- ಶೋಷಣೆ, ಸುಲಿಗೆ ಇಲ್ಲದೆ ಜನರ ಕೆಲಸ ತಕ್ಷಣ ಆಗಲು ಸಹಾಯ
- ‘ಕಳೆದ ಸರ್ಕಾರದಲ್ಲಿ “ಡೀಮ್ಡ್ ಕನ್ವರ್ಷನ್” ಮಾಡಲಾಗಿತ್ತು’
ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ ಆಡಳಿತ ಸುಧಾರಣೆ, ಆಡಳಿತ ಸರಳೀಕರಣ ಮತ್ತು ಕಚೇರಿಗಳಲ್ಲಿ ವಿಳಂಬ, ಶೋಷಣೆ, ಸುಲಿಗೆ ಇಲ್ಲದೆ ಜನರ ಕೆಲಸ ತತಕ್ಷಣ ಆಗಬೇಕು ಎಂಬ ಕಾರಣದಿಂದ “ಕರ್ನಾಟಕ ಭೂ ಕಂದಾಯ ತಿದ್ದುಪಡಿ ಮಸೂದೆ-2023” ಯನ್ನು ಮಂಡಿಸುತ್ತಿದ್ದೇನೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಬುಧವಾರದ ಕಲಾಪದಲ್ಲಿ ಮಸೂದೆ ಮಂಡಿಸಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, “ಕರ್ನಾಟಕ ಭೂ ಕಂದಾಯ ನಿಯಮ ಸೆಕ್ಷನ್ 35-95 ಅಡಿಯಲ್ಲಿ ಯಾವ ಪ್ರದೇಶಕ್ಕೆ ನಾವು ಮಾಸ್ಟರ್ ಪ್ಲಾನ್ ಮಾಡಲಾಗಿದೆಯೋ, ಆ ಮಾಸ್ಟರ್ ಪ್ಲಾನ್ ನಲ್ಲಿ ಯಾವ ಉದ್ದೇಶಕ್ಕೆ ಆ ಭೂಮಿ ಬಳಕೆಯಾಗಬೇಕು ಎಂದು ಉಲ್ಲೇಖಿಸಲಾಗಿರುತ್ತದೆಯೋ ಆ ಪ್ರಕಾರ ಯಾವುದೇ ಕೆಲಸಕ್ಕೆ ಆ ಭೂಮಿಯನ್ನು ಬಳಸಬಹುದು” ಎಂದು ತಿಳಿಸಿದರು.
“ಹೌಸಿಂಗ್, ಶಾಲೆ ಕೈಗಾರಿಕೆ ಹೀಗೆ ಯಾವ ಉದ್ದೇಶಕ್ಕೆ ನಾವು ಭೂಮಿಯನ್ನು ಕ್ಲಾಸಿಫಿಕೇಷನ್ ಮಾಡಿದ್ದೇವೆಯೋ, ಈ ಕ್ಲಾಸಿಫಿಕೇಷನ್ ಮಾಡಿದ ಮೇಲೆ ಮತ್ತೆ ಭೂ ಪರಿವರ್ತನೆ ಅಗತ್ಯ ಇಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಅಧಿವೇಶನ | ನೋಂದಣಿ ತಿದ್ದುಪಡಿ ವಿಧೇಯಕ ಅಂಗೀಕಾರ, ನಕಲಿ ನೋಂದಣಿಗೆ 3 ವರ್ಷ ಜೈಲು
“ಕಳೆದ ಸರ್ಕಾರದಲ್ಲಿ ‘ಡೀಮ್ಡ್ ಕನ್ವರ್ಷನ್’ ಮಾಡಿದ್ದರು. ಇದರ ಪ್ರಕಾರ 7 ದಿನದಲ್ಲಿ ಪರವರ್ತನೆ ಮಾಡಿಕೊಡಬೇಕು ಎಂಬ ನಿಯಮ ಇದೆ. ಆದರೆ, ನಾವು ಗಮನಿಸಿದಂತೆ ಕೆಲವು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ತಕರಾರು ಬರೆದು ಡೀಮ್ಡ್ ಕನ್ವರ್ಷನ್ ಸಹ ಸಿಗದಂತೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಅರ್ಜಿಗಳು ಹಲವು ತಿಂಗಳು ತಡೆಹಿಡಿದಿರುವುದನ್ನು ನಾವು ನೋಡಿದ್ದೇವೆ. ಇದರಿಂದ ಜನರಿಗೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಉಂಟಾಗುತ್ತಿದೆ” ಎಂದರು.
“ಕೆಲವು ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜನರ ಸುಲಿಗೆಯೂ ನಡೆದಿದೆ ಎಂಬ ದೂರು ಬಂದಿದೆ. ಹೀಗಾಗಿ ಆಡಳಿತ ಸುಧಾರಣೆ, ಅಧಿಕಾರ ಸರಳೀಕರಣ ಮತ್ತು ಸುಲಿಗೆ ನಿಯಂತ್ರಣಕ್ಕೆ ಈ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗುತ್ತಿದೆ” ಎಂದು ಸಚಿವ ಕೃಷ್ಣಭೈರೇಗೌಡ ಸದನಕ್ಕೆ ಮಾಹಿತಿ ನೀಡಿದರು.
ನಂತರ ಸಭಾಧ್ಯಕ್ಷರು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆ 2023 ಅನ್ನು ಸಭೆಗೆ ಹಾಕಿದರು. ಧ್ವನಿ ಮತದ ಮೂಲಕ ಸರ್ವಾನುಮತದಿಂದ ಅಂಗೀಕಾರ ಪಡೆಯಿತು.
ಏನಿದು ಭೂ ಪರಿವರ್ತನೆ ಮಸೂದೆ?
ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆಯಲ್ಲಿ ಉಲ್ಲೇಖಿಸಿರುವಂತೆ ಕೃಷಿಯೇತರ ಉದ್ದೇಶಗಳಿಗಾಗಿ ಮಾಸ್ಟರ್ ಪ್ಲಾನ್ ಮಾಡಲಾಗಿರುವ ಭೂಮಿಯನ್ನು ಆ ಮಾಸ್ಟರ್ ಪ್ಲಾನ್ ನಲ್ಲಿ ಉಲ್ಲೇಖಿಸಿರುವ ಉದ್ದೇಶಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ. ಯಾವುದೇ ಮಾಸ್ಟರ್ ಪ್ಲಾನ್ ಇಲ್ಲದ ಸ್ಥಳೀಯ ಯೋಜನಾ ಪ್ರದೇಶದ ಹೊರಗಿನ ಭೂಮಿಯನ್ನು ಪರಿವರ್ತನೆ ಮಾಡಿಕೊಳ್ಳಲು ಅರ್ಜಿದಾರರು ಅಫಿಡವಿಟ್ ಸಲ್ಲಿಸಬೇಕು. ಜಿಲ್ಲಾಧಿಕಾರಿಯು 30 ದಿನಗಳೊಳಗೆ ಆದೇಶವನ್ನು ನೀಡದಿದ್ದರೆ, ಭೂ- ಪರಿವರ್ತನೆಯನ್ನು ಅನುಮೋದಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.