ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪಗಳಿದ್ದು, ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಈಗ ನಡೆದಿರುವ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಎನ್‌ಎಸ್‌ಯುಐ ಆಗ್ರಹಿಸಿದೆ.
ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪಕ್ಷ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, “ನೀಟ್ ಪರೀಕ್ಷೆಯ ಫಲಿತಾಂಶ ವಿವಾದಗಳಿಂದ ಕೂಡಿದ್ದು, ಭಾರಿ ಅಕ್ರಮ ನಡೆದಿರುವ ಸಾಧ್ಯತೆಯಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದ ಕಾರಣದಿಂದ ದೇಶದ ಲಕ್ಷಾಂತರ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಕೇಂದ್ರ ಸರ್ಕಾರವು ನೀಟ್ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.
“ನೀಟ್ ಫಲಿತಾಂಶ ವಿವಾದವಾಗಲು ಅನೇಕ ಅಂಶಗಳು ಕಾರಣವಾಗಿವೆ. ಒಟ್ಟು 67 ವಿದ್ಯಾರ್ಥಿಗಳು, ಮೊದಲ ಯಾಂಕ್ ಬಂದಿರುವುದು ಹಾಗೂ ಒಂದೇ ಪರೀಕ್ಷಾ ಕೇಂದ್ರದ 8 ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್ ಪಡೆದಿರುವುದು ಅಕ್ರಮವನ್ನು ಸೂಚಿಸುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ. ಒಂದೇ ತರಬೇತಿ ಕೇಂದ್ರ ಇವೆಲ್ಲವೂ ನೀಟ್ ಪರೀಕ್ಷೆಯಲ್ಲಿ ಅಕ್ರಮಕ್ಕೆ ಕಾರಣವಾಗಿವೆ” ಎಂದು ಆರೋಪಿಸಿದ್ದಾರೆ.
“ತರಾತುರಿಯಲ್ಲಿ ಕೃಪಾಂಕ ನೀಡಿರುವುದು, ಲೋಕಸಭೆ ಚುನಾವಣಾ ಫಲಿತಾಂಶ ದಿನದಂದು ನೀಟ್ ಫಲಿತಾಂಶ ಪ್ರಕಟಿಸಿರುವುದು ಅನುಮಾನಗಳನ್ನು ಹೆಚ್ಚಿಸಿದೆ. ನೀಟ್ ಪರೀಕ್ಷೆ ಫಲಿತಾಂಶ ನಂತರ ದೇಶದ ಕೆಲವೆಡೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ” ಎಂದಿದ್ದಾರೆ.
“ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದರಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು. ಈಗ ನಡೆದಿರುವ ಪರೀಕ್ಷೆ ರದ್ದುಪಡಿಸಿ ಕೂಡಲೇ ಮರು ಪರೀಕ್ಷೆ ನಡೆಬೇಕು” ಎಂದು ಆಗ್ರಹಿಸಿದ್ದಾರೆ.