ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ವರ್ಗಾವಣೆ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಂಡ್ಯದ ಸಹಾಯಕ ಕೃಷಿ ಅಧಿಕಾರಿಗಳು ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ದೂರಿಗೆ ಸಂಬಂಧಿಸಿದ ಪತ್ರವೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಆ ಪತ್ರ ನಕಲಿ ಪತ್ರ ಎಂದಿರುವ ಕೃಷಿ ಸಚಿವರು, ‘ಆರೋಪ ಮತ್ತು ದೂರಿಗೆ ಸಂಬಂಧಿಸದಂತೆ ಮುಖ್ಯ ಕಾರ್ಯದರ್ಶಿ ಅವರಿಂದ ತನಿಖೆ ನಡೆಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಮಂಡ್ಯ ಜಿಲ್ಲೆಯ ಏಳು ಮಂದಿ ಅಧಿಕಾರಿಗಳು ಚಲವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬ ಪತ್ರವು ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ, “ಮಂಡ್ಯ ಜಿಲ್ಲೆಯ ಅಧಿಕಾರಿಗಳು ದೂರು ನೀಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಸುದ್ದಿಯಾಗಿದೆ. ಅಧಿಕಾರಿಗಳ ಸೋಗೆಯಲ್ಲಿ ರಾಜ್ಯಪಾಲರಿಗೆ ನೀಡಿರುವ ದೂರು ಪಿತೂರಿ ಸ್ವರೂಪದಲ್ಲಿದ್ದು, ಇದು ನಕಲಿ ವ್ಯಕ್ತಿಗಳು ಮಾಡಿರುವ ಯೋಜಿತ ಸಂಚಾಗಿದೆ. ನಮ್ಮ ಸರ್ಕಾರದ ಜನಪರ ಆಡಳಿತವನ್ನು ಸಹಿಸಲಾಗದವರು ಸರ್ಕಾರಕ್ಕೆ ಕೆಟ್ಟ ಹಸರು ತರಲು ಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ನಕಲಿ ದೂರು ಪತ್ರ ಸೃಷ್ಟಿಸಿರುವ ಕುರಿತು ಮತ್ತು ತಮ್ಮ ವಿರುದ್ಧದ ಆರೋಪಗಳ ಕುರಿತು ಮುಖ್ಯ ಕಾರ್ಯದರ್ಶಿಯವರ ಮೂಲಕ ತನಿಖೆ ಮಾಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
