ಬೆಂಗಳೂರಿನ ಕಾನ್ಶಿರಾಮ್ ನಗರದ ಅಂಬೇಡ್ಕರ್ ಭವನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಕಾನ್ಶಿರಾಮ್ ಸಾಹೇಬರ ಅನುಯಾಯಿಗಳ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ “ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ” ಎಂದು ಅಸ್ತಿತ್ವಕ್ಕೆ ತರಲಾಗಿದೆ ಎಂದು ಘೋಷಣೆ ಮಾಡಲಾಯಿತು.
ಬಹುಜನ ಸಮಾಜ ಚಳುವಳಿಯ ಹಿರಿಯ ನಾಯಕರಾದ ಮಾರಸಂದ್ರ ಮುನಿಯಪ್ಪ ಅವರನ್ನು ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜೊತೆಗೆ ಬಹುಜನ ಚಳುವಳಿಯ ಹಿರಿಯ ನಾಯಕರಾದ ಎಂ. ಗೋಪಿನಾಥ್ ಅವರನ್ನು ರಾಷ್ಟ್ರೀಯ ಸಂಯೋಜಕರನ್ನಾಗಿ ಮತ್ತು ಆರ್ ಮುನಿಯಪ್ಪ ಅವರನ್ನು ರಾಜ್ಯ ಸಂಯೋಜಕರನ್ನಾಗಿ ಆಯ್ಕೆ ಮಾಡಲಾಯಿತು.
ಅಲ್ಲದೆ, 12 ಜನ ಹಿರಿಯ ನಾಯಕರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿಯೂ, 21 ಜನ ಮುಖಂಡರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ, 17 ಜನ ಮುಖಂಡರನ್ನು ರಾಜ್ಯ ಕಾರ್ಯದರ್ಶಿಗಳನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. 24 ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾರಸಂದ್ರ ಮುನಿಯಪ್ಪ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಹೊಸ ಪಕ್ಷದ ಹುದ್ದೆಯನ್ನು ವಹಿಸಿಕೊಂಡು ಬಾಬಾ ಸಾಹೇಬರ ಮತ್ತು ಕಾನ್ಶಿರಾಮ್ ಜೀ ಅವರ ಕನಸು ನನಸು ಮಾಡಲು ಶ್ರಮಿಸುವುದಾಗಿ ಘೋಷಣೆ ಮಾಡಿದರು.
ಇದನ್ನು ಓದಿದ್ದೀರಾ? ಬೆಂಗಳೂರು ವಿಶ್ವವಿದ್ಯಾನಿಲಯ | ಸಂಗೀತ ನಿರ್ದೇಶಕ ಗುರುಕಿರಣ್, ಸಮಾಜ ಸೇವಕ ರಾಜಣ್ಣಗೆ ಗೌರವ ಡಾಕ್ಟರೇಟ್ ಪ್ರದಾನ
ಬೆಂಗಳೂರಿನ ಬಹುಜನ ಚಳುವಳಿಯ ನಾಯಕರಾದ ಮಾನ್ಯ ಎಮ್ ಸತೀಶ್ ಚಂದ್ರ ಅವರು ಸ್ವಾಗತಿಸಿದರು. ಸಭೆಯನ್ನು ಉದ್ದೇಶಿಸಿ ಎಂ. ಗೋಪಿನಾಥ್,ಆರ್ ಮುನಿಯಪ್ಪ, ವೆಂಕಟಗಿರಿಯಯ್ಯ, ಲೋಕೇಶ್ ಚಂದ್ರ, ಮಣ್ಣೂರ್ ನಾಗರಾಜ್, ಪ್ರೊಫೆಸರ್ ಮೊಹಮ್ಮದ್ ಆಲಿ, ಕೆ.ಬಿ.ವಾಸು, ವೈ.ಸಿ. ಕಾಂಬಳೆ, ಗುರುಮೂರ್ತಿ ಮುಂತಾದವರು ಮಾತನಾಡಿದರು.
ಕನಕಪುರದ ಆಕಾಶ್ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಮತ್ತು ಬಾಮ್ಸೆಫ್ ನ ಹಿರಿಯ ಮುಖಂಡರಾದ ಬಿಎಸ್ಎನ್ಎಲ್ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿ ಚಿಕ್ಕಣ್ಣ ವಂದಿಸಿದರು.


