ಈ ದಿನ ಸಂಪಾದಕೀಯ | ಬಿಜೆಪಿ-ಜೆಡಿಎಸ್‌ ಮೈತ್ರಿ: ಪಕ್ಷಗಳಿಗೆ ಅನಿವಾರ್ಯ, ರಾಜ್ಯಕ್ಕೆಷ್ಟು ಹಿತ?

Date:

ಬಿಜೆಪಿ-ಜೆಡಿಎಸ್ ಮೈತ್ರಿ ಎರಡೂ ಪಕ್ಷಗಳಿಗೆ ಅನಿವಾರ್ಯ. ʼರಾಜಕೀಯ ಅಧಿಕಾರ ಮತ್ತು ಅಸ್ತಿತ್ವಕ್ಕಾಗಿʼ ಎರಡೂ ಪಕ್ಷಗಳಿಗೆ ಈ ಮೈತ್ರಿ ಬೇಕಾಗಿದೆ. ಅದರ ಆಚೆಗೆ ಸೈದ್ಧಾಂತಿಕವಾಗಿ, ಸಾಮಾಜಿಕ ನೆಲೆಯ ದೃಷ್ಟಿಯಿಂದ ಅಥವಾ ಪಕ್ಷಗಳ ಮೂಲಭೂತ ವ್ಯಕ್ತಿತ್ವದ ದೃಷ್ಟಿಯಿಂದಲೇ ಈ ಮೈತ್ರಿ ಅಸಹಜವಾದುದಾಗಿದೆ. 

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಕೆಲಕಾಲದಲ್ಲೇ ಚಾಲನೆ ಪಡೆದುಕೊಂಡ ‘ಬಿಜೆಪಿ-ಜೆಡಿಎಸ್‌ ಮೈತ್ರಿ’ ಈಗ ಬಹುತೇಕ ನಿಕ್ಕಿಯಾದಂತಿದೆ. ಎರಡೂ ಪಕ್ಷಗಳಿಗೆ ಇದು ಅತ್ಯಂತ ಅನಿವಾರ್ಯವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ. ಬಿಜೆಪಿಗೆ ರಾಜ್ಯದಲ್ಲಿ ನಾಯಕರಿಲ್ಲ; 2014ರ ನಂತರ ಸ್ಥಳೀಯವಾಗಿ ಪ್ರಭಾವೀ ನಾಯಕರಾಗಬಹುದಾದವರನ್ನು ಅದರ ಹೈಕಮ್ಯಾಂಡ್‌ ಒಪ್ಪುವ ಸಾಧ್ಯತೆ ಇಲ್ಲ. ಜೊತೆಗೆ ಹಿಂದೂ-ಮುಸ್ಲಿಂ ಕಥನದಾಚೆ ಬಿಜೆಪಿಯನ್ನು ಮೇಲೆತ್ತಬಹುದಾದ ಯಾವುದೇ ಸಾಧ್ಯತೆ ಈಗ ಬಿಜೆಪಿಗಿಲ್ಲ.

ಜೆಡಿಎಸ್‌ಗೆ ಅಸ್ತಿತ್ವದ ಪ್ರಶ್ನೆ ಇದೆ. ದೊಡ್ಡ ಶಕ್ತಿಯ ಬಲ ಒದಗಿಬರದಿದ್ದರೆ ಇರುವ 19 ಶಾಸಕರಲ್ಲೇ ಕೆಲವರನ್ನು ಕಳೆದುಕೊಳ್ಳುವ ಭೀತಿ ಅದಕ್ಕಿದ್ದಂತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಲ ಗಣನೀಯವಾಗಿ ಹೆಚ್ಚಿದರೆ ಮಾತ್ರ ರಾಜ್ಯದಲ್ಲಿ ತಲೆಎತ್ತಿ ರಾಜಕಾರಣ ಮಾಡಬಹುದು ಎಂದು ಎರಡೂ ಪಕ್ಷಗಳು ಯೋಚಿಸಿದಂತಿವೆ. 2024ರಲ್ಲಿ ಮತ್ತೆ ಅಧಿಕಾರ ಪಡೆಯಲು ಜೆಡಿಎಸ್‌ ನಂತಹ ಪಕ್ಷಗಳನ್ನೂ ಆದರಿಸುವುದು ಅನಿವಾರ್ಯ ಎಂದು ಬಿಜೆಪಿಯು ಅಖಿಲ ಭಾರತ ಮಟ್ಟದಲ್ಲೇ ತೀರ್ಮಾನಿಸಿಯಾಗಿದೆ.

