ಮೀಸಲಾತಿ ಹಂಚಿಕೆ | ಚುನಾವಣೆ ಹೊತ್ತಲ್ಲಿ ಬಿಜೆಪಿಯಿಂದ ರಾಜಕೀಯ ಗಿಮಿಕ್‌: ಸಿದ್ದರಾಮಯ್ಯ ಕಿಡಿ

Date:

Advertisements
  • ಮೀಸಲಾತಿಯ ಹೊಸ ವರ್ಗೀಕರಣ ನಾಡಿಗೆ ಎಸಗಿದ ದ್ರೋಹ: ಆರೋಪ
  • ಬಿಜೆಪಿಯವರು ಎಂದಿಗೂ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ: ಆಕ್ರೋಶ

ಅಸಂವಿಧಾನಿಕವಾಗಿ ಮೀಸಲಾತಿಯಲ್ಲಿ ಹೊಸ ವರ್ಗೀಕರಣ ಮಾಡುವ ಮೂಲಕ ಬಿಜೆಪಿ ಸರ್ಕಾರ ನಾಡಿಗೆ ದ್ರೋಹ ಎಸಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಜೊತೆ ನಡೆದ ಜಂಟಿಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಬಿಜೆಪಿ ಸರ್ಕಾರ ಮೀಸಲಾತಿ ವಿಚಾರವಾಗಿ ಗೊಂದಲ ಸೃಷ್ಟಿ ಮಾಡಿ, ಸೇಡಿನ ರಾಜಕಾರಣ ಮಾಡಿ ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ಸಮಾಜ ವಿಭಜನೆ ಮಾಡುವ, ಜನರಿಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡುವ ಪ್ರಯತ್ನ ಮಾಡಿದೆ” ಎಂದರು.

Advertisements

“ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಸಂವಿಧಾನ ಹೇಳಿದೆ. ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂಬುದು ಆರಂಭದಲ್ಲಿ ಸಂವಿಧಾನದಲ್ಲಿ ಇಲ್ಲದಿದ್ದರು 1951ರಲ್ಲಿ ಮೊದಲನೇ ತಿದ್ದುಪಡಿ ತಂದು ಸೇರಿಸಲಾಗಿದೆ. ರಾಜ್ಯದಲ್ಲಿ ನಾಗನಗೌಡ ಆಯೋಗ, ಎಲ್.ಜಿ ಹಾವನೂರು, ಚಿನ್ನಪ್ಪರೆಡ್ಡಿ, ವೆಂಕಟಸ್ವಾಮಿ ಅವರ ಸಮಿತಿ ಹೀಗೆ 4 ಸಮಿತಿಗಳು ರಚನೆಯಾಗಿ ವರದಿ ನೀಡಿವೆ, ಕೇಂದ್ರದಲ್ಲಿ ಮಂಡಲ್‌ ಕಮಿಷನ್‌ ರಚನೆಯಾಗಿ ವರದಿ ನೀಡಿದೆ. ಇದರ ಆಧಾರದ ಮೇಲೆ ಮೀಸಲಾತಿ ನಿಗದಿಯಾಗಿದೆ.‌ ಹಾಗೆಯೇ ಮೇ 1995ರಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗಿದೆ. ಇದನ್ನು ರದ್ದು ಮಾಡಿ ಎಂದು ಈವರೆಗೆ ಯಾವುದೇ ನ್ಯಾಯಾಲಯದ ತೀರ್ಪು ಬಂದಿಲ್ಲ, ಯಾವ ಸಮಿತಿಯ ವರದಿಗಳು ಬಂದಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಯಾಕೆ ಮುಸ್ಲಿಂಮರ ಮೀಸಲಾತಿ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ. ಇದರಿಂದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ಹರಿಹಾಯ್ದರು.

ಅಲ್ಪಸಂಖ್ಯಾತರನ್ನು ಮೀಸಲಾತಿಯಿಂದ ತೆಗೆದುಹಾಕಿ ಎಂದು ರಿಪೋರ್ಟ್‌ ಎಲ್ಲಿದೆ?

