- ‘ಲೋಕಸಭೆಯಲ್ಲಿ 28ಕ್ಕೆ 28 ಸ್ಥಾನ ನಾವು ಗೆಲ್ಲಲಿದ್ದೇವೆ’
- ‘ಲೋಕಸಭಾ ಚುನಾವಣೆ ಎಂದರೆ ದೇಶ ಉಳಿಸುವ ಚುನಾವಣೆ’
ಈ ದೇಶದಲ್ಲಿ ಕಾಂಗ್ರೆಸ್ ಬೇಡ ಎಂದು ಜನ ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿಗಳೆಲ್ಲರೂ ಕೂಡ ಒಟ್ಟಾಗಿ, ಕಾಂಗ್ರೆಸ್ ನಿರ್ನಾಮ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಈ ಹಿಂದೆ ಕಾಂಗ್ರೆಸ್ ವಿರೋಧಿ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಲಾಭ ಗಳಿಸಿತ್ತು. ಜೊತೆಗೆ ಕಳೆದ ಚುನಾವಣೆ ವೇಳೆ ರಾಜ್ಯದಲ್ಲಿ ಒಂದು ಸ್ಥಾನ ಸಹ ಗೆದ್ದಿತ್ತು. ಈ ಬಾರಿ 1 ಸ್ಥಾನ ಕೂಡ ಕಾಂಗ್ರೆಸ್‌ಗೆ ಹೋಗಬಾರದು ಎಂದು ತೀರ್ಮಾನ ಮಾಡಿದ್ದು, ರಾಜ್ಯದಲ್ಲಿ 28ಕ್ಕೆ 28 ಸ್ಥಾನ ನಾವು ಗೆಲ್ಲಲಿದ್ದೇವೆ” ಎಂದರು.
“ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮೂಲಕ ಒಟ್ಟಾಗಿ ಹೋಗುತ್ತೇವೆ. ಲೋಕಸಭಾ ಚುನಾವಣೆ ತಾ.ಪಂ, ಗ್ರಾ.ಪಂ, ಚುನಾವಣೆಯಂತಲ್ಲ. ಲೋಕಸಭಾ ಚುನಾವಣೆ ಅಂದರೆ ದೇಶವನ್ನು ಉಳಿಸುವ ಚುನಾವಣೆ. ಬಿಜೆಪಿ-ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿ, ಯಶಸ್ಸು ಗಳಿಸುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ-ಜೆಡಿಎಸ್ ಮೈತ್ರಿ: ಪಕ್ಷಗಳಿಗೆ ಅನಿವಾರ್ಯ, ರಾಜ್ಯಕ್ಕೆಷ್ಟು ಹಿತ?
ಲೋಕಸಭೆಯಲ್ಲಿ ಒಂದು ಸ್ಥಾನವನ್ನು ಕೂಡ ಕಾಂಗ್ರೆಸ್‌ಗೆ ಕೊಡಬಾರದು ಎಂಬುದು ರಾಜ್ಯದ ಜನರ ಅಪೇಕ್ಷೆ. ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಬಿಜೆಪಿ ಎರಡು ಸೀಟು ಕೂಡ ಬರಲ್ಲ ಅಂತ ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ಗೆ ಒಂದೇ ಸೀಟು ಬಂದಿತ್ತು. ಬಿಜೆಪಿ 25 ಸೀಟು ಗೆದ್ದಿತ್ತು. ಕಾಂಗ್ರೆಸ್ ವ್ಯಕ್ತಿಗತ ಯೋಚಿಸಿದರೆ, ನಾವು ದೇಶಕ್ಕಾಗಿ ಯೋಚಿಸುತ್ತೇವೆ” ಎಂದರು.
ಪಕ್ಷದಿಂದ ಹೊರ ಹೋಗುವವರ ವಿಚಾರವಾಗಿ ಪ್ರತಿಕ್ರಿಯಿಸಿ, “ಸೂಕ್ತ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಕೆಲವರು ಪಕ್ಷ ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಒಂದು ಕೋಟಿ ಸದಸ್ಯರಿದ್ದಾರೆ. ಎಲ್ಲರೂ ನಿಷ್ಠಾವಂತ ಕಾರ್ಯಕರ್ತರು” ಎಂದು ಹೇಳಿದರು.