ಬೆಂಗಳೂರಿನ ಖಾಸಗಿ ಇನ್ಶೂರೆನ್ಸ್ ಕಂಪನಿಯ ಕ್ಲೈಮ್ ವಿಭಾಗದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಕಂಪನಿಯ ವ್ಯವಸ್ಥಾಪಕನ ಕಿರುಕುಳ ತಾಳಲಾರದೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನ.11ರಂದು ಆನೇಕಲ್ ಸಮೀಪದ ಹುಲ್ಲಹಳ್ಳಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಚಂದ್ರಶೇಖರ್ ಎಸ್ (30) ಎಂದು ಗುರುತಿಸಲಾಗಿದೆ. ಘಟನೆಯ ಸಂಬಂಧ ಚಂದ್ರಶೇಖರ್ ಅವರ ಸಹೋದರ ಶಶಿಕುಮಾರ್ ಅವರು ನೀಡಿದ ದೂರಿನ ಮೇರೆಗೆ ಬನ್ನೇರುಘಟ್ಟ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
‘ಕಂಪನಿಯ ಮ್ಯಾನೇಜರ್ ಆಗಿದ್ದ ಬಾಲಕೃಷ್ಣ ಎಂಬಾತ ಹೆಚ್ಚು ಹೆಚ್ಚು ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದ; ಕೆಲಸದ ಹೊರೆ ತಾಳಲಾಗದೇ ಕೆಲಸ ಬಿಡಲು ಹೋದರೆ, ಒಂದೂವರೆ ಲಕ್ಷ ಕಟ್ಟಿಕೊಡಬೇಕು ಎಂದು ಹೆದರಿಸಿದ್ದ. ನಾನು ಬಡವ. ಅಷ್ಟು ಹಣ ನನ್ನಲ್ಲಿ ಇರಲಿಲ್ಲ. ಕೆಲಸ ಮಾಡಲೂ ಸಾಧ್ಯವಿಲ್ಲದಷ್ಟು ಒತ್ತಡ, ಟಾರ್ಚರ್ ಇತ್ತು. ನನ್ನನ್ನು ಕ್ಷಮಿಸಿ’ ಎಂದು ಬರೆದು ಚಂದ್ರಶೇಖರ್ ಸಾವಿಗೀಡಾಗಿದ್ದಾರೆ.
ಚಂದ್ರಶೇಖರ್ ಟಾಟಾ ಎಐಜಿ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸಹೋದರ ಶಶಿಕುಮಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮ್ಯಾನೇಜರ್ ನೀಡುತ್ತಿದ್ದ ಕಿರುಕುಳದ ಬಗ್ಗೆ ವಿವರಿಸಿದ್ದಾರೆ. ‘ನನ್ನ ಸಹೋದರ ಚಂದ್ರಶೇಖರ್ ಬೆಂಗಳೂರು ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಟಾಟಾ ಎಐಜಿ ಕಂಪೆನಿಯಲ್ಲಿ ಕ್ಲೈಮ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು. ಅವರು ಗಾಯಿತ್ರಿ ಎಂಬುವವರನ್ನು ಮದುವೆಯಾಗಿದ್ದು, ಒಂದು ಹೆಣ್ಣು ಮಗು ಕೂಡ ಇದೆ. ಕಳೆದ ಆರು ತಿಂಗಳ ಹಿಂದೆ ಕಂಪನಿಯವರು ಚಂದ್ರಶೇಖರ್ ಅವರನ್ನು ತರಬೇತಿಗೆ ಕಳುಹಿಸಿದ್ದರು. ಆ ಬಳಿಕ ತಮ್ಮನಿಗೆ ತಿಂಗಳಿಗೆ 100ರಿಂದ 120 ಕ್ಲೈಮ್‌ಗಳಿಗೆ ಬದಲಾಗಿ 250ರಿಂದ 320ರವರೆಗೆ ಹೆಚ್ಚಿನ ಕ್ಲೈಮ್‌ಗಳನ್ನು ಮಾಡಬೇಕೆಂದು ಮ್ಯಾನೇಜರ್ ಆಗಿರುವ ವಿಶಾಖಪಟ್ಟಣಂ ಮೂಲದ ಬಾಲಕೃಷ್ಣ ಎಂಬುವವರು ನಿರಂತರವಾಗಿ ಒತ್ತಡ ಹಾಕುತ್ತಿದ್ದರು. ಕೆಲಸ ಬಿಡುವುದಾಗಿ ತಿಳಿಸಿದಾಗ ಹಾಗೆ ಬಿಡುವುದಿದ್ದರೆ ಕಂಪನಿಗೆ ಒಂದೂವರೆ ಲಕ್ಷ ರೂಪಾಯಿ ಕಟ್ಟಿಕೊಡಬೇಕು ಹಾಗೂ ಮೂರು ತಿಂಗಳ ಕಾಲ ನೋಟಿಸ್ ಸಮಯದವರೆಗೂ ಕೆಲಸ ಮಾಡಬೇಕು ಎಂದು ಹೆದರಿಸಿದ್ದರು. ಚಂದ್ರಶೇಖರ್ ಈ ಬಗ್ಗೆ ಮನನೊಂದಿದ್ದರು. ಅಲ್ಲದೇ, ಅದನ್ನು ತಮ್ಮ ಹತ್ತಿರದವರಿಗೂ ತಿಳಿಸಿದ್ದರು. ಈ ಬಗ್ಗೆ ಚಂದ್ರಶೇಖರ್ ಆತ್ಮಹತ್ಯೆಗೂ ಮುನ್ನ ಆತನ ಪತ್ನಿ ಗಾಯಿತ್ರಿಯವರಿಗೆ ಕಳುಹಿಸಿದ ಕೊನೆಯ ಸಂದೇಶದಲ್ಲೂ ಇದನ್ನು ಉಲ್ಲೇಖಿಸಿದ್ದಾರೆ. ನನ್ನ ತಮ್ಮನ ಸಾವಿಗೆ ಆತನ ಕಚೇರಿಯ ಮ್ಯಾನೇಜರ್ ಬಾಲಕೃಷ್ಣರವರು ಕಚೇರಿಯಲ್ಲಿ ನೀಡುತ್ತಿದ್ದ ಕಿರುಕುಳವೇ ಕಾರಣ. ಹಾಗಾಗಿ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಮ್ಮನ ಸಾವಿಗೆ ನ್ಯಾಯ ಒದಗಿಸಬೇಕು’ ಎಂದು ಶಶಿಕುಮಾರ್ ಬನ್ನೇರುಘಟ್ಟ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಮ್ಯಾನೇಜರ್ ಬಾಲಕೃಷ್ಣರವರನ್ನು ಸಂಪರ್ಕಿಸಿದಾಗ, ‘ಡೆತ್‌ನೋಟ್‌ನಲ್ಲಿ ನನ್ನ ಹೆಸರು ಬರೆದಿರಬಹುದು. ಆದರೆ ನಾನು ಅವರಿಗೆ ಕಿರುಕುಳ ನೀಡಿಲ್ಲ. ಈ ಬಗ್ಗೆ ನೀವು ಮಾತನಾಡಬೇಕಾದರೆ ನಮ್ಮ ಕಚೇರಿಗೆ ಬಂದು, ಹೆಚ್ ಆರ್ ವಿಭಾಗದವರಲ್ಲಿ ಮಾತನಾಡಿ’ ಎಂದು ಉತ್ತರಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಬನ್ನೇರುಘಟ್ಟ ಪೊಲೀಸರನ್ನು ಸಂಪರ್ಕಿಸಿದಾಗ, ‘ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಅವರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.