“ಇಂದಿರಾ ಸಹಾನಿ ಪ್ರಕರಣದ ತೀರ್ಪಿನ ಪ್ರಕಾರ ಪ್ರತೀ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆಯಾಗಬೇಕು ಮತ್ತು 10 ವರ್ಷಕ್ಕೊಮ್ಮೆ ಅದರ ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ. ಯಾವುದನ್ನೇ ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಬೇಕಾದರೆ ಅಥವಾ ಸೇರಿಸಬೇಕಾದರೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಿಫಾರಸು ಬೇಕು. ಅಲ್ಪಸಂಖ್ಯಾತರನ್ನು ಮೀಸಲಾತಿಯಿಂದ ತೆಗೆದುಹಾಕಿ ಎಂದು ರಿಪೋರ್ಟ್‌ ಎಲ್ಲಿದೆ? ಇದು ಅಲ್ಪಸಂಖ್ಯಾತರಿಗೆ ಮಾಡುತ್ತಿರುವ ಅನ್ಯಾಯ ಅಲ್ಲವಾ? ಅವರನ್ನು ಇ.ಡಬ್ಲ್ಯು.ಎಸ್‌ ಗೆ ಸೇರಿಸಿ ಎಂದು ಯಾರಾದರೂ ಕೇಳಿದ್ದರಾ ಅಥವಾ ಯಾವುದಾದರೂ ವರದಿ ಇದೆಯಾ?” ಎಂದು ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ? ಮೀಸಲಾತಿ ಹೆಸರಲ್ಲಿ ಸಮುದಾಯಗಳಿಗೆ ಮೋಸ ಮಾಡಿದ ಬಿಜೆಪಿ: ಡಿ ಕೆ ಶಿವಕುಮಾರ್‌ ಕಿಡಿ

“ಇಡೀ ಸಾಮಾಜಿಕ ನ್ಯಾಯವನ್ನು ಛಿದ್ರಗೊಳಿಸಿ ಜನರಿಗೆ ನ್ಯಾಯ ಸಿಗಬಾರದು ಎಂದು ಈ ರೀತಿ ಮಾಡಿದ್ದಾರೆ. ಮೀಸಲಾತಿ ಪರಿಷ್ಕರಣೆ ಮಾಡಲು ಈ ಸರ್ಕಾರದ ಬಳಿ ಯಾವ ನಂಬಿಕಾರ್ಹ ಮಾಹಿತಿ ಇದೆ? ವರದಿ ಇದೆ? ಮಹಾರಾಷ್ಟ್ರ, ಹರಿಯಾಣ ಹೀಗೆ ಹಲವು ರಾಜ್ಯಗಳಲ್ಲಿ ನಂಬಲಾರ್ಹ ಮಾಹಿತಿ ಮತ್ತು ಸಂವಿಧಾನಬದ್ಧವಾಗಿ ರಚನೆಯಾದ ಸಮಿತಿ ನೀಡಿರುವ ವರದಿ ಇಲ್ಲದೆ ಮೀಸಲಾತಿ ಬದಲಾವಣೆಗೆ ಕೈಹಾಕಬಾರದು ಎಂದು ನ್ಯಾಯಾಲಯ ಹೇಳಿದೆ. ಹೀಗಿದ್ದರೂ ನಮ್ಮಲ್ಲಿ ರಾಜ್ಯ ಸರ್ಕಾರ ರಾಜಕೀಯ ಗಿಮಿಕ್‌ ಮಾಡಲು ಹೊರಟಿದೆ, ಇದನ್ನು ಜನ ಒಪ್ಪಬೇಕಾ?” ಎಂದರು.

“ಚುನಾವಣೆ ಇನ್ನೇನು ಎರಡ್ಮೂರು ದಿನದೊಳಗೆ ಘೋಷಣೆ ಆಗುತ್ತದೆ ಎಂಬುದು ಗೊತ್ತಿದ್ದರೂ 24ರ ಸಂಜೆ ಈ ಮೀಸಲಾತಿ ಪರಿಷ್ಕರಣೆ ನೀತಿ ತಂದಿರುವುದರ ಹಿಂದಿನ ಉದ್ದೇಶ ಏನು? ಇದು ರಾಜಕೀಯ ಗಿಮಿಕ್‌ ಅಲ್ಲವೇ? ಯಾರಿಗೂ ನ್ಯಾಯ ಕೊಡಬೇಕು ಎಂಬುದು ಸರ್ಕಾರಕ್ಕೆ ಇಲ್ಲ. ಬಿಜೆಪಿಯವರು ಎಂದಿಗೂ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ. ಮಂಡಲ್‌ ಕಮಿಷನ್‌ ವರದಿ, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡುವುದನ್ನು ವಿರೋಧ ಮಾಡಿದ್ದು ಬಿಜೆಪಿಯವರೇ. ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದಾಗ ಅದನ್ನು ವಿರೋಧಿಸಿ ರಾಮಾ ಜೋಯಿಸ್‌ ಅವರು ಸುಪ್ರೀಂಕೋರ್ಟ್‌ ಗೆ ಹೋಗಿದ್ದರು” ಎಂದರು.

ಸಮಿತಿಯ ಶಿಫಾರಸಿಗೆ ವಿರುದ್ಧವಾಗಿ ಮೀಸಲಾತಿ ಪರಿಷ್ಕರಣೆ ಮಾಡಿರುವ ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ಆಗ್ರಹಿಸುತ್ತೇನೆ. ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಈ ಸರ್ಕಾರಕ್ಕೆ ಸಂವಿಧಾನಾತ್ಮಕವಾಗಿ ಮುಂದುವರೆಯುವ ಹಕ್ಕು ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

Download Eedina App Android / iOS

X