತನಾಡುವುದು ಮಂಡ್ಯ ಜಿಲ್ಲೆ. ಕನ್ನಡಕ್ಕೆ ಎಂದು ಕೊರತೆಯಾಗದಂತೆ ಕನ್ನಡದ ಸಾರ್ವಭೌಮತ್ವವನ್ನು ರಾಜ್ಯದಲ್ಲಿ ಎತ್ತಿ ಹಿಡಿಯುತ್ತಿರುವುದು ಸಹ ಮಂಡ್ಯ ಜಿಲ್ಲೆಯಾಗಿದ್ದು, ಕನ್ನಡ ಹೆಚ್ಚು ಮಾತನಾಡುವ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಡಿಲವಾಗಬಾರದು. ಕನ್ನಡವನ್ನು ಹೆಚ್ಚಾಗಿ ಬಳಸಿದಾಗ ಕನ್ನಡ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ. ಕನ್ನಡ ಬೆಳೆದಾಗ ಇಂಗ್ಲಿಷ್ ಪದಗಳಿಗೆ ಪರ್ಯಾಯವಾಗಿ ಕನ್ನಡ ಬೆಳೆದು ಭಾಷಾ ಬೆಳವಣಿಗೆ ಆಗುತ್ತದೆ. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಕನ್ನಡ ಬೆಳೆಯಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿವಿಧ ಗಣ್ಯರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಹಿತಿ ಎನ್.ಶ್ರೀಕಂಠೇಶ್ವರ ಶರ್ಮಾ ರಚನೆಯ ಜ್ಞಾನ ಚಿಂತಾಮಣಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ಮಂಡ್ಯ| ಆ.20ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮ್ಯಾರಥಾನ್
ವೇದಿಕೆಯಲ್ಲಿ ಅಕ್ಷರ ಜಾತ್ರೆಯ ಸಮ್ಮೇಳನಾಧ್ಯಕ್ಷರಾದ ಸಾಹಿತಿ ಈ.ಗಂಗೇಗೌಡ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಲುವೇಗೌಡ, ಡಾ.ಜೀಶಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಣ್ಣ, ಉದ್ಯಮಿ ಡಾ.ವಿ.ಎಸ್.ಶ್ರೀಕಾಂತ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.