ಉತ್ತರ ಪ್ರದೇಶದ ಇಟಾವಾ ಜಿಲ್ಲೆ ವ್ಯಾಪ್ತಿಯ ಸೈಫೈ ಎಂಬಲ್ಲಿ ದಲಿತ ಬಾಲಕನಿಗೆ ಥಳಿಸಿದ ಯುವಕನೊಬ್ಬ ತನ್ನ ಮಲವನ್ನು ಬಾಲಕನ ಕೈಯಿಂದ ಒತ್ತಾಯಪೂರ್ವಕವಾಗಿ ತೆಗೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಸಂತ್ರಸ್ತ 11 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಜಾಗ್ರಾಮ್ ಯಾದವ್ ಎಂಬಾತನ ಹೊಲದಲ್ಲಿ ಮಲ ವಿಸರ್ಜನೆಗೆ ತೆರಳಿದ್ದನು. ಇದರಿಂದ ಕುಪಿತಗೊಂಡ ಜಾಗ್ರಾಮ್ ಬಾಲಕನನ್ನು ಥಳಿಸಿ ತನ್ನ ಹೊಲದಿಂದ ಮಲ ತೆಗೆಯುವಂತೆ ಒತ್ತಾಯಿಸಿದ್ದಾನೆ. ಇಟಾವಾ ಜಿಲ್ಲೆಯ ಪರ್ಸಾನ ಪಂಚಾಯಿತಿಯಲ್ಲಿ ಜುಲೈ 13ರಂದು ಈ ಘಟನೆ ನಡೆದಿದೆ.
ಈ ಸುದ್ದಿ ಓದಿದ್ದೀರಾ? ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸಿ ಥಳಿತ: ಆಂಧ್ರಪ್ರದೇಶದಲ್ಲಿ ಅಮಾನುಷ ಘಟನೆ
“ನನ್ನ 15 ವರ್ಷದ ಮಗನ ಕೈಯಿಂದ ಮಲ ತೆಗೆಸಿದ ಕೃತ್ಯವನ್ನು ವಿರೋಧಿಸಿದ ಎಲ್ಲರನ್ನೂ ಜಾಗ್ರಾಮ್ ಯಾದವ್ ಅವಮಾನಿಸಿ ಹಲ್ಲೆ ನಡೆಸಿದ್ದಾನೆ. ಬಾಲಕನನ್ನು ಹಲ್ಲೆಯಿಂದ ಪಾರು ಮಾಡಲು ಪ್ರಯತ್ನಿಸಿದ ಹುಡುಗನ ಚಿಕ್ಕಮ್ಮನನ್ನೂ ಜಾಗ್ರಾಮ್ ಥಳಿಸಿದ್ದಾನೆ” ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ದಾಖಲಿಸಿದ್ದಾರೆ.
ಜಾಗ್ರಾಮ್ ಯಾದವ್ ವಿರುದ್ಧ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸೈಫೈ ವೃತ್ತದ ಅಧಿಕಾರಿ ನಾಗೇಂದ್ರ ಚೌಬೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ” ಎಂದು ಇಟಾವಾ ಜಿಲ್ಲೆಯ ಹೆಚ್ಚುವರಿ ಎಸ್‌ಪಿ ಸತ್ಯಪಾಲ್ ಸಿಂಗ್ ತಿಳಿಸಿದ್ದಾರೆ.
ಈ ನಡುವೆ ಜಾಗ್ರಾಮ್ ಯಾದವ್ ನ್ಯಾಯಾಲಯದಲ್ಲಿ ಶರಣಾಗತಿ ಅರ್ಜಿಯನ್ನು ಸಲ್ಲಿಸಿದ್ದಾನೆ.