ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಅಹಿಂದ ಸಂಘಟನೆಗಳ ಒಕ್ಕೂಟವು ಡಿಸೆಂಬರ್ 28 ರಂದು ವಿಜಯಪುರ ಬಂದ್‌ಗೆ ಕರೆ ನೀಡಿದೆ ಎಂದು ಒಕ್ಕೂಟದ ನಾಯಕ ಹಾಗೂ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಹೇಳಿದರು.
ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೊಂದವರ ಧ್ವನಿ, ಶೋಷಿತರ ಧ್ವನಿಯಾದ ಡಾ.ಅಂಬೇಡ್ಕರ್ ಅವರು ಇಡೀ ಮನುಕುಲಕ್ಕೆ ಆದರ್ಶಮಯ ವ್ಯಕ್ತಿ. ಇಂತಹ ಮಹಾನ್ ಜ್ಞಾನಿಯ ಬಗ್ಗೆ ಕೇಂದ್ರ ಸಚಿವ ಸ್ಥಾನದಲ್ಲಿರುವ ವ್ಯಕ್ತಿ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ ಅಪರಾಧ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಯ ಸಂವಿಧಾನ ಮಾಡುವ ದೃಷ್ಟಿಕೋನವನ್ನು ಹೊಂದಿರುವ ಬಿಜೆಪಿ ಈಗ ಒಂದು ಪ್ರಯೋಗದ ರೀತಿಯಲ್ಲಿ ಡಾ.ಅಂಬೇಡ್ಕರ್ ಅವರ ಬಗ್ಗೆ ಅಪಮಾನಕಾರಿಯಾದ ಹೇಳಿಕೆ ನೀಡಿದೆ. ಜೊತೆಗೆ, ಸಂವಿಧಾನ ಬದಲಾವಣೆಯ ಸಾಹಸಕ್ಕೂ ಬಿಜೆಪಿ ಹಾಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಂಘ ಪರಿವಾರದವರು ಡಾ. ಅಂಬೇಡ್ಕರ್ ಅವರ ಬಗ್ಗೆ ಮೊದಲಿನಿಂದಲೂ ಟೀಕೆ ಮಾಡುತ್ತಾ ಬಂದಿದ್ದು, ಈಗ ಬಿಜೆಪಿ ಇದನ್ನು ಮುಂದುವರೆಸಿಕೊಂಡು ಬಂದಿದೆ. ಭಾವಚಿತ್ರವನ್ನು ಸಹ ಆರ್‌ಎಸ್‌ಎಸ್ ಕಚೇರಿಗಳಲ್ಲಿ ಇಲ್ಲಿಯವರೆಗೆ ಇರಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಅಮಿತ್ ಶಾ ರಾಜೀನಾಮೆ ಕೊಡುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ, ಈ ಬಂದ್ ಕರೆಗೆ ಹಲವಾರು ಸಂಘಟನೆಗಳು ಸಾಥ್ ನೀಡಿವೆ ಎಂದರು.
ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಶ್ರೇಷ್ಠ ಸಂವಿಧಾನ ರಚಿಸಿದ ಮಹಾನ್ ವ್ಯಕ್ತಿಗೆ ಈ ರೀತಿ ಅಪಮಾನ ಮಾಡಿರುವುದು ನೋವಿನ ಸಂಗತಿ. ಹೀಗಾಗಿ, ಡಿಸೆಂಬರ್ 28ರಂದು ಶ್ರೀ ಸಿದ್ದೇಶ್ವರ ದೇವಾಲಯದಿಂದ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಲಿದೆ. ಎಲ್ಲ ಸಂಘ-ಸಂಸ್ಥೆಗಳು, ಶಾಲಾ -ಕಾಲೇಜುಗಳು, ವ್ಯಾಪಾರ- ವಹಿವಾಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಸಾಥ್ ನೀಡಬೇಕೆಂದು ಒತ್ತಾಯಿಸಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಕ್ರಿಮಿನಲ್ ಹಿನ್ನೆಲೆಯಿಂದ ಬಂದ್ ವ್ಯಕ್ತಿಯನ್ನು ದೇಶದ ಗೃಹ ಸಚಿವನಾಗಿ ನಾವು ಒಪ್ಪಿಕೊಂಡಿದ್ದೇ ಮೊದಲ ದುರಂತ. ಅಂತಹ ವ್ಯಕ್ತಿಯಿಂದ ಇಂತಹ ಶಬ್ದಗಳನ್ನೇ ನಿರೀಕ್ಷಿಸಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಡಾ.ಅಂಬೇಡ್ಕರ್ ಅವರ ಬಗ್ಗೆ ಗೌರವವಿದ್ದರೆ ಬಿಜೆಪಿ ಸಹ ಈ ಹೋರಾಟಕ್ಕೆ ಬೆಂಬಲಿಸಬೇಕು ಎಂದರು.
ಮುಖಂಡರಾದ ಎಂ.ಸಿ. ಮುಲ್ಲಾ, ಫಯಾಜ್ ಕಲಾದಗಿ, ರಮೇಶ ಆಸಂಗಿ, ಎಂ.ಸಿ. ಮುಲ್ಲಾ, ಮಹಾದೇವಿ ಗೋಕಾಕ, ಸಿದ್ದು ರಾಯಣ್ಣವರ, ಮೈನುದ್ದೀನ್ ಬೀಳೆಗಿ, ಡಾ.ರವಿ ಬಿರಾದಾರ, ರೈತ ಮುಖಂಡ ಸಂಗಮೇಶ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