ಹೀಗಾಗಿ ʼರಾಜಕೀಯ ಅಧಿಕಾರ ಮತ್ತು ಅಸ್ತಿತ್ವಕ್ಕಾಗಿʼ ಎರಡೂ ಪಕ್ಷಗಳಿಗೆ ಈ ಮೈತ್ರಿ ಬೇಕಾಗಿದೆ. ಅದರ ಆಚೆಗೆ ಸೈದ್ಧಾಂತಿಕವಾಗಿ, ಸಾಮಾಜಿಕ ನೆಲೆಯ ದೃಷ್ಟಿಯಿಂದ ಅಥವಾ ಪಕ್ಷಗಳ ಮೂಲಭೂತ ವ್ಯಕ್ತಿತ್ವದ ದೃಷ್ಟಿಯಿಂದಲೇ ಈ ಮೈತ್ರಿ ಅಸಹಜವಾದುದಾಗಿದೆ. ಮುಸ್ಲಿಮರನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿ ಮಾಡಬೇಕು ಎಂಬ ಬಿಜೆಪಿಯ ಅಜೆಂಡಾ ಈಗ ಯಾವ ರೀತಿಯಲ್ಲೂ ಗುಪ್ತವಾಗಿಲ್ಲ. ಹೀಗಿರುವಾಗ ಸಿ.ಎಂ.ಇಬ್ರಾಹಿಂರನ್ನು ರಾಜ್ಯಾಧ್ಯಕ್ಷರನ್ನಾಗಿ (ಎಷ್ಟೇ ನಾಮ್ ಕೆ ವಾಸ್ತೆಯಾಗಿದ್ದರೂ) ಇಟ್ಟುಕೊಂಡಿರುವ ʼಪ್ರಾದೇಶಿಕ ಪಕ್ಷʼ ಜೆಡಿಎಸ್‌ ಬಿಜೆಪಿಯ ಜೊತೆಗೆ ಹೋಗುವುದು ಹೇಗೆ? ಯಾವುದಾದರೂ ಪ್ರಾದೇಶಿಕ ಪಕ್ಷ ಇಂದು ಬಿಜೆಪಿಯ ಜೊತೆಗೆ ಸಲೀಸಾಗಿ ಹೋಗುವುದೇ ಸಾಧ್ಯವಿಲ್ಲದ ರೀತಿಯಲ್ಲಿ ಎಲ್ಲ ಬಗೆಯ ಕೇಂದ್ರೀಕರಣಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ಅಷ್ಟು ಸಾಲದೆಂಬಂತೆ ಈಗ ಒಂದು ದೇಶ – ಒಂದು ಚುನಾವಣೆಯ ಅಸ್ತ್ರ ತೇಲಿಬಿಡಲಾಗಿದೆ. 2026ರ ಹೊತ್ತಿಗೆ ಕ್ಷೇತ್ರ ಪುನರ್ವಿಂಗಡಣೆ ದೇಶ ಮಟ್ಟದಲ್ಲಿ ನಡೆಯುವುದಾದರೆ, ಕರ್ನಾಟಕದಂತಹ ರಾಜ್ಯಗಳು ಎಷ್ಟರಮಟ್ಟಿಗೆ ರಾಜಕೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳಬಹುದು ಎಂಬ ಆತಂಕ ಕರ್ನಾಟಕದ ಯಾವುದೇ ಪಕ್ಷಕ್ಕೆ ಇರಬೇಕು. ಅದು ಇಲ್ಲದೇ ಇದ್ದರೆ ಜೆಡಿಎಸ್‌ ಪಕ್ಷ ಪ್ರಾದೇಶಿಕತೆಯ ಕುರಿತು ಮಾತನಾಡುವುದೇ ಅಸಂಗತವಾಗಲಿದೆ. ಇಂತಹ ಹಲವು ಕಾರಣಗಳಿಂದ ಈ ಮೈತ್ರಿ ಅಸಂಗತವೆಂದು ತೋರಿದರೂ, ಅವರಿಗೆ ಅನಿವಾರ್ಯವೆಂಬುದು ಸತ್ಯ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಅನಿವಾರ್ಯತೆಯ ಕಾರಣಕ್ಕೆ ಅವರು ಜೊತೆಯಾದರೂ, ಕರ್ನಾಟಕದ ಜನರಿಗೆ ಅದು ಅಗತ್ಯವೂ ಆಗಿತ್ತು ಎಂಬುದನ್ನು ಮನದಟ್ಟು ಮಾಡಿಸಬೇಕಾದ ಅವಶ್ಯಕತೆ ಇರುತ್ತದೆ. ಆ ರೀತಿ ಮನದಟ್ಟು ಮಾಡಿಸುವಲ್ಲಿ ವಿಫಲವಾದ್ದರಿಂದಲೇ 2019ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದೂ ಲೋಕಸಭೆಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಭೀಕರವಾಗಿ ನೆಲಕಚ್ಚಿತ್ತು. ರಾಜಕಾರಣದ ಸಮೀಕರಣವೆಂಬುದು ಕೇವಲ ಅಂಕಗಣಿತವಲ್ಲವಾದ್ದರಿಂದ, ಬಿಜೆಪಿಯ 36% ಮತ್ತು ಜೆಡಿಎಸ್ಸಿನ 13% ಮತಗಳು ಸೇರಿ 49% ಆಗಲಾರವು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಶೇ.50ನ್ನು ದಾಟಿ ಮತಗಳನ್ನು ಪಡೆದುಕೊಂಡಿತ್ತು. ಮೋದಿ ಅಲೆಯ ಜೊತೆಗೆ ಕರ್ನಾಟಕದಲ್ಲಿದ್ದ ʼಅಸಹಜ ಮೈತ್ರಿʼಯ ವಿರುದ್ಧ ಜನರು ಮತ ಚಲಾಯಿಸಿದ್ದೂ ಅದಕ್ಕೆ ಕಾರಣವಾಗಿತ್ತು. ಅಂದರೆ ಇಂತಹದೊಂದು ಮೈತ್ರಿಯು ಕರ್ನಾಟಕದ ಜನರ ಹಿತಕ್ಕೆ ಅಗತ್ಯ ಎಂದು ಮನವರಿಕೆ ಮಾಡಿಕೊಡುವ ಜವಾಬ್ದಾರಿ ಎರಡೂ ಪಕ್ಷಗಳ ಮೇಲಿದೆ.

ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಇದು ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. ಕಾಂಗ್ರೆಸ್‌ ಸರ್ಕಾರವು ಹಿಂದಿನ ಸರ್ಕಾರದ ಅಕ್ರಮಗಳ ವಿರುದ್ಧ ತನಿಖೆಗೆ ಆದೇಶಿಸಿದಾಗ ʼತನಿಖೆ ಮಾಡಲಿ, ನಾವೇನೂ ಭ್ರಷ್ಟಾಚಾರ ಎಸಗಿಲ್ಲʼ ಎಂದು ಮೇಲ್‌ ತೋರಿಕೆಗೂ ಹೇಳಲಾಗದ ಸ್ಥಿತಿಯಲ್ಲಿ ಬೊಮ್ಮಾಯಿಯವರಿದ್ದಾರೆ. ʼ2013ರಿಂದಲೂ ತನಿಖೆ ನಡೆಸಲಿ, ಇದು ದ್ವೇಷದ ರಾಜಕಾರಣʼ ಎಂದಷ್ಟೇ ಹೇಳುತ್ತಿರುವ ಅವರು ಭ್ರಷ್ಟಾಚಾರದ ವಿರುದ್ಧ ಮಾತಾಡುವುದೇ ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್‌ ಸರ್ಕಾರದ ಆರಂಭಿಕ ನಡೆಗಳಲ್ಲಿ ಹೆಚ್ಚಿನವು – ಗ್ಯಾರಂಟಿಗಳನ್ನು ಹೊರತುಪಡಿಸಿ – ಅಷ್ಟೇನೂ ಜನಹಿತದಿಂದ ಕೂಡಿಲ್ಲ. ಪರಿಸ್ಥಿತಿ ಹೀಗಿದ್ದರೂ, ಜನರು ಈಗಿಂದೀಗಲೇ 135 ಸೀಟುಗಳ ಮೂಲಕ ತಾವೇ ಗೆಲ್ಲಿಸಿದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ತಿರುಗಿಬಿದ್ದಿಲ್ಲ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ರಾಜ್ಯದ ಹಿತಕ್ಕೂ ಈ ಮೈತ್ರಿಗೂ ಇರುವ ಸಂಬಂಧವೇನು ಎಂಬುದನ್ನು ಸಾಬೀತುಪಡಿಸಲು ಸರಿಯಾದ ಕಾರಣಗಳನ್ನು ಕಂಡುಕೊಳ್ಳಬೇಕಿದೆ. ಸಂವಿಧಾನಾತ್ಮಕವಾಗಿ, ಶಾಸನಾತ್ಮಕವಾಗಿ, ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತೀವ್ರ ರೀತಿಯ ಕೇಂದ್ರೀಕರಣವನ್ನು ಮಾಡಹೊರಟಿರುವ ಬಿಜೆಪಿಯ ಜೊತೆಗೆ ತನ್ನನ್ನು ಪ್ರಾದೇಶಿಕ ಪಕ್ಷವೆಂದು ಹೇಳಿಕೊಳ್ಳುವ ಜೆಡಿಎಸ್‌ ಹೇಗೆ ಹೊರಡುತ್ತಿದೆ ಎಂಬುದನ್ನಂತೂ ಕರ್ನಾಟಕದ ಜನತೆಗೆ ಜೆಡಿಎಸ್‌ ವಿವರಿಸಬೇಕಾಗುತ್ತದೆ.

ಈ ಮೈತ್ರಿಯಿಂದ ತಮಗೇನೂ ತೊಂದರೆಯಿಲ್ಲ ಎಂದು ಹೇಳಿಕೊಂಡಿರುವ ಕಾಂಗ್ರೆಸ್‌ ಪಕ್ಷವು, ಕರ್ನಾಟಕದ ಜನತೆಗೆ ತಾನು ಕೊಟ್ಟ ಭರವಸೆಗಳೆಂದರೆ ಗ್ಯಾರಂಟಿಗಳು ಮಾತ್ರ ಎಂದು ಭಾವಿಸಿದಂತಿದೆ. ಬಿಜೆಪಿಯು ಭ್ರಷ್ಟಾಚಾರ ಮತ್ತು ದುರಾಡಳಿತಗಳ ಕಾರಣದಿಂದ ಪ್ರಧಾನವಾಗಿ ತಿರಸ್ಕರಿಸಲ್ಪಟ್ಟಿತು. ಬೆಲೆ ಏರಿಕೆಯೂ ಜನರನ್ನು ಕಾಡುತ್ತಿದ್ದುದು ನಿಜ ಮತ್ತು ಜನರ ಕೈಗೆ ಹಣ ನೀಡುವ ಗ್ಯಾರಂಟಿಗಳು ಜನರಿಗೆ ಅಪ್ಯಾಯಮಾನವಾಗಿ ಕಂಡಿರಬಹುದು. ಆದರೆ ಗ್ಯಾರಂಟಿ ಸಂದೇಶ ಜನರಿಗೆ ತಲುಪುವ ಮುನ್ನವೇ ಬಿಜೆಪಿಯನ್ನು ಕರ್ನಾಟಕದ ಜನರು ತಿರಸ್ಕರಿಸಿದ್ದರು ಎಂಬುದು ಈದಿನ.ಕಾಮ್‌ ಸಮೀಕ್ಷೆಯಲ್ಲೂ ಸ್ಪಷ್ಟವಾಗಿತ್ತು. ಜನರ ಈ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರವು ಇದುವರೆಗೂ ಏನೂ ಮಾಡಿಲ್ಲ; ಬದಲಿಗೆ ಅದರ ವಿರುದ್ಧದ ದಿಕ್ಕಿನಲ್ಲೇ ನಡೆದಂತೆ ಕಾಣುತ್ತಿದೆ. ಈ ಜವಾಬ್ದಾರಿಯನ್ನು ಈಡೇರಿಸದೇ ಇದ್ದಲ್ಲಿ ಕಾಂಗ್ರೆಸ್‌ ಸಹ ತಾನು ಪಡೆದ ದೊಡ್ಡ ಜನಾದೇಶಕ್ಕೆ ಮೋಸ ಮಾಡಿದಂತೆಯೇ.

ಒಟ್ಟಿನಲ್ಲಿ ರಾಜ್ಯದ ಜನರು ʼದೊಡ್ಡ ಪಕ್ಷʼಗಳಿಂದ ದೊಡ್ಡದೇನನ್ನೂ ನಿರೀಕ್ಷೆ ಮಾಡದಂತಹ ಸನ್ನಿವೇಶ ಈ ಸದ್ಯದಲ್ಲಿ ಕಾಣುತ್ತಿದೆ. ಅದಕ್ಕಿಂತ ದೊಡ್ಡದನ್ನು ಪಡೆಯಲು ʼದೊಡ್ಡ ಪ್ರಾದೇಶಿಕ ಪಕ್ಷʼವೊಂದು ಹುಟ್ಟಬೇಕಷ್ಟೇ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೂರನೇ ಬಾರಿಗೆ ಪ್ರಧಾನಿಯಾದ ಮೋದಿ, ಹೊಸ ಮನುಷ್ಯರಾಗುವರೇ?

ಯಾರಿಗೂ ಸಿಗದ ಅಪೂರ್ವ ಅವಕಾಶ ಮೋದಿಯವರಿಗೆ ಮತ್ತೊಮ್ಮೆ ಸಿಕ್ಕಿದೆ. ಮತ್ತೊಮ್ಮೆ ಬಾಬಾ...

ಈ ದಿನ ಸಂಪಾದಕೀಯ | ದುಬಾರಿ ಚುನಾವಣೆಗಳು, ಸಾಮಾನ್ಯರ ಸ್ಪರ್ಧೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ

ದುಬಾರಿ ಚುನಾವಣೆಗಳು ಒಟ್ಟು ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತಲೇ ಸಾಗಿವೆ. ಇಂತಹ ವ್ಯವಸ್ಥೆಯಲ್ಲಿ ಸರಳರು,...

ಈ ದಿನ ಸಂಪಾದಕೀಯ | ಹತಾಶೆಯಿಂದ ಆಶಾವಾದದೆಡೆಗೆ ಕರೆದೊಯ್ಯುವ ಜನಾದೇಶ

ಇಂಡಿಯಾ ಒಕ್ಕೂಟ ಮೈತ್ರಿ ಹುಟ್ಟಿದ್ದೇ ಒಂದು ಚಮತ್ಕಾರ. ಸೀಟು ಹೊಂದಾಣಿಕೆ ಪೂರ್ಣ...

ಈ ದಿನ ಸಂಪಾದಕೀಯ | ಜನರೊಂದಿಗೆ ನೊಂದು ಬೆಂದು ಬಂಗಾರವಾದ ರಾಹುಲ್ ಗಾಂಧಿ

ಪಾದಯಾತ್ರೆಯ ಮೂಲಕ ಭಾರತದ ಆತ್ಮವನ್ನು ಅರ್ಥ ಮಾಡಿಕೊಂಡಿದ್ದ, ಜನರೊಂದಿಗೆ ಬೆರೆತು ಬೆಂದು